ಭಯೋತ್ಪಾದನೆ ನಿಗ್ರಹ: ಚೀನಾದ ಇಬ್ಬಂದಿ ಧೋರಣೆ ಸರಿಯಲ್ಲ ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ. ಈ ಸಾಮಾನ್ಯ ತಿಳಿವಳಿಕೆ ಕನಪ್ಯೂಷಿಯಸ್‌ನಂತಹ ಮಹಾನ್‌ ತತ್ವಜ್ಞಾನಿಯನ್ನು ವಿಶ್ವಕ್ಕೆ ಕೊಟ್ಟ ಚೀನಾಕ್ಕೆ ಅರಿವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ. ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ತಾನು ಅನುಸರಿಸುತ್ತಿರುವ ದ್ವಂದ್ವ ನೀತಿ ಮುಂದೆ ಒಂದು ದಿನ ತನಗೇ ಶಾಪವಾಗಬಹುದು ಎಂಬ ಮುಂದಾಲೋಚನೆಯೂ ಇಲ್ಲವೇನೋ ಎಂಬ ಸಂಶಯ ಬರುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜತೆ ಕೈಜೋಡಿಸಲು ಸಿದ್ಧ ಎಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದು ಹೇಳುತ್ತಲೇ ಬರುತ್ತಿದೆ. ಆದರೆ ಆ ಬದ್ಧತೆಯನ್ನು ಕಾರ್ಯರೂಪಕ್ಕೆ ತರುವ ವಿಷಯ ಬಂದಾಗ ಏಕಾಏಕಿ ಬಣ್ಣ ಬದಲಿಸುತ್ತಿದೆ. ಪಾಕಿಸ್ತಾನ ಸೇನೆಯ ಬೇಹುಗಾರಿಕಾ ದಳ ಐಎಸ್‌ಐಯ ಪೋಷಣೆಯಿಂದ ಬೆಳೆದು ಭಾರತ ಸೇರಿ ವಿವಿಧೆಡೆ ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವ ಜೈಷೆ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮೌಲಾನಾ ಅಜರ್‌ನನ್ನು ಭಯೋತ್ಪಾದಕರ ಕಪ್ಪುಪಟ್ಟಿಗೆ ಸೇರಿಸಿ ಆತನ ಮತ್ತು ಆತನ ಸಂಘಟನೆಯ ಹಣಕಾಸಿನ ಖಾತೆಗಳನ್ನು ಮುಟ್ಟುಗೋಲು ಹಾಕಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಅಡ್ಡಗಾಲು ಹಾಕುತ್ತಿದೆ. ‘ಒಳ್ಳೆಯ ಉಗ್ರಗಾಮಿಗಳು ಮತ್ತು ಕೆಟ್ಟ ಉಗ್ರಗಾಮಿಗಳು’ ಎಂಬ ಅದರ ವ್ಯಾಖ್ಯಾನವೇ ಅಸಂಬದ್ಧ, ಅರ್ಥಹೀನ. ಮನುಕುಲಕ್ಕೆ ಕಂಟಕರಾಗಿರುವ ಭಯೋತ್ಪಾದಕರಲ್ಲಿ ‘ಒಳ್ಳೆಯವರು, ಕೆಟ್ಟವರು’ ಎಂಬ ವ್ಯತ್ಯಾಸ ಇರಲು ಹೇಗೆ ಸಾಧ್ಯ? ಅಜರ್‌ನ ಜೈಷೆ ಸಂಘಟನೆಯನ್ನು ಪಾಕ್‌ ಸರ್ಕಾರ ನಿಷೇಧಿಸಿದೆ. ಇದೆಲ್ಲ ತೋರಿಕೆಗೆ. ಏಕೆಂದರೆ ಆತನಿಗೆ ಈಗಲೂ ಅಲ್ಲಿನ ರಾಜಕೀಯ ಮತ್ತು ಸೇನೆಯ ಬೆಂಬಲ ಇದ್ದೇ ಇದೆ. ಇದು ಚೀನಾಕ್ಕೂ ಗೊತ್ತು. ಪಾಕ್‌ನ ರಾಜಕೀಯ ಮತ್ತು ಸೇನಾ ಮುಖಂಡರಿಗೆ ಬೇಸರ ಆಗಬಾರದು ಎಂಬ ಕಾರಣಕ್ಕಾಗಿಯೇ ಅದು, ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ದೇಶವಾಗಿ ವಿಟೊ ಅಧಿಕಾರ ಚಲಾಯಿಸಿದೆ. ಹೀಗಾಗಿ ಅದರ ಒಪ್ಪಿಗೆ ಇಲ್ಲದೆ ಅಜರ್‌ ವಿರುದ್ಧ ಕ್ರಮ ಕೈಗೊಳ್ಳಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಸಾಧ್ಯವಾಗುವುದಿಲ್ಲ. ಜೈಷೆ ಸಂಘಟನೆಯ ಹಣಕಾಸಿನ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದರೆ, ಭಾರತದೊಳಗೆ ಉಗ್ರಗಾಮಿ ಚಟುವಟಿಕೆ ನಡೆಸುವ ಅಜರ್‌ನ ಸಾಮರ್ಥ್ಯ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತು. ಭಾರತದ ಪ್ರಯತ್ನವನ್ನು ಚೀನಾ ನಿರರ್ಥಕಗೊಳಿಸುವುದು ಇದೇ ಮೊದಲಲ್ಲ. ಹಿಂದೆಯೂ ಪಾಕ್‌ ಮೂಲದ ಭಯೋತ್ಪಾದನಾ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾವ ಅಂಗೀಕಾರವಾಗದಂತೆ ಅದು ನೋಡಿಕೊಂಡಿತ್ತು. ‘ಅಜರ್‌ ಮತ್ತು ಅವನ ಸಹಚರರ ಭಯೋತ್ಪಾದನಾ ಚಟುವಟಿಕೆಗಳ ಗುರಿ ಭಾರತ. ಅದರಿಂದ ತನಗೇನೂ ನಷ್ಟವಿಲ್ಲ’ ಎಂಬುದು ಚೀನಾದ ಭಾವನೆ. ಆದರೆ ವಿಷಯ ಅಷ್ಟು ಸರಳವಿಲ್ಲ. ಚೀನಾಕ್ಕೆ ಕಾಟ ಕೊಡುತ್ತಿರುವ ಉಯಿಘುರ್‌ ಇಸ್ಲಾಮಿಕ್‌ ಉಗ್ರ ಸಂಘಟನೆಗೆ ಕುಮ್ಮಕ್ಕು ದೊರೆಯುತ್ತಿರುವುದು ಪಾಕ್‌ನಿಂದ. ಆದರೆ ಈ ವಿಚಾರದಲ್ಲಿ ಅದು ನೇರವಾಗಿ ಪಾಕ್‌ ಸರ್ಕಾರದ ಜತೆಯೇ ಮಾತುಕತೆ ನಡೆಸಿದೆ. ಅಲ್ಲಿನ ಆಡಳಿತ ಮತ್ತು ಸೇನೆ ಮೇಲೆ ತನಗಿರುವ ಪ್ರಭಾವ ಬಳಸಿ ಉಯಿಘುರ್‌ ಉಗ್ರರ ದಮನ ಆಗುವಂತೆ ನೋಡಿಕೊಂಡಿದೆ. ಆದರೆ ಚೀನಾದ ನಿದ್ದೆ ಕೆಡಿಸಿರುವ ಪೂರ್ವ ತುರ್ಕಸ್ತಾನ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಸೇರಿದಂತೆ ಅನೇಕ ಉಗ್ರ ಸಂಘಟನೆಗಳಿಗೆ ಪಾಕ್‌ನ ಜೈಷೆ ಮತ್ತು ಲಷ್ಕರ್‌ನಂಥ ಭಯೋತ್ಪಾದನಾ ಬಣಗಳು ಕುಮ್ಮಕ್ಕು ಕೊಡುತ್ತಿವೆ. ಅದು ಚೀನಾಕ್ಕೂ ಗೊತ್ತು. ಆದರೂ ಜೈಷೆ ಮೊಹಮ್ಮದ್‌ ನೇರವಾಗಿ ತನಗೆ ತೊಂದರೆ ಕೊಡುತ್ತಿಲ್ಲ ಎಂಬ ಅದರ ಭಾವನೆಯೇ ಒಂದು ದಿನ ಅದಕ್ಕೆ ಮುಳುವಾಗಬಹುದು. ಉಯಿಘುರ್‌ ಉಗ್ರರ ವಿರುದ್ಧ ಅದು ನಡೆಸುತ್ತಿರುವ ಹೋರಾಟವೇ ದುರ್ಬಲಗೊಳ್ಳಲಿದೆ. ಚೀನಾದ ಈ ಇಬ್ಬಂದಿ ನಿಲುವಿನಿಂದ ಭಾರತಕ್ಕೆ ಅಸಮಾಧಾನವಾಗಿದೆ. ಅಜರ್‌ ವಿರುದ್ಧದ ಕ್ರಮಕ್ಕೆ ಅಡ್ಡಿಪಡಿಸಿದ ಚೀನಾಕ್ಕೆ ಬುದ್ಧಿ ಕಲಿಸಲು ಭಾರತದಲ್ಲಿನ ಎಲ್ಲ ಚೀನಿ ಉದ್ಯಮ, ವಹಿವಾಟುಗಳು ಪಡೆಯಬೇಕಾದ ಭದ್ರತಾ ಪರವಾನಗಿಯನ್ನು ಬಿಗಿಗೊಳಿಸಲು ಸರ್ಕಾರ ಆಲೋಚಿಸುತ್ತಿದೆ ಎಂಬ ವದಂತಿ ಹರಡಿತ್ತು. ಆದರೆ ಇಂಥ ಯಾವುದೇ ಕ್ರಮ ಇಲ್ಲ ಎಂದು ಹೇಳುವ ಮೂಲಕ ಸರ್ಕಾರ ಪ್ರೌಢಿಮೆ ಪ್ರದರ್ಶಿಸಿದೆ. ಅಮೆರಿಕ ಮತ್ತು ಜಪಾನ್‌ಗೆ ಭಾರತ ಹತ್ತಿರವಾಗುತ್ತಿರುವುದು ಚೀನಾಕ್ಕೆ ಅಭದ್ರತೆ ಮೂಡಿಸಿರಲೂಬಹುದು. ಆದರೆ ಭಾರತ ಸಾಕಷ್ಟು ಪ್ರಬುದ್ಧತೆಯುಳ್ಳ ದೇಶ. ಚೀನಾವನ್ನು ಮಣಿಸಲು ಬೇರೆ ದೇಶಗಳ ಸ್ನೇಹ ಬಳಸಿಕೊಳ್ಳುವ ಅಥವಾ ಆ ದೇಶಗಳಿಗೆ ಅಂಥ ಅವಕಾಶ ಕೊಡುವಷ್ಟು ದುರ್ಬಲ ನೀತಿ ನಮ್ಮದಲ್ಲ. ಅದನ್ನು ಚೀನಾ ಕೂಡ ಅರ್ಥ ಮಾಡಿಕೊಳ್ಳಬೇಕು. ಇವೆಲ್ಲ ಬೆದರಿಕೆಯಿಂದ ಬಗೆಹರಿಯುವ ವಿಷಯಗಳಲ್ಲ. ಈ ವಿಷಯದಲ್ಲಿ ರಾಜತಾಂತ್ರಿಕ ಮಾಗರ್ವೇ ಸೂಕ್ತ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಈಗ ಚೀನಾದಲ್ಲಿದ್ದಾರೆ. ಅಜರ್‌ ವಿಷಯದಲ್ಲಿ ಚೀನಾ ತಳೆದ ನಿಲುವಿಗೆ ಭಾರತದ ಅಸಮಾಧಾನವನ್ನು ತಿಳಿಸಲು ಇಬ್ಬರೂ ಈ ಅವಕಾಶ ಬಳಸಬೇಕು. ಭಾರತಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯ ವಿರೋಧಿಸುವ ಚಾಳಿಯನ್ನು ಚೀನಾವೂ ಬಿಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.