ಪೊಲೀಸರ ಬೇಡಿಕೆ ಈಡೇರಿಸಿ ವ್ಯವಸ್ಥೆ ಶುದ್ಧೀಕರಣಕ್ಕೆ ಮುಂದಾಗಿ ಪೊಲೀಸ್‌ ಪ್ರತಿಭಟನೆ ಎಂಬ ಬೀಸೋ ದೊಣ್ಣೆಯಿಂದ ಸರ್ಕಾರ ಸದ್ಯಕ್ಕೆ ಪಾರಾಗಿದೆ. ಆದರೆ ಅವರಿಗೆ ಕೊಟ್ಟ ಭರವಸೆಗಳನ್ನು ಸಬೂಬು ಹೇಳದೆ ಜಾರಿಗೆ ತರುವ ಹೊಣೆಯೂ ಇದೆ ಎಂಬುದನ್ನು ಮರೆಯಬಾರದು. ರಾಜ್ಯದ ಪೊಲೀಸರು ಉದ್ದೇಶಿತ ಪ್ರತಿಭಟನೆಯಿಂದ ಕೊನೆಗೂ ಹಿಂದೆ ಸರಿದು ಶನಿವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಸರ್ಕಾರವನ್ನು ಮುಜುಗರದಿಂದ ಪಾರು ಮಾಡಿದ್ದಾರೆ. ಅದರ ಹಿಂದೆ ಬೆದರಿಕೆ, ಮನವೊಲಿಕೆ ಹೀಗೆ ನಾನಾ ಬಗೆಯ ತಂತ್ರಗಳು ಕೆಲಸ ಮಾಡಿರಬಹುದು. ‘ನಮ್ಮ ಪೊಲೀಸರು ಅತ್ಯಂತ ಶಿಸ್ತಿನವರು ಎಂಬುದು ಸಾಬೀತಾಗಿದೆ’ ಎಂದು ಸರ್ಕಾರದ ಆಡಳಿತ ಸೂತ್ರ ಹಿಡಿದವರು, ಅಧಿಕಾರಿಗಳು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ. ಆದರೆ ಕಾನೂನುಬದ್ಧವಾಗಿ ಸಿಗಲೇಬೇಕಾದ ಕನಿಷ್ಠ ಮೂಲಭೂತ ಸೌಕರ್ಯಕ್ಕೂ ಕೆಳಹಂತದ ಪೊಲೀಸ್‌ ಸಿಬ್ಬಂದಿ ಪಡಿಪಾಟಲು ಪಡುತ್ತಿದ್ದರು ಎಂಬುದರ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರತಿಭಟನಾ ಬೆದರಿಕೆ ಯಶಸ್ವಿಯಾಗಿದೆ. ಸ್ವಲ್ಪ ಮಟ್ಟಿನ ಬಿಸಿ ಮುಟ್ಟಿಸುವಲ್ಲಿ ಸಫಲವೂ ಆಗಿದೆ. ಇಲ್ಲದಿದ್ದರೆ, ಪೊಲೀಸ್‌ ಸಿಬ್ಬಂದಿಗೆ ವಾರಕ್ಕೆ ಒಂದು ದಿನ ಕಡ್ಡಾಯವಾಗಿ ರಜೆ ಕೊಡಲೇಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸುವುದಕ್ಕೆ ಇಷ್ಟು ದಿನ ಬೇಕಾಗಿತ್ತೇನು? ‘ಅವರ ಶಿಸ್ತಿನ ನಡವಳಿಕೆಯಿಂದ ಸರ್ಕಾರದ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಅವರ ಬೇಡಿಕೆಗಳನ್ನು ಕಾಲಮಿತಿಯ ಒಳಗೆ ಈಡೇರಿಸಲಾಗುವುದು’ ಎಂದು ಗೃಹ ಸಚಿವರು ಹೇಳಿದ್ದಾರೆ. ಅದಕ್ಕೆ ಅವರು ಬದ್ಧರಾಗಿರಬೇಕು. ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ ಈ ಬೆಳವಣಿಗೆಗಳ ಬಗ್ಗೆ ವರದಿ ತರಿಸಿಕೊಳ್ಳುವುದು ಒಳ್ಳೆಯದು. ಶಿಸ್ತು ಕ್ರಮ, ದಂಡನೆ, ವರ್ಗಾವಣೆ, ವಜಾ ಮತ್ತಿತರ ಬೆದರಿಕೆ ಒಡ್ಡಿ ಅತೃಪ್ತಿಯನ್ನು ಹೆಚ್ಚು ಕಾಲ ಅದುಮಿಡಲು ಸಾಧ್ಯವಿಲ್ಲ. ಅದು ಮುಂದುವರಿದಷ್ಟೂ ಸಮಸ್ಯೆ ತಪ್ಪಿದ್ದಲ್ಲ. ಶಿಸ್ತಿಗೆ ಹೆಸರಾದ ಸಮವಸ್ತ್ರ ಪಡೆ ಎಂಬ ಹೆಸರಿನಲ್ಲಿ ಪೊಲೀಸರ ನ್ಯಾಯಬದ್ಧ ಬೇಡಿಕೆಗಳನ್ನು ಇಷ್ಟು ದಿನ ನಿರ್ಲಕ್ಷಿಸಿದ್ದು ಸಾಕು. ಕೆಳ ಹಂತದ ಪೊಲೀಸರ ಜತೆ ಮೇಲಧಿಕಾರಿಗಳು ಮಾನವೀಯವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಆರೋಪವನ್ನು ಖಂಡಿತವಾಗಿ ಕಡೆಗಣಿಸಲಾಗದು. ಎಲ್ಲವನ್ನೂ ಮೌನವಾಗಿ ಸಹಿಸುವ ಕಾಲ ಈಗಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಘನತೆ, ಗೌರವ ಇದೆ. ಅದಕ್ಕೆ ಮರ್ಯಾದೆ ಕೊಡಬೇಕು ಎಂಬ ಅರಿವು ಅಧಿಕಾರಿಗಳಿಗಿರಬೇಕು. ಪೊಲೀಸ್ ಪಡೆಯಲ್ಲಿ ವೃತ್ತಿಪರತೆಯನ್ನು ತರಲು ಇದು ಮೊದಲ ಹೆಜ್ಜೆ. ಕೈಕೆಳಗಿನವರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎಂಬ ಉಡಾಫೆಯನ್ನು ಬಿಡಬೇಕು. ಕಾನ್‌ಸ್ಟೆಬಲ್‌ಗಳ ತರಬೇತಿಗೆ, ಅವರ ಸಂಬಳ ಸೌಕರ್ಯಕ್ಕೆ ಸಾರ್ವಜನಿಕರ ತೆರಿಗೆ ಹಣ ಖರ್ಚಾಗುತ್ತದೆ. ಆದ್ದರಿಂದ ಅವರ ಸೇವೆ ಪೂರ್ಣವಾಗಿ ಸಮಾಜಕ್ಕೆ ಸಿಗಬೇಕು. ಅದು ಪ್ರಜೆಗಳ ಹಕ್ಕು. ಅದನ್ನು ಬಿಟ್ಟು ಆರ್ಡರ್ಲಿ ಪದ್ಧತಿಯ ಹೆಸರಿನಲ್ಲಿ ಮೇಲಧಿಕಾರಿಗಳ ಮನೆಗೆಲಸಕ್ಕೆ, ಅವರ ಕುಟುಂಬ ವರ್ಗದವರ ಚಾಕರಿ ಮಾಡಲಿಕ್ಕೆ ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸುವುದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆ, ಅವರು ಪಡೆದ ತರಬೇತಿಗೆ ಮಾಡುವ ಅಪಚಾರ, ತರಬೇತಾದ ಮಾನವ ಸಂಪನ್ಮೂಲದ ಪೋಲು. ಅಲ್ಲದೆ ಇದು ಕೆಳಹಂತದ ಸಿಬ್ಬಂದಿಯಲ್ಲಿ ಕೀಳರಿಮೆ, ಹತಾಶೆಗೆ ಕಾರಣವಾಗುತ್ತದೆ. ಇದರ ದುಷ್ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗುತ್ತದೆ. ಸಾರ್ವಜನಿಕರ ಮಾನ, ಪ್ರಾಣ, ಆಸ್ತಿ ರಕ್ಷಣೆಗೆ ತರಬೇತಾದವರನ್ನು ಆಯಾ ಉದ್ದೇಶಕ್ಕೆ ಬಳಸಿಕೊಳ್ಳಬೇಕೇ ಹೊರತು ಅಧಿಕಾರಿಗಳ ಮನೆಯ ಕಸಮುಸುರೆ ತೊಳೆಯಲಿಕ್ಕೆ ಅಲ್ಲ. ಈ ಕೆಲಸಗಳಿಗಾಗಿ ಬೇರೆಯವರನ್ನು ಬೇಕಿದ್ದಲ್ಲಿ ನಿಯೋಜಿಸಿಕೊಳ್ಳಲಿ. ತರಬೇತಿ ಪಡೆದ ಪೊಲೀಸರೇಕೆ ಇಂತಹ ಕೆಲಸಗಳನ್ನು ಮಾಡಬೇಕು? ಈ ಬಾರಿ ಈ ಆರ್ಡರ್ಲಿ ಎಂಬ ಪಿಡುಗಿನ ಬಗ್ಗೆಯೇ ಬಹಳಷ್ಟು ಚರ್ಚೆಗಳಾಗಿವೆ. ತಮಿಳುನಾಡು ಸರ್ಕಾರ ಒಂದೇ ಏಟಿಗೆ ಇದನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದರೆ ನಮ್ಮ ರಾಜ್ಯ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ನೆರೆಯ ರಾಜ್ಯದಲ್ಲಿ ಸಾಧ್ಯವಾಗಿದ್ದು ನಮ್ಮಲ್ಲಿ ಏಕೆ ಆಗುತ್ತಿಲ್ಲ?ನಮ್ಮ ಪೊಲೀಸರು ಇನ್ನೂ ಲಾಠಿ ಹಿಡಿದು ಬೆದರಿಸುವ ಕಾಲದಲ್ಲಿಯೇ ಇದ್ದಾರೆ. ತಂತ್ರಜ್ಞಾನದೊಂದಿಗೆ ಮುನ್ನಡೆಯುತ್ತಿರುವ ಸಮಾಜದ ಜತೆ ಅವರು ಹೆಜ್ಜೆ ಹಾಕುತ್ತಿಲ್ಲ. ಪೊಲೀಸರಲ್ಲಿ ವೃತ್ತಿಪರತೆ, ನೈಪುಣ್ಯ ಬೆಳೆಸಲು ಪೊಲೀಸ್ ವ್ಯವಸ್ಥೆಯನ್ನು ಸಮಗ್ರವಾಗಿ ಆಧುನೀಕರಿಸಬೇಕಿದೆ. ಜಾತಿ ರಾಜಕೀಯ, ವಶೀಲಿಬಾಜಿ, ಭ್ರಷ್ಟಾಚಾರ ಮಿತಿಮೀರಿದೆ. ಅದು ತಪ್ಪಬೇಕು. ಪೊಲೀಸರು ಸದಾ ತಮ್ಮ ಹಿಡಿತದಲ್ಲಿಯೇ ಇರಬೇಕು ಎನ್ನುವ ಊಳಿಗಮಾನ್ಯ ಮನಸ್ಥಿತಿಯಿಂದ ನಮ್ಮ ರಾಜಕಾರಣಿಗಳು ಮೊದಲು ಹೊರಬರಬೇಕು. ಪೊಲೀಸ್‌ ವ್ಯವಸ್ಥೆಯ ಶುದ್ಧೀಕರಣಕ್ಕೆ ಈ ಬೆಳವಣಿಗೆಗಳು ನಾಂದಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.