ಪಂಥಗಳ ನಾಯಕರು ಸಮಾಜಘಾತುಕ ಶಕ್ತಿಗಳಾಗುವುದನ್ನು ನಿಯಂತ್ರಿಸಿ ಸ್ವಯಂಘೋಷಿತ ದೇವಮಾನವರು ಹಾಗೂ ವಿಚಿತ್ರ ಆಚರಣೆಗಳನ್ನು ನಡೆಸುವಂತಹ ಪಂಥಗಳಿಗೆ ದೊರೆಯುವ ರಾಜಕೀಯ ಪೋಷಣೆ ತಪ್ಪಬೇಕು. ಜನರಲ್ಲಿ ಜಾಗೃತಿಯೂ ಮೂಡಬೇಕು. ಇಬ್ಬರು ಪೊಲೀಸರೂ ಸೇರಿದಂತೆ 29 ಜನರ ಸಾವಿಗೆ ಕಾರಣವಾದ ಮಥುರಾ ಹಿಂಸಾತ್ಮಕ ಘಟನೆಗಳಿಗೆ ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯ ಹಾಗೂ ಅದಕ್ಷತೆ ನೇರವಾಗಿ ಕಾರಣ ಎಂದು ಹೇಳಬಹುದು. ಮಥುರಾದಲ್ಲಿ ಕಳೆದ ಎರಡು ವರ್ಷಗಳಲ್ಲಿ ಬೆಳೆದುಕೊಂಡು ಬಂದ ಪರಿಸ್ಥಿತಿಯನ್ನು ಆರಂಭದಲ್ಲೇ ಚಿವುಟಲು ಸ್ಥಳೀಯ ಹಾಗೂ ರಾಜ್ಯದ ಮಟ್ಟಗಳಲ್ಲಿ ಯಾವುದೇ ಕ್ರಮಗಳನ್ನು ಆಡಳಿತಯಂತ್ರ ಕೈಗೊಂಡಿಲ್ಲ. ಸರ್ಕಾರದ ಆಡಳಿತದ ಮೂಗಿನಡಿಯೇ ಖಾಸಗಿ ಸೇನೆಯ ಸ್ಥಾಪನೆ ಹಾಗೂ ಅಪಾರ ಶಸ್ತ್ರಾಸ್ತ್ರಗಳ ಸಂಗ್ರಹ ಸಾಧ್ಯವಾಗಿರುವುದು ವಿಪರ್ಯಾಸ. 260 ಎಕರೆ ಸಾರ್ವಜನಿಕ ಸ್ಥಳವನ್ನು ಒಂದೇ ದಿನದಲ್ಲಿ ಅತಿಕ್ರಮಿಸಿಕೊಳ್ಳುವುದು ಖಂಡಿತ ಸಾಧ್ಯವಿಲ್ಲ. ಎರಡು ವರ್ಷಗಳಿಂದ ಈ ಅತಿಕ್ರಮಣ ನಡೆದುಕೊಂಡು ಬಂದಿದೆ. ಜೊತೆಗೆ ಇಂತಹ ಅಕ್ರಮ ವ್ಯವಹಾರಗಳು ಆಡಳಿತ ಯಂತ್ರದ ಕೃಪಾಶೀರ್ವಾದ ಇಲ್ಲದೆ ನಡೆಯುವುದು ಸಾಧ್ಯವಿಲ್ಲ. ಅತಿಕ್ರಮಣಕಾರರ ಹಾವಳಿಯ ಬಗ್ಗೆ ಸ್ಥಳೀಯ ನಿವಾಸಿಗಳು ದೂರುಗಳನ್ನೂ ನೀಡಿದ್ದರು. ಆದರೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಲಖನೌದಿಂದ ಬರುತ್ತಿದ್ದ ಕರೆ ತಮ್ಮನ್ನು ತಡೆದು ನಿಲ್ಲಿಸುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿರುವುದು ಮಾಧ್ಯಮಗಳಲ್ಲಿ ಉಲ್ಲೇಖಗೊಂಡಿದೆ. ಅತಿಕ್ರಮಣ ತೆರವುಗೊಳಿಸುವುಕ್ಕೆ ಮುಂದಾಗಲು ಕಡೆಗೂ ಕೋರ್ಟ್ ಆದೇಶವೇ ಬೇಕಾಯಿತು. ಆದರೆ ಈ ಸಂದರ್ಭದಲ್ಲೂ ಸೂಕ್ತ ಸನ್ನದ್ಧತೆ ಕೊರತೆ ಇತ್ತು ಎಂಬುದು ಸ್ಪಷ್ಟ. ಪೊಲೀಸ್ ಗುಪ್ತಚರ ವಿಭಾಗದ ವೈಫಲ್ಯ ಇಲ್ಲಿ ಎದ್ದು ಕಾಣಿಸುತ್ತದೆ. ಅತಿಕ್ರಮಣಕಾರರ ಬಳಿ ಶಸ್ತ್ರಾಸ್ತ್ರ ಇದೆ ಎಂಬುದು ಪೊಲೀಸರಿಗೆ ಗೊತ್ತಿತ್ತು. ಆದರೂ ಅವರು ಗುಂಡು ಹಾರಿಸಬಹುದೆಂದು ಭಾವಿಸಿರಲಿಲ್ಲ ಎಂಬಂಥ ಮಾತುಗಳು ಬೇಜವಾಬ್ದಾರಿಯಿಂದ ಕೂಡಿವೆ. ಅತಿಕ್ರಮಣಕಾರರ ಸಂಘಟಿತ ಗುಂಪಿನ ಮೇಲೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸರ ಸನ್ನದ್ಧತೆ ಕೊರತೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೂ ಒಪ್ಪಿಕೊಂಡಿದ್ದಾರೆ. ಆದರೆ ಈ ಗುಂಪಿಗೆ ಇರುವ ರಾಜಕೀಯ ರಕ್ಷಣೆಯ ಬಗ್ಗೆ ಅವರು ಮೌನ ತಾಳಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರು ಬಳಸಿಕೊಂಡು ಈ ಗುಂಪು ದಾಳಿ ನಡೆಸುವಲ್ಲಿ ತೋರಿದ ಸನ್ನದ್ಧತೆ ಹಾಗೂ ದರ್ಪ ಅಚ್ಚರಿ ಮೂಡಿಸುವಂತಹದ್ದು. ಈ ಗುಂಪಿನ ಅನುಯಾಯಿಗಳು ವಿಚಿತ್ರವಾದ ನಂಬಿಕೆಗಳು ಹಾಗೂ ಆಚರಣೆಗಳನ್ನು ನಡೆಸುವಂತಹವರು. ಇಂತಹ ಸ್ವಯಂ ಘೋಷಿತ ಪಂಥಗಳು, ಧಾರ್ಮಿಕ ನಾಯಕರು ಅಥವಾ ದೇವಮಾನವರು ರಾಷ್ಟ್ರದ ಸಾಮಾಜಿಕ ಬದುಕಿನಲ್ಲಿ ಎಲ್ಲೆಲ್ಲೂ ಕಂಡು ಬರುತ್ತಿದ್ದಾರೆ ಎಂಬುದು ವಿಪರ್ಯಾಸ. ವಿವಿಧ ಬಗೆಯ ಪಂಥಗಳ ವಿಚಿತ್ರ ನಂಬಿಕೆ, ಆಚರಣೆಗಳಿಗೆ ಮುಗ್ಧ ಜನರು ಬಲಿಬೀಳುತ್ತಿದ್ದಾರೆ ಎಂಬುದು ಆತಂಕದ ಸಂಗತಿ. ಹಲವು ಬಗೆಯ ಮೂಢಾಚರಣೆಗಳ ಜೊತೆಗೆ ಹೆಣ್ಣುಮಕ್ಕಳ ಲೈಂಗಿಕ ಶೋಷಣೆಯೂ ನಡೆಯುತ್ತದೆ. ಆದರೂ ಇಂತಹ ಅತಾರ್ಕಿಕ, ಭ್ರಮಾತ್ಮಕ ಆಚರಣೆಗಳಿಗೆ ಜನರೇಕೆ ಬಲಿಯಾಗುತ್ತಾರೆ ಎಂಬುದನ್ನು ವಿವರಿಸುವುದು ಕಷ್ಟ. ಹೀಗಾಗಿ ಹುಲು ದೇವಮಾನವರು ಅಥವಾ ಪಂಥಗಳ ಡಾಂಭಿಕ ಆಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ. ಆದರೆ ಇಂತಹವರು ರಾಷ್ಟ್ರದ ರಾಜಕೀಯ ಬದುಕಿನಲ್ಲೂ ಪ್ರಭಾವ ಬೀರುತ್ತಿದ್ದಾರೆ ಎಂಬುದು ಕಟು ವಾಸ್ತವ. ರಾಜಕೀಯ ನಾಯಕರೂ ಇಂತಹ ಮೂಢಾಚರಣೆಗಳಿಗೆ ಕುಮ್ಮಕ್ಕು ನೀಡುವಂತಹವರಾಗಿರುವುದು ವಿಷಾದನೀಯ. ಇಂತಹ ವಿವಿಧ ಗುಂಪುಗಳ ಅನುಯಾಯಿಗಳು ರಾಜಕಾರಣಿಗಳಿಗೆ ದೊಡ್ಡ ಮತ ಬ್ಯಾಂಕ್ ಆಗುತ್ತಾರೆ ಎಂಬುದನ್ನೂ ಮರೆಯುವಂತಿಲ್ಲ. ಆದರೆ ಹೀಗೆ ದೇವಮಾನವರು ಹಾಗೂ ಅಪರಾಧಿಗಳಿಗೆ ರಾಜಕೀಯ ಕೃಪಾಪೋಷಣೆ ಮುಂದುವರಿಯುತ್ತಲೇ ಸಾಗುವುದು ಹಿಂಸಾತ್ಮಕ ಪರಿಣಾಮಗಳಿಗೂ ಕಾರಣವಾಗುತ್ತದೆ. 2014ರಲ್ಲಿ ದೇವಮಾನವ ರಾಮಪಾಲ್ ಹಾಗೂ ಆತನ ಅನುಯಾಯಿಗಳು ನ್ಯಾಯಾಲಯದ ಆದೇಶಕ್ಕೆ ಮಣಿಯಲು ತಿರಸ್ಕರಿಸಿದಾಗ ಹರಿಯಾಣದಲ್ಲೂ ಹಿಂಸಾತ್ಮಕ ಘರ್ಷಣೆಗಳಾಗಿದ್ದವು ಎಂಬುದನ್ನು ಸ್ಮರಿಸಬೇಕು. ದೇವಮಾನವರು ಹಾಗೂ ಅಪರಾಧ ಜಗತ್ತಿನ ಕುಳಗಳು ರಾಜಕೀಯ ಕೃಪಾಪೋಷಣೆಯೊಂದಿಗೆ ದೊಡ್ಡದಾಗಿ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುವುದನ್ನು ಇನ್ನಾದರೂ ನಿಯಂತ್ರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.