ಉನ್ನತ ಶಿಕ್ಷಣದ ಗುಣಮಟ್ಟ ಬಿಕ್ಕಟ್ಟು ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಸ್ಥಿತಿಗತಿ ಹೇಗಿದೆ ಎಂಬುದನ್ನು ನೋಡುವುದಕ್ಕೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳ ಸಂಖ್ಯೆಯ ಮೇಲೊಮ್ಮೆ ಕಣ್ಣಾಡಿಸಿದರೆ ಸಾಕು. ಒಟ್ಟು ಮಂಜೂರಾಗಿರುವ ಹುದ್ದೆಗಳಲ್ಲಿ ಅರ್ಧದಷ್ಟು ಖಾಲಿ ಇವೆ. ಕರ್ನಾಟಕದ ಬೌದ್ಧಿಕ ಇತಿಹಾಸದಲ್ಲಿ ಬಹುದೊಡ್ಡ ಸ್ಥಾನ ಹೊಂದಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಇರುವ 665 ಬೋಧಕ ಹುದ್ದೆಗಳಲ್ಲಿ 330ರಷ್ಟು ಖಾಲಿ ಇವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅನನ್ಯ ಬೌದ್ಧಿಕ ಪರಂಪರೆಯ ಇತಿಹಾಸವೇನೇ ಇದ್ದರೂ ವರ್ತಮಾನದಲ್ಲಿ ಬೋಧಕರ ಕೊರತೆಯಿಂದ ಬಳಲುತ್ತಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ಈ ಸ್ಥಿತಿಯೇ ಇದೆ. ಪ್ರಮಾಣದಲ್ಲಿ ಮಾತ್ರ ಸ್ವಲ್ಪ ಏರುಪೇರುಗಳಿವೆ. ಬೋಧಕ ಸಿಬ್ಬಂದಿ ಇಲ್ಲ ಎಂಬುದು ವಿಶ್ವವಿದ್ಯಾಲಯಗಳಿಗೆ ಬಾಧಿಸಿರುವ ರೋಗದ ಒಂದು ಲಕ್ಷಣ ಮಾತ್ರ. ಉಳಿದ ಲಕ್ಷಣಗಳು ಇನ್ನೂ ಹೆಚ್ಚು ಆತಂಕಕಾರಿಯಾಗಿವೆ. ಹಗರಣಗಳ ಹಳವಂಡ ಇಲ್ಲದೇ ಇರುವ ಒಂದೇ ಒಂದು ವಿಶ್ವವಿದ್ಯಾಲಯ ನಮ್ಮಲ್ಲಿಲ್ಲ. ಕುಲಪತಿಯ ನೇಮಕದಿಂದ ಆರಂಭವಾಗಿ ‘ಡಿ’ ದರ್ಜೆ ನೌಕರರ ನೇಮಕಾತಿಯ ತನಕದ ಹಗರಣಗಳು ಒಂದೆಡೆ ಇದ್ದರೆ, ಕಟ್ಟಡ ನಿರ್ಮಾಣದಿಂದ ಆರಂಭಿಸಿ ಮೂಲಸೌಕರ್ಯ ನಿರ್ಮಾಣಕ್ಕೆ ಸಂಬಂಧಿಸಿದ ಹಗರಣಗಳು ಬೇರೆಯೇ. ಇಷ್ಟರ ಮೇಲೆ ಸರ್ಕಾರ ಹೊಸ ವಿಶ್ವವಿದ್ಯಾಲಯಗಳ ಪ್ರಸ್ತಾವವನ್ನು ಮುಂದಿಟ್ಟು ಅವುಗಳ ಸ್ಥಾಪನೆಗೆ ಮುಂದಾಗುತ್ತಿದೆ. ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯವನ್ನು ಒಡೆದು ಮೂರಾಗಿಸುವ ಕ್ರಿಯೆ ಚಾಲನೆಯಲ್ಲಿದೆ. ಗ್ರಾಮೀಣ ಅಭಿವೃದ್ಧಿಗೊಂದು ವಿಶ್ವವಿದ್ಯಾಲಯದ ಪ್ರಸ್ತಾವ ಪರಿಗಣನೆಯಲ್ಲಿದೆ. ಸದ್ಯಕ್ಕೆ ನಮ್ಮ ವಿಶ್ವವಿದ್ಯಾಲಯಗಳು ಬೌದ್ಧಿಕ ಅಭಿವೃದ್ಧಿಗೆ ಒತ್ತು ನೀಡಿರುವ ಸ್ವಾಯತ್ತ ಸಂಸ್ಥೆಗಳಂತೆ ಕಾಣುತ್ತಿಲ್ಲ. ಬದಲಿಗೆ ಇವು ಭ್ರಷ್ಟತೆಯ ರೋಗ ಬಾಧಿಸಿರುವ ಸರ್ಕಾರಿ ಇಲಾಖೆಗಳಂತೆ ಕಾಣಿಸುತ್ತಿವೆ. ಇಷ್ಟರ ಮಧ್ಯೆಯೂ ಬೌದ್ಧಿಕತೆಗೆ ಅಲ್ಲಿ ಇಲ್ಲಿ ಅವಕಾಶ ದೊರೆತಿದ್ದರೆ ಅದು ಅಪವಾದವೇ ಹೊರತು ಸಹಜವಲ್ಲ. ಭಾರತದಲ್ಲಿ ಮೊದಲಿಗೆ ಜ್ಞಾನಾಧಾರಿತ ಆರ್ಥಿಕತೆಯ ಹಾದಿಯನ್ನು ತುಳಿದ ರಾಜ್ಯ ಕರ್ನಾಟಕ. ಈ ದೃಷ್ಟಿಯಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು ಬೌದ್ಧಿಕ ಕರ್ನಾಟಕದ ಉತ್ಕೃಷ್ಟತಾ ಕೇಂದ್ರಗಳಾಗಿ ಒಡಮೂಡಬೇಕಾಗಿತ್ತು. ಎಂಬತ್ತರ ದಶಕದ ಅಂತ್ಯದ ತನಕವೂ ಕರ್ನಾಟಕದ ವಿಶ್ವವಿದ್ಯಾಲಯಗಳು ಬೌದ್ಧಿಕತೆಯ ಕೇಂದ್ರಗಳಾಗಿಯೇ ಇದ್ದವು. ಆಮೇಲೆ ನಿಧಾನವಾಗಿ ಇವು ‘ಮತ್ತೊಂದು ಸರ್ಕಾರಿ ಇಲಾಖೆ’ಗಳಾಗತೊಡಗಿದವು. ಈ ಪ್ರಕ್ರಿಯೆಯ ಹಿಂದೆ ಇನ್ನೂ ಎರಡು ಬೆಳವಣಿಗೆಗಳಿದ್ದವು. ಶಿಕ್ಷಣಕ್ಕೆ ಬೇಕಿರುವ ರಾಜಕೀಯ ನಾಯಕತ್ವ ಮತ್ತು ಆಡಳಿತಾತ್ಮಕ ನಾಯಕತ್ವಗಳೆರಡೂ ತೀವ್ರವಾಗಿ ಕುಸಿದಿದ್ದವು. ವಿಶ್ವವಿದ್ಯಾಲಯಗಳ ಕುಲಪತಿಗೆ ಬೇಕಿರುವ ಮುಖ್ಯ ಅರ್ಹತೆಗಳಲ್ಲಿ ಒಂದಾದ ಬೌದ್ಧಿಕ ನಾಯಕತ್ವದ ಕಡೆಗಣನೆ ಆರಂಭವಾಯಿತು. ಈ ಮೂರೂ ಬೆಳವಣಿಗೆಗಳ ಫಲಿತಾಂಶ ಈಗ ಕಾಣಿಸುತ್ತಿದೆ. ಇದೊಂದು ರೀತಿಯ ವಿಷವರ್ತುಲ. ಉತ್ತಮ ಬೌದ್ಧಿಕ ನಾಯಕತ್ವ ಇಲ್ಲದೇ ಹೋದರೆ ಒಳ್ಳೆಯ ರಾಜಕೀಯ ಮತ್ತು ಆಡಳಿತಾತ್ಮಕ ನಾಯಕತ್ವ ಇರಲು ಸಾಧ್ಯವಿಲ್ಲ. ಹಾಗೆಯೇ ಕೊನೆಯ ಎರಡೂ ಇಲ್ಲದೇ ಹೋದರೆ ಮೊದಲನೆಯದ್ದನ್ನು ಕಾಣಲೂ ಸಾಧ್ಯವಿಲ್ಲ. ಬೋಧಕರ ಕೊರತೆ, ಮೂಲ ಸೌಕರ್ಯ ಕೊರತೆಯನ್ನು ಸ್ವಲ್ಪ ಕಷ್ಟಪಟ್ಟರೆ ಸರಿಪಡಿಸಲು ಸಾಧ್ಯವಿದೆ. ದೂರದೃಷ್ಟಿಯುಳ್ಳ ಶೈಕ್ಷಣಿಕ ನಾಯಕತ್ವ ಬೆಳೆಯಲು ಬೇಕಿರುವ ವಾತಾವರಣವನ್ನು ಸೃಷ್ಟಿಸುವುದಕ್ಕೆ ಸಮಗ್ರ ದೃಷ್ಟಿಕೋನವುಳ್ಳ ರಾಜಕೀಯ ಮತ್ತು ಆಡಳಿತಾತ್ಮಕ ಮನಸ್ಥಿತಿಯೊಂದು ಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದ ವಿಷಯಕ್ಕೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ನಮ್ಮ ಆಡಳಿತಾರೂಢರ ನಿರ್ಧಾರದ ಹಿಂದೆ ಇರುವುದು ತಮಗೆ ಬೇಕಾದವರಿಗೆ ‘ಕುಲಪತಿ’ ಹುದ್ದೆಯನ್ನು ದಯಪಾಲಿಸುವ ಉದ್ದೇಶವಷ್ಟೆ. ಕಳೆದ ಒಂದು ದಶಕದ ಅವಧಿಯಲ್ಲಿ ಹುಟ್ಟಿಕೊಂಡ ಮತ್ತು ಇನ್ನೇನು ಹುಟ್ಟಲಿರುವ ಎಲ್ಲಾ ವಿಶ್ವವಿದ್ಯಾಲಯಗಳ ಹಿಂದೆಯೂ ಒಬ್ಬೊಬ್ಬ ರಾಜಕಾರಣಿಯ ಪ್ರಯತ್ನವಿದೆ. ವಿಶ್ವವಿದ್ಯಾಲಯವೊಂದನ್ನು ಹುಟ್ಟು ಹಾಕುವುದು ಹೀಗೆಯೇ? ಅದರ ಅಗತ್ಯದ ಕುರಿತಂತೆ ಒಂದು ಪರಿಕಲ್ಪನಾತ್ಮಕ ಟಿಪ್ಪಣಿ, ಅದರ ಮೇಲೊಂದು ಚರ್ಚೆಯನ್ನು ತೋರಿಕೆಗಾದರೂ ನಡೆಸಬೇಕೆಂದು ಸರ್ಕಾರಕ್ಕೆ ಏಕೆ ಅನ್ನಿಸುತ್ತಿಲ್ಲ? ಈ ಬಗೆಯ ನಡೆ ಅನೇಕ ಸಂಶಯಗಳಿಗೆ ಕಾರಣವಾಗುತ್ತಿದೆ. ವಿಶ್ವವಿದ್ಯಾಲಯಗಳ ಬೌದ್ಧಿಕ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಪ್ರಕ್ರಿಯೆಯೊಂದನ್ನು ಆಡಳಿತಾರೂಢರು ಪ್ರಜ್ಞಾಪೂರ್ವಕವಾಗಿಯೇ ನಡೆಸುತ್ತಿರುವಂತಿದೆ. ಉನ್ನತ ಶಿಕ್ಷಣದ ಗುಣಮಟ್ಟ ಕುಸಿತವೆಂದರೆ ನಾವು ನಿರ್ಮಿಸಲು ಹೊರಟಿರುವ ಜ್ಞಾನಾಧಾರಿತ ಆರ್ಥಿಕತೆಯ, ಜ್ಞಾನ ಸಮಾಜದ ಅವಸಾನ ಎಂಬುದನ್ನು ಅರಿಯಬೇಕಾಗಿದೆ. ಇದನ್ನು ತಡೆಯುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಪರ್ಯಾಯ ಬೌದ್ಧಿಕ ನಾಯಕತ್ವವನ್ನು ರೂಪಿಸುವ ನಿಟ್ಟಿನಲ್ಲಿ ಮುಂದಡಿಯಿಡುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.