ಸಂಪುಟ ಪುನರ್‌ ರಚನೆ ಹಿಂಸಾತ್ಮಕ ಪ್ರತಿಭಟನೆ ಸಲ್ಲದು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಬಹಳಷ್ಟು ಸರ್ಕಸ್‌ ನಂತರ ಕೊನೆಗೂ ಪುನರ್‌ ರಚನೆಯಾಗಿದೆ. 14 ಸಚಿವರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ 13 ಜನ ಸೇರ್ಪಡೆಯಾಗಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರ ಕೈಮೇಲಾಗಿದೆ. ಪುನರ್‌ ರಚನೆಯಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ಸಿಕ್ಕಿತ್ತು. ಇಡೀ ದೇಶದಲ್ಲಿ ಕಾಂಗ್ರೆಸ್‌ ಸ್ವತಂತ್ರವಾಗಿ ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಇದೂ ಕೂಡ ಸಿದ್ದರಾಮಯ್ಯನವರ ಪಾಲಿಗೆ ಅನಾಯಾಸ ವರ. ಹೀಗಾಗಿಯೇ ತಮ್ಮ ಪರಮಾಪ್ತರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಆದರೆ ಪುನರ್‌ ರಚನೆಯ ಬೆನ್ನಲ್ಲಿಯೇ ಕಾಂಗ್ರೆಸ್‌ ಪಕ್ಷದ ಒಳಗೆ ಅಸಮಾಧಾನ ಸ್ಫೋಟಗೊಂಡಿದೆ. ಇವೆಲ್ಲ ಸಹಜ. ಯಾವ ಪಕ್ಷದ ಸರ್ಕಾರ ಇದ್ದರೂ ಇದರಲ್ಲೇನೂ ವಿಶೇಷ ಇಲ್ಲ. ಏಕೆಂದರೆ ಸಂಪುಟ ರಚನೆ, ವಿಸ್ತರಣೆ, ಪುನರ್‌ ರಚನೆ– ಹೀಗೆ ಏನೇ ಇದ್ದರೂ ಅವೆಲ್ಲ ಜೇನುಗೂಡಿಗೆ ಕೈ ಹಾಕಿದಂತೆ. ಮಂತ್ರಿಯಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗೆಂದು ಎಲ್ಲರನ್ನೂ ಮಂತ್ರಿ ಮಾಡುವುದು ಸಾಧ್ಯವಿಲ್ಲ. ಅಧಿಕಾರ ಸಿಗದವರು ಅತೃಪ್ತರಾಗುತ್ತಾರೆ. ಸಿದ್ದರಾಮಯ್ಯನವರ ಕಷ್ಟ ಎಂದರೆ ಸಚಿವ ಸ್ಥಾನ ಕಳೆದುಕೊಂಡವರು ಸಿಡಿದೆದ್ದಿದ್ದಾರೆ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟವರು ಕೋಪಗೊಂಡಿದ್ದಾರೆ. ಇವರನ್ನು ಸಮಾಧಾನಪಡಿಸುವುದು ಸುಲಭವಲ್ಲ. ‘ದಕ್ಷತೆ, ಕಾರ್ಯಕ್ಷಮತೆ ಆಧರಿಸಿ ಕೆಲವರನ್ನು ಸಂಪುಟದಿಂದ ತೆಗೆಯಲಾಗುತ್ತದೆ, ಕೆಲವರನ್ನು ಸೇರಿಸಿಕೊಳ್ಳಲಾಗುತ್ತದೆ’ ಎಂದು ಬಿಂಬಿಸುತ್ತ ಬರಲಾಗಿತ್ತು. ಹೀಗಾಗಿ, ತಾವು ಅದ್ಭುತವಾಗಿ, ಜನ ನೆನಪಿಸಿಕೊಳ್ಳುವಂತೆ ಕೆಲಸ ಮಾಡಿದ್ದೇವೆ ಎಂದು ಸಂಪುಟದಿಂದ ಕೈಬಿಟ್ಟವರ ಪಟ್ಟಿಯಲ್ಲಿರುವವರೆಲ್ಲ ಹೇಳಿಕೊಳ್ಳಬಹುದು. ಆದರೆ ಇವರಲ್ಲಿ ಅನೇಕರು, ವಹಿಸಿದ ಖಾತೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂಬ ಜನಾಭಿಪ್ರಾಯವನ್ನು ಅಲ್ಲಗಳೆಯುವುದು ಹೇಗೆ? ಜಾತಿ, ಪ್ರದೇಶವಾರು ಪ್ರಾತಿನಿಧ್ಯ, ರಾಜಕೀಯ ಒತ್ತಡ, ವಯಸ್ಸು, ಸಂಪನ್ಮೂಲ ಸಂಗ್ರಹಿಸುವ ಸಾಮರ್ಥ್ಯ ಇತ್ಯಾದಿ ಲೆಕ್ಕಾಚಾರಗಳೂ ಈಗಿನ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕೆಲಸ ಮಾಡಿರುವುದು ನಿಜ. ಸಮಯ ಸಿಕ್ಕಾಗಲೆಲ್ಲಾ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುತ್ತಿದ್ದ ಇಬ್ಬರು ಮಾಜಿ ಸ್ಪೀಕರ್‌ಗಳನ್ನು ಮಂತ್ರಿ ಮಾಡಿರುವುದು ಅಸಮಾಧಾನ ಕರಗಿಸುವ ಯತ್ನ ಇರಬಹುದು. ಆದರೆ ಸ್ಪೀಕರ್‌ ಹುದ್ದೆಗೆ ತುಂಬ ಘನತೆ, ಗೌರವ ಇದೆ. ಅದು ಮಂತ್ರಿಗಿರಿಗಿಂತ ಹೆಚ್ಚಿನದು. ಅಂತಹ ಉನ್ನತ ಹುದ್ದೆ ಅಲಂಕರಿಸಿದವರು ಸಚಿವ ಸ್ಥಾನದ ಬೆನ್ನು ಬಿದ್ದದ್ದು ದುರಂತವೇ ಸರಿ. ಇನ್ನಿರುವುದು ಎರಡು ವರ್ಷ ಮಾತ್ರ. ಹೀಗಾಗಿ ಸರ್ಕಾರ ಕೆಲಸ ಮಾಡುತ್ತಿದೆ, ಸ್ಪಂದಿಸುತ್ತಿದೆ ಎಂದು ಜನರಿಗೆ ಅನಿಸುವಂತೆ ಇಡೀ ಸಂಪುಟ ಒಗ್ಗೂಡಿ ಕಾರ್ಯ ನಿರ್ವಹಿಸಬೇಕು. ಹಿರಿತನದ ಅನುಭವ, ಯುವಶಕ್ತಿಯ ಹುಮ್ಮಸ್ಸಿದ್ದವರನ್ನು ಈ ಸಂಪುಟ ಒಳಗೊಂಡಿದೆ. ಇನ್ನಾದರೂ ಅಭಿವೃದ್ಧಿಯ ಲಾಭವನ್ನು ಜನರಿಗೆ ತಲುಪಿಸುವ ಕೆಲಸ ಚುರುಕುಗೊಳ್ಳಬೇಕು. ಚುನಾವಣೆಗೆ ನಿಲ್ಲಲು ಟಿಕೆಟ್‌ ಕೊಟ್ಟಾಗ, ಮಂತ್ರಿ ಮಾಡಿದಾಗ, ‘ನನ್ನ ಮೇಲೆ ವಿಶ್ವಾಸ ಇಟ್ಟ ಪಕ್ಷಕ್ಕೆ ಚಿರಋಣಿ. ನಾನು ಪಕ್ಷದ ಶಿಸ್ತಿನ ಸಿಪಾಯಿ’ ಎಂದು ಹೇಳಿದವರೆಲ್ಲ ಈಗ ಪಕ್ಷವನ್ನು, ನಾಯಕತ್ವವನ್ನು ಹಿಗ್ಗಾಮುಗ್ಗಾ ಬೈಯುವುದು ವಿಚಿತ್ರ ಎನಿಸುತ್ತದೆ. ಅಂದರೆ ತಮ್ಮ ನಿಷ್ಠೆ ಏನಿದ್ದರೂ ಅಧಿಕಾರದ ಪೀಠಕ್ಕೆ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ. ತಮ್ಮ ಹಿಂಬಾಲಕರು ಗಲಾಟೆ ಎಬ್ಬಿಸಿ, ಬೆಂಕಿ ಹಚ್ಚಿ ಖಾಸಗಿ, ಸರ್ಕಾರಿ ಆಸ್ತಿಗೆ ಹಾನಿ ಮಾಡುತ್ತಿದ್ದರೂ ಚಕಾರ ಎತ್ತದೆ ಇರುವ ಇವರ ವರ್ತನೆ ಖಂಡನೀಯ. ಸಚಿವ ಸ್ಥಾನ ಕೊಡಲಿಲ್ಲ, ಕೈಬಿಟ್ಟರು ಎಂಬ ಕಾರಣಕ್ಕೆ ಬಂದ್‌ ನಡೆಸುವುದು, ಚಿತ್ರೋದ್ಯಮದ ಚಟುವಟಿಕೆ ನಿಲ್ಲಿಸುವುದು ಜನ ವಿರೋಧಿ. ಸಂಪುಟ ಪುನರ್‌ ರಚನೆ ಎಂಬುದು ಕಾಂಗ್ರೆಸ್‌ ಪಕ್ಷ ಮತ್ತು ಮುಖ್ಯಮಂತ್ರಿಯ ರಾಜಕೀಯ ತೀರ್ಮಾನ. ಪಕ್ಷದ ನಿರ್ಧಾರದಿಂದ ಅನ್ಯಾಯವಾಗಿದೆ ಎನಿಸಿದರೆ ಪಕ್ಷದ ಕಚೇರಿಯೊಳಗೆ ಬೇಕಾದರೆ ಧರಣಿ ಮಾಡಲಿ. ಭಿನ್ನಾಭಿಪ್ರಾಯ, ಪ್ರತಿಭಟನೆಗೆ ಪಕ್ಷದ ವೇದಿಕೆ ಬಳಸಿಕೊಳ್ಳಲಿ. ಅದನ್ನು ಬಿಟ್ಟು ಬೀದಿಗೆ ಬಂದು ಗೂಂಡಾಗಿರಿ ಮಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಗೋವಿಂದರಾಜನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪನವರ ಹಿಂಬಾಲಕರು ಮಿತಿಮೀರಿ ದುಂಡಾವರ್ತನೆ ನಡೆಸಿ ಜನಸಾಮಾನ್ಯರಿಗೆ ತೊಂದರೆ ಕೊಟ್ಟಿದ್ದಾರೆ. ಇದು ಖಂಡನೀಯ. ಇವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಬೇಕು. ಇಂತಹವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲೇಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.