ಐತಿಹಾಸಿಕ ಭೇಟಿ: ವಿಶ್ವ ಶಾಂತಿ ಹೋರಾಟಕ್ಕೆ ಸಶಕ್ತ ಸಂಕೇತ ವಿಯೆಟ್ನಾಂ ಹಾಗೂ ಜಪಾನ್‌ನ ಹಿರೋಶಿಮಾಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಕಳೆದ ವಾರ ನೀಡಿದ ಭೇಟಿ ಚಾರಿತ್ರಿಕವಾಗಿ ಸಾಂಕೇತಿಕವಾದದ್ದು. ಈ ವರ್ಷಾಂತ್ಯಕ್ಕೆ ಒಬಾಮ ಅವರ ಅಧಿಕಾರ ಅವಧಿ ಅಂತ್ಯವಾಗುತ್ತಿದೆ. ಏಷ್ಯನ್ ರಾಷ್ಟ್ರಗಳ ಜೊತೆಗೆ ಬಾಂಧವ್ಯ ವಿಸ್ತರಣೆಗೆ ತಮ್ಮ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಆದ್ಯತೆ ನೀಡಿದ್ದರು ಒಬಾಮ. ಹೀಗಾಗಿಯೇ ಏಷ್ಯನ್ ರಾಷ್ಟ್ರಗಳಿಗೆ ಅವರ ‘ವಿದಾಯದ ಪ್ರವಾಸ’ ಎಂಬಂತೆಯೂ ಬಣ್ಣಿಸಲಾಗುತ್ತಿದೆ. ವಿಯೆಟ್ನಾಂಗೆ ಮಿಲಿಟರಿ ಸಾಮಗ್ರಿ ಮಾರಾಟ ನಿಷೇಧವನ್ನು ಈ ಭೇಟಿ ಸಂದರ್ಭದಲ್ಲಿ ಹಿಂತೆಗೆದುಕೊಂಡಿರುವುದು ಮಹತ್ವದ ನಿರ್ಧಾರ. ಈ ಪ್ರವಾಸದಲ್ಲಿ ಹಿರೋಶಿಮಾ ಭೇಟಿಯಂತೂ ಐತಿಹಾಸಿಕವಾದದ್ದು. ಹಿರೋಶಿಮಾ ಶಾಂತಿ ಸ್ಮಾರಕದಲ್ಲಿ ಒಬಾಮ ಅವರು ಸಲ್ಲಿಸಿದ ಗೌರವಾರ್ಪಣೆ, ಸಶಕ್ತ ಸಂದೇಶ ನೀಡುವಂತಹದ್ದು. ಅಮೆರಿಕದ ಅಧ್ಯಕ್ಷರೊಬ್ಬರು ಈ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದು ಇದೇ ಮೊದಲು. ಹಾಗೆಯೇ ಹಿರೋಶಿಮಾದ ಮೇಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕ ನಡೆಸಿದ ಅಣುಬಾಂಬ್ ದಾಳಿಗೆ ಒಬಾಮ ಅವರು ಕ್ಷಮೆ ಯಾಚಿಸದಿದ್ದುದು ನಿರೀಕ್ಷಿತವೆ. ಆದರೆ ಇಂತಹದೊಂದು ದಾಳಿ ನಡೆದಿತ್ತು ಎಂಬುದನ್ನು ಒಪ್ಪಿಕೊಳ್ಳುವ ಪ್ರಾಂಜಲತೆ ಮುಂದೆ ಇಂತಹ ಘಟನೆಗಳ ಪುನರಾವರ್ತನೆ ತಡೆಯುವಂತಹ ಬದ್ಧತೆಗೆ ಅಗತ್ಯ ಎಂದು ವ್ಯಾಖ್ಯಾನಿಸಬಹುದು. ಈ ಅಣುಬಾಂಬ್ ದಾಳಿಯಲ್ಲಿ ಸುಮಾರು 1.4 ಲಕ್ಷ ಜನ ಕ್ಷಣ ಮಾತ್ರದಲ್ಲಿ ಸಾವನ್ನಪ್ಪಿದ್ದರು. ಲೆಕ್ಕವಿಲ್ಲದಷ್ಟು ಜನ ಗಾಯಗೊಂಡಿದ್ದರು. ಪರಮಾಣು ವಿಕಿರಣವಂತೂ ಅಲ್ಲಿನ ಜನರನ್ನು ಈಗಲೂ ಕಾಡುತ್ತಿದೆ. ತಲೆತಲಾಂತರದಿಂದಲೂ ಅಂಗವೈಕಲ್ಯ, ನಾನಾ ಕಾಯಿಲೆಗಳಿಂದ ನರಳುವಂತೆ ಮಾಡುತ್ತಿದೆ. ಇದು ವಿಶ್ವದಲ್ಲಿ ಪ್ರಯೋಗಿಸಲಾದ ಮೊಟ್ಟ ಮೊದಲ ಅಣು ಬಾಂಬ್. ಇದರ ಬಗ್ಗೆ ಈಗಲೂ ಬಹಳಷ್ಟು ದೇಶಗಳಲ್ಲಿ ಆಕ್ರೋಶವಿದೆ. ಮಾನವತೆಗೆ ಅತಿ ದೊಡ್ಡ ಕಳಂಕ ಎಂಬ ನೋವು ಇದೆ. ಆದರೆ, ‘ಎಲ್ಲೆಡೆ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತ, ಯುದ್ಧೋನ್ಮಾದದಲ್ಲಿ ಇದ್ದ ಜಪಾನ್ ದೇಶವನ್ನು ಮಣಿಸಲು ಅಣು ಬಾಂಬ್ ಪ್ರಯೋಗ ಅನಿವಾರ್ಯವಾಗಿತ್ತು’ ಎಂದು ನಂಬಿದ ಜನ ಅಮೆರಿಕದಲ್ಲಿ ಈಗಲೂ ಇದ್ದಾರೆ. ‘ಹಿರೋಶಿಮಾ, ನಾಗಾಸಾಕಿ ಮೇಲೆ ಪರಮಾಣು ಬಾಂಬ್ ಹಾಕಿದ್ದರಿಂದಲೇ ಎರಡನೇ ಮಹಾಯುದ್ಧ ಬೇಗ ಮುಗಿಯಿತು; ಇಲ್ಲದಿದ್ದರೆ ಇನ್ನೂ ಏನೇನೋ ಅನಾಹುತ ಆಗುತ್ತಿತ್ತು; ಆದ್ದರಿಂದ ಆ ದಾಳಿ ಬಗ್ಗೆ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ’ ಎನ್ನುವ ಧೋರಣೆಯೂ ಇದೆ. ಇಂತಹ ಸಂದರ್ಭದಲ್ಲಿ ಈ ಅಣುಬಾಂಬ್ ದಾಳಿ ಬಗ್ಗೆ ಅಮೆರಿಕದ ಆಗಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ನಿರ್ಧಾರದ ಪುನರವಲೋಕನ ಮಾಡದಂತಹ ಮುತ್ಸದ್ದಿತನದ ನಿಲುವನ್ನು ಒಬಾಮ ಪ್ರದರ್ಶಿಸಿ ದ್ದಾರೆ. ಹೀಗಿದ್ದೂ, ವಿಶ್ವವನ್ನು ಅಣ್ವಸ್ತ್ರ ಮುಕ್ತಗೊಳಿಸುವ ದೃಷ್ಟಿಕೋನದ ವಿಸ್ತೃತ ಹೋರಾಟಕ್ಕೆ ಒಬಾಮ ಅವರ ಹಿರೋಶಿಮಾ ಭೇಟಿ ಸಶಕ್ತ ಸಂಕೇತ. ಹಿರೋಶಿಮಾ ಬಾಂಬ್ ದಾಳಿಯಲ್ಲಿ ಬದುಕುಳಿದಿರುವ ಸಂತ್ರಸ್ತನನ್ನು ಒಬಾಮ ಅಪ್ಪಿಕೊಂಡಿರುವ ಚಿತ್ರ ಹೊರಡಿಸುವ ಸಂಕೇತಗಳು ಪ್ರಭಾವಶಾಲಿಯಾದವು. ಇಡೀ ವಿಶ್ವ ಅಣ್ವಸ್ತ್ರದಿಂದ ಮುಕ್ತವಾಗಬೇಕು ಎಂಬುದು ಒಬಾಮ ಅವರ ಮಹದಾಸೆ. 2009ರಲ್ಲಿ ಪ್ರೇಗ್‌ನಲ್ಲಿ ಮಾತನಾಡುತ್ತಾ ನಿಶ್ಶಸ್ತ್ರೀಕರಣದ ಅಗತ್ಯವನ್ನು ಅವರು ಪ್ರತಿಪಾದಿಸಿದ್ದರು. ಜಗತ್ತಿನಲ್ಲಿ ಅಣ್ವಸ್ತ್ರ ಬಳಸಿದ ಏಕೈಕ ದೇಶವಾಗಿ ಅಮೆರಿಕಕ್ಕೆ ‘ನೈತಿಕ ಹೊಣೆ’ ಇದೆ ಎಂದಿದ್ದರು. ಈ ದಿಸೆಯಲ್ಲಿ ಮಾಡುತ್ತಿರುವ ಪ್ರಯತ್ನಗಳಿಗಾಗಿಯೇ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರವೂ ಸಿಕ್ಕಿದೆ. ಸುಮಾರು 90 ವರ್ಷಗಳವರೆಗೆ ಯಾವ ಅಮೆರಿಕ ಅಧ್ಯಕ್ಷರೂ ಕ್ಯೂಬಾಗೆ ಭೇಟಿ ನೀಡಿರಲಿಲ್ಲ. ಆದರೆ ಒಬಾಮ ಭೇಟಿ ನೀಡಿದರು. ಹಾಗೆಯೇ ಮ್ಯಾನ್ಮಾರ್‌ಗೂ ಯಾರೂ ಭೇಟಿ ನೀಡಿರಲಿಲ್ಲ. ಅಲ್ಲಿಗೆ ಎರಡು ಬಾರಿ ಒಬಾಮ ಭೇಟಿ ನೀಡಿದ್ದಾರೆ. ಇರಾನ್ ಜೊತೆಗಿನ ಪರಮಾಣು ಒಪ್ಪಂದವಂತೂ ಒಬಾಮ ಅವರ ಬಹು ಮುಖ್ಯ ಸಾಧನೆ. ಸಂಘರ್ಷಮಯ ಬಾಂಧವ್ಯಗಳನ್ನು ಮೈತ್ರಿಯ ಹಾದಿಗೆ ತರುವ ಈ ಪ್ರಯತ್ನಗಳು ವಿಶ್ವ ಶಾಂತಿ ಹೋರಾಟಕ್ಕೆ ಪೂರಕ. ಹಾಗೆಯೇ ಅಮೆರಿಕ ಅಣ್ವಸ್ತ್ರ ಶಸ್ತ್ರಾಗಾರ ಉನ್ನತೀಕರಣಕ್ಕೆ ಮುಂದಿನ 30 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಡಾಲರ್ (ಅಂದಾಜು ₹ 67 ಲಕ್ಷ ಕೋಟಿ) ವ್ಯಯಿಸುವ ಯೋಜನೆಯನ್ನು ರೂಪಿಸಿದ್ದಾರೆ ಒಬಾಮ ಎಂಬುದನ್ನು ಗಮನಿಸದೆ ಇರುವುದೂ ಅಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.