ಜನಾಂಗೀಯ ಪೂರ್ವಗ್ರಹ ಬೆಳೆಯದಂತೆ ನಿಯಂತ್ರಿಸಿ ದೆಹಲಿಯ ವಸಂತಕುಂಜ್‌ ಪ್ರದೇಶದಲ್ಲಿ ಕಾಂಗೊ ದೇಶದ ಪ್ರಜೆ ಮಸೊಂಡಾ ಆಲಿವರ್‌ ಎಂಬಾತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣ ಖಂಡನಾರ್ಹ. ಆಟೊ ಬಾಡಿಗೆಗೆ ಸಂಬಂಧಿಸಿ ಜಗಳವಾದ ಬಳಿಕ ಮೂವರು ಆಲಿವರ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ. ಈ ಘಟನೆಯ ಬೆನ್ನಲ್ಲೇ ದೆಹಲಿಯಲ್ಲಿ ಆಫ್ರಿಕಾ ಮೂಲದ ಪ್ರಜೆಗಳ ಮೇಲೆ ಹಲ್ಲೆ ನಡೆದಿರುವ ಇನ್ನೂ ಅನೇಕ ಪ್ರಕರಣಗಳು ಬಹಿರಂಗಗೊಂಡಿವೆ. ಬೆಂಗಳೂರಿನಲ್ಲೂ ಇತ್ತೀಚೆಗೆ ತಾಂಜಾನಿಯಾದ ಮಹಿಳೆಯೊಬ್ಬರ ಮೇಲೆ ಮತ್ತು ಐವರಿಕೋಸ್ಟ್‌ನ ಪ್ರಜೆಯೊಬ್ಬರ ಮೇಲೆ ಸ್ಥಳೀಯರಿಂದ ಹಲ್ಲೆ ಪ್ರಕರಣಗಳು ನಡೆದಿವೆ. ಆಫ್ರಿಕಾದ ವಿವಿಧ ದೇಶಗಳಿಂದ ವಿದ್ಯಾಭ್ಯಾಸ ಮತ್ತು ಉದ್ಯೋಗದ ಸಲುವಾಗಿ ದೆಹಲಿ, ಬೆಂಗಳೂರು ಸಹಿತ ಭಾರತದ ಬಹುತೇಕ ಮಹಾನಗರಗಳಿಗೆ ಬಂದು ನೆಲೆಸಿರುವವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಹಾಗಾಗಿಯೇ ಈ ಕೊಲೆ ಮತ್ತು ಹಲ್ಲೆಗಳು ರಾಜತಾಂತ್ರಿಕ ಮಟ್ಟದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಆಫ್ರಿಕಾ ದೇಶದ ರಾಯಭಾರಿಗಳು ಈ ಘಟನೆಗಳ ಬಗ್ಗೆ ಭಾರತ ಸರ್ಕಾರಕ್ಕೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದು, ಸರ್ಕಾರವೂ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ. ಆಫ್ರಿಕಾದ ದೇಶಗಳ ಜತೆಗೆ ಭಾರತವು ಮಹತ್ವದ ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದು, ಬಂಡವಾಳ ಹೂಡಿಕೆಯ ಹಿನ್ನೆಲೆಯಲ್ಲೂ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇಂತಹ ಘಟನೆಗಳು ಪದೇ ಪದೇ ನಡೆಯುವುದರಿಂದ ದೇಶಗಳ ನಡುವಣ ಬಾಂಧವ್ಯಕ್ಕೆ ಅಡ್ಡಿ ಉಂಟಾಗುತ್ತದೆ ಎನ್ನುವುದು ನಿಜ. ಈ ಮಧ್ಯೆ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರು ‘ದೆಹಲಿಯಲ್ಲಿ ನಡೆದ ಕಾಂಗೊ ಪ್ರಜೆಯ ಹತ್ಯೆ ಬಿಡಿ ಘಟನೆ, ಹಲ್ಲೆಗೆ ಸಣ್ಣ ಜಗಳ ಕಾರಣ’ ಎಂದು ಹೇಳಿದ್ದೂ ವಿವಾದವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಕುಂದು ಉಂಟುಮಾಡುವ ಇಂತಹ ಘಟನೆಗಳ ಬಗ್ಗೆ ಸಚಿವರು ಹೆಚ್ಚು ಜವಾಬ್ದಾರಿಯಿಂದ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿದೆ. ಹಾಗೆ ನೋಡಿದರೆ ಭಾರತೀಯರು ಜನಾಂಗದ್ವೇಷ ಉಳ್ಳವರಲ್ಲ. ವರ್ಣಭೇದ ನೀತಿಗೆ ನಮ್ಮಲ್ಲಿ ಅವಕಾಶವಿಲ್ಲ. ಆದರೆ ಅದೇ ವೇಳೆ, ನಮ್ಮ ಕಾಸ್ಮೊಪಾಲಿಟನ್‌ ನಗರಗಳಲ್ಲಿ ವಿವಿಧ ಸಂಸ್ಕೃತಿಯ ಜನರ ನಡುವೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಭಿನ್ನಮತಗಳು ಹೆಚ್ಚಾಗುತ್ತಿರುವುದೂ ಸುಳ್ಳಲ್ಲ. ಮುಖ್ಯವಾಗಿ ಸ್ಥಳೀಯ ಸಂಸ್ಕೃತಿ ಮತ್ತು ಜೀವನಶೈಲಿಗೆ ಹೊಂದಿಕೆಯಾಗದ ವಿದೇಶಿ ಪ್ರಜೆಗಳ ಬಗ್ಗೆ ಅಸಹಿಷ್ಣುತೆ ಬೆಳೆಯುತ್ತಿರುವುದು ಗಮನಾರ್ಹ. ಇಂತಹ ಅಸಹಿಷ್ಣುತೆ ವಿದೇಶಿಯರ ಬಗ್ಗೆ ಮಾತ್ರವಲ್ಲ, ನಮ್ಮದೇ ದೇಶದ ಈಶಾನ್ಯ ರಾಜ್ಯಗಳ ಪ್ರಜೆಗಳ ಬಗ್ಗೆಯೂ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ವಿಭಿನ್ನ ಭಾಷೆಗಳನ್ನು ಆಡುವ, ವಿಭಿನ್ನ ಸಂಸ್ಕೃತಿಯ ಜನರ ಮಧ್ಯೆ ಸಾಂಸ್ಕೃತಿಕ ಸಂವೇದನಾಶೀಲತೆಯನ್ನು ರೂಢಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ. ಮಹಾನಗರಗಳಲ್ಲಿ ಮಾದಕದ್ರವ್ಯ ಕಳ್ಳಸಾಗಣೆ, ಆನ್‌ಲೈನ್‌ ವಂಚನೆ ಮುಂತಾದ ಬಹುತೇಕ ಪ್ರಕರಣಗಳಲ್ಲಿ ಆಫ್ರಿಕಾದ ಹಲವು ದೇಶಗಳ ಪ್ರಜೆಗಳು ಪೊಲೀಸರಿಗೆ ಸಿಕ್ಕಿಬೀಳುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ವಿದ್ಯಾಭ್ಯಾಸಕ್ಕೆ ಭಾರತದ ವಿವಿಧ ನಗರಗಳಿಗೆ ಬಂದು, ವೀಸಾ ಅವಧಿಯನ್ನೂ ಮೀರಿ ಅಕ್ರಮವಾಗಿ ಇಲ್ಲೇ ನೆಲೆಸಿರುವ ಆಫ್ರಿಕನ್ನರ ನೂರಾರು ಪ್ರಕರಣಗಳೂ ಇವೆ. ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ, ಇಲ್ಲಿನ ಜನರ ಜತೆಗೆ ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸುವ ಕುರಿತು ಆಫ್ರಿಕಾದ ದೇಶಗಳ ಜನರ ಸಂಘಟನೆಯೂ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ವಿದೇಶಿ ವಿದ್ಯಾರ್ಥಿಗಳೂ ಸ್ಥಳೀಯ ಜನರ ಆಚಾರ- ವಿಚಾರಗಳನ್ನು ಗೌರವಿಸುವ, ಇಲ್ಲಿನ ನಿಯಮಗಳನ್ನು ಸಂಯಮದಿಂದ ಪಾಲಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕಿದೆ. ಆರ್ಥಿಕ ಉದಾರೀಕರಣದ ನೀತಿ ಜಾರಿಗೆ ಬಂದ ಬಳಿಕ, ಭಾರತ ಸಹಿತ ಜಗತ್ತಿನ ಬಹುತೇಕ ದೇಶಗಳು ವಿದೇಶಿಯರನ್ನು ತೆರೆದ ತೋಳುಗಳಿಂದ ಸ್ವಾಗತಿಸುತ್ತಿರುವುದು ಸಹಜ ಪ್ರಕ್ರಿಯೆ. ಈ ಸಂದರ್ಭದಲ್ಲಿ ಉಭಯತ್ರರ ನಡುವಣ ಸಾಂಸ್ಕೃತಿಕ, ಸಾಮಾಜಿಕ ಕೊಡುಕೊಳ್ಳುವಿಕೆಗೆ ಪೂರಕವಾದ ಕ್ರಮಗಳು ಅಹಿತಕರ ಘಟನೆಗಳ ನಿಯಂತ್ರಣಕ್ಕೆ ನೆರವಾಗಲಿವೆ. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಇಂತಹ ಪೂರಕ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.