ನೆನಪಲ್ಲಿ ಉಳಿಯುವ 9ನೇ ಚುಟುಕು ಕ್ರಿಕೆಟ್‌ ಸಂಭ್ರಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಗಳು ಭಾರತದ ಕ್ರಿಕೆಟ್‌ನಲ್ಲಿ ಮತ್ತೆ ರೋಚಕ ಸಂಚಲನ ಮೂಡಿಸಿವೆ. ಅಂತಿಮ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಗೆದ್ದರೂ, ಟೂರ್ನಿಯಲ್ಲಿ ಆಡಿದ ಎಂಟು ತಂಡಗಳೂ ವಿವಿಧ ಕಾರಣಗಳಿಂದ ಕ್ರಿಕೆಟ್‌ ಪ್ರಿಯರ ಮನದಲ್ಲಿ ನಿಂತಿವೆ. ಮೂರು ವರ್ಷಗಳ ಹಿಂದೆ ಐಪಿಎಲ್‌ಗೆ ಅಂಟಿದ್ದ ಸ್ಪಾಟ್‌ ಫಿಕ್ಸಿಂಗ್‌ ಕಳಂಕ, ಈ ದೇಶದಲ್ಲಿ ಕ್ರಿಕೆಟ್‌ ಬಗ್ಗೆ ಜನರಿಗಿದ್ದ ವಿಶ್ವಾಸವನ್ನೇ ಅಲ್ಲಾಡಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳಾದ ಮುಕುಲ್‌ ಮುದ್ಗಲ್‌ ಮತ್ತು ಆರ್‌.ಎಂ.ಲೋಧಾ ಸಮಿತಿಯ ವರದಿಗಳು ಭಾರತದಲ್ಲಿ ಕ್ರಿಕೆಟ್‌ ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಆಶಯಗಳನ್ನು ಹುಟ್ಟು ಹಾಕಿದವು. ಸುಪ್ರೀಂ ಕೋರ್ಟ್‌ನ ದಿಟ್ಟ ನಿರ್ಧಾರದಿಂದ ಕಳಂಕಿತರು ಹೊರ ನಡೆಯುವಂತಾಯಿತು. ಇದೀಗ ಮುಗಿದ ಐಪಿಎಲ್‌ನ ಒಂಬತ್ತನೇ ಆವೃತ್ತಿಯು ಈವರೆಗೆ ಯಾವುದೇ ಹಗರಣದ ಮಸಿಯನ್ನು ಮೈಗಂಟಿಸಿಕೊಂಡಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್‌ ಈ ಸಲ ಟೂರ್ನಿಯಲ್ಲಿ ಆಡಲಿಲ್ಲ. ಅವುಗಳ ಬದಲಿಗೆ ಆಡಿದ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಮತ್ತು ಗುಜರಾತ್‌ ಲಯನ್ಸ್‌ ತಂಡಗಳು ಗಮನಾರ್ಹ ವೃತ್ತಿಪರತೆ ಮೆರೆದವು. ಲೀಗ್‌ ಹಂತದ ಕೊನೆಯಲ್ಲಿ ಗುಜರಾತ್‌ ತಂಡ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ ಬೆಂಗಳೂರಿನಲ್ಲೇ ನಡೆದ ಕ್ವಾಲಿಫೈಯರ್‌ ಹಂತದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಎದುರು ಗುಜರಾತ್‌ ಸೋತಿತು. ನಂತರ ಇದೇ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆರ್‌ಸಿಬಿ ಆಟಗಾರರು ಹೈದರಾಬಾದ್‌ ಎದುರು ಸೋತು ತವರಿನ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದ್ದಂತೂ ನಿಜ. ಅದೇನೇ ಇದ್ದರೂ, ಬೆಟ್ಟಿಂಗ್‌, ಸ್ಪಾಟ್‌ ಫಿಕ್ಸಿಂಗ್‌ ಪೆಡಂಭೂತ ಧುತ್ತೆಂದಾಗ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ್ದರಿಂದ ಐಪಿಎಲ್‌ ಪಂದ್ಯಗಳ ಬಗ್ಗೆ ಜನರ ವಿಶ್ವಾಸ ಇನ್ನಷ್ಟು ಹೆಚ್ಚುವಂತಾಯಿತು. ಹೀಗಾಗಿಯೇ ಬೆಂಗಳೂರು ಸೇರಿದಂತೆ ದೇಶದ 11 ನಗರಗಳಲ್ಲಿ ನಡೆದ ಒಟ್ಟು 60 ಪಂದ್ಯಗಳನ್ನು ಜನ ಉತ್ತಮ ಸಂಖ್ಯೆಯಲ್ಲಿಯೇ ನೋಡಿ ಸಂಭ್ರಮಿಸಿದರು. ಯಾವುದೇ ಪಂದ್ಯಕ್ಕೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಇದು ಐಪಿಎಲ್‌ ಹೆಗ್ಗಳಿಕೆ. ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳದೇ ಕಾರುಬಾರು ಎಂಬ ಮಾತು ಸಾಮಾನ್ಯ. ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್‌, ಎ.ಬಿ. ಡಿವಿಲಿಯರ್ಸ್‌ ಅವರಂತಹ ಘಟಾನುಘಟಿಗಳನ್ನು ಹೊಂದಿದ ಆರ್‌ಸಿಬಿ ಪ್ರಶಸ್ತಿಯ ಹೆಬ್ಬಾಗಿಲಲ್ಲಿ ಬಂದು ನಿಂತಾಗ ವಿರಾಟ್‌ ಬಳಗಕ್ಕೇ ಈ ಸಲದ ಟ್ರೋಫಿ ಎಂಬ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಆದರೆ ಚುಟುಕು ಮಾದರಿಯ ‘ಬ್ಯಾಟ್ಸ್‌ಮನ್‌ ಅವಲಂಬಿತ’ ಸೂತ್ರ ಫೈನಲ್‌ನಲ್ಲಿ ಛಿದ್ರಗೊಂಡಿತು. ಹೈದರಾಬಾದ್‌ನ ಭುವನೇಶ್ವರ್‌ ಕುಮಾರ್‌, ಮುಸ್ತಫಿಜರ್‌ ರಹಮಾನ್‌ ಅವರ ವೇಗದ ದಾಳಿಗೆ ಆರ್‌ಸಿಬಿಯ ಬ್ಯಾಟಿಂಗ್‌ ಶಕ್ತಿ ಕುಸಿಯಿತು. ಬ್ಯಾಟ್ಸ್‌ಮನ್‌ ಕೇಂದ್ರಿತ ಭದ್ರಕೋಟೆಯನ್ನು ಬಲಶಾಲಿ ಬೌಲರ್‌ಗಳು ಪುಡಿಗಟ್ಟಿದ್ದರಿಂದ ಚುಟುಕು ಕ್ರಿಕೆಟ್‌ ಇನ್ನಷ್ಟು ಕುತೂಹಲಕಾರಿ ಎಂಬುದು ಸಾಬೀತಾಗಿದೆ. ಈ ನಡುವೆ ವಿರಾಟ್‌ ಕೊಹ್ಲಿ, ಡೇವಿಡ್‌ ವಾರ್ನರ್‌, ಭುವನೇಶ್ವರ ಕುಮಾರ್‌, ಯಜುವೇಂದ್ರ ಚಾಹಲ್‌ ಅವರಂತಹ ಅತಿರಥ ಮಹಾರಥ ಆಟಗಾರರ ಆಟದ ಸೊಬಗನ್ನು ಕ್ರಿಕೆಟ್‌ಪ್ರಿಯರು ಕಣ್ತುಂಬಿಕೊಂಡರು. ಕೊಹ್ಲಿ ಈ ಸಲ ತಾವು ಆಡಿದ 16 ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ ಒಟ್ಟು 973 ರನ್‌ ಪೇರಿಸಿದ್ದು ಕಡಿಮೆ ಸಾಧನೆ ಏನಲ್ಲ. ಕೊಹ್ಲಿ ಮತ್ತು ಡಿವಿಲಿಯರ್ಸ್‌ ಜತೆಯಾಟದಲ್ಲಿ ಬಂದ 939 ರನ್‌ಗಳು ನೆನಪಲ್ಲಿ ಉಳಿಯುವಂತಹದ್ದೇ ಆಗಿವೆ. ಭುವನೇಶ್ವರ್‌ ಪಡೆದ 23 ವಿಕೆಟ್‌ಗಳು ಮಹತ್ವದ್ದೇ ಹೌದು. ಹೈದರಾಬಾದ್‌ ಪರ ರನ್‌ ಹೊಳೆ ಹರಿಸಿದ ಡೇವಿಡ್‌ ವಾರ್ನರ್‌ ಅತ್ಯುತ್ತಮ ನಾಯಕತ್ವ ಗುಣದಿಂದ ಕ್ರಿಕೆಟ್‌ಪ್ರಿಯರ ಮನ ಗೆದ್ದರು. ಇವರೆಲ್ಲರೂ ವಿಶ್ವಶ್ರೇಷ್ಠ ಸಾಧಕರೆಂದರೆ ಅತಿಶಯೋಕ್ತಿಯಲ್ಲ. ಐಪಿಎಲ್‌ ಸಡಗರ 2008ರಿಂದ ನಡೆಯುತ್ತಿದೆ. ಆದರೆ ಈ ಸಲದ ಆವೃತ್ತಿ ಹಲವು ವಿಶೇಷಗಳೊಂದಿಗೆ ಚುಟುಕು ಕ್ರಿಕೆಟ್‌ನ ಚರಿತ್ರೆಯಲ್ಲಿ ಅನನ್ಯ ಅಧ್ಯಾಯದಂತಿದೆ. ಮಹಾರಾಷ್ಟ್ರದಲ್ಲಿ ಬರ ಇರುವುದರಿಂದ ಮುಂಬೈ ಮತ್ತು ಪುಣೆ ನಗರಗಳಲ್ಲಿ ಪಂದ್ಯ ನಡೆಸಬಾರದೆಂಬ ವಾದ ತಾರಕಕ್ಕೇರಿದ್ದಾಗ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅದನ್ನು ದಕ್ಷತೆಯಿಂದ ನಿಭಾಯಿಸಿತು. ಮುಂಬೈನಲ್ಲಿ ನಡೆಯಬೇಕಿದ್ದ ಫೈನಲ್‌ ಬೆಂಗಳೂರಿನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಕೂಡಾ ತನಗೆ ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಮುತುವರ್ಜಿಯಿಂದ ನಿರ್ವಹಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.