ಸರ್ಕಾರಿ ಬ್ಯಾಂಕ್‌ಗಳ ವಿಲೀನಕ್ಕೆ ಅವಸರದ ತೀರ್ಮಾನ ಬೇಡ ಬ್ಯಾಂಕ್‌ಗಳ ವಿಲೀನದಿಂದ ದೇಶಿ ಆರ್ಥಿಕತೆಗೆ ಆಗುವ ಪ್ರಯೋಜನಗಳೇನು ಎನ್ನುವುದು ಸ್ಪಷ್ಟವಾಗದಿರುವಾಗ, ಅವಸರದ ತೀರ್ಮಾನ ಸರಿಯಲ್ಲ. ದೇಶಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತರಲು ಹೊರಟಿರುವ ಸುಧಾರಣಾ ಕ್ರಮಗಳು ಹೊಸ ಚರ್ಚೆ ಹುಟ್ಟು ಹಾಕಿವೆ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ವಿಚಾರ ಪ್ರಸ್ತಾಪವಾಗಿದೆ. ಈ ಆಲೋಚನೆ ವಿರೋಧಿಸಿ ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ 50 ಸಾವಿರದಷ್ಟು ನೌಕರರು ಶುಕ್ರವಾರ ಮುಷ್ಕರವನ್ನೂ ಆಚರಿಸಿ, ತಮ್ಮ ವಿರೋಧ ದಾಖಲಿಸಿದ್ದಾರೆ. ದೊಡ್ಡ ಬ್ಯಾಂಕ್‌ಗಳಲ್ಲಿ ಸಣ್ಣ ಪುಟ್ಟ ಬ್ಯಾಂಕ್‌ಗಳ ವಿಲೀನ ಆಲೋಚನೆಯು ಭಾರತದ ಪಾಲಿಗೆ ಹೊಸದೇನಲ್ಲ. ಈಗಾಗಲೇ ಎರಡು ಸಹವರ್ತಿ ಬ್ಯಾಂಕುಗಳನ್ನು ಎಸ್‌ಬಿಐ ವಿಲೀನ ಮಾಡಿಕೊಂಡಿದೆ. ಈಗ ಉಳಿದ 5 ಬ್ಯಾಂಕ್‌ಗಳ ವಿಲೀನ ಮತ್ತು ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಮಹಿಳಾ ಕೇಂದ್ರಿತ ಭಾರತೀಯ ಮಹಿಳಾ ಬ್ಯಾಂಕ್‌ನ ಸ್ವಾಧೀನಕ್ಕೂ ಮುಂದಾಗಿದೆ. ಸಹವರ್ತಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳೂ ವಿಲೀನ ಪರ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಉದ್ದೇಶ ಸುಲಭಗೊಳಿಸಲಿದೆ. ಆದರೆ, ದೇಶಿ ಆರ್ಥಿಕತೆಗೆ ಈ ವಿಲೀನದಿಂದ ಆಗುವ ಪ್ರಯೋಜನಗಳೇನು ಎನ್ನುವುದು ಸ್ಪಷ್ಟವಾಗದಿರುವಾಗ ಈ ನಿಟ್ಟಿನಲ್ಲಿ ಅವಸರದ ತೀರ್ಮಾನಕ್ಕೆ ಬರುವುದು ಸರಿಯಲ್ಲ. ವಿಲೀನದ ನಂತರ ಲಾಭದಾಯಕವಲ್ಲದ ಬ್ಯಾಂಕ್‌ ಶಾಖೆಗಳನ್ನು ಮುಚ್ಚುವುದರಿಂದ ಕಾರ್ಯಾಚರಣೆ ವೆಚ್ಚ ಕಡಿಮೆಯಾಗಲಿದೆ. ದೇಶಿ– ವಿದೇಶಿ ಬ್ಯಾಂಕ್‌ ಖಾತೆ ಮತ್ತು ನಗದನ್ನು (ಟ್ರೆಜರಿ) ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಸ್‌ಬಿಐ, ಜಾಗತಿಕ ಮಟ್ಟದಲ್ಲಿಯೂ ಅತಿದೊಡ್ಡ ಬ್ಯಾಂಕ್‌ ಆಗಿಯೂ ಬೆಳೆಯಲಿದೆ. ಅದರ ಹಣಕಾಸು ಸಾಮರ್ಥ್ಯವು ಸದ್ಯದ ₹ 28 ಲಕ್ಷ ಕೋಟಿಗಳಿಂದ ₹ 37 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ. ಕಾರ್ಪೊರೇಟ್‌ ಮತ್ತು ಮೂಲ ಸೌಕರ್ಯ ವಲಯಕ್ಕೆ ದೊಡ್ಡ ಮೊತ್ತದ ಸಾಲ ವಿತರಿಸಲು ಸಾಧ್ಯವಾಗಲಿದೆ. ದೇಶಿ ಉದ್ದಿಮೆ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ತಮ್ಮ ವಹಿವಾಟು ವಿಸ್ತರಿಸುತ್ತಿರುವ ಸದ್ಯದ ಸಂದರ್ಭದಲ್ಲಿ ಇಂತಹ ದೊಡ್ಡ ಮೊತ್ತದ ಸಾಲದ ಅಗತ್ಯವೂ ತುಂಬ ಇದೆ. ಆದರೆ, ಈ ವಿಲೀನ ಪ್ರಕ್ರಿಯೆಯು ಕೆಲ ಸಮಸ್ಯೆಗಳಿಗೂ ಕಾರಣವಾಗಲಿರುವುದು ಸುಳ್ಳಲ್ಲ. ವಸೂಲಾಗದ ಸಾಲದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಈಗ ಹರಿಸಬೇಕಾಗಿರುವ ಗಮನಕ್ಕೆ ಧಕ್ಕೆಯಾಗುತ್ತದೆ. ಉದ್ಯೋಗಿಗಳ ಮಧ್ಯೆ ಕೆಲಸದ ಹಂಚಿಕೆ, ಹೊಸ ಸವಾಲು ಸೃಷ್ಟಿಸಲಿದೆ. ನೌಕರರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಡಲಿದೆ. 2008ರಲ್ಲಿ ಅಮೆರಿಕದಲ್ಲಿ ಘಟಿಸಿದ ಹಣಕಾಸು ಬಿಕ್ಕಟ್ಟು, ಜಾಗತಿಕ ಅರ್ಥ ವ್ಯವಸ್ಥೆಗೇ ಬೆದರಿಕೆ ಒಡ್ಡಿತ್ತು. ಇದಕ್ಕೆ ಅಲ್ಲಿನ ಅತಿ ದೊಡ್ಡ ಬ್ಯಾಂಕಿಂಗ್‌ ವ್ಯವಸ್ಥೆ ಕುಸಿದಿದ್ದೇ ಕಾರಣವಾಗಿತ್ತು. ಎಸ್‌ಬಿಐ ಕೂಡ ಇಂತಹ ವೈಫಲ್ಯ ಕಾಣಬಹುದಾದ ಸಾಧ್ಯತೆ ಇರುವ ಅತಿ ದೊಡ್ಡ ಬ್ಯಾಂಕ್‌ ಆಗಿ ಬೆಳೆಯಬೇಕೆ ಎಂಬ ಬಗ್ಗೆ ಪ್ರಶ್ನೆಗಳಿವೆ. ದೇಶಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಶೇ 70ರಷ್ಟು ಪಾಲು ಹೊಂದಿದ್ದರೂ, ಇದುವರೆಗೂ ಬ್ಯಾಂಕಿಂಗ್‌ ಸೌಲಭ್ಯವು ಎಲ್ಲರಿಗೂ ಸಮಾನವಾಗಿ ದೊರೆತಿಲ್ಲ. ಬ್ಯಾಂಕ್‌ ಶಾಖೆಗಳ ವಿಸ್ತರಣೆಗೆ ಈಗಲೂ ವಿಪುಲ ಅವಕಾಶಗಳಿವೆ. ಎಲ್ಲರಿಗೂ ಬ್ಯಾಂಕಿಂಗ್‌ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ (ಆರ್ಥಿಕ ಸೇರ್ಪಡೆ) ನಾವು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಇದೇ ಕಾರಣಕ್ಕೆ ಪೇಮೆಂಟ್ಸ್‌ ಬ್ಯಾಂಕ್‌ಗಳೂ ಅಸ್ತಿತ್ವಕ್ಕೆ ಬರುತ್ತಿರುವಾಗ ಬ್ಯಾಂಕ್‌ಗಳ ವಿಲೀನ ಚಿಂತನೆಗೆ ಕಾಲ ಇನ್ನೂ ಪಕ್ವವಾಗಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಅಗಾಧವಾಗಿ ಬೆಳೆದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿರುವಾಗ, ಜನರ ಗಮನ ಬೇರೆಡೆ ಸೆಳೆಯಲು ವಿಲೀನ ಚಿಂತನೆ ತೇಲಿ ಬಿಡಲಾಗಿದೆ ಎನ್ನುವ ಆರೋಪಗಳಿಗೆ ಈ ಚಿಂತನೆ ಪಕ್ಕಾಗುವುದು ಬೇಡ. ‘ದುರ್ಬಲ ಬ್ಯಾಂಕ್‌ಗಳನ್ನು ಬಲಿಷ್ಠ ಬ್ಯಾಂಕ್‌ನಲ್ಲಿ ವಿಲೀನಗೊಳಿಸುವುದರಿಂದ ಆರ್ಥಿಕತೆಯಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗಲಿದೆ. ಇಂತಹ ಪ್ರಕ್ರಿಯೆಯಲ್ಲಿ ಮೈಯೆಲ್ಲ ಕಣ್ಣಾಗಿರಬೇಕು’ ಎಂದು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ನೀಡಿರುವ ಎಚ್ಚರಿಕೆಯನ್ನು ವಿಲೀನ ಪ್ರಕ್ರಿಯೆ ಬೆಂಬಲಿಸುವವರು ನಿರ್ಲಕ್ಷಿಸದಿದ್ದರೆ ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.