ಜವಳಿ ಉದ್ಯಮಕ್ಕೆ ಕಾಯಕಲ್ಪ ಸ್ಪರ್ಧಾತ್ಮಕತೆ ಹೆಚ್ಚಾಗಲಿ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಸದ್ಯದ ಸಂದರ್ಭದಲ್ಲಿ ಜವಳಿ ಉದ್ಯಮಕ್ಕೆ ಇಂತಹ ಶಕ್ತಿವರ್ಧಕ ಕ್ರಮ ಸರಿಯಾದುದು. ಜವಳಿ ಮತ್ತು ಸಿದ್ಧ ಉಡುಪು ತಯಾರಿಕಾ ವಲಯಕ್ಕೆ ಕೇಂದ್ರ ಸರ್ಕಾರವು ₹ 6 ಸಾವಿರ ಕೋಟಿಗಳ ವಿಶೇಷ ಕೊಡುಗೆ ಪ್ರಕಟಿಸಿರುವುದರಿಂದ ದೇಶಿ ರಫ್ತು ವಹಿವಾಟಿನ ಜಾಗತಿಕ ಸ್ಪರ್ಧಾತ್ಮಕತೆ ಗಣನೀಯವಾಗಿ ಹೆಚ್ಚಲಿದೆ. ಈ ಉದ್ಯಮದ ಬಹುಕಾಲದ ಅನೇಕ ಬೇಡಿಕೆಗಳನ್ನು ಕಡೆಗೂ ಈಡೇರಿಸಲಾಗಿದ್ದು, ಇದು ಸಕಾಲಿಕವೂ ಆಗಿದೆ. ಈ ವಿತ್ತೀಯ ಉತ್ತೇಜನಾ ಕ್ರಮಗಳು, ಈ ಕ್ಷೇತ್ರದ ತಯಾರಿಕೆಯ ಒಟ್ಟಾರೆ ಸಾಮರ್ಥ್ಯ ಮತ್ತು ವೆಚ್ಚ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇತರ ದೇಶಗಳ ಜತೆ ಪೈಪೋಟಿ ನಡೆಸಿ ಅಮೆರಿಕ, ಐರೋಪ್ಯ ಒಕ್ಕೂಟದ ಮಾರುಕಟ್ಟೆಗಳಲ್ಲಿ ಹೆಚ್ಚು ಪಾಲು ಪಡೆಯಲು ಅನುಕೂಲವಾಗಲಿದೆ. ಇತರ ದೇಶಗಳಲ್ಲಿ ಈ ಉದ್ಯಮ ವಲಯ ತೆರಿಗೆ ಮುಕ್ತ ಸೌಲಭ್ಯ ಪಡೆದಿರುವಾಗ ದೇಶಿ ಉದ್ದಿಮೆ ಇಂತಹ ಬೆಂಬಲ ಇಲ್ಲದೆ ಸಮರ್ಥ ಪೈಪೋಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಅಂತಹ ನ್ಯೂನತೆ ದೂರವಾಗಿದೆ. ಕೃಷಿ ಕ್ಷೇತ್ರ ನಂತರ, ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿರುವ ಈ ಉದ್ಯಮ ವಲಯಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಂಡವಾಳ ಹೂಡಿಕೆಯ ನೆರವಿನಿಂದ ಇನ್ನಷ್ಟು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ವಿದೇಶಿ ಬಂಡವಾಳ ಹೂಡಿಕೆ ನೆರವಿನಿಂದಾಗಿ ದೇಶಿ ರಫ್ತುದಾರರು ಜಾಗತಿಕ ಮಟ್ಟದಲ್ಲಿ ಸಮರ್ಥ ಸ್ಪರ್ಧೆ ನೀಡಲೂ ಸಾಧ್ಯವಾಗಲಿದೆ. ಮೂರು ವರ್ಷಗಳಲ್ಲಿ ಒಂದು ಕೋಟಿ ಹೊಸ ಉದ್ಯೋಗಗಳು, ₹ 73,700 ಕೋಟಿಗಳಷ್ಟು ವಿದೇಶಿ ಬಂಡವಾಳ ಹೂಡಿಕೆ ಮತ್ತು ₹ 2 ಲಕ್ಷ ಕೋಟಿಗಳಷ್ಟು ರಫ್ತು ವಹಿವಾಟು ನಡೆಸಲು ಈ ಕೊಡುಗೆ ನೆರವಾಗಲಿದೆ ಎನ್ನುವ ಸರ್ಕಾರದ ಭಾರಿ ನಿರೀಕ್ಷೆ ನಿಜವಾಗಲು ಉದ್ಯಮ ವಲಯವೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದೆ. ಸಿದ್ಧ ಉಡುಪು ರಫ್ತು ವಹಿವಾಟುದಾರರಿಗೆ ಕೊಡಮಾಡಿರುವ ತೆರಿಗೆ ವಾಪಸಾತಿ ಸೌಲಭ್ಯದಲ್ಲಿ, ರಾಜ್ಯಗಳ ತೆರಿಗೆಗಳನ್ನೂ ಸೇರಿಸಿರುವುದು, ವಹಿವಾಟುದಾರರಿಗೆ ದೊಡ್ಡ ಸಮಾಧಾನ ತರಲಿದೆ. ಕಾರ್ಮಿಕರ ಹಿತಾಸಕ್ತಿ ರಕ್ಷಣೆಯ ಕಾಳಜಿ ಮತ್ತು ಕಾರ್ಮಿಕ ಕಾಯ್ದೆ ಸುಧಾರಣಾ ಕ್ರಮಗಳು ಈ ವಿಶೇಷ ಕೊಡುಗೆಯ ಇನ್ನೊಂದು ಮಹತ್ವದ ಲಕ್ಷಣ. ಉದ್ಯಮದಲ್ಲಿ ಕಾರ್ಯನಿರ್ವಹಿಸುವ ಮಾಸಿಕ ₹ 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಹೊಸ ಕಾರ್ಮಿಕರ ಭವಿಷ್ಯ ನಿಧಿಯ ಸಂಪೂರ್ಣ ಹೊರೆಯನ್ನು ಮೂರು ವರ್ಷಗಳವರೆಗೆ ಸರ್ಕಾರವೇ ಭರಿಸಲಿರುವುದು ಕೈಗಾರಿಕೆಗಳಿಗೆ ಉತ್ತೇಜನಕಾರಿಯಾಗಿದೆ. ಹೆಚ್ಚುವರಿ ಕೆಲಸದ ಮಿತಿ ನಿಗದಿಪಡಿಸಿರುವುದು ಕಾರ್ಮಿಕರಿಗೂ ನೆಮ್ಮದಿ ನೀಡಲಿದೆ. ಸಿದ್ಧ ಉಡುಪುಗಳ ಹೊಸ ತಯಾರಿಕಾ ಘಟಕಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು ನೆರವಾಗುವ ಹಣಕಾಸು ಯೋಜನೆಯು ಹೊಸ ಘಟಕಗಳ ಬಂಡವಾಳ ಹೂಡಿಕೆಯ ಹೊರೆ ತಗ್ಗಿಸಲಿದೆ. ಕಾರ್ಮಿಕರಿಗೆ ಮಾಡುವ ವೆಚ್ಚದಲ್ಲಿಯೂ ಉಳಿತಾಯಕ್ಕೆ ನೆರವಾಗಲಿದೆ. ಗಾರ್ಮೆಂಟ್‌ ಘಟಕಗಳಿಗೆ ನೀಡಲಾಗುವ ಸಬ್ಸಿಡಿ ಪ್ರಮಾಣವನ್ನು ಶೇ 15ರಿಂದ ಶೇ 25ಕ್ಕೆ ಹೆಚ್ಚಿಸಿರುವುದೂ ಉತ್ತೇಜನಕಾರಿಯಾಗಿದೆ. ಸದ್ಯಕ್ಕೆ ದೇಶಿ ಸಿದ್ಧ ಉಡುಪು, ವಸ್ತ್ರ ತಯಾರಿಕೆ, ನೂಲು ಮತ್ತು ಹತ್ತಿ ಬೆಳೆಯುವ ಪ್ರದೇಶಗಳು ಬೇರೆ, ಬೇರೆ ಕಡೆಗಳಲ್ಲಿ ಹರಿದು ಹಂಚಿಹೋಗಿರುವುದರಿಂದ ಅವುಗಳ ಮಧ್ಯೆ ಸಮನ್ವಯತೆಯೇ ಇಲ್ಲ. ಇದರಿಂದಾಗಿ ಹೆಚ್ಚು ದಕ್ಷತೆ ಮತ್ತು ಸ್ಪರ್ಧಾತ್ಮಕತೆಯಿಂದ ಕಾರ್ಯನಿರ್ವಹಿಸಲು ಜವಳಿ ಉದ್ಯಮಕ್ಕೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸದಿದ್ದರೆ, ನಿರೀಕ್ಷಿತ ಪ್ರಮಾಣದಲ್ಲಿ ದೇಶಿ ಜವಳಿ ಉದ್ಯಮ ಅಭಿವೃದ್ಧಿಯಾಗುವುದಿಲ್ಲ. ಈಗ ಸರ್ಕಾರದ ಉತ್ತೇಜನದಿಂದ ಈ ಉದ್ಯಮ ಗಮನಾರ್ಹ ಬೆಳವಣಿಗೆ ಸಾಧಿಸಿದಲ್ಲಿ 2025ರ ಹೊತ್ತಿಗೆ 5 ಕೋಟಿಗಳಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಇದರಲ್ಲಿ ಮಹಿಳೆಯರ ಪಾಲು 4 ಕೋಟಿಗಳಷ್ಟು ಇರಲಿದೆ. ಮೂರು ವರ್ಷಗಳಲ್ಲಿ ಸಿದ್ಧ ಉಡುಪು ರಫ್ತು ವಹಿವಾಟು ₹ 2.80 ಲಕ್ಷ ಕೋಟಿಗಳಿಗೆ ತಲುಪುವ ಗುರಿ ಸಾಧನೆಯು ದೊಡ್ಡ ಸವಾಲಾಗಿದೆ. ವೇತನ ಹೆಚ್ಚಳ ಮತ್ತಿತರ ಕಾರಣಕ್ಕೆ ಈ ಉದ್ದಿಮೆಯು ಚೀನಾದಿಂದ ಬಾಂಗ್ಲಾದೇಶ ಮತ್ತು ವಿಯೆಟ್ನಾಂನತ್ತ ವಲಸೆ ಹೋಗುತ್ತಿರುವಾಗ, ಜಾಗತಿಕ ಮಾರುಕಟ್ಟೆಯಲ್ಲಿನ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಲು ಉದ್ಯಮಕ್ಕೆ ಒದಗಿರುವ ಸದವಕಾಶವು ಕೈಜಾರಿ ಹೋಗದಂತೆ ಎಚ್ಚರ ವಹಿಸಬೇಕು. ಇದು ಸಾಧ್ಯವಾದಲ್ಲಿ ಮೂರು ವರ್ಷಗಳಲ್ಲಿ ಉದ್ಯಮದ ಗಾತ್ರ ಮೂರು ಪಟ್ಟುಗಳಷ್ಟು ಹೆಚ್ಚಾಗುವ ಮಹತ್ವಾಕಾಂಕ್ಷೆಯ ಗುರಿ ನಿಜವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.