ಕುಂಬ್ಳೆ ಹೆಗಲ ಮೇಲೆ ಗುರುತರ ಜವಾಬ್ದಾರಿ ಭಾರತ ಕ್ರಿಕೆಟ್‌ ತಂಡದ ನೂತನ ಮುಖ್ಯ ಕೋಚ್‌ ಆಗಿ ನೇಮಕಗೊಂಡಿರುವ ಅನಿಲ್‌ ಕುಂಬ್ಳೆ ಎದುರು ಸವಾಲುಗಳ ಸರಮಾಲೆಯೇ ಇದೆ. ಏಕದಿನ ಪಂದ್ಯಗಳ ತಂಡಕ್ಕೆ ಮಹೇಂದ್ರ ಸಿಂಗ್‌ ದೋನಿ ನೇತೃತ್ವ ವಹಿಸಿದ್ದರೆ, ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತದ ಆಟಗಾರರು ಆಡಲಿದ್ದಾರೆ. ಇದೀಗ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಕುಂಬ್ಳೆ ಅವರ ಹೆಗಲ ಮೇಲಿದೆ. ಕುಂಬ್ಳೆ ಅವರ ಕೋಚ್‌ ಹುದ್ದೆಯ ಅವಧಿ ಒಂದು ವರ್ಷದ್ದಾಗಿದೆ. ಈ ಋತುವಿನಲ್ಲೇ ಭಾರತ 17 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇಲ್ಲಿ ಕುಂಬ್ಳೆ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ. ಈ ವರ್ಷ ಭಾರತ ತಂಡ ಯಶಸ್ಸಿನ ಹಾದಿಯಲ್ಲಿ ಎತ್ತರಕ್ಕೇರಿದರೆ, ಕುಂಬ್ಳೆ ಅವರು 2019ರ ಏಕದಿನ ವಿಶ್ವಕಪ್‌ವರೆಗೂ ಮುಂದುವರಿಯಲು ರಹದಾರಿ ಸಿಕ್ಕಂತಾಗುತ್ತದೆ. ಭಾರತದ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಇಂತಹದ್ದೊಂದು ಮಹತ್ವದ ಜವಾಬ್ದಾರಿ ಹೊತ್ತುಕೊಂಡಿರುವ ಕುಂಬ್ಳೆ ಅವರಿಗೆ ತಮ್ಮೆದುರು ಇರುವ ಸವಾಲುಗಳ ಬಗ್ಗೆ ಗೊತ್ತಿಲ್ಲವೆಂದೇನಲ್ಲ. ಅವರು ಈ ನಾಡಿನ ಕ್ರಿಕೆಟ್‌ ರಂಗದ ದಂತಕಥೆ. ಈ ಸ್ಪಿನ್‌ ಗಾರುಡಿಗ ಟೆಸ್ಟ್‌ನಲ್ಲಿ 619 ವಿಕೆಟ್‌ಗಳನ್ನು ಉರುಳಿಸಿದ್ದರೆ, ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಪಡೆದಿದ್ದಾರೆ. 14 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡದ ನೇತೃತ್ವ ವಹಿಸಿದ್ದರು. ಸ್ಪಿನ್‌ ಬೌಲಿಂಗ್‌ನಲ್ಲಿ ಅತ್ಯುನ್ನತ ಮಟ್ಟದ ಪರಿಜ್ಞಾನ ಇರುವ ಇವರು, ಬ್ಯಾಟಿಂಗ್‌ ಮೂಲಕವೂ ತಂಡಕ್ಕೆ ಆಸರೆಯಾಗಿ ನಿಂತವರು. ವಿಶ್ವದ ಬಲಿಷ್ಠ ತಂಡಗಳ ಎದುರು ಆಡಿರುವ ಅನುಭವಿ. ಅಲ್ಲದೆ, ಘಟಾನುಘಟಿ ಆಟಗಾರರ ಎದುರು ತಮ್ಮ ಶಕ್ತಿ ಪ್ರದರ್ಶನ ಮಾಡಿದವರು. ನಿವೃತ್ತಿ ಪ್ರಕಟಿಸಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲಿಗೆ ಆರ್‌ಸಿಬಿ ತಂಡಕ್ಕೆ ಆಡಿದ್ದ ಇವರು, ಕೆಲವು ಸಮಯ ತಂಡದ ಮಾರ್ಗದರ್ಶಕರಾಗಿದ್ದರು. ನಂತರ ಮುಂಬೈ ಇಂಡಿಯನ್ಸ್‌ ತಂಡಕ್ಕೂ ಮಾರ್ಗದರ್ಶಕರಾಗಿದ್ದರು. ಭಾರತ ಕಂಡ ಅತ್ಯುತ್ತಮ ಆಟಗಾರರಾಗಿರುವ ಕುಂಬ್ಳೆ ಅವರು ಈಗಾಗಲೇ ದಕ್ಷ ಆಡಳಿತಗಾರರಾಗಿ, ಕಿರಿಯ ಆಟಗಾರರಿಗೆ ಮಾರ್ಗದರ್ಶಕರಾಗಿ ಗಮನ ಸೆಳೆದಿದ್ದಾರೆ. ಇದೀಗ ಅವರು ತಂಡದ ಮುಖ್ಯ ಕೋಚ್‌ ಆಗಿ ಕಿರಿಯರಿಗೆ ತಮ್ಮ ಅನುಭವವನ್ನು ಧಾರೆ ಎರೆಯಲು ಸಜ್ಜಾಗಿದ್ದಾರೆ. ತಮ್ಮ ಕ್ರಿಕೆಟ್‌ ಬದುಕಿನಲ್ಲಿ ಕುಂಬ್ಳೆಯವರು ಯಾವುದೇ ವಿವಾದಕ್ಕೆ ಸಿಲುಕಿದವರಲ್ಲ. ಫಿಕ್ಸಿಂಗ್‌ ಹಗರಣಗಳ ಕಳಂಕವನ್ನು ಮೈಗೆ ಅಂಟಿಸಿಕೊಳ್ಳದ ವರು. ನೇರ ನಡೆನುಡಿಯಿಂದಲೇ ಕ್ರಿಕೆಟ್‌ ವಲಯದಲ್ಲಿ ಚಿರಪರಿಚಿತರು. ಈ ಸಲ ಮುಖ್ಯ ಕೋಚ್‌ ಹುದ್ದೆಗೆ ಸಂದೀಪ್‌ ಪಾಟೀಲ್‌, ಪ್ರವೀಣ್‌ ಅಮ್ರೆ, ರವಿಶಾಸ್ತ್ರಿ ಸೇರಿದಂತೆ 57 ಮಂದಿ ಘಟಾನುಘಟಿಗಳು ಅರ್ಜಿ ಹಾಕಿದ್ದರು. ಇವರಲ್ಲಿ ಅನೇಕ ಮಂದಿ ವಿವಿಧ ಸಂದರ್ಭಗಳಲ್ಲಿ ಕೋಚ್‌ ಆಗಿ ಉತ್ತಮ ವಾಗಿ ಕಾರ್ಯ ನಿರ್ವಹಿಸಿದವರು. ಆದರೆ ಕುಂಬ್ಳೆ ಅವರು ಕೋಚ್‌ ಆಗಿ ದಟ್ಟ ಅನುಭವ ಹೊಂದಿದವರೇನಲ್ಲ. ಆದರೆ ಗೌರವಾನ್ವಿತ ವ್ಯಕ್ತಿತ್ವ ಮತ್ತು ಅಂದು ಕೊಂಡಿದ್ದನ್ನು ಸಾಧಿಸುವ ನಿಟ್ಟಿನಲ್ಲಿ ಅವರ ಛಲದ ಮನೋಭಾವವನ್ನು ಗುರುತಿಸಿ ಈ ಮಹತ್ವದ ಹುದ್ದೆಯನ್ನು ಅವರಿಗೆ ನೀಡಲಾಗಿದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ. ಅದೇನೇ ಇದ್ದರೂ, ಕುಂಬ್ಳೆಯವರು ಅತೀವ ಆತ್ಮವಿಶ್ವಾಸದಿಂದ ಬೀಗುವಂತಿಲ್ಲ. ಒಂದೂವರೆ ದಶಕದ ಹಿಂದೆ ಕಪಿಲ್‌ ದೇವ್‌ ಅವರನ್ನು ಭಾರತ ತಂಡದ ಕೋಚ್‌ ಆಗಿ ನೇಮಿಸಲಾಗಿತ್ತು. ಆದರೆ ಅವರು ವೈಫಲ್ಯ ಕಂಡರು. ನಂತರ ವಿದೇಶಿ ಕೋಚ್‌ಗಳ ಮೇಲೆ ಅವಲಂಬನೆ ಹೆಚ್ಚಾಗಿತ್ತು. ವಿಶ್ವಕಪ್‌ನಲ್ಲಿನ ನಿರಾಸೆಯ ನಂತರ ಆಗಿನ ಕೋಚ್‌ ಜಿಂಬಾಬ್ವೆಯ ಡಂಕನ್‌ ಫ್ಲೆಚರ್‌ ರಾಜೀನಾಮೆ ಸಲ್ಲಿಸಿದರು. ನಂತರ ರವಿಶಾಸ್ತ್ರಿಯವರನ್ನು ತಂಡದ ನಿರ್ದೇಶಕರಾಗಿ ನೇಮಿಸಲಾಯಿತು. ಪರೋಕ್ಷವಾಗಿ ಅದು ಕೋಚ್‌ ಹುದ್ದೆಯೇ ಆಗಿತ್ತು. ಇದೀಗ ನೂತನ ಕೋಚ್‌ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿಯವರನ್ನು ಕೈಬಿಟ್ಟು ಕುಂಬ್ಳೆಯವರ ಮೇಲೆಯೇ ಭರವಸೆ ಇಟ್ಟಿರುವುದನ್ನು ನೋಡಿದರೆ, ಕುಂಬ್ಳೆಯವರ ಮೇಲೆ ಅತಿಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ ಅವರು ವಿರಮಿಸುವಂತೆಯೇ ಇಲ್ಲ. ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ ಪ್ರವಾಸದ ಐದು ಟೆಸ್ಟ್‌ ಪಂದ್ಯಗಳಲ್ಲಿಯೇ ತಮ್ಮ ಸಾಮರ್ಥ್ಯ, ತಂತ್ರಗಾರಿಕೆಯನ್ನು ಸಾಬೀತು ಪಡಿಸಬೇಕಾಗಿದೆ. ಇಂತಹ ಎತ್ತರಕ್ಕೇರಿದ ಮೊದಲ ಕನ್ನಡಿಗ ಇವರು. ಇವರು ಮುಂಬೈ ಇಂಡಿಯನ್ಸ್‌ ತಂಡದ ಮಾರ್ಗದರ್ಶಕರಾಗಿದ್ದಾಗ ಹಲವು ಮಂದಿ ಕನ್ನಡಿಗರಿಗೆ ಅಲ್ಲಿ ಅವಕಾಶ ನೀಡಿದ್ದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಕರ್ನಾಟಕದಲ್ಲಿ ಅರ್ಹತೆ ಇರುವ ಇನ್ನಷ್ಟು ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸಲು ಯತ್ನಿಸಲೆಂದು ಆಶಿಸೋಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.