ಕೊನೆಗೂ ಸಿಕ್ಕಿದ ಎಂಟಿಸಿಆರ್‌ ಸದಸ್ಯತ್ವ: ಅನುಕೂಲವೇ ಹೆಚ್ಚು ಎನ್‌ಎಸ್‌ಜಿ ಸದಸ್ಯತ್ವವನ್ನು ವಿರೋಧಿಸಿದ್ದಕ್ಕಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಬೇಡಿಕೆ ತರ್ಕಹೀನ. ಕಳೆದ ಮೂರು ದಿನಗಳಲ್ಲಿ ನಡೆದ ಎರಡು ವಿದ್ಯಮಾನಗಳು ನಮ್ಮ ದೇಶದ ಮಟ್ಟಿಗೆ ಮಹತ್ವದ ಬೆಳವಣಿಗೆಗಳು. ಭಾರತಕ್ಕೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟದ (ಎಂಟಿಸಿಆರ್‌) ಸದಸ್ಯತ್ವ ಸೋಮವಾರ ಸಿಕ್ಕಿದೆ. ಅದರ ಜತೆಗೇ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದೇ ಇರುವ ದೇಶಗಳಿಗೆ ಸದಸ್ಯತ್ವ ನೀಡುವ ವಿಷಯ ಚರ್ಚಿಸಲು ಪರಮಾಣು ಪೂರೈಕೆದಾರ ಗುಂಪಿನ (ಎನ್‌ಎಸ್‌ಜಿ) ಇನ್ನೊಂದು ಸಭೆ ಈ ವರ್ಷಾಂತ್ಯದ ಒಳಗೆ ನಡೆಯುವ ಸಾಧ್ಯತೆ ಇದೆ. ಎಂಟಿಸಿಆರ್‌ನ ವಿಷಯಕ್ಕೆ ಸಂಬಂಧಿಸಿ ಹೇಳುವುದಾದರೆ, ಇದರಿಂದ ನಮಗೆ ಅನೇಕ ಪ್ರಯೋಜನಗಳಿವೆ. ಅಮೆರಿಕ, ರಷ್ಯಾ, ಬ್ರಿಟನ್‌ ಸೇರಿದಂತೆ ಈ ಕೂಟದಲ್ಲಿನ 34 ದೇಶಗಳಿಂದ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಭಾರತ ಪಡೆದುಕೊಳ್ಳಬಹುದು. ರಷ್ಯಾದ ಜಂಟಿ ಸಹಯೋಗದಲ್ಲಿ ನಿರ್ಮಿಸಿರುವ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡಬಹುದು. ಈ ಮೂಲಕ ನಾವೂ ಕೂಡ ವಿಶ್ವದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ದೇಶವಾಗಬಹುದು. ಏಕೆಂದರೆ ಈಗ ನಮ್ಮದು ವಿಶ್ವದಲ್ಲಿಯೇ ಅತಿ ಹೆಚ್ಚು ರಕ್ಷಣಾ ಉತ್ಪನ್ನ ಆಮದು ದೇಶಗಳಲ್ಲಿ ಒಂದು. ಈ ಹಣೆಪಟ್ಟಿ ಕಳಚಿಕೊಳ್ಳಲು ಎಂಟಿಸಿಆರ್‌ ಸದಸ್ಯತ್ವ ನಮಗೊಂದು ಅವಕಾಶ ಒದಗಿಸಿಕೊಡಲಿದೆ. ಅಲ್ಲದೆ ಅಮೆರಿಕದಿಂದ ಅತ್ಯಾಧುನಿಕ ಡ್ರೋನ್‌ (ಚಾಲಕರಹಿತ ಬೇಹುಗಾರಿಕೆಯ ಪುಟ್ಟ ವಿಮಾನ) ಕೊಳ್ಳಲು ಸಹಕಾರಿಯಾಗಲಿದೆ. ಗಡಿಯಾಚೆಗಿನ ಭಯೋತ್ಪಾದಕರ ಒಳನುಸುಳುವಿಕೆ ತಡೆಗೆ ಇದು ಪರಿಣಾಮಕಾರಿ ಸಾಧನವಾಗಬಲ್ಲದು. ಈಗ ವಿಶ್ವ ಮಟ್ಟದಲ್ಲಿ ಪರಮಾಣು ಇಂಧನ, ಕ್ಷಿಪಣಿ ತಂತ್ರಜ್ಞಾನ, ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು, ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಅಭಿವೃದ್ಧಿಗೆ ಕಡಿವಾಣ ಹಾಕುವುದಕ್ಕೆ ಸಂಬಂಧಪಟ್ಟಂತೆ ‘48 ದೇಶಗಳ ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ), ಎಂಟಿಸಿಆರ್‌, 41 ದೇಶಗಳ ವಾಸೆನಾರ್‌ ವ್ಯವಸ್ಥೆ ಮತ್ತು 42 ದೇಶಗಳ ಆಸ್ಟ್ರೇಲಿಯಾ ಗುಂಪು’ ಎಂಬ ನಾಲ್ಕು ಪ್ರಮುಖ ಸಂಘಟನೆಗಳಿವೆ. 3–4 ದಶಕಗಳಿಂದಲೂ ಇವು ಅಸ್ತಿತ್ವದಲ್ಲಿವೆ. ಅವುಗಳ ಸದಸ್ಯತ್ವಕ್ಕೆ ಪೈಪೋಟಿಯಿದೆ. ಎಲ್ಲ ಬಗೆಯ ತಂತ್ರಜ್ಞಾನಗಳನ್ನು ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಗೆ ಬಳಸಿಕೊಳ್ಳಲು ಬದ್ಧವಾಗಿರುವ ನಮಗೆ ಇವುಗಳ ಸದಸ್ಯತ್ವ ಸಿಕ್ಕರೆ ಸಾಕಷ್ಟು ಅನುಕೂಲವೂ ಇದೆ. ಅಲ್ಲದೆ ಕ್ಷಿಪಣಿ ತಂತ್ರಜ್ಞಾನ, ಜೀವನ ಮಟ್ಟ ಸುಧಾರಣೆ ಮತ್ತು ಪ್ರಗತಿಗಾಗಿ ಬಾಹ್ಯಾಕಾಶ ರಾಕೆಟ್‌ಗಳ ಅಭಿವೃದ್ಧಿ ಮತ್ತು ಉಪಗ್ರಹಗಳ ಉಡಾವಣೆ, ಶಾಂತಿಯುತ ಉದ್ದೇಶ ಮತ್ತು ವಿದ್ಯುತ್‌ ಉತ್ಪಾದನೆಗಾಗಿ ಪರಮಾಣು ಇಂಧನ ಬಳಕೆಯಂತಹ ಮಹತ್ವದ ಕ್ಷೇತ್ರಗಳಲ್ಲಿ ನಾವು ಬಹಳಷ್ಟು ಮುಂದಿದ್ದೇವೆ. ಈ ನಾಲ್ಕೂ ಪ್ರಮುಖ ಸಂಘಟನೆಗಳ ಬಹುತೇಕ ಸದಸ್ಯ ದೇಶಗಳಿಗೆ ಹೋಲಿಸಿದರೆ ಭಾರತದ ಸಾಧನೆ ಯಾರಿಗೂ ಕಮ್ಮಿಯಿಲ್ಲ. ಆದರೂ ಭಾರತಕ್ಕೆ ಸದಸ್ಯತ್ವ ನಿರಾಕರಿಸುತ್ತಲೇ ಬರಲಾಗಿತ್ತು. ಈ ಪೈಕಿ ಈಗ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟದ ಸದಸ್ಯತ್ವ ಸಿಕ್ಕಿದೆ. ಆದರೆ ಇದು ಒಂದೆರಡು ದಿನಗಳಲ್ಲಿ ಆದದ್ದಲ್ಲ. 2008ರಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಅಮೆರಿಕದ ಜತೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗಲೇ ಇದಕ್ಕೆ ಪೂರಕ ಪ್ರಯತ್ನ ಆರಂಭವಾಗಿತ್ತು. ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ನಂತರ ಈ ದಿಸೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ, ರಾಜತಾಂತ್ರಿಕ ಪ್ರಯತ್ನಗಳನ್ನು ಮತ್ತು ಸದಸ್ಯ ದೇಶಗಳ ಮನವೊಲಿಕೆ ಕಾರ್ಯವನ್ನು ಚುರುಕುಗೊಳಿಸಿತ್ತು. ನಮಗೆ ಎಂಟಿಸಿಆರ್‌ ಸದಸ್ಯತ್ವ ಕೊಡಲು ಇಟಲಿ ಅಡ್ಡಗಾಲಾಗಿತ್ತು. ಕೇರಳದ ಮೀನುಗಾರರ ಹತ್ಯೆ ಮಾಡಿದ ಆರೋಪದಲ್ಲಿ ಬಂಧನದಲ್ಲಿದ್ದ ಇಟಲಿಯ ನಾವಿಕನೊಬ್ಬನನ್ನು ಬಿಡುಗಡೆ ಮಾಡಿ ಆ ದೇಶವನ್ನು ಮನವೊಲಿಸಬೇಕಾಯಿತು. ಎಂಟಿಸಿಆರ್‌ ಸೇರಲು ಒಂದು ದಶಕದಿಂದಲೂ ಚೀನಾ ಪ್ರಯತ್ನಿಸುತ್ತಲೇ ಇದೆ. ಆದರೆ ಅದಕ್ಕೆ ಇನ್ನೂ ಸದಸ್ಯತ್ವ ಕೊಟ್ಟಿಲ್ಲ. ಪರಮಾಣು ಪೂರೈಕೆದಾರ ದೇಶಗಳ (ಎನ್‌ಎಸ್‌ಜಿ) ಸದಸ್ಯತ್ವ ಪಡೆಯಲು ಅದು ಆರಂಭದಿಂದಲೂ ಭಾರತಕ್ಕೆ ಅಡ್ಡಗಾಲು ಹಾಕುತ್ತಲೇ ಇದೆ. ಕಳೆದ ವಾರ ದಕ್ಷಿಣ ಕೊರಿಯದ ಸೋಲ್‌ನಲ್ಲಿ ನಡೆದ ಸಭೆಯಲ್ಲೂ ಭಾರತಕ್ಕೆ ಸದಸ್ಯತ್ವ ನೀಡದಂತೆ ಅದು ಪ್ರಯತ್ನಿಸಿ ಯಶಸ್ವಿಯಾಗಿತ್ತು. ಆದರೂ ಆ ದೇಶದ ಜತೆಗಿನ ಭಾರತದ ವ್ಯಾಪಾರ ವಹಿವಾಟು, ದ್ವಿಪಕ್ಷೀಯ ಬಾಂಧವ್ಯದ ಚರ್ಚೆಗಳು ಮುಂದುವರಿಯಬೇಕು. ಆ ದೇಶದ ಉತ್ಪನ್ನಗಳ ಖರೀದಿಯನ್ನು ಬಹಿಷ್ಕರಿಸಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಅಂತಹ ಅತಿ ಭಾವುಕತೆಯ ಬೇಡಿಕೆಗಳಿಗೆ ಮಣೆ ಹಾಕಬಾರದು. ಈಗ ಇದೇ ಮೊದಲ ಬಾರಿ ಎನ್‌ಎಸ್‌ಜಿ ಒಂದೇ ವರ್ಷದಲ್ಲಿ ಎರಡನೇ ಸಲ ಸಭೆ ಕರೆದು ಸದಸ್ಯತ್ವದ ಬಗ್ಗೆ ಮರುಪರಿಶೀಲಿಸುವ ಸಂಭವ ಇದೆ ಎಂದು ವರದಿಯಾಗಿದೆ. ಈ ಸಭೆ ನಡೆದರೆ ಅದು ಭಾರತಕ್ಕೆ ಪರೋಕ್ಷ ಜಯ. ಆದರೂ, ಎನ್‌ಎಸ್‌ಜಿ ಸೇರಲು ಅತಿಯಾಗಿ ಹಾತೊರೆಯುವ ಅಗತ್ಯವಿಲ್ಲ ಎಂಬ ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಎಂ.ಆರ್‌. ಶ್ರೀನಿವಾಸನ್‌ ಅವರ ಪ್ರತಿಪಾದನೆ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು. ಯಾವುದಕ್ಕೂ ದೇಶದ ಹಿತ ಮುಖ್ಯವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.