ಕೇಂದ್ರ ನೌಕರರ ವೇತನ ಹೆಚ್ಚಳ ಕಾರ್ಯದಕ್ಷತೆಯೂ ಹೆಚ್ಚಾಗಲಿ ಸಾರ್ವಜನಿಕರ ಹಣದಿಂದಲೇ ವೇತನ, ಭತ್ಯೆ ಮತ್ತಿತರ ಸವಲತ್ತುಗಳನ್ನು ಅನುಭವಿಸುವ ನೌಕರರ ವರ್ಗ ಕೆಲಸದಲ್ಲಿ ಉತ್ತರದಾಯಿತ್ವ ಪ್ರದರ್ಶಿಸಲಿ. ಏಳನೇ ವೇತನ ಆಯೋಗದ ಬಹುತೇಕ ಶಿಫಾರಸುಗಳ ಜಾರಿಗೆ ಕೇಂದ್ರ ಸರ್ಕಾರ ಸಮ್ಮತಿ ಮುದ್ರೆ ಒತ್ತಿರುವುದರಿಂದ ವೇತನ ವರ್ಗದವರನ್ನು ಸಮಾಧಾನಪಡಿಸಿದಂತಾಗಿದೆ. ಅಲ್ಲದೆ ಆರ್ಥಿಕತೆಗೂ ಅಗತ್ಯ ಶಕ್ತಿವರ್ಧಕ ಪೂರೈಕೆಯಾದಂತಾಗಿದೆ. ವೇತನ ವರ್ಗದ ವರಮಾನ ಹೆಚ್ಚಳಗೊಳ್ಳಲಿರುವುದರಿಂದ ಸರಕು ಮತ್ತು ಸೇವೆಗಳ ಬಳಕೆಗೆ ಸಂಬಂಧಿಸಿದ ಬೇಡಿಕೆ ಸಹಜವಾಗಿಯೇ ಏರಿಕೆಯಾಗಿ ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರಿ ನೌಕರರು ಹೆಚ್ಚು ಉದಾರವಾಗಿ ವೆಚ್ಚ ಮಾಡಬಹುದಾಗಿದ್ದು, ಕೆಲಮಟ್ಟಿಗೆ ಉಳಿತಾಯಕ್ಕೂ ಮನಸ್ಸು ಮಾಡಬಹುದು. ಆರ್ಥಿಕತೆಯಲ್ಲಿ ಪ್ರತಿ ವರ್ಷ ₹ 1.02 ಲಕ್ಷ ಕೋಟಿಗಳಷ್ಟು ಹೆಚ್ಚುವರಿ ನಗದು ಹರಿದು ಬರಲಿರುವುದರಿಂದ ಸರಕು ಮತ್ತು ಸೇವೆಗಳ ಬೇಡಿಕೆ ಏರುಗತಿಯಲ್ಲಿಯೇ ಇರಲಿದೆ. ಹೆಚ್ಚುವರಿ ನಗದು ಹರಿವಿನಿಂದಾಗಿ ಆರ್ಥಿಕ ಚಟುವಟಿಕೆ ವಿಸ್ತರಣೆಗೊಂಡು, ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಗೂ ಕಾರಣವಾಗಲಿದೆ. ಮೊಬೈಲ್‌, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು, ಗೃಹೋಪಯೋಗಿ ಸರಕುಗಳು, ಬೈಕ್‌, ಕಾರು ಮತ್ತು ಹೊಸ ಮನೆಗಳ ಖರೀದಿಗೆ ಬೇಡಿಕೆ ಹೆಚ್ಚಲಿದೆ. ಇದರಿಂದ ಸರಕು, ವಾಹನ ತಯಾರಿಕೆ ಚಟುವಟಿಕೆಗಳು ಗರಿಗೆದರಲಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿಯೂ ಹೊಸ ಉತ್ಸಾಹ ಕಂಡುಬರಲಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರುಬಿಡುವಾಗಲೇ ಹಣದುಬ್ಬರ ಏರಿಕೆಗೆ ವೇತನ ಹೆಚ್ಚಳವು ಇನ್ನಷ್ಟು ಪುಷ್ಟಿ ನೀಡಲಿದೆ ಎನ್ನುವ ಆತಂಕವೂ ಎದುರಾಗಿದೆ. ಇನ್ನೊಂದು ಅರ್ಥದಲ್ಲಿ ಇದು ಆರ್ಥಿಕ ಚಟುವಟಿಕೆಗಳಿಗೆ ಇನ್ನಷ್ಟು ಇಂಬು ನೀಡಲಿದೆ ಎನ್ನುವುದೊಂದೇ ಸಮಾಧಾನದ ಸಂಗತಿಯಾಗಿದೆ. ಆರ್ಥಿಕತೆಗೆ ಉತ್ತೇಜನ ನೀಡಿದರೂ, ಇದು ಸರ್ಕಾರದ 2017–18ನೇ ಸಾಲಿನ ವಿತ್ತೀಯ ಕೊರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕವೂ ಎದುರಾಗಿದೆ. ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ ₹ 1.02 ಲಕ್ಷ ಕೋಟಿ ಹೊರೆ ಬೀಳಲಿದೆ. ಈ ವರ್ಷದ ಬಜೆಟ್‌ನಲ್ಲಿ ಕೇವಲ ₹ 53,844 ಕೋಟಿಗಳನ್ನಷ್ಟೇ ಒದಗಿಸಲಾಗಿದೆ. ಹೀಗಾಗಿ ₹ 38,200 ಕೋಟಿಗಳ ಕೊರತೆ ಎದುರಾಗಲಿದೆ. ಈ ಮೊತ್ತವನ್ನು 2017–18ನೇ ಸಾಲಿನ ಬಜೆಟ್‌ನಲ್ಲಿ ಸರಿದೂಗಿಸಿದರೂ, ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲು ಸರ್ಕಾರಕ್ಕೆ ಕಷ್ಟವಾಗಲಿದೆ. ಸರ್ಕಾರಿ ನೌಕರರ ವೇತನವು ಖಾಸಗಿ ವಲಯಕ್ಕಿಂತ ಹೆಚ್ಚು ಆಕರ್ಷಕವಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ವೇತನ ಹೆಚ್ಚಳವು ಸರ್ಕಾರಿ ನೌಕರರ ಪಾಲಿಗೆ ತೃಪ್ತಿ ತಂದಿಲ್ಲ. 6ನೇ ವೇತನ ಆಯೋಗವು ಶೇ 20ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದರೂ, 2008ರಲ್ಲಿ ವರದಿ ಜಾರಿ ಮಾಡುವಾಗ ಅದನ್ನು ದುಪ್ಪಟ್ಟು ಮಾಡಲಾಗಿತ್ತು. ಈ ಬಾರಿ ಹಾಗೆ ಮಾಡಲಾಗಿಲ್ಲ. ಮೂಲ ವೇತನ ಹೆಚ್ಚಳದ ಪ್ರಮಾಣವು 70 ವರ್ಷಗಳಲ್ಲಿಯೇ ಅತಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಜುಲೈ 4ರಂದು ಪ್ರತಿಭಟನೆ ನಡೆಸಲೂ ನೌಕರರ ಒಕ್ಕೂಟ ನಿರ್ಧರಿಸಿರುವುದು ಮಾತ್ರ ಅನಿರೀಕ್ಷಿತ ಬೆಳವಣಿಗೆಯಾಗಿದೆ. ಸಂಬಳ ಸವಲತ್ತುಗಳು ಹೆಚ್ಚಳಗೊಂಡರೂ ನೌಕರರ ಕೆಲಸದ ದಕ್ಷತೆ ಹೆಚ್ಚಿಸಲು ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದೂ ಇಲ್ಲಿ ಮುಖ್ಯ. ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಕೆಲ ಮಟ್ಟಿಗಿನ ನಿಗಾ ಇದ್ದರೂ, ಅದು ಕೆಳ ಹಂತದ ನೌಕರರಿಗೆ ಇನ್ನೂ ಅನ್ವಯಗೊಂಡಿಲ್ಲ. ಲಂಚಗುಳಿತನ, ಸ್ವಜನಪಕ್ಷಪಾತ, ವಿಳಂಬ, ಸಾರ್ವಜನಿಕರ ಜತೆಗೆ ಸೌಜನ್ಯರಹಿತ ವರ್ತನೆಗಳಿಗೂ ಸರ್ಕಾರ ಕಡಿವಾಣ ಹಾಕಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ಕೂಡ ರಾಜ್ಯಗಳಲ್ಲಿ ವ್ಯಾಪಕ ಅಸಮಾಧಾನಕ್ಕೂ ಕಾರಣವಾಗಬಹುದು. ಈ ಬೆಳವಣಿಗೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆ ಮೇರೆಗೆ ಬಗೆಹರಿಸಬೇಕಾಗಿದೆ. ಇಲ್ಲದಿದ್ದರೆ ನೌಕರರ ಮುಷ್ಕರಗಳು ಆಡಳಿತ ಯಂತ್ರದ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿ ಉಂಟುಮಾಡಬಹುದು. ‘ಬ್ರೆಕ್ಸಿಟ್‌’ ಪ್ರಭಾವದಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಮುಂದುವರೆಯಲಿರುವಾಗ, ದೇಶಿ ಬೇಡಿಕೆಯೇ ನಮ್ಮ ಆರ್ಥಿಕತೆಯನ್ನು ಮುನ್ನಡೆಸಲಿದೆ ಎನ್ನುವುದೊಂದೇ ಸದ್ಯಕ್ಕೆ ನಮಗೆ ಹೆಚ್ಚು ಸಮಾಧಾನ ತರುವ ಸಂಗತಿಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.