ನೇಪಾಳದಲ್ಲಿ ಮತ್ತೆ ಬಿಕ್ಕಟ್ಟು ಎಚ್ಚರಿಕೆಯ ಹೆಜ್ಜೆ ಇರಿಸಿ ಭಾರತದಲ್ಲಿರುವ ನೇಪಾಳದ ರಾಯಭಾರಿಯನ್ನು ನೇಪಾಳ ಸರ್ಕಾರ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಜೊತೆಗೆ ಭಾರತಕ್ಕೆ ಭೇಟಿ ನೀಡಬೇಕಿದ್ದ ನೇಪಾಳದ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರೆ ಅವರ ಭೇಟಿ ಕಡೆ ಗಳಿಗೆಯಲ್ಲಿ ರದ್ದಾಗಿದೆ. ಹಾಗೆಯೇ ಕಠ್ಮಂಡು ಹೊರಗಡೆ ಬೃಹತ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರತದ ನೆರವನ್ನು ಒಪ್ಪಿಕೊಳ್ಳದಿರಲೂ ನೇಪಾಳ ನಿರ್ಧರಿಸಿದೆ. ಈ ಬೆಳವಣಿಗೆಗಳು ಭಾರತ– ನೇಪಾಳ ಮಧ್ಯದ ಸಾಮರಸ್ಯ ಹದಗೆಡುತ್ತಿರುವುದರ ಸೂಚನೆಯೇ? ಕಳೆದ ವರ್ಷ ಹೊಸ ಸಂವಿಧಾನವನ್ನು ನೇಪಾಳ ಅಳವಡಿಸಿಕೊಂಡ ನಂತರ ಭಾರತ ಮೂಲದ ನೇಪಾಳಿ ಪ್ರಜೆಗಳಾದ ಮಾಧೇಶಿಗಳು ಪ್ರತಿಭಟನೆ ನಡೆಸಿದ್ದರು. ನೇಪಾಳದ ಆಂತರಿಕ ವ್ಯವಹಾರಗಳಲ್ಲಿ ಭಾರತದ ಹಸ್ತಕ್ಷೇಪ ನಡೆಯುತ್ತಿದೆ ಎಂಬಂತಹ ಭಾವನೆ ಆಗ ನೇಪಾಳದಲ್ಲಿತ್ತು. ಇದಕ್ಕಾಗಿ ನೇಪಾಳದ ಅಧಿಕಾರಾರೂಢ ರಾಜಕಾರಣಿಗಳು ತಮ್ಮ ಅಸಾಮರ್ಥ್ಯ ಮುಚ್ಚಿಕೊಳ್ಳಲು ಭಾರತದ ವಿರುದ್ಧ ಕೋಪ ಪ್ರದರ್ಶಿಸಿದ್ದೂ ಇತ್ತು. ಈ ದುರದೃಷ್ಟಕರ ಬೆಳವಣಿಗೆಗಳ ನಂತರ ಎರಡೂ ರಾಷ್ಟ್ರಗಳ ಬಾಂಧವ್ಯ ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದೆ ಎಂಬ ಭಾವನೆ ಮೂಡಿತ್ತು. ಈ ಸಂದರ್ಭದಲ್ಲೇ ನೇಪಾಳದ ರಾಜಕೀಯದಲ್ಲಿ ಭಾರತ ಅನಗತ್ಯವಾಗಿ ತಲೆ ಹಾಕುತ್ತಿದೆ ಎಂಬಂತಹ ಭಾವನೆ ಮತ್ತೊಮ್ಮೆ ಮೂಡುತ್ತಿರುವುದು ವಿಷಾದನೀಯ. ಮಾವೊವಾದಿಗಳು ಹಾಗೂ ಮುಖ್ಯವಾಹಿನಿಯ ಮಾರ್ಕ್ಸ್‌ವಾದಿಗಳ ಮೈತ್ರಿ ಸರ್ಕಾರದಲ್ಲಿ ಕಳೆದ ವಾರ ಅಸ್ಥಿರತೆ ತಲೆದೋರಿತ್ತು. ಸರ್ಕಾರ ಇನ್ನೇನು ಪತನವಾಗಲಿದೆ ಎಂಬಂಥ ಸ್ಥಿತಿ ಸೃಷ್ಟಿಯಾಗಿತ್ತು. ನಂತರ, ಕಾಮ್ರೇಡ್‌ಗಳ ನಡುವೆ ರಾಜಿ ಸಂಧಾನ ಏರ್ಪಟ್ಟಿದ್ದರಿಂದ ಈ ಅಸ್ಥಿರತೆ ಅಂತ್ಯವಾಯಿತು. ಆದರೆ ಕದಡಿದ ಈ ವಾತಾವರಣದ ದುರ್ಲಾಭ ಪಡೆಯಲು ಭಾರತ ಯತ್ನಿಸಿತು ಎಂಬಂಥ ಆರೋಪಗಳು ಮಾತ್ರ ಕೇಳಿ ಬಂದವು. ಜೊತೆಗೆ, ಭಾರತದಲ್ಲಿರುವ ನೇಪಾಳದ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ, ಈ ಹಿಂದೆ ನೇಪಾಳಿ ಕಾಂಗ್ರೆಸ್‌ನಲ್ಲಿದ್ದಂತಹ ಮಾಜಿ ರಾಜಕಾರಣಿ. ಹೀಗಾಗಿ ಭಾರತದ ಜೊತೆ ಸೇರಿ ನೇಪಾಳದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸುವುದೂ ಸುಲಭವಾಗಿದೆ. ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ರೂಪಿಸುತ್ತಿರುವ ಸ್ವತಂತ್ರ ವಿದೇಶಾಂಗ ನೀತಿಯಲ್ಲಿ ಚೀನಾಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಹಾಗೂ ಮಾಧೇಶಿ ಜನಾಂಗದ ಬೇಡಿಕೆಗಳನ್ನು ಕಡೆಗಣಿಸಿರುವುದರ ಬಗ್ಗೆ ಭಾರತಕ್ಕೆ ಅಸಮಾಧಾನವಿದೆ ಎಂಬ ಭಾವನೆ ನೇಪಾಳದಲ್ಲಿದೆ. ಹೀಗಾಗಿ ಸರ್ಕಾರ ಬದಲಾವಣೆಗೆ ಭಾರತ ಯತ್ನಿಸಿದೆ ಎಂದು ನೇಪಾಳ ಭಾವಿಸಿದೆ. ನೇಪಾಳದಲ್ಲಿ ರಾಜಕೀಯ ತಳಮಳ ಶಮನವಂತೂ ಆಗಿಲ್ಲ ಎಂಬುದನ್ನು ಭಾರತ ಅರಿತುಕೊಳ್ಳಬೇಕು. ಹೀಗಾಗಿ ನೇಪಾಳದ ಜೊತೆಗಿನ ಬಾಂಧವ್ಯದಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸುವುದು ಅವಶ್ಯ. ಅಮೆರಿಕದ ಜೊತೆ ಭಾರತದ ಬಾಂಧವ್ಯ ವೃದ್ಧಿಯಾಗುತ್ತಿದೆ. ಮೋದಿಯವರು ಅಮೆರಿಕಕ್ಕೆ ಜೂನ್‌ನಲ್ಲಿ ನಾಲ್ಕನೇ ಭೇಟಿಗೆ ಸಜ್ಜಾಗುತ್ತಿದ್ದಾರೆ. ಆದರೆ ನಮ್ಮ ನೆರೆ ರಾಷ್ಟ್ರಗಳಾದ ಆಫ್ಘಾನಿಸ್ತಾನ, ಮಾಲ್ಡೀವ್ಸ್ ಹಾಗೂ ಇತ್ತೀಚೆಗೆ ಶ್ರೀಲಂಕಾ ಜೊತೆಗೆ ಭಾರತದ ಬಾಂಧವ್ಯ ಸುಗಮವಾಗಿಲ್ಲ ಎಂಬ ವಾಸ್ತವವೂ ನಮ್ಮೆದುರಿಗಿದೆ. ಏನೇ ಕಾರಣ ಅಥವಾ ಪ್ರಚೋದನೆಗಳಿರಲಿ, ರಾಜತಾಂತ್ರಿಕ ಮುತ್ಸದ್ದಿತನ ಪ್ರದರ್ಶಿಸುವುದನ್ನು ಭಾರತ ಬಿಟ್ಟುಕೊಡಬಾರದು. ಭಾರತ– ನೇಪಾಳ ಸಂಬಂಧ ಹದಗೆಡದಂತೆ ರಾಜಕೀಯ ವಿವೇಕ ಪ್ರದರ್ಶಿಸುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.