ಬರ ನಿರ್ವಹಣೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಿ ಬಿಹಾರ, ಗುಜರಾತ್‌, ಕರ್ನಾಟಕ, ಮಹಾರಾಷ್ಟ್ರ ಮುಂತಾಗಿ 12ಕ್ಕೂ ಹೆಚ್ಚು ರಾಜ್ಯಗಳ ಬಹುತೇಕ ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಸಮಾಧಾನ ಎಲ್ಲರ ಕಣ್ಣು ತೆರೆಸುವಂತಿದೆ. ‘ಬರಗಾಲದ ನಿರ್ವಹಣೆ ಮತ್ತು ಬಡಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ’ ಎಂದು ಸುಪ್ರೀಂ ಕೋರ್ಟಿನ ಪೀಠವು ಕಟುವಾಗಿ ಟೀಕಿಸಿದೆ. ‘ದೇಶದ ಶೇಕಡ 25ಕ್ಕೂ ಹೆಚ್ಚು ಜನಸಂಖ್ಯೆ ತೀವ್ರ ಬರಪೀಡಿತವಾಗಿರುವಾಗ ಒಕ್ಕೂಟ ವ್ಯವಸ್ಥೆಯ ನೆಪ ಹೇಳಿಕೊಂಡು ಕೇಂದ್ರ ಸರ್ಕಾರ ಕೈಕಟ್ಟಿ ಕೂರುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ಎನ್‌.ವಿ.ರಮಣ ಅವರಿದ್ದ ಪೀಠವು ತೀವ್ರ ಎಚ್ಚರಿಕೆಯನ್ನೂ ನೀಡಿದೆ. ಬರಗಾಲದ ಪರಿಸ್ಥಿತಿಯನ್ನು ಎದುರಿಸುವಲ್ಲಿ ನಿರ್ಲಕ್ಷ್ಯ ತಳೆದಿರುವ ಸರ್ಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸೂಚಿಸಲು ಕೋರಿ, ಸ್ವರಾಜ್‌ ಅಭಿಯಾನ್‌ ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ ಮುಂದೆ ರಿಟ್‌ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನಿಸಿದರೆ, ಬಡವರನ್ನು ಕಿತ್ತು ತಿನ್ನುತ್ತಿರುವ ಬರಗಾಲದ ಭೀಕರತೆ ನಮ್ಮ ಸರ್ಕಾರಗಳಿಗೆ ಇನ್ನೂ ಅರಿವಿಗೆ ಬಂದಂತಿಲ್ಲ. ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳು ರಾಜ್ಯ ಸರ್ಕಾರಗಳ ಜವಾಬ್ದಾರಿ ಹೌದಾದರೂ, ರಾಜ್ಯ ಸರ್ಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎನ್ನುವುದನ್ನು ಗಂಭೀರವಾಗಿ ಗಮನಿಸಬೇಕಾದ ಕರ್ತವ್ಯ ಕೇಂದ್ರ ಸರ್ಕಾರದ್ದು. ದೇಶದಾದ್ಯಂತ ಸುಮಾರು 33 ಕೋಟಿ ಜನರು ಬರಗಾಲದ ಸಂತ್ರಸ್ತರಾಗಿದ್ದು ತೀವ್ರ ತೊಂದರೆಯಲ್ಲಿದ್ದಾರೆ ಎನ್ನುವುದನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಹೇಳಬೇಕೆ? ಆಡಳಿತಯಂತ್ರ ಏನು ಮಾಡುತ್ತಿದೆ? ಬಿಹಾರ, ಗುಜರಾತ್‌ ಮತ್ತು ಹರಿಯಾಣ ರಾಜ್ಯ ಸರ್ಕಾರಗಳಂತೂ ಬರಪೀಡಿತ ಪ್ರದೇಶಗಳ ಘೋಷಣೆ ಮಾಡುವುದಕ್ಕೂ ಮೀನ ಮೇಷ ಎಣಿಸುತ್ತಿರುವ ಬಗ್ಗೆ ನ್ಯಾಯಪೀಠ ಕಟುವಾಗಿ ಟೀಕಿಸಿದೆ. ‘ಜನರ ಸಂವಿಧಾನದತ್ತ ಘನತೆಯ ಬದುಕಿನ ಹಕ್ಕಿನ ಉಲ್ಲಂಘನೆ ಇದು’ ಎಂದು ಈ ಸರ್ಕಾರಗಳ ವಿರುದ್ಧ ನ್ಯಾಯಪೀಠ ಹರಿಹಾಯ್ದಿರುವುದು ಸರಿಯಾಗಿಯೇ ಇದೆ. ಮಳೆಯಿಲ್ಲದೆ, ಉದ್ಯೋಗವಿಲ್ಲದೆ, ಕುಡಿಯಲು ನೀರಿಲ್ಲದೆ ಜನರು ಸಾಮೂಹಿಕ ವಲಸೆ ಹೋಗುತ್ತಿರುವ ದುಃಸ್ಥಿತಿ 12 ರಾಜ್ಯಗಳ ಬಹುತೇಕ ಹಳ್ಳಿಗಳಲ್ಲಿದೆ. ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ರಾಷ್ಟ್ರೀಯ ವಿಪತ್ತು ಎಂದರೆ ಕೇವಲ ಭೂಕಂಪ, ಚಂಡಮಾರುತದ ಹಾನಿ ಮಾತ್ರ ಎಂದು ಸರ್ಕಾರ ಭಾವಿಸಿದಂತಿದೆ. ‘ತೀವ್ರ ಬರಗಾಲದ ಪರಿಸ್ಥಿತಿಯನ್ನೂ 2005ರ ರಾಷ್ಟ್ರೀಯ ವಿಪತ್ತು ಕಾಯ್ದೆಯ ಸೆಕ್ಷನ್‌ 2 (ಡಿ) ಅಡಿಯಲ್ಲಿ ರಾಷ್ಟ್ರೀಯ ವಿಪತ್ತು ಎಂದೇ ಪರಿಗಣಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿರುವುದು ಗಮನಾರ್ಹ. ನ್ಯಾಯಮೂರ್ತಿಗಳ ಸೂಚನೆಯಂತೆ ಕೇಂದ್ರ ಸರ್ಕಾರ 6 ತಿಂಗಳೊಳಗೆ ರಾಷ್ಟ್ರೀಯ ವಿಪತ್ತು ಹೊಣೆಗಾರಿಕೆ ಪಡೆಯನ್ನು ಮತ್ತು ಮೂರು ತಿಂಗಳಲ್ಲಿ ವಿಪತ್ತು ಸಂಭಾಳಿಸುವ ನಿಧಿಯನ್ನೂ ಸ್ಥಾಪಿಸಬೇಕಿದೆ. ಹವಾಮಾನ ಮುನ್ಸೂಚನೆಯಂತೆ ಈ ಮುಂಗಾರಿನಲ್ಲಿ ಉತ್ತಮ ಮಳೆ ಸುರಿದರೂ, ಈಗಾಗಲೇ ಒಂದು ವರ್ಷದಿಂದ ಬರಗಾಲದ ಹೊಡೆತಕ್ಕೆ ಸಿಲುಕಿರುವ ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತುರ್ತು ಗಮನ ಹರಿಸಿ, ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಈಗಾಗಲೇ ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರಗಳಿಗೆ ತಕ್ಷಣ ಹೆಚ್ಚು ಹಣ ಒದಗಿಸಿ, ಅದು ಸೂಕ್ತ ರೀತಿಯಲ್ಲಿ ಖರ್ಚಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸುವ ಸಮನ್ವಯ ಕ್ರಮಗಳನ್ನೂ ಕೈಗೊಳ್ಳಬೇಕು. ಬರಗಾಲ ಎಂದರೆ ರಾಜಕಾರಣಿಗಳಿಗೆ ರಾಜಕೀಯ ಲಾಭ ಗಳಿಕೆಯ ಹಬ್ಬ ಇದ್ದಂತೆ. ಕರ್ನಾಟಕದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಪ್ರತ್ಯೇಕ ಪ್ರವಾಸಗಳನ್ನು ಕೈಗೊಂಡು ಪರಸ್ಪರ ರಾಜಕೀಯ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿರುವ ಆಳುವ ಮತ್ತು ವಿರೋಧ ಪಕ್ಷಗಳ ಮುಖಂಡರ ನಡವಳಿಕೆಯೂ ಇದನ್ನೇ ಸೂಚಿಸುತ್ತಿದೆ. ಬರಗಾಲದ ಪ್ರದೇಶಗಳಲ್ಲಿ ಎಲ್ಲ ಪಕ್ಷಗಳ ರಾಜಕೀಯ ಧುರೀಣರೂ ಒಟ್ಟಾಗಿ ಪ್ರವಾಸ ಮಾಡಿ, ಜನರಿಗೆ ಪರಸ್ಪರ ನೆರವಾಗಿದ್ದರೆ ರಾಜಕಾರಣಿಗಳಲ್ಲಿ ಇರುವುದು ನಿಜವಾದ ಜನಪರ ಕಾಳಜಿ ಎನ್ನಬಹುದಿತ್ತು. ರಾಜ್ಯದ ಮುಖ್ಯಮಂತ್ರಿಯವರು ಈ ದಿಸೆಯಲ್ಲಿ ರಾಜಕೀಯ ಪ್ರತಿಷ್ಠೆಯನ್ನು ಬದಿಗಿಟ್ಟು ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿರೋಧ ಪಕ್ಷಗಳೂ ಕೇವಲ ಟೀಕಿಸುವುದನ್ನೇ ಉದ್ಯೋಗ ಮಾಡಿಕೊಳ್ಳದೆ ಕೇಂದ್ರದಿಂದ ತಕ್ಷಣ ಹೆಚ್ಚುವರಿ ನೆರವು ಬರುವಂತೆ ತಮ್ಮ ಪ್ರಭಾವವನ್ನು ಬಳಸಬೇಕು. ಬರಗಾಲ ಆಳುವ ಸರ್ಕಾರ ಮಾತ್ರ ಎದುರಿಸಬೇಕಾದ ವಿಪತ್ತು ಅಲ್ಲ; ಇಡೀ ಸಮಾಜವೇ ಒಟ್ಟಾಗಿ ನಿಂತು ಮಾನವೀಯ ನೆಲೆಯಲ್ಲಿ ಎದುರಿಸಬೇಕಾದ ವಿಪತ್ತು. ಸುಪ್ರೀಂ ಕೋರ್ಟ್ ಇದನ್ನೇ ಸ್ಪಷ್ಟಮಾತುಗಳಲ್ಲಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.