ವಾಯುಮಾಲಿನ್ಯ ಏರಿಕೆ ಅಪಾಯಗಳನ್ನು ನಿಯಂತ್ರಿಸಿ ವಾಯು ಮಾಲಿನ್ಯದ ಮಟ್ಟ ರಾಷ್ಟ್ರದಲ್ಲಿ ಏರುತ್ತಿದೆ. ಅದರಲ್ಲೂ ವಿಶ್ವದ ಅತ್ಯಂತ ಹೆಚ್ಚು ಮಾಲಿನ್ಯಯುಕ್ತ ಐದು ನಗರಗಳಲ್ಲಿ ನಾಲ್ಕು ಭಾರತದಲ್ಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಟಿಸಿರುವ ಈ ಅಂಕಿಅಂಶಗಳು ಆತಂಕಕಾರಿ. ಈ ಮೊದಲು ನವದೆಹಲಿ, ವಿಶ್ವದ ಅತ್ಯಂತ ವಾಯುಮಾಲಿನ್ಯ ಇರುವ ನಗರ ಎಂದಾಗಿತ್ತು. ಈಗ ಇದು 11ನೇ ಸ್ಥಾನಕ್ಕೆ ಇಳಿದಿದೆ. ವಿಶ್ವದಾದ್ಯಂತ 2,976 ನಗರಗಳ ಪೈಕಿ ಇರಾನ್‌ನ ಝಬೋಲ್ ವಾಯುಮಾಲಿನ್ಯ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಕ್ರಮವಾಗಿ 2 ರಿಂದ 5ನೇ ಸ್ಥಾನದವರೆಗೆ ಗ್ವಾಲಿಯರ್, ಅಲಹಾಬಾದ್, ಪಟ್ನಾ ಹಾಗೂ ರಾಯಪುರದಂತಹ ದೆಹಲಿಗಿಂತ ಸಣ್ಣ ಪಟ್ಟಣಗಳಿವೆ ಎಂಬುದನ್ನು ಗಮನಿಸಬೇಕು. ಈ ಪಟ್ಟಿಯಲ್ಲಿ ಬೆಂಗಳೂರು 140ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, ಒಟ್ಟು 122 ಭಾರತೀಯ ನಗರಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ದಾವಣಗೆರೆ ಹಾಗೂ ಹಾಸನಗಳೂ ಇದರಲ್ಲಿ ಸೇರಿವೆ ಎಂಬುದು ಹೊಸ ವಿದ್ಯಮಾನ. ಬೆಳೆಯುತ್ತಿರುವ ನಗರಗಳು ಹಾಗೂ ಪಟ್ಟಣಗಳು ವಿಷಗಾಳಿಯಿಂದ ಆವೃತ್ತವಾಗುತ್ತಿವೆ ಎಂಬಂತಹ ವಿಚಾರವನ್ನು ಕಡೆಗಣಿಸಲಾಗದು. ವಾಹನ ದಟ್ಟಣೆ ಹೆಚ್ಚಳದ ಬಗ್ಗೆ ಸರ್ಕಾರಗಳು ಗಮನ ಹರಿಸುತ್ತಿಲ್ಲ ಎಂಬುದು ಇದರಿಂದ ವ್ಯಕ್ತ. 2008ರಿಂದ 2013ರ ಅವಧಿಯಲ್ಲಿ ವಿಶ್ವದಾದ್ಯಂತ ವಾಯುಮಾಲಿನ್ಯ ಮಟ್ಟ ಶೇ 8ರಷ್ಟು ಹೆಚ್ಚಾಗಿದೆ ಎಂದೂ ಡಬ್ಲ್ಯುಎಚ್ಒ ವರದಿ ಹೇಳಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ವಿದ್ಯಮಾನ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಬರ್ಲಿನ್, ಲಂಡನ್ ಹಾಗೂ ಪ್ಯಾರಿಸ್‌ನಂತಹ ನಗರಗಳಲ್ಲೂ ವಾಯು ಗುಣಮಟ್ಟ ಡಬ್ಲ್ಯುಎಚ್ಒ ಮಾನದಂಡಗಳಿಗೆ ಅನುಸಾರವಾಗೇನೂ ಇಲ್ಲ. ಆದರೆ ಬೀಜಿಂಗ್, ದೆಹಲಿ ಅಥವಾ ಕರಾಚಿಯಂತಹ ನಗರಗಳಲ್ಲಿ ಕಂಡುಬರುವಷ್ಟು ವಾಯುಮಾಲಿನ್ಯ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಗರಗಳಲ್ಲಿ ಇಲ್ಲ. ಉದ್ಯಾನ ನಗರ ಎಂದು ಈ ಹಿಂದೆ ಬೆಂಗಳೂರು ನಗರವನ್ನು ವರ್ಣಿಸಲಾಗುತ್ತಿತ್ತು. ಆದರೆ ಕಸದ ನಗರ (ಗಾರ್ಬೇಜ್ ಸಿಟಿ) ಎಂಬಂತಹ ಕಳಂಕ ಇತ್ತೀಚೆಗೆ ಈ ನಗರಕ್ಕೆ ಅಂಟಿಕೊಂಡಿದ್ದನ್ನು ಮರೆಯುವಂತಿಲ್ಲ. ಘನ ಮತ್ತು ಕೃಷಿ ತ್ಯಾಜ್ಯವನ್ನು ಅಗಾಧ ಪ್ರಮಾಣದಲ್ಲಿ ಸುಡುತ್ತಿರುವುದೂ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ ಎಂಬುದನ್ನು ಡಬ್ಲ್ಯುಎಚ್ಒ ವರದಿ ಗುರುತಿಸಿದೆ. ಸ್ವಚ್ಛಗೊಳಿಸದ ಕಸದ ರಾಶಿ ಜೊತೆಗೆ ವಾಹನಗಳು ಹೊರಸೂಸುವ ಮಾಲಿನ್ಯ, ಗಡಚಿಕ್ಕುವ ಶಬ್ದ, ಅನಿಯಂತ್ರಿತ ಕಟ್ಟಡ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನ ಗಾಳಿಯನ್ನು ವಿಷವಾಗಿಸುತ್ತಿವೆ ಎಂಬುದು ಸುಸ್ಪಷ್ಟ. ಮೂಲಸೌಕರ್ಯಗಳ ನಿರ್ಮಾಣದ ನೆಪದಲ್ಲಿ ಮರಗಳ ಮಾರಣಹೋಮವೂ ಬೆಂಗಳೂರಿನ ಮಾಲಿನ್ಯದ ಪ್ರಮಾಣವನ್ನು ಹೆಚ್ಚಿಸಿದೆ. ವಾಯುಮಾಲಿನ್ಯದಿಂದ ಪ್ರತಿವರ್ಷ ಜಗತ್ತಿನಲ್ಲಿ ಸುಮಾರು 30 ಲಕ್ಷ ಜನ ಸಾಯುತ್ತಿದ್ದಾರೆ ಎಂಬ ಅಂಕಿಅಂಶ ನಮಗೆ ಎಚ್ಚರಿಕೆ ಗಂಟೆಯಾಗಬೇಕು. ಪಾರ್ಶ್ವವಾಯು, ಹೃದಯಕಾಯಿಲೆ, ಶ್ವಾಸಕೋಶ ಕ್ಯಾನ್ಸರ್ ಮತ್ತು ಉಸಿರಾಟದ ಕಾಯಿಲೆಗಳಿಗೆ ವಾಯುಮಾಲಿನ್ಯ ಕಾರಣವಾಗುತ್ತಿದೆ. ನೀರು ಕಲುಷಿತವಾಗಿದ್ದಲ್ಲಿ ಶುದ್ಧ ಕುಡಿಯುವ ನೀರನ್ನು ಖರೀದಿಸಬಹುದು. ಆದರೆ ಶುದ್ಧಗಾಳಿಯನ್ನು ಪಡೆಯುವುದೆಲ್ಲಿಂದ? ತಮ್ಮದಲ್ಲದ ತಪ್ಪಿಗೆ ಜನರೇಕೆ ಬಲಿಪಶುಗಳಾಗಬೇಕು? ಈ ಮಾಲಿನ್ಯ ಬಿಕ್ಕಟ್ಟು ನಿಯಂತ್ರಣಕ್ಕೆ ಸರ್ಕಾರಗಳು ಗಂಭೀರವಾಗಿ ಕಾರ್ಯಪ್ರವೃತ್ತವಾಗಬೇಕು. ಇದಕ್ಕಾಗಿ ಕಲ್ಲಿದ್ದಲು, ಡೀಸೆಲ್‌ನಂತಹ ಬಳಕೆ ನಿಯಂತ್ರಿಸುವುದು ಅಗತ್ಯ. ವಾಹನಗಳಲ್ಲಿ ಸಿಎನ್‌ಜಿ ಇಂಧನ ಬಳಕೆಯನ್ನು ಹೆಚ್ಚು ಮಾಡಬೇಕು. ಗಾಳಿ ಹಾಗೂ ಸೌರಶಕ್ತಿಯಂತಹ ಪುನರ್‌ ನವೀಕರಣ ಇಂಧನಗಳ ಬಳಕೆ ಹೆಚ್ಚಬೇಕು. ಹಾಗೆಯೇ ವಾಹನ ತಯಾರಿಕೆ ತಂತ್ರಜ್ಞಾನಗಳಲ್ಲೇ ಹೆಚ್ಚಿನ ಸುಧಾರಣೆಗಳನ್ನು ತಂದು ಮಾಲಿನ್ಯವನ್ನು ತಗ್ಗಿಸುವ ಕಾರ್ಯಕ್ಕೆ ಸಂಶೋಧನೆಗಳು ನಿರಂತರವಾಗಿ ನಡೆಯಬೇಕು. ಖಾಸಗಿ ವಾಹನಗಳ ಬಳಕೆ ನಿಯಂತ್ರಿಸಲು ಸಮೂಹ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವಂತಹ ನೀತಿಗಳನ್ನು ಸರ್ಕಾರಗಳ ಮಟ್ಟದಲ್ಲಿ ರೂಪಿಸುವುದು ಅತ್ಯವಶ್ಯ.ಸ್ಥಳೀಯ ನೆಲೆಗಳಲ್ಲಿ ಕೈಗೊಳ್ಳಲಾಗುವ ವಾಯುಮಾಲಿನ್ಯ ನಿಯಂತ್ರಣ ಕ್ರಮಗಳು, ಹವಾಮಾನ ಬದಲಾವಣೆಗೆ ಕಾರಣವಾಗುವಂತಹ ಮಾಲಿನ್ಯಗಳನ್ನೂ ತಗ್ಗಿಸುತ್ತವೆ ಎಂಬುದು ನಮಗೆ ನೆನಪಿರಬೇಕು. ಭೂಮಿ ಬಿಸಿಯಾಗುವುದರಿಂದಾಗುವ ನಕಾರಾತ್ಮಕ ಪರಿಣಾಮಗಳು ಇದರಿಂದ ಕಡಿಮೆಯಾಗುತ್ತವೆ. ಹಾಗೆಯೇ ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಮೂಲಕ ಭವಿಷ್ಯದಲ್ಲಾಗುವ ಅನಾಹುತಗಳಿಗೂ ತಡೆಹಾಕುವುದು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.