ದಿವಾಳಿ ಸಂಹಿತೆ: ಆರ್ಥಿಕ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆ ಬ್ಯಾಂಕ್‌ ಸುಸ್ತಿದಾರರು ಕಾಯ್ದೆಗಳ ಸಂಕೀರ್ಣ ಬಲೆಯಲ್ಲಿ ರಕ್ಷಣೆ ಪಡೆದು ಸಾವಿರಾರು ಕೋಟಿಗಳನ್ನು ಮರುಪಾವತಿ ಮಾಡದೆ ಪಾರಾಗಲು ಇನ್ನು ಮುಂದೆ ಸಾಧ್ಯವಾಗಲಾರದು. ‘ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆ–2016’ ( – ) ಸಂಸತ್ತಿನಲ್ಲಿ ಅಂಗೀಕಾರ ಪಡೆದಿದೆ. ಇದರಿಂದ ದೇಶಿ ಆರ್ಥಿಕತೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಉದ್ದಿಮೆ ವಹಿವಾಟು ಉದ್ದೇಶಕ್ಕೆ ಸಾಲ ಪಡೆದ ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು ಇತರ ಉದ್ದಿಮೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ನಿರ್ದಿಷ್ಟ ಕಾಲಮಿತಿಯೊಳಗೆ ತಮ್ಮ ವಹಿವಾಟು ಕೊನೆಗೊಳಿಸುವುದನ್ನು ಇಲ್ಲವೆ ಪುನಶ್ಚೇತನಕ್ಕೆ ಯತ್ನಿಸುವುದನ್ನು ಈ ಮಸೂದೆ ಸುಲಭಗೊಳಿಸಲಿದೆ. ಹೀಗಾಗಿ ಇದು ಸಮಗ್ರ ಮತ್ತು ವ್ಯವಸ್ಥಿತ ಆರ್ಥಿಕ ಸುಧಾರಣಾ ಕ್ರಮವಾಗಿದೆ ಎನ್ನಬಹುದು. ಹಣಕಾಸು ಪರಿಸ್ಥಿತಿ ಬಿಗಡಾಯಿಸಿ ದಿವಾಳಿ ಹಂತ ತಲುಪಿದ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಲು, ಹಲವು ರೀತಿಯ ಕಾಯ್ದೆಗಳಿಂದಾಗಿ ಕೊನೆಮೊದಲಿಲ್ಲದ ವಿಳಂಬವಾಗುತ್ತಿತ್ತು. ಇಂತಹ ವಿಳಂಬವು ಪುನಶ್ಚೇತನದ ಸಾಧ್ಯತೆಯನ್ನೂ ನುಂಗಿ ಹಾಕುತ್ತಿತ್ತು. ಗುತ್ತಿಗೆ ಕಾಯ್ದೆ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ವಿಶೇಷ ಕಾಯ್ದೆ ಮತ್ತು ಹಣಕಾಸು ಸಂಪತ್ತಿನ ಪುನರ್‌ರಚನೆ ಕಾಯ್ದೆ ಮೂಲಕ ಬ್ಯಾಂಕ್‌ಗಳು ನಡೆಸುವ ಸಾಲ ವಸೂಲಾತಿ ಪ್ರಕ್ರಿಯೆಯು ನಿರೀಕ್ಷಿತ ಫಲಿತಾಂಶವನ್ನೂ ನೀಡುತ್ತಿರಲಿಲ್ಲ. ಇಂತಹ ಸಮಸ್ಯೆಗಳಿಗೆ ಐಬಿಸಿ ಪರಿಹಾರ ಒದಗಿಸಲಿದೆ. ದಿವಾಳಿ ಅಂಚಿಗೆ ತಲುಪಿದ ಉದ್ದಿಮೆ ಸಂಸ್ಥೆಗಳ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಸುಸಂಬದ್ಧ ಮತ್ತು ಸಮಗ್ರ ಕಾಯ್ದೆಯಾಗಲಿದೆ. ಸಾಲ ಮರುಪಾವತಿ ಮಾಡದವರ ಆಸ್ತಿಗಳ ಸ್ವಾಧೀನ ಪ್ರಕ್ರಿಯೆ ಸರಾಗವಾಗಿರಲಿರುವುದರಿಂದ ದೇಶಿ ಬ್ಯಾಂಕಿಂಗ್‌ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯೂ ಕಂಡುಬರಲಿದೆ. ಸಾಲಗಾರರೆಲ್ಲ ‘ಉದ್ದೇಶಪೂರ್ವಕ ಸುಸ್ತಿದಾರ’ರಲ್ಲ. ಆದರೆ, ಎಲ್ಲ ಸುಸ್ತಿದಾರರು ಇಡೀ ಉದ್ದಿಮೆಗೆ ಎದುರಾದ ಬಿಕ್ಕಟ್ಟಿನಿಂದಾಗಿಯೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವುದೂ ಇಲ್ಲ. ಕೆಲ ಸಂದರ್ಭಗಳಲ್ಲಿ ಹೊಸ ಉದ್ದಿಮೆ ಆರಂಭಿಸುವ ಸಾಹಸವು ಪದೇ ಪದೇ ವಿಫಲಗೊಳ್ಳುವ ಸಾಧ್ಯತೆಯೂ ಇರುತ್ತದೆ. ಇಂತಹ ವೈಫಲ್ಯಗಳನ್ನು ಕ್ಷಿಪ್ರವಾಗಿ ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಹೊಸ ಕಾಯ್ದೆ ನೆರವಾಗಲಿದೆ. ಕೋಟ್ಯಂತರ ರೂಪಾಯಿಗಳ ವಸೂಲಾಗದ ಸಾಲದ ಸಮಸ್ಯೆಯಿಂದ ನಲುಗಿರುವ ಬ್ಯಾಂಕಿಂಗ್‌ ವಲಯಕ್ಕೆ ಇದು ಭರವಸೆಯ ಬೆಳಕಾಗಲಿದೆ. ನಷ್ಟಪೀಡಿತ ಉದ್ದಿಮೆ ಸಂಸ್ಥೆಯ ಕಾರ್ಮಿಕರ ಹಿತಾಸಕ್ತಿ ಕಾಪಾಡುವಲ್ಲಿ ಮಾಲೀಕರು ವಿಫಲವಾದರೆ, ಈ ಕಾಯ್ದೆಯು ದುಡಿಯುವ ವರ್ಗದ ರಕ್ಷಣೆಗೆ ನಿಲ್ಲುವುದು ಇದರ ಇನ್ನೊಂದು ವಿಶೇಷತೆಯಾಗಿದೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬರುತ್ತಿದ್ದಂತೆ, ಉದ್ದಿಮೆ ಸಂಸ್ಥೆಗಳು, ಪಾಲುದಾರಿಕೆ ಕಂಪೆನಿಗಳು ಮತ್ತು ವ್ಯಕ್ತಿಗಳು ಎದುರಿಸುವ ಆರ್ಥಿಕ ಬಿಕ್ಕಟ್ಟಿಗೆ ಕಾಲಮಿತಿಯಲ್ಲಿ ಅತ್ಯಂತ ತ್ವರಿತವಾಗಿ ಪರಿಹಾರೋಪಾಯ ಕಂಡುಕೊಳ್ಳಲು ಸಾಧ್ಯವಾಗಲಿದೆ. ಉದ್ದಿಮೆಗಳು ಮತ್ತು ವ್ಯಕ್ತಿಗಳು ಎದುರಿಸುವ ಆರ್ಥಿಕ ನಷ್ಟದ ಪ್ರಕರಣಗಳನ್ನು ವಾಣಿಜ್ಯ ಮತ್ತು ನ್ಯಾಯಾಂಗದ ದೃಷ್ಟಿಕೋನದಿಂದ ಬಗೆಹರಿಸುವ ವ್ಯವಸ್ಥಿತ ಸುಧಾರಣಾ ಕ್ರಮವೂ ಇದಾಗಿದೆ. ಕಾರ್ಪೊರೇಟ್‌ ಮತ್ತು ವೈಯಕ್ತಿಕ ಹಣಕಾಸು ಬಿಕ್ಕಟ್ಟುಗಳಿಗೆ ದಿವಾಳಿ ಕಾಯ್ದೆಯು ಏಕರೂಪವಾಗಿ ಅನ್ವಯಗೊಳ್ಳಲಿದ್ದು, ನಿಗದಿತ ಕಾಲಮಿತಿಯಲ್ಲಿ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ. ಸಾಲ ನೀಡಿಕೆ, ಉದ್ದಿಮೆಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡುವುದಕ್ಕೂ ಇದು ಭಾರಿ ಉತ್ತೇಜನ ನೀಡಲಿದೆ. ಜಾಗತಿಕ ಮಾನದಂಡಗಳ ಅನ್ವಯ, ಸಾಲ ಸುಸ್ತಿ ಪ್ರಕರಣಗಳನ್ನು ನಿರ್ವಹಿಸುವ ಕಾನೂನು ಮತ್ತು ಸಾಂಸ್ಥಿಕ ವ್ಯವಸ್ಥೆ ದೇಶದಲ್ಲಿ ಇಲ್ಲದಿರುವುದು ನಮ್ಮಲ್ಲಿನ ಇದುವರೆಗಿನ ದೊಡ್ಡ ಲೋಪವಾಗಿತ್ತು. ಅದೀಗ ದೂರವಾದಂತಾಗಿದೆ. ದಿವಾಳಿ ಸಮಸ್ಯೆ ಪರಿಹರಿಸುವ ಸಂದರ್ಭದಲ್ಲಿ ಉದ್ದಿಮೆ ಸಂಸ್ಥೆಯ ಇಡೀ ವಹಿವಾಟನ್ನು ದಿವಾಳಿ ನಿರ್ವಹಣಾ ಪರಿಣತರ ವಶಕ್ಕೆ ಒಪ್ಪಿಸುವುದಕ್ಕೆ ಕಳವಳ ವ್ಯಕ್ತವಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವೂ ಇದೆ. ದಿವಾಳಿ ಸಮಸ್ಯೆಗಳನ್ನು ನಿವಾರಿಸುವ ನಿಯಮ, ಮಾರ್ಗದರ್ಶಿ ಸೂತ್ರ, ದಿವಾಳಿ ಸಮಸ್ಯೆ ಪರಿಹರಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ವೃತ್ತಿನಿರತರು, ಸಂಸ್ಥೆಗಳ ನಿಯಂತ್ರಣಕ್ಕೆ ಭಾರತೀಯ ದಿವಾಳಿ ಮಂಡಳಿ ಮತ್ತು ಭಾರತೀಯ ದಿವಾಳಿ ನಿಧಿ ರಚನೆಗೂ ಸರ್ಕಾರ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು. ಹೊಸ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಇವು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.