ಮಾನಹಾನಿಯ ಸ್ವರೂಪ ಆಗಲಿ ಪುನರ್‌ವಿಮರ್ಶೆ ತಪ್ಪಿನ ಪ್ರಮಾಣಕ್ಕೆ ಸಮಾನವಾದ ಶಿಕ್ಷೆಯನ್ನು ವಿಧಿಸಬೇಕು ಎನ್ನುವುದು ನ್ಯಾಯಶಾಸ್ತ್ರ ಹೇಳುವ ಮಾತು. ಮಾನಹಾನಿಗೆ ಜೈಲುಶಿಕ್ಷೆ ವಿಧಿಸುವುದು ‘ಮಾಡಿದ ತಪ್ಪಿಗಿಂತ ಹೆಚ್ಚಿನ ಪ್ರಮಾಣದ ಸಜೆ ವಿಧಿಸುವಿಕೆ’ ಎಂಬ ಭಾವನೆ ಬೆಳೆಯುತ್ತಿದೆ. ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ತಮಗನಿಸಿದ್ದನ್ನು ಹೇಳುವ ಸ್ವಾತಂತ್ರ್ಯಕ್ಕೆ ಅತಿಯಾದ ಕಡಿವಾಣ ಹೇರಿದ್ದ ‘ಮಾಹಿತಿ ತಂತ್ರಜ್ಞಾನ ಕಾಯ್ದೆ’ಯ ಕರಾಳ ಸೆಕ್ಷನ್‌ 66(ಎ)ಯನ್ನು ಸುಪ್ರೀಂ ಕೋರ್ಟ್‌, ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಕಳೆದ ವರ್ಷ ರದ್ದು ಮಾಡಿತು. ಆ ಸಂದರ್ಭದಲ್ಲಿ, ದೇಶದಲ್ಲಿ ಮುಂದೊಂದು ದಿನ ಮಾನನಷ್ಟವನ್ನು ‘ಕ್ರಿಮಿನಲ್‌ ಅಪರಾಧ’ ಎಂದು ಪರಿಗಣಿಸುವ ವಾತಾವರಣ ಬದಲಾಗಿ, ಅದು ‘ಸಿವಿಲ್‌ ಅಪರಾಧ’ವಾಗಿ ಮಾತ್ರ ಉಳಿಯಬಹುದು ಎಂಬ ಆಶಾಭಾವ ಮೂಡಿತ್ತು. ಆದರೆ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕಳೆದ ವಾರ ನೀಡಿರುವ ತೀರ್ಪಿನಲ್ಲಿ, ಮಾನನಷ್ಟವನ್ನು ‘ಕ್ರಿಮಿನಲ್‌ ಅಪರಾಧ’ವೆಂದು ಪರಿಗಣಿಸುವುದು ತಪ್ಪಲ್ಲ ಎಂದು ಹೇಳಿದೆ. ಇನ್ನೊಬ್ಬರ ಗೌರವಕ್ಕೆ ಹಾನಿಯಾಗುವಂತೆ ಬರೆಯುವುದು ಅಥವಾ ಮಾತನಾಡುವುದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 499ನೇ ಸೆಕ್ಷನ್‌ ಹಾಗೂ ಈ ಅಪರಾಧ ಎಸಗಿದವರಿಗೆ ಗರಿಷ್ಠ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಹೇಳುವ ಸೆಕ್ಷನ್ 500 ಜಾರಿಯಾಗಿದ್ದು ಬ್ರಿಟಿಷರ ಕಾಲದಲ್ಲಿ. ಅಂದರೆ, ದೇಶದ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಹಲವು ಮೂಲಭೂತ ಸ್ವಾತಂತ್ರ್ಯಗಳನ್ನು ನೀಡಿದ ಸಂವಿಧಾನ ರಚನೆಗೂ ಮೊದಲೇ ಜಾರಿಯಾದ ಕಾನೂನು ಇದು. ಬದಲಾಗಿರುವ ಕಾಲಘಟ್ಟದಲ್ಲಿ ಮಾನಹಾನಿಯ ಕೃತ್ಯವನ್ನು ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವುದು ಸರಿಯಲ್ಲ, ಹಾಗೆ ಪರಿಗಣಿಸುವುದು ಸಂವಿಧಾನದ 19(ಎ) ಕಲಂ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂಬ ವಾದಗಳನ್ನು ಸುಪ್ರೀಂ ಕೋರ್ಟ್‌ ಒಪ್ಪಿಲ್ಲ. ಘನತೆಯ ಬದುಕು ಸಾಗಿಸುವುದು ನಾಗರಿಕನ ಹಕ್ಕು ಎಂದು ಸಂವಿಧಾನದ 21ನೇ ಕಲಂ ಹೇಳುತ್ತದೆ. ವ್ಯಕ್ತಿಯ ಘನತೆಗೆ ಚ್ಯುತಿ ತರುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಲಾಗದು. ಮಾನಹಾನಿ ಕೃತ್ಯವನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನ ವಿಧಿಸಿರುವ ನಿರ್ಬಂಧದ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ವ್ಯಕ್ತಿತ್ವಕ್ಕೆ ಚ್ಯುತಿ ತರುವುದು ಅಪರಾಧ ಎಂಬುದರಲ್ಲಿ ಎರಡು ಮಾತಿಲ್ಲ. ಮಾನಹಾನಿಯು ಯಾವ ಸ್ವರೂಪದ ಅಪರಾಧ ಎಂಬುದೇ ಮುಕ್ತ ಅಭಿವ್ಯಕ್ತಿಯ ಪರ ಇರುವ ಸಮಾಜ ಕೇಳುತ್ತಿರುವ ಪ್ರಶ್ನೆ. ಮಾನಹಾನಿಯನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಿದಾಗ, ಅಪರಾಧ ಎಸಗಿದವರಿಗೆ ಜೈಲು ಶಿಕ್ಷೆ ಕಾದಿರುತ್ತದೆ. ಆದರೆ, ಮಾನಹಾನಿಯನ್ನು ಸಿವಿಲ್‌ ಸ್ವರೂಪದ ಅಪರಾಧ ಮಾತ್ರವಾಗಿ ಪರಿಗಣಿಸಿದಾಗ ಜೈಲು ಶಿಕ್ಷೆ ಅನುಭವಿಸುವ ಪ್ರಮೇಯ ಎದುರಾಗದು. ಮಾನಹಾನಿಗೆ ಒಳಗಾದ ವ್ಯಕ್ತಿಗೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಪಡೆಯುವ ಆಯ್ಕೆ ಇದ್ದೇ ಇರುತ್ತದೆ. ಮಾನಹಾನಿಯನ್ನು ಸಿವಿಲ್‌ ಅಪರಾಧವನ್ನಾಗಿ ಮಾತ್ರ ಪರಿಗಣಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಯುವ ನಿಟ್ಟಿನಲ್ಲಿ ಆಗಬೇಕಿರುವ ಮಹತ್ವದ ಕಾನೂನು ಬದಲಾವಣೆ. ಮಾನಹಾನಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದನ್ನು ಮುಂದುವರಿಸುವುದರಿಂದ ಹೆಚ್ಚಿನ ಲಾಭವಾಗುವುದು ರಾಜಕಾರಣಿಗಳಿಗೆ ಹಾಗೂ ಅಧಿಕಾರಶಾಹಿಗೆ. ತಮಿಳುನಾಡಿನ ಜಯಲಲಿತಾ ನೇತೃತ್ವದ ಸರ್ಕಾರವು ವಿರೋಧಿ ರಾಜಕಾರಣಿಗಳು ಹಾಗೂ ಮಾಧ್ಯಮಗಳ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗಳ ಸಂಖ್ಯೆ ಗಮನಿಸಿದರೆ ಇದು ಅರಿವಾಗುತ್ತದೆ. ಮಾನನಷ್ಟ ಮೊಕದ್ದಮೆಗಳನ್ನು ಹಲವು ಸಂದರ್ಭಗಳಲ್ಲಿ ವಿನಾಕಾರಣ ಎದುರಿಸುವ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವು ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಮೊಟಕಾಗುವ ಸಾಧ್ಯತೆ ಇದೆ. ಅಲ್ಲದೆ, ನವ ಮಾಧ್ಯಮಗಳನ್ನು ಬಳಸಿಕೊಂಡು ಅಭಿವ್ಯಕ್ತಿಗೆ ಹೊಸ ದಾರಿ ಕಂಡುಕೊಂಡಿರುವ ಯುವ ಸಮೂಹದ ಮೂಲಭೂತ ಸ್ವಾತಂತ್ರ್ಯ ಸಂಕುಚಿತವಾಗುವ ಅಪಾಯವೂ ಇದೆ. ತ ಪ್ಪಿನ ಪ್ರಮಾಣಕ್ಕೆ ಸಮಾನವಾದ ಶಿಕ್ಷೆಯನ್ನು ವಿಧಿಸಬೇಕು ಎನ್ನುವುದು ನ್ಯಾಯಶಾಸ್ತ್ರ ಹೇಳುವ ಮಾತು. ಮಾನಹಾನಿಗೆ ಜೈಲುಶಿಕ್ಷೆ ವಿಧಿಸುವುದು ‘ಮಾಡಿದ ತಪ್ಪಿಗಿಂತ ಹೆಚ್ಚಿನ ಪ್ರಮಾಣದ ಸಜೆ ವಿಧಿಸುವಿಕೆ’ ಎಂಬ ಭಾವನೆ ಜಗತ್ತಿನಾದ್ಯಂತ ಬೆಳೆಯುತ್ತಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೇಳಿರುವುದು ಇಲ್ಲಿ ಸ್ಮರಣೀಯ. ಕಾಲ ಈಗಲೂ ಮಿಂಚಿಲ್ಲ. ಐಪಿಸಿಯ 499 ಮತ್ತು 500ನೇ ಸೆಕ್ಷನ್‌ಗಳ ಸಾಂವಿಧಾನಿಕ ಮಾನ್ಯತೆ ಬಗ್ಗೆ ಪುನರ್‌ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟನ್ನು ಮತ್ತೆ ಕೋರಲು ಅವಕಾಶ ಇದೆ. ಅಲ್ಲದೆ, ಮಾನಹಾನಿ ಕ್ರಿಮಿನಲ್‌ ಅಪರಾಧವಾಗಬಾರದು ಎಂಬ ಮಾತನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ನಾಯಕರು (ಸ್ವಾಮಿ ಮತ್ತು ರಾಹುಲ್) ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮನಸ್ಸು ಮಾಡಿದರೆ, ಈ ಬಗ್ಗೆ ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ಸಾಧ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸೆಕ್ಷನ್ 499 ಮತ್ತು 500ನ್ನು ರದ್ದು ಮಾಡುವ ಪರಮಾಧಿಕಾರವೂ ಸಂಸತ್ತಿಗೆ ಖಂಡಿತ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.