ಕಡಿಮೆಯಾದ ತೇರ್ಗಡೆ ಪ್ರಮಾಣ: ಕ್ರಮ ಕೈಗೊಳ್ಳಿ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಎಸ್ಸೆಸ್ಸೆಲ್ಸಿ ತೇರ್ಗಡೆ ಪ್ರಮಾಣದಲ್ಲಿ ನಾವು ಹಿಂದಿದ್ದೇವೆ ಎಂಬುದು ಗಂಭೀರವಾದ ಸಂಗತಿ. ಪ್ರತಿವರ್ಷ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಎಂಬಂತಹ ಮಾಮೂಲು ಸಂಗತಿಗಳಲ್ಲದೆ ಕೆಲವು ಹೊಸ ಸಂಗತಿಗಳೂ ಈ ಬಾರಿಯ ಫಲಿತಾಂಶದಲ್ಲಿ ವ್ಯಕ್ತವಾಗಿವೆ. ಫಲಿತಾಂಶದಲ್ಲಿ ರಾಜ್ಯದ ಎಸ್ಸೆಸ್ಸೆಲ್ಸಿ ಇತಿಹಾಸದಲ್ಲಿ ಇದೇ ಮೊದಲ ಸಲ ಭದ್ರಾವತಿಯಂಥ ಸಾಧಾರಣ ಊರಿನಲ್ಲಿ ವ್ಯಾಸಂಗ ಮಾಡಿದ ಬಿ.ಎಸ್‌. ರಂಜನ್‌ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಈ ಬಾಲಕನ ಈ ಅಪೂರ್ವ ಸಾಧನೆ ನಿಜಕ್ಕೂ ಅಭಿನಂದನೀಯ. ಆದರೆ ಯುಪಿಎಸ್‌ಸಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ವಿಜೇತೆಗೆ ಸಿಕ್ಕ ಅಂಕ ಶೇ 52.49 ಮಾತ್ರ. ಹೀಗಿರುವಾಗ, ‘ಎಸ್ಸೆಸ್ಸೆಲ್ಸಿಯಲ್ಲಿ ನೂರಕ್ಕೆ ನೂರು ಅಂಕ ಕೊಡುವುದು ಔದಾರ್ಯದ ಪರಮಾವಧಿಯಲ್ಲವೇ; ಪರೀಕ್ಷೆ ಇಷ್ಟೊಂದು ಸುಲಭವೇ’ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ. ಓದಿನಲ್ಲಿ ಸಾಧನೆ ಮಾಡಲು ಬಡತನವಾಗಲಿ, ಪೋಷಕರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯಾಗಲಿ ಅಡ್ಡಿ ಬರುವುದಿಲ್ಲ ಎನ್ನುವುದನ್ನು ಹೆಚ್ಚು ಅಂಕ ಗಳಿಸಿದ ಅನೇಕ ಮಕ್ಕಳು ತೋರಿಸಿಕೊಟ್ಟಿರುವುದೂ ಹೃದಯಸ್ಪರ್ಶಿ ಸಂಗತಿ. ಅತಿ ಹೆಚ್ಚು ಅಂಕ ಪಡೆದವರಲ್ಲಿ ಹೆಚ್ಚಿನವರು ಯಾವುದೇ ಮನೆಪಾಠಕ್ಕೆ ಹೋದವರಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಖುಷಿಯಿಂದ ತೊಡಗಿಸಿಕೊಂಡವರು. ಈ ಮೂಲಕ, ಒಳ್ಳೆಯ ಅಂಕ ಬರಬೇಕಾದರೆ ಮನೆಪಾಠಕ್ಕೆ ಅಥವಾ ಟ್ಯೂಷನ್‌ಗೆ ಹೋಗಲೇಬೇಕು ಎಂಬ ಮಿಥ್ಯೆಯನ್ನು ಈ ಮಕ್ಕಳು ಒಡೆದು ಹಾಕಿದ್ದಾರೆ ಎಂಬುದು ಸಕಾರಾತ್ಮಕವಾದದ್ದು. ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ತೇರ್ಗಡೆ ಪ್ರಮಾಣದಲ್ಲಿ ಶೇ 2.5ರಷ್ಟು ಇಳಿಕೆಯಾಗಿದೆ. ಪರೀಕ್ಷಾ ಅಕ್ರಮ ತಡೆಗೆ ತೆಗೆದುಕೊಂಡ ಕಟ್ಟುನಿಟ್ಟು ಕ್ರಮ ಇದಕ್ಕೆ ಕಾರಣ ಎಂದು ಸಚಿವರು ಹೇಳಿಕೊಂಡಿದ್ದಾರೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ತೇರ್ಗಡೆ ಪ್ರಮಾಣದಲ್ಲಿ ನಾವು ತುಂಬ ಹಿಂದಿದ್ದೇವೆ ಎಂಬುದು ಗಂಭೀರವಾದ ಸಂಗತಿ. ಸರಿಯಾದ ಬೋಧನಾ ವ್ಯವಸ್ಥೆ ಅಳವಡಿಕೆ ಮತ್ತು ಶಿಕ್ಷಕರ ಕೊರತೆ ನಿವಾರಣೆಗೆ ಮುತುವರ್ಜಿ ವಹಿಸಬೇಕು ಎನ್ನುವುದನ್ನು ಇದು ನೆನಪಿಸುತ್ತದೆ. 2012ರಿಂದ ಶಿಕ್ಷಕರ ನೇಮಕಾತಿ ಆಗಿಲ್ಲ ಎಂಬುದು ಅಕ್ಷಮ್ಯ. ರಾಜ್ಯದ 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು ಯಾರೊಬ್ಬರೂ ಪಾಸಾಗಿಲ್ಲ. ಇದರಲ್ಲಿ 3 ಸರ್ಕಾರಿ ಶಾಲೆ, 6 ಅನುದಾನಿತ ಹಾಗೂ 43 ಅನುದಾನರಹಿತ ಶಾಲೆಗಳಿವೆ. ಶೂನ್ಯ ಫಲಿತಾಂಶ ಪಡೆದಿರುವ ಇಷ್ಟೊಂದು ಅನುದಾನರಹಿತ ಶಾಲೆಗಳ ಬಗ್ಗೆ ಸರ್ಕಾರ ಏನು ಮಾಡುತ್ತಿದೆ? ಎಸ್ಸೆಸ್ಸೆಲ್ಸಿ, ಬದುಕಿಗೆ ತಿರುವು ಕೊಡುವ ಕಾಲಘಟ್ಟ. ಇಂತಹ ಶಾಲೆಗಳಿಂದಾಗಿ ಮಕ್ಕಳ ಭವಿಷ್ಯ ಹಾಳಾಗಬಾರದು ಎಂಬ ಬಗ್ಗೆ ಸರ್ಕಾರ ನಿಗಾವಹಿಸಬೇಕು. ಈ ಸಲ ಬೆಂಗಳೂರು ಗ್ರಾಮಾಂತರ ಜಿಲ್ಲೆ, ತೇರ್ಗಡೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೂದಲೆಳೆಯ ಅಂತರದಲ್ಲಿ ಅದು ಉಡುಪಿಯನ್ನು ಹಿಂದಿಕ್ಕಿದೆ. ಅದರ ಈ ಸಾಧನೆಯ ಹಿಂದೆ ಶಿಕ್ಷಣದ ಬಗ್ಗೆ ಒಲವು ಹೊಂದಿರುವ ಸಮೂಹದ ಸಂಘಟಿತ ಪ್ರಯತ್ನವಿದೆ. ಕಳೆದ ವರ್ಷ ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶ ಬಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 33 ಶಾಲೆಗಳನ್ನು ಗುರುತಿಸಿ ಕ್ರಮಗಳನ್ನು ಕೈಗೊಂಡಿದ್ದು ಇಂದಿನ ಸಾಧನೆಗೆ ಕಾರಣವಾಗಿದೆ ಎಂಬುದು ಮುಖ್ಯ. ಅಂತಹ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದು ನಿರಂತರ ಮೇಲ್ವಿಚಾರಣೆ ನಡೆಸಿದ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ. ಇದು ಶೈಕ್ಷಣಿಕವಾಗಿ ತೀರಾ ಹಿಂದೆ ಉಳಿದಿರುವ ಜಿಲ್ಲೆಗಳಿಗೂ ಮಾದರಿಯಾಗಬೇಕು. ಇಂತಹ ಉಪಕ್ರಮವನ್ನು ಸ್ಥಳೀಯ ಅವಶ್ಯಕತೆಗಳಿಗೆ ಅನುಸಾರ ಬದಲಾಯಿಸಿ ಅಳವಡಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.