ಮೊಬೈಲ್‌ ಕರೆ ಕಡಿತ ಗ್ರಾಹಕರ ಹಕ್ಕು ಮೊಟಕು ಕರೆ ಕಡಿತಕ್ಕೆ ಪರ್ಯಾಯವಾಗಿ ಮೊಬೈಲ್ ಗ್ರಾಹಕರಿಗೆ ಪರಿಹಾರ ನೀಡಬೇಕೆಂಬ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಪರಿಹಾರ ಸೂತ್ರವನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಇದರಿಂದ ಕರೆ ಕಡಿತಕ್ಕೆ ದಂಡ ವಿಧಿಸುವ ಪ್ರಸ್ತಾವದಿಂದ ತಮಗೆ ಭಾರಿ ನಷ್ಟ ಉಂಟಾಗಲಿದೆ ಎನ್ನುವ ಸೇವಾ ಸಂಸ್ಥೆಗಳ ಆಕ್ಷೇಪಕ್ಕೆ ಮನ್ನಣೆ ಸಿಕ್ಕಿದಂತಾಗಿದೆ. ಎರಡು ವರ್ಷಗಳ ಈ ವಿವಾದವು ಗ್ರಾಹಕರ ಸೋಲಿನಲ್ಲಿ ಕೊನೆಗೊಂಡಿದೆ. ಟ್ರಾಯ್‌ ನಿರ್ಧಾರವು ಏಕಪಕ್ಷೀಯವಾಗಿರುವುದರ ಜತೆಗೆ, ಮೊಬೈಲ್‌ ಸೇವಾ ಸಂಸ್ಥೆಗಳ ವಹಿವಾಟು ನಡೆಸುವ ಮೂಲಭೂತ ಹಕ್ಕು ಮೊಟಕುಗೊಳಿಸುವ ಅಸಮಂಜಸ ನಿಬಂಧನೆಯಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಮೊಬೈಲ್‌ ಬಳಕೆ ಸಂದರ್ಭದಲ್ಲಿ ಕರೆ ಕಡಿತದ ಸಮಸ್ಯೆ ಇರದಂತೆ ನೋಡಿಕೊಳ್ಳುವುದು ಸೇವಾ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಲೈಸನ್ಸ್‌ ನಿಬಂಧನೆಗಳಲ್ಲಿ ವಿಧಿಸಲಾಗಿರುವ ಸೇವಾ ಗುಣಮಟ್ಟಕ್ಕೆ ಇದು ಹೊರತಾಗಿದೆ ಎನ್ನುವ ಟ್ರಾಯ್ ವಾದಕ್ಕೆ ಕೋರ್ಟ್‌ನಲ್ಲಿ ಮನ್ನಣೆ ಸಿಗದಿರುವುದು ದುರದೃಷ್ಟಕರ. ಮೊಬೈಲ್ ಸೇವಾ ಸಂಸ್ಥೆಗಳ ಸೇವಾ ಗುಣಮಟ್ಟ ಕೊರತೆಯ ವ್ಯಾಧಿಯು ಬರೀ ಕರೆಗಳಿಗಷ್ಟೆ ಸಂಬಂಧಿಸಿಲ್ಲ. 3ಜಿ, 4ಜಿ ಯಂತಹ ದತ್ತಾಂಶ ಸೇವೆಗಳಲ್ಲೂ ಸಂಪರ್ಕ ಸಮಸ್ಯೆ ಇದ್ದೇ ಇದೆ. ಆಕರ್ಷಕ ಜಾಹೀರಾತುಗಳಿಗೆ ಮರುಳಾಗುವ ಗ್ರಾಹಕರು ಆನಂತರ ಸಂಸ್ಥೆಗಳನ್ನು ದೂರುವುದು ಮಾಮೂಲಾಗಿಬಿಟ್ಟಿದೆ. ಪ್ರತಿ ನಿಮಿಷಕ್ಕೆ ಕರೆ ದರ ನಿಗದಿ ಮಾಡಲಾಗುತ್ತದೆ. ಹೀಗಾಗಿ ಆರಂಭದ ಆರೇಳು ಸೆಕಂಡುಗಳಲ್ಲಿಯೇ ಕರೆ ಕಡಿತವಾದರೂ ಇಡೀ ಒಂದು ನಿಮಿಷಕ್ಕೆ ಕರೆ ದರ ವಸೂಲಿ ಮಾಡಲಾಗಿರುತ್ತದೆ. ಕರೆ ಕಡಿತ ಎಂದರೆ ಸಂವಹನ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದರ್ಥವಲ್ಲ. ಇಬ್ಬರ ಮಧ್ಯೆ ಸಂಪರ್ಕ ಇದ್ದರೂ ಧ್ವನಿ ಕೇಳಿಸಿರುವುದಿಲ್ಲ. ಕರೆಯನ್ನು ಗ್ರಾಹಕ ಕಡಿತಗೊಳಿಸುವವರೆಗೆ ಕರೆ ದರದ ಮೀಟರ್‌ ಓಡುತ್ತಲೇ ಇರುತ್ತದೆ. ಇದರಿಂದ ಸೇವಾ ಸಂಸ್ಥೆಗಳು ಭಾರಿ ಲಾಭ ಮಾಡಿಕೊಳ್ಳುತ್ತಿರುವುದು ಸುಳ್ಳಲ್ಲ. ತಾಂತ್ರಿಕ ಕಾರಣಕ್ಕೆ ಶೇ 2ರಷ್ಟು ಕರೆ ಕಡಿತಕ್ಕೆ ಅವಕಾಶ ಇದ್ದರೂ, ವಾಸ್ತವದಲ್ಲಿ ಈ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವುದರಿಂದಲೇ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಪ್ರತಿ ಕರೆ ಕಡಿತಕ್ಕೆ ₹ 1 ರಂತೆ ದಿನವೊಂದರಲ್ಲಿ ಗರಿಷ್ಠ 3 ಕರೆ ಕಡಿತಗಳಿಗೆ ಪರಿಹಾರ ಒದಗಿಸಬೇಕು ಎನ್ನುವುದು ಟ್ರಾಯ್‌ನ ಸಲಹೆಯಾಗಿತ್ತು. ಈ ನಿಬಂಧನೆಯು ಸೇವಾ ಸಂಸ್ಥೆಗಳನ್ನು ಸರಿದಾರಿಗೆ ತರಬಹುದು ಎನ್ನುವ ನಿರೀಕ್ಷೆ ಈಗ ಹುಸಿಯಾಗಿದೆ. ಕರೆ ಕಡಿತಕ್ಕೆ ಗ್ರಾಹಕರಿಗೆ ಪರಿಹಾರ ಒದಗಿಸಬೇಕು ಎನ್ನುವ ಕಾಯ್ದೆಯಲ್ಲಿಯೇ ದೋಷವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಮೊಬೈಲ್‌ ಕರೆ ಕಡಿತ ಸಮಸ್ಯೆಗೆ ಅನೇಕ ಕಾರಣಗಳಿವೆ. ತರಂಗಾಂತರಗಳ ಅಲಭ್ಯತೆ, ಮೊಬೈಲ್‌ ಗೋಪುರಗಳು ಸಾಕಷ್ಟು ಇಲ್ಲದಿರುವುದು, ನಾಗರಿಕರ ದೂರು ಆಧರಿಸಿ ಗೋಪುರ ತೆರವುಗೊಳಿಸಿರುವುದು ಮತ್ತಿತರ ತಾಂತ್ರಿಕ ಸಮಸ್ಯೆಗಳೂ ಇದರಲ್ಲಿ ತಳಕು ಹಾಕಿಕೊಂಡಿವೆ. ಬಳಕೆದಾರರ ಮೊಬೈಲ್‌ಗಳ ಬ್ಯಾಟರಿ ಸಮಸ್ಯೆಯೂ ಇದಕ್ಕೆ ಕಾರಣ ಎನ್ನುವುದು ಸೇವಾ ಸಂಸ್ಥೆಗಳ ವಾದವಾಗಿದೆ. ದೇಶದ ಮೂಲೆ ಮೂಲೆಗೂ ಮೊಬೈಲ್‌ ಸೇವೆ ಒದಗಿಸಿರುವ ಸಂಸ್ಥೆಗಳು ಗುಣಮಟ್ಟದ ಸೇವೆ ಒದಗಿಸಲು ಸಾಕಷ್ಟು ಮುತುವರ್ಜಿ ವಹಿಸುತ್ತಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಹಣ ವೆಚ್ಚ ಮಾಡಲು ಜಿಪುಣತನ ತೋರಿರುವುದೇ ಇದಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತದೆ. ಮೊಬೈಲ್‌ ಸೇವಾ ಸಂಸ್ಥೆಗಳು ಮತ್ತು ಸರ್ಕಾರ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆ ಪರಿಹರಿಸಲು ಕೋರ್ಟ್‌ನ ಸಲಹೆಯಂತೆಯೇ ಸಂಸತ್ತು ಪ್ರತ್ಯೇಕ ಕಾಯ್ದೆ ರಚಿಸಲೂ ಮುಂದಾಗಬೇಕು. ಹೆಚ್ಚು ತರಂಗಾಂತರ ಹಂಚಿಕೆ ಮಾಡಿ, ಮೊಬೈಲ್‌ ಗೋಪುರಗಳ ಸಂಖ್ಯೆ ಹೆಚ್ಚಿಸಬೇಕು. ಹಾಗೆಯೇ ಗೋಪುರಗಳ ಬಗೆಗಿನ ನಾಗರಿಕರ ದೂರುಗಳನ್ನು ಸಮರ್ಪಕವಾಗಿ ಇತ್ಯರ್ಥಪಡಿಸಲೂ ಮುಂದಾಗಬೇಕು. ಹಾಗಾದಾಗ ಮಾತ್ರ ಮೊಬೈಲ್ ಸೇವೆಗಳಿಗಾಗಿ ಗ್ರಾಹಕರು ನೀಡುವ ಹಣಕ್ಕೆ ಮೌಲ್ಯ ದಕ್ಕಿದಂತಾಗುತ್ತದೆ. ಗ್ರಾಹಕರ ಹಿತರಕ್ಷಣೆ ಸಾಧ್ಯವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.