ನೆಲೆ ವಿಸ್ತರಿಸಿಕೊಂಡ ಬಿಜೆಪಿ ಕುಗ್ಗಿದ ಕಾಂಗ್ರೆಸ್ ನೆಲೆ ಬಿಜೆಪಿ ತನ್ನ 36 ವರ್ಷಗಳ ಇತಿಹಾಸದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿಕೊಂಡಿರುವುದು ಈ ಚುನಾವಣೆಗಳ ವಿಶೇಷ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶಗಳನ್ನು ಗಮನಿಸಿದಲ್ಲಿ ಬಿಜೆಪಿ ಹೆಚ್ಚಿನ ಗಳಿಕೆ ಸಾಧಿಸಿರುವುದು ವ್ಯಕ್ತ. ಹಾಗೆಯೇ ಸಶಕ್ತ ಮಹಿಳೆಯರಾದ ಮಮತಾ ಬ್ಯಾನರ್ಜಿ ಹಾಗೂ ಜಯಲಲಿತಾ, ಆಡಳಿತ ವಿರೋಧಿ ಅಲೆಯನ್ನು ಮಣಿಸಿ ಅಧಿಕಾರ ಉಳಿಸಿಕೊಂಡಿದ್ದಾರೆಂಬುದೂ ಸಾಧನೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕ್ರಮವಾಗಿ ಪುದುಚೇರಿ ಹಾಗೂ ಕೇರಳದಲ್ಲಿ ಅಧಿಕಾರ ಗದ್ದುಗೆ ಹಿಡಿಯುತ್ತಿರುವುದರ ಬಗ್ಗೆ ಸಮಾಧಾನಪಟ್ಟುಕೊಳ್ಳಬೇಕಿದೆ ಅಷ್ಟೆ. ಬಿಜೆಪಿ ತನ್ನ 36 ವರ್ಷಗಳ ಇತಿಹಾಸದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿಕೊಂಡಿರುವುದು ಈ ಚುನಾವಣೆಗಳ ವಿಶೇಷ. ಅಸ್ಸಾಂನಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದ ತರುಣ್ ಗೊಗೊಯ್ ಸರ್ಕಾರವನ್ನು ಮಣಿಸಿ ಸರ್ಕಾರ ರಚಿಸಲು ಬಿಜೆಪಿ ಸಜ್ಜಾಗಿದೆ. ಈಶಾನ್ಯ ರಾಜ್ಯಗಳಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಬಿಜೆಪಿಗೆ ಅಸ್ಸಾಂ ಮುಖ್ಯದ್ವಾರವಾಗಲಿದೆ ಎಂಬುದು ಇಲ್ಲಿ ಮುಖ್ಯ. ದೆಹಲಿ ಹಾಗೂ ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಆನುಭವಿಸಿದ ಸೋಲಿನಿಂದ ಪಾಠ ಕಲಿತ ಬಿಜೆಪಿ ತನ್ನ ಕಾರ್ಯತಂತ್ರಗಳಲ್ಲಿ ಮಾಡಿಕೊಂಡ ಮಾರ್ಪಾಟು ಈ ಗೆಲುವಿಗೆ ಕಾರಣ. 2015ರ ಬಿಹಾರ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಕೇಂದ್ರಬಿಂದುವಾಗಿದ್ದರು. ಆದರೆ ಈ ಬಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಲು ಅಸ್ಸಾಮ್ ಗೆ ಪ್ರಧಾನಿ ಹೋಗಿದ್ದು ಮೂರು ಬಾರಿ ಮಾತ್ರ. ಘರ್‌ವಾಪ್ಸಿ, ದನದ ಮಾಂಸದಂತಹ ವಿಚಾರಗಳೂ ಚುನಾವಣಾ ವಿಷಯಗಳಾಗಲಿಲ್ಲ. ಸ್ಥಳೀಯ ನಾಯಕರು, ವಿಚಾರಗಳಿಗೆ ನೀಡಿದ ಗಮನ ಈ ಗೆಲುವಿಗೆ ಸಹಕಾರಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದ ಸರ್ಬಾನಂದ ಸೊನೊವಾಲ್ ಅವರು ಸೊನೊವಾಲ್ ಕಛಾರಿ ಎಂಬ ಸಣ್ಣ ಆದಿವಾಸಿ ಸಮುದಾಯಕ್ಕೆ ಸೇರಿದವರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಸರಿಸಿದ ಮಾದರಿಯನ್ನೇ ಅಸ್ಸಾಂನಲ್ಲೂ ಅನುಸರಿಸಿದ ಬಿಜೆಪಿ, ಸ್ಥಳೀಯವಾಗಿ ಎಜಿಪಿ, ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಹಾಗೂ ಇತರ ಸಣ್ಣ ಗುಂಪುಗಳೊಂದಿಗೆ ಮಾಡಿಕೊಂಡ ಹೊಂದಾಣಿಕೆ ಫಲಿಸಿದೆ. ವಾಸ್ತವವಾಗಿ ಪ್ರಾದೇಶಿಕ ನಾಯಕರುಗಳನ್ನು ಬೆಳೆಸುವ ಪರಂಪರೆ ಬಿಜೆಪಿಯಲ್ಲಿದೆ. ಆದರೆ 2014ರ ಮೋದಿ ಅಲೆಯಲ್ಲಿ ಈ ಅಂಶ ಹಿಂದೆ ಸರಿದಂತಾಗಿತ್ತು. ಪ್ರಾದೇಶಿಕ ನಾಯಕರುಗಳನ್ನು ಕಡೆಗಣಿಸಲಾಗಿತ್ತು. ಈಗ ಯಡಿಯೂರಪ್ಪನವರನ್ನೂ ಪಕ್ಷದ ಮುಖ್ಯ ಸ್ಥಾನಕ್ಕೆ ರಾಜ್ಯದಲ್ಲಿ ವಾಪಸ್ ಕರೆತರಲಾಗಿದೆ ಎಂಬುದನ್ನೂ ಗಮನಿಸಬಹುದು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ 3 ಸ್ಥಾನ ಬಿಜೆಪಿ ಗೆದ್ದುಕೊಂಡಿರುವುದು ಕಡಿಮೆ ಸಾಧನೆಯಲ್ಲ. ಇನ್ನು ಎಡ ಪಕ್ಷಗಳ ಭದ್ರಕೋಟೆಯಾದ ಕೇರಳದಲ್ಲಿ ಬಿಜೆಪಿ ಒಂದು ಸ್ಥಾನ ಗಳಿಸಿ ಖಾತೆ ತೆರೆದಿದೆ ಎಂಬುದೂ ಮುಖ್ಯ. ಕೇರಳದಲ್ಲಿ ಈವರೆಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಎಂದೂ ಗೆಲುವು ಸಾಧಿಸಿರಲಿಲ್ಲ. ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅಧಿಕಾರ ಗದ್ದುಗೆ ಏರಲು ಸಜ್ಜಾಗಿದ್ದರೂ, ಪಶ್ಚಿಮ ಬಂಗಾಳದಲ್ಲಿ ಮೂರನೇ ಸ್ಥಾನಕ್ಕೆ ಇಳಿದಿರುವುದು ಎಡಪಕ್ಷಗಳಿಗೆ ದೊಡ್ಡ ಹೊಡೆತ. ಪಶ್ಚಿಮ ಬಂಗಾಳದ ಗ್ರಾಮೀಣ ಭಾಗಗಳಲ್ಲೂ ಎಡಪಕ್ಷಗಳು ನೆಲೆ ಕಳೆದುಕೊಂಡಿವೆ. ಪಕ್ಷದೊಳಗಿನ ಭಿನ್ನಮತ ಹಾಗೂ ಕಾಂಗ್ರೆಸ್ ಜೊತೆ ಮಾಡಿಕೊಂಡ ಮೈತ್ರಿ ಇಲ್ಲಿ ಕೈಕೊಟ್ಟಿತೆ ಎಂಬುದನ್ನು ಎಡಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾರದಾ ಚಿಟ್ ಫಂಡ್, ಫ್ಲೈ ಓವರ್ ಕುಸಿತ ಇತ್ಯಾದಿ ಯಾವುದೇ ವಿವಾದಗಳೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆಲುವಿಗೆ ತಡೆಯಾಗಿಲ್ಲ. ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಟಿಎಂಸಿ 184 ಸ್ಥಾನಗಳನ್ನು ಗಳಿಸಿತ್ತು. ಮೂರು ದಶಕಗಳ ಕಾಲದ ಎಡರಂಗದ ಆಡಳಿತ ಕಿತ್ತೊಗೆದಿತ್ತು. ಆದರೆ ಈ ಬಾರಿ ಏಕಾಂಗಿಯಾಗಿಯೇ ಸ್ಪರ್ಧಿಸಿದ ಟಿಎಂಸಿ ಜಯಭೇರಿ ಬಾರಿಸಿರುವುದು ಅಪೂರ್ವವಾದದ್ದು. ‘ಮಾ, ಮಾಟಿ, ಮಾನುಷ್’( ಮಾತೆ, ಮಾತೃಭೂಮಿ, ಜನ) ಮಂತ್ರ ಜಪಿಸುವ ಮಮತಾ ಬ್ಯಾನರ್ಜಿ ಅವರ ಪ್ರಚಾರಾಂದೋಲನದ ಶಕ್ತಿ ಅಪಾರವಾದದ್ದು. ಮಮತಾ ಅವರು ಸುಮಾರು 200 ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿದ್ದಾರೆ. ಅಸ್ಸಾಂನಲ್ಲಷ್ಟೇ ಅಲ್ಲ ಕೇರಳದಲ್ಲೂ ಆಡಳಿತಾರೂಢ ಕಾಂಗ್ರೆಸ್ ನೆಲ ಕಚ್ಚಿದೆ. ಸೋಲಾರ್ ಹಗರಣ ಸೇರಿದಂತೆ ಭ್ರಷ್ಟಾಚಾರ ಆರೋಪಗಳು ಕಾಂಗ್ರೆಸ್ ಪ್ರತಿಷ್ಠೆಯನ್ನು ಕುಗ್ಗಿಸಿತ್ತು. ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ಅವರ ಭಾಗಶಃ ಸಾರಾಯಿ ನಿಷೇಧ ಕ್ರಮವೂ ಕಾಂಗ್ರೆಸ್ ನೆರವಿಗೆ ಬರದಿದ್ದುದು ಶೋಚನೀಯ. 2014ರ ಮೇ ನಂತರ 6 ರಾಜ್ಯಗಳಲ್ಲಿ ಕಾಂಗ್ರೆಸ್ ತಿರಸ್ಕೃತವಾಗಿದೆ ಎಂಬುದನ್ನು 131 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ಗಂಭೀರವಾಗಿಯೇ ಪರಿಗಣಿಸಬೇಕು. ಈಗ ಏಳು ರಾಜ್ಯಗಳಿಗಷ್ಟೇ ಕಾಂಗ್ರೆಸ್ ಸೀಮಿತ. ಅದರಲ್ಲಿ ಕರ್ನಾಟಕ ಮಾತ್ರವೇ ದೊಡ್ಡ ರಾಜ್ಯ. ಇನ್ನುಳಿದಂತೆ ಹಿಮಾಚಲಪ್ರದೇಶ, ಉತ್ತರಾಖಂಡ, ಮಣಿಪುರ, ಮೇಘಾಲಯ, ಮಿಜೋರಾಂನಲ್ಲಷ್ಟೇ ಅಧಿಕಾರ ಹೊಂದಿದೆ. ಈಗ ಡಿಎಂಕೆ ಜೊತೆ ಪುದುಚೇರಿಯಲ್ಲಿ ಅಧಿಕಾರಕ್ಕೇರಲಿದೆ. ಬಿಹಾರದಲ್ಲಿ ಮೈತ್ರಿಕೂಟದ ಭಾಗವಾಗಿದೆ ಅಷ್ಟೆ. ತಮಿಳುನಾಡಿನಲ್ಲಿ ಸಮೀಕ್ಷಾ ವರದಿಗಳ ಭವಿಷ್ಯವನ್ನು ಹಿಂದಿಕ್ಕಿ ಜಯಲಲಿತಾ ಮತ್ತೆ ಅಧಿಕಾರ ಗದ್ದುಗೆ ಏರಲಿದ್ದಾರೆ ಎಂಬುದು ವಿಶೇಷ. ಹಲವು ಪಕ್ಷಗಳ ತೃತೀಯ ರಂಗದ ನೇತೃತ್ವ ವಹಿಸಿದ್ದ ಡಿಎಂಡಿಕೆಯ ಕ್ಯಾಪ್ಟನ್ ವಿಜಯಕಾಂತ್ ಹಾಗೂ ಪಿಎಂಕೆಯ ಅನ್ಬುಮಣಿ ರಾಮದಾಸ್ ರಾಜ್ಯದಲ್ಲಿ ಯಾವುದೇ ಫ್ರಭಾವ ಬೀರಿಲ್ಲ. ಹಾಗೆಯೇ ಡಿಎಂಕೆಗೂ ಕಾಂಗ್ರೆಸ್ ಮೈತ್ರಿಯಿಂದ ಏನೂ ನೆರವಾಗಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.