ಹಕ್ಕಿಜ್ವರದ ಎಚ್ಚರಿಕೆ ಗಂಟೆ ನಿರ್ಲಕ್ಷ್ಯ ಬೇಡ ಬೀದರ್‌ ಜಿಲ್ಲೆಯ ಕೋಳಿ ಸಾಕಾಣಿಕೆ ಕೇಂದ್ರದ ಕೋಳಿಗಳ ಸಾಮೂಹಿಕ ಸಾವಿಗೆ ಹಕ್ಕಿಜ್ವರ (ಎಚ್‌5ಎನ್‌1) ಕಾರಣ ಎನ್ನುವುದು ದೃಢಪಟ್ಟಿರುವುದು ಆತಂಕ ಮೂಡಿಸುವ ವಿದ್ಯಮಾನವಾಗಿದೆ. 2012ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದ ಈ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿದೆ. ರೋಗ ಹರಡಿರುವುದನ್ನು ತಿಳಿದುಕೊಳ್ಳಲು 20 ದಿನಗಳು ಬೇಕಾದವು ಎನ್ನುವುದೂ ಕಳವಳಕಾರಿ ಸಂಗತಿ. ಜಿಲ್ಲಾ ಆಡಳಿತ ಯಂತ್ರ ಮತ್ತು ರಾಜ್ಯ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಗ್ಗೆ ತಳೆದ ನಿರ್ಲಕ್ಷ್ಯಕ್ಕೂ ಇದು ಸಾಕ್ಷಿಯಾಗಿದೆ. ಬೀದರ್‌ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಮೆಳಕೇರಾ ಗ್ರಾಮದ ಫಾರಂನಲ್ಲಿ ಏಪ್ರಿಲ್‌ 17ರಂದು ಒಂದೇ ದಿನ 8 ಸಾವಿರ ಕೋಳಿಗಳು ಸತ್ತ ಘಟನೆ ನಡೆದು ಮೂರು ವಾರಗಳ ನಂತರ ಇದು ‘ಹಕ್ಕಿ ಜ್ವರ’ ಎಂದು ಗೊತ್ತಾಗಿರುವುದನ್ನು ಹಗುರವಾಗಿ ಪರಿಗಣಿಸಲಿಕ್ಕಾಗದು. ಕೋಳಿಗಳು ಪ್ರತಿ ದಿನ ನೂರು – ಸಾವಿರದ ಸಂಖ್ಯೆಯಲ್ಲಿ ಜ್ವರಕ್ಕೆ ಬಲಿಯಾಗುವುದನ್ನು ನೋಡಿಯೂ ಬಿಸಿಲ ಧಗೆಯಿಂದ ಹೀಗೆ ಆಗಿರಬಹುದು ಎಂದು ಭಾವಿಸಿರುವುದಾಗಿ ಫಾರಂ ಮಾಲೀಕ ನೀಡಿದ ಹೇಳಿಕೆ ಬಾಲಿಶವಾಗಿದೆ. ಈಗ ಈ ಕೋಳಿ ಸಾಕಾಣಿಕೆ ಕೇಂದ್ರದಲ್ಲಿನ 1.5 ಲಕ್ಷ ಕೋಳಿಗಳೂ ಸೇರಿದಂತೆ ಸುತ್ತಮುತ್ತಲಿನ ಫಾಸಲೆಯಲ್ಲಿನ ಇತರೆ ಕೋಳಿಗಳನ್ನು ನಾಶಪಡಿಸಲು ಆದೇಶಿಸಿರುವುದು ಹಕ್ಕಿಜ್ವರದ ತೀವ್ರತೆಗೆ ನಿದರ್ಶನವಾಗಿದೆ. ಕಾಯಿಲೆ ಇತರೆಡೆ ಹರಡದಂತೆ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಹಕ್ಕಿ ಜ್ವರ ಇಂದು ಜಾಗತಿಕವಾಗಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಕ್ರಮ ಕೈಗೊಳ್ಳಲು ನಿಶ್ಚಿತವಾಗಿ ಏನು ಕಾರಣ ಎಂಬುದು ಪತ್ತೆಯಾಗಬೇಕು. ಕೋಳಿಗಳ ಸಾವಿನ ನಂತರ ಅವುಗಳ ಮಾದರಿಯನ್ನು ಭೋಪಾಲ್‌ನಲ್ಲಿನ ಪ್ರಯೋಗಾಲಯಕ್ಕೆ ಕಳಿಸಿ ಹಕ್ಕಿಜ್ವರ ಹರಡಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಇಷ್ಟು ದೀರ್ಘ ಅವಧಿ ಬೇಕೇ ಎಂಬುದೂ ಪ್ರಶ್ನೆ. ಈ ಕಾಯಿಲೆಯನ್ನು ಕರಾರುವಾಕ್ಕಾಗಿ ಖಚಿತಪಡಿಸಿಕೊಳ್ಳಲು ರಾಜ್ಯದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಇಲ್ಲದಿರುವುದು ಗಂಭೀರ ಲೋಪವೇ ಸರಿ. ಆರಂಭದಲ್ಲಿ 2000ದ ದಶಕದಲ್ಲಿ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕಂಡುಬಂದಿದ್ದ ಹಕ್ಕಿಜ್ವರ ನಂತರ ದಕ್ಷಿಣ ರಾಜ್ಯಗಳಿಗೂ ವ್ಯಾಪಿಸಿತು. 2012ರ ಅಕ್ಟೋಬರ್‌ನಲ್ಲಿ ಬೆಂಗಳೂರು ಹೊರವಲಯದ ಹೆಸರಘಟ್ಟದಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು. ಹೆಸರಘಟ್ಟದ ರಾಷ್ಟ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಲ್ಲಿ (ಸಿಪಿಡಿಒ) ಸಾವಿರಾರು ಕೋಳಿಗಳನ್ನು ಸಾಯಿಸಿ ಹೂಳಲಾಗಿತ್ತು. ಹಕ್ಕಿಜ್ವರದ ಕಾರಣಕ್ಕೆ ತಿಂಗಳವರೆಗೆ ರಾಜ್ಯದ ಕುಕ್ಕುಟೋದ್ಯಮದ ವಹಿವಾಟಿಗೆ ಭಾರಿ ಧಕ್ಕೆ ಒದಗಿತ್ತು. ರಾಜ್ಯದಲ್ಲಿ ಜನರು ಮೊಟ್ಟೆ, ಕೋಳಿಗಳ ಸೇವನೆಯನ್ನೇ ನಿಲ್ಲಿಸಿದ್ದರು. ಇದರಿಂದಾಗಿ ನೂರಾರು ಕೋಟಿಗಳ ವಹಿವಾಟು ಸ್ಥಗಿತಗೊಂಡಿತ್ತು. ಸಾವಿರಾರು ಜನರ ಜೀವನೋಪಾಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿತ್ತು. ಈಗ ಮತ್ತೊಮ್ಮೆ ಹಕ್ಕಿ ಜ್ವರ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ದೂರದ ಬೀದರ್‌ನಲ್ಲಿ ಕಂಡು ಬಂದಿರುವ ಈ ಹಕ್ಕಿಜ್ವರ ಮಹಾರಾಷ್ಟ್ರದಿಂದ ಬಂದಿರಬಹುದು ಎಂದು ರಾಜ್ಯದ ಕುಕ್ಕುಟೋದ್ಯಮದ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಪ್ರತಿ ದಿನ ₹ 7 ಕೋಟಿ ಮೊತ್ತದ 8 ಲಕ್ಷ ಕೋಳಿಗಳು ಮತ್ತು ₹ 6 ಕೋಟಿ ಮೊತ್ತದ 1.50 ಕೋಟಿ ಮೊಟ್ಟೆಗಳ ಮಾರಾಟ ವಹಿವಾಟು ನಡೆಯುತ್ತಿದೆ. ಒಂದು ವೇಳೆ ಹಕ್ಕಿಜ್ವರವು ರಾಜ್ಯದ ಇತರೆಡೆಗೆ ಹಬ್ಬಿದರೆ ಇಷ್ಟು ದೊಡ್ಡ ಮೊತ್ತದ ವಹಿವಾಟಿಗೆ ಖಂಡಿತವಾಗಿಯೂ ಧಕ್ಕೆ ಒದಗಲಿದೆ. ಮೆಳಕೇರಾ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋಳಿಗಳನ್ನು ಸಾಯಿಸಿ ರೋಗವು ಇತರೆಡೆ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ. ಸರ್ಕಾರ ಈ ವಿಷಯದಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ. ನಮ್ಮಲ್ಲಿ ಕೋಳಿ ಮಾಂಸವನ್ನು ಗರಿಷ್ಠ ಉಷ್ಣತೆಯಲ್ಲಿ ಬೇಯಿಸಿ ಸೇವಿಸುವುದರಿಂದ ಹಕ್ಕಿಜ್ವರವು ಮಾನವನಿಗೆ ಬರಲಾರದು ಎನ್ನುವುದು ಸಾಬೀತಾಗಿದೆ. ಇದು ಜನರಲ್ಲಿ ಮನೆ ಮಾಡುವ ಆತಂಕವನ್ನು ದೂರ ಮಾಡಿದರೂ, ಕಾಯಿಲೆ ಪಸರಿಸದಂತೆ ನೋಡಿಕೊಳ್ಳುವುದೇ ಪಶುಸಂಗೋಪನಾ ಇಲಾಖೆಯ ಆದ್ಯ ಕರ್ತವ್ಯವಾಗಬೇಕಾಗಿದೆ. ಆರಂಭಿಕ ಹಂತದಲ್ಲಿಯೇ ಕಾಯಿಲೆ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಕೋಳಿ ಸಾಕಾಣಿಕೆ ಕೇಂದ್ರಗಳ ಮಾಲೀಕರೂ ಸೇರಿದಂತೆ ಕುಕ್ಕುಟೋದ್ಯಮದ ಎಲ್ಲ ಭಾಗಿದಾರರು ಸಾಮಾಜಿಕ ಪ್ರಜ್ಞೆ ಮೆರೆಯಬೇಕು. ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿ ಈ ವಿಚಾರವನ್ನು ಪರಿಗಣಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.