ಜಂಗಲ್‌ ರಾಜ್‌ ಕಳಂಕ ಮತ್ತೆ ಅಂಟಿಕೊಳ್ಳದಿರಲಿ ಬಿಹಾರದಲ್ಲಿ ಮತ್ತೆ ಗೂಂಡಾಗಿರಿ ತಲೆಯೆತ್ತುವ ಸೂಚನೆಗಳು ಕಾಣುತ್ತಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಜತೆಯಾದರೆ ಪುನಃ ಗೂಂಡಾ ರಾಜ್ಯ ತಲೆ ಎತ್ತಬಹುದೆಂಬ ಆತಂಕ ಕಳೆದ ವರ್ಷ ವಿಧಾನಸಭೆ ಚುನಾವಣೆ ಸಮಯದಲ್ಲಿ ವ್ಯಕ್ತವಾಗಿತ್ತು. ಜೆಡಿಯು ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ನಡೆದ ಘಟನೆಗಳಿಂದ ಈ ಕಳವಳ ನಿಜವಾಗುತ್ತಿದೆಯೇ ಎಂಬ ಸಂಶಯ ಬರುತ್ತದೆ. ಉತ್ತಮ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರ ಹಿಡಿದ ನಿತೀಶ್‌ ಕುಮಾರ್‌, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ, ಕಾನೂನು–ಸುವ್ಯವಸ್ಥೆ ಕಾಪಾಡಲು ಅಸಮರ್ಥರಾಗಿದ್ದಾರೆಯೇ ಎಂಬ ಶಂಕೆ ಹುಟ್ಟಿದೆ. ಅವರದೇ ಪಕ್ಷದ ವಿಧಾನ ಪರಿಷತ್‌ ಸದಸ್ಯೆ ಮನೋರಮಾದೇವಿ ಅವರ ಪುತ್ರ ರಾಕಿಕುಮಾರ್‌, 19 ವರ್ಷದ ಅಮಾಯಕ ವಿದ್ಯಾರ್ಥಿ ಆದಿತ್ಯಕುಮಾರ್‌ ಸಚ್‌ದೇವ್‌ ಅವರನ್ನು ಕೊಲೆ ಮಾಡಿದ ಆರೋಪಕ್ಕೊಳಗಾಗಿದ್ದಾರೆ. ಆರೋಪಿ ತಂದೆ ಮತ್ತು ಬೆಂಗಾವಲು ಸಿಬ್ಬಂದಿ, ಘಟನೆ ಸ್ಥಳದಲ್ಲಿ ಹಾಜರಿದ್ದರು ಎಂದೂ ಹೇಳಲಾಗಿದೆ. ಸಚ್‌ದೇವ್‌ ತನ್ನ ಕಾರನ್ನು ಹಿಂದಿಕ್ಕಿದ ಕ್ಷುಲ್ಲಕ ಕಾರಣಕ್ಕೆ ರಾಕಿಕುಮಾರ್ ಈ ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದೆ. ರಾಜ್ಯದಾದ್ಯಂತ ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆಡಳಿತ ಮೈತ್ರಿಕೂಟದ ಮುಖಂಡರಿಗೆ ಅಧಿಕಾರದ ಅಮಲು ನೆತ್ತಿಗೇರಿದೆ ಎಂಬುದಕ್ಕೆ ಸಚ್‌ದೇವ್‌ ಹತ್ಯೆ ಪ್ರಕರಣ ಜೀವಂತ ಉದಾಹರಣೆ. ರಾಜಕಾರಣಿಗಳು ಮತ್ತು ಅವರ ಸಂಬಂಧಿಕರು ಬಂದ ತಕ್ಷಣ ಉಳಿದವರು ದಾರಿ ಬಿಟ್ಟು ಪಕ್ಕಕ್ಕೆ ಸರಿಯಬೇಕು ಎನ್ನುವ ವಿಐಪಿ ಸಂಸ್ಕೃತಿ ಪ್ರಜಾಪ್ರಭುತ್ವಕ್ಕೆ ಹೊಂದುವುದಿಲ್ಲ. ಅದನ್ನು ಒಪ್ಪಲೂ ಸಾಧ್ಯವಿಲ್ಲ. ಸರ್ಕಾರದ ಚುಕ್ಕಾಣಿ ಹಿಡಿದವರು ಮತ್ತು ಪೊಲೀಸರು ಈ ರೀತಿಯ ಮಿತಿಮೀರಿದ ನಡವಳಿಕೆಗಳಿಗೆ ಕಡಿವಾಣ ಹಾಕಬೇಕು. ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಸಂಬಂಧಿಕರು ಕಾನೂನು ಮೀರಿ ನಡೆದುಕೊಂಡಿರುವ ಪ್ರಕರಣ ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಜೆಡಿಯು ಶಾಸಕರೊಬ್ಬರು ರೈಲಿನಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ನಡೆದುಕೊಂಡ ಘಟನೆಯೂ ವ್ಯಾಪಕ ಟೀಕೆಗೊಳಗಾಗಿತ್ತು. ಸಾರ್ವಜನಿಕರಿಂದ ತೀವ್ರ ಒತ್ತಡ ಬಂದ ಬಳಿಕ ನಿತೀಶ್‌ ಎಚ್ಚೆತ್ತುಕೊಂಡು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದರು. ಸಚ್‌ದೇವ್‌ ಪ್ರಕರಣದಲ್ಲೂ ಮುಖ್ಯಮಂತ್ರಿ ವಿಳಂಬ ಧೋರಣೆ ಅನುಸರಿಸಿದ್ದಾರೆ. ಇದರಿಂದ ಜನರ ಅಸಮಾಧಾನ ಸ್ಫೋಟಗೊಂಡಿದೆ. ಘಟನೆ ನಡೆದ ಮೂರು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಬಿಹಾರಕ್ಕೆ ಅಂಟಿಕೊಂಡಿದ್ದ ಜಂಗಲ್‌ ರಾಜ್‌ ಕಳಂಕ ತೊಳೆಯಲು ನಿತೀಶ್‌ ಕುಮಾರ್‌ ಹಿಂದಿನ ಅವಧಿಯಲ್ಲಿ ಶ್ರಮಿಸಿದ್ದರು. ಆ ಕೆಲಸದಲ್ಲಿ ಬಹುತೇಕ ಯಶಸ್ವಿಯಾಗಿದ್ದರು. ಆದರೆ, ಕಳೆದ ಆರು ತಿಂಗಳಲ್ಲಿ ನಡೆದಿರುವ ಕೊಲೆ, ಅಪಹರಣ, ಸುಲಿಗೆ ಮತ್ತಿತರ ಅಪರಾಧ ಪ್ರಕರಣಗಳು ಮುಖ್ಯಮಂತ್ರಿ ವರ್ಚಸ್ಸಿಗೆ ಧಕ್ಕೆ ತಂದಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಮೈತ್ರಿ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ಬರುತ್ತಿವೆ. ಮುಖ್ಯಮಂತ್ರಿ ಇನ್ನಾದರೂ ಕಾನೂನು– ಸುವ್ಯವಸ್ಥೆ ಸುಧಾರಣೆ ಕಡೆ ಗಮನ ಹರಿಸದಿದ್ದಲ್ಲಿ ಮುಂದೆ ಭಾರಿ ಬೆಲೆ ತೆರಬೇಕಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.