ಆನಂದಿಬೆನ್‌ಗೆ ಅನಿವಾರ್ಯವಾದ ರಾಜೀನಾಮೆ ನಿರ್ಧಾರ ಗುಜರಾತ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕೊನೆಗೂ ಖಚಿತವಾಗಿದೆ. ಹಾಲಿ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಅವರು ಅಧಿಕಾರದಿಂದ ಇಳಿಯಲು ಮುಂದಾಗಿದ್ದಾರೆ. ಇದಕ್ಕೆ ಅವರು ಕೊಡುತ್ತಿರುವ ಕಾರಣ, ತಮಗೆ ನವೆಂಬರ್‌ಗೆ 75ನೇ ವರ್ಷ ಪ್ರಾರಂಭವಾಗಲಿದೆ ಎಂಬುದು. ಏಕೆಂದರೆ 75 ವರ್ಷಕ್ಕಿಂತ ಮೇಲಿನವರನ್ನು ಅಧಿಕಾರದ ಹುದ್ದೆಗಳಿಂದ ದೂರ ಇಡುವ ಸಂಪ್ರದಾಯವನ್ನು ಬಿಜೆಪಿ ಎರಡು ವರ್ಷಗಳಿಂದ ಅಳವಡಿಸಿಕೊಂಡಿದೆ. ಆದರೆ ಅಧಿಕಾರ ನಿರ್ಗಮನಕ್ಕೆ ಅವರ ವಯಸ್ಸು ನೆಪ ಮಾತ್ರ. ಅದಕ್ಕಿಂತ ಬಲವಾದ ರಾಜಕೀಯ ಕಾರಣಗಳಿವೆ ಎನ್ನುವುದು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಅಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆಗಳು ನಡೆದಿವೆ. ಆನಂದಿಬೆನ್‌ ಅವರನ್ನು ಬದಲಿಸದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಅದರ ಫಲವೇ ರಾಜೀನಾಮೆ ಘೋಷಣೆ. ಎರಡು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಬಂದಾಗ ತೆರವಾದ ಮುಖ್ಯಮಂತ್ರಿ ಹುದ್ದೆ ಆನಂದಿಬೆನ್‌ ಅವರ ಪಾಲಾಗಿತ್ತು. ಆಗಲೂ ಅನೇಕರು ಆ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಮೋದಿ ಅವರ ಬೆಂಬಲ ಇದ್ದ ಕಾರಣ ಆನಂದಿಬೆನ್‌ಗೆ ವಿರೋಧ ಎದುರಾಗಲಿಲ್ಲ. ಆದರೆ ನಂತರದ ಅವರ ಅಧಿಕಾರದ ಅವಧಿಯಲ್ಲಿ ನಡೆದ ವಿವಿಧ ವಿದ್ಯಮಾನಗಳಿಂದ ಬಿಜೆಪಿ ಸರ್ಕಾರದ ವರ್ಚಸ್ಸಿಗೆ ಬಹಳಷ್ಟು ಧಕ್ಕೆ ಬಂದಿದೆ. ಹಿಂದುಳಿದ ವರ್ಗದಡಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರಬಲ ಪಟೇಲ್‌ ಸಮುದಾಯ ನಡೆಸಿದ ಆಂದೋಲನ, ಅದರ ನೇತಾರ ಹಾರ್ದಿಕ್‌ ಪಟೇಲ್‌ ಬಂಧನ, ಕಳೆದ ಡಿಸೆಂಬರ್‌ನಲ್ಲಿ ನಡೆದ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿಗೆ ಆದ ಹಿನ್ನಡೆ, ಈಚೆಗೆ ಊನಾ ಪಟ್ಟಣದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಮತ್ತು ಅದನ್ನು ಖಂಡಿಸಿ ದಲಿತರಿಂದ ನಡೆದ ರಾಜ್ಯವ್ಯಾಪಿ ಪ್ರತಿಭಟನೆಗಳು ಸರ್ಕಾರದ ಕಾರ್ಯಶೈಲಿಗೆ ಕನ್ನಡಿ ಹಿಡಿದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬೇಕಾಗಿದೆ. ಜೊತೆಗೆ ಆನಂದಿಬೆನ್ ಪುತ್ರ, ಪುತ್ರಿಗೆ ತಳಕು ಹಾಕಿಕೊಂಡಿರುವ ಭೂಹಗರಣಗಳೂ ಸರ್ಕಾರದ ವರ್ಚಸ್ಸಿಗೆ ಕುಂದು ತಂದಿವೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಆನಂದಿಬೆನ್‌ ಅವರಿಗಿದೆಯೇ ಎನ್ನುವ ಅನುಮಾನ ಪಕ್ಷದ ಒಳಗೆ ಮಾತ್ರವಲ್ಲ, ಹೊರಗೂ ಇದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಇಬ್ಬರೂ ಗುಜರಾತ್‌ನವರು. ವಿಧಾನಸಭೆ ಚುನಾವಣೆಯ ಫಲಿತಾಂಶ ಈ ಇಬ್ಬರೂ ಮುಖಂಡರ ಪಾಲಿಗೆ ಅತ್ಯಂತ ಮಹತ್ವದ್ದು. ದೆಹಲಿ, ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಆದ ತೀವ್ರ ಹಿನ್ನಡೆಯನ್ನು ಪೂರ್ಣವಾಗಿ ಸರಿದೂಗಿಸಿಕೊಳ್ಳಲು ಗುಜರಾತ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡ ಇವರ ಮೇಲಿದೆ. ಅಲ್ಲದೆ, ಮಾತೆತ್ತಿದರೆ ‘ಗುಜರಾತ್‌ ಅಭಿವೃದ್ಧಿ ಮಾದರಿ’ ಎಂದು ಬಿಜೆಪಿ ಹೇಳುತ್ತಲೇ ಬಂದಿದೆ. ಆ ಮೂಲಕ ‘ಜನರ ಜೀವನದಲ್ಲಿ ಪವಾಡಸದೃಶ ರೀತಿಯಲ್ಲಿ ಸುಧಾರಣೆಯಾಗಿದೆ’ ಎಂದು ಬಿಂಬಿಸಿದೆ. ಅವುಗಳ ಅಗ್ನಿಪರೀಕ್ಷೆಗೆ ವಿಧಾನಸಭಾ ಚುನಾವಣೆ ವೇದಿಕೆಯಾಗಲಿದೆ. ಈ ಎಲ್ಲ ಕಾರಣಗಳಿಂದ, ಆನಂದಿಬೆನ್‌ ಅವರನ್ನು ಮುಂದುವರಿಸುವುದು ಪಕ್ಷದ ಪಾಲಿಗೆ ದುಬಾರಿಯಾಗಲಿದೆ ಎಂಬ ಲೆಕ್ಕಾಚಾರಗಳೂ ಇದ್ದವು. ಆನಂದಿಬೆನ್‌ ಮತ್ತು ಅಮಿತ್‌ ಷಾ ಅವರ ಮುಸುಕಿನ ಗುದ್ದಾಟ ಕೂಡ ಪಕ್ಷ ಮತ್ತು ಸರ್ಕಾರದ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ. ಷಾ ಬಗ್ಗೆ ತಮಗಿರುವ ಅಸಮಾಧಾನ ತೋರಿಸಿ ಮುಜುಗರ ಉಂಟು ಮಾಡುವುದಕ್ಕಾಗಿಯೇ ಅವರು ರಾಜೀನಾಮೆ ನಿರ್ಧಾರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ಇದು ಗುಜರಾತ್‌ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎಂಬುದರ ದ್ಯೋತಕ. ರಾಜಕೀಯ ಪಕ್ಷಗಳ ಒಳಗೆ ಇವೆಲ್ಲ ಸಹಜ ಎಂದು ನಿರ್ಲಕ್ಷಿಸುವ ಸ್ಥಿತಿಯಲ್ಲಿ ಬಿಜೆಪಿ ಈಗಂತೂ ಇಲ್ಲ. ಹೊಸದಾಗಿ ಯಾರೇ ಮುಖ್ಯಮಂತ್ರಿ ಸ್ಥಾನಕ್ಕೆ ಬಂದರೂ ಅವರ ಮೇಲೆ ಬಹಳಷ್ಟು ಹೊಣೆಗಾರಿಕೆ ಇದೆ. ಒಂದೂವರೆ ದಶಕದಿಂದ ನಿರಂತರವಾಗಿ ಅಧಿಕಾರ ಹಿಡಿದಿರುವುದರಿಂದ ಸ್ವಾಭಾವಿಕವಾಗಿಯೇ ಸ್ವಲ್ಪ ಜಡ್ಡುಗಟ್ಟಿರುವ ಪಕ್ಷಕ್ಕೆ ಅವರು ಉತ್ಸಾಹ ತುಂಬಬೇಕು. ಪಕ್ಷದ ಒಳಗೆ ಭಿನ್ನಮತ ಬೆಳೆಯದಂತೆ ನೋಡಿಕೊಳ್ಳಬೇಕು. ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಬೇಕು. ಚುನಾವಣಾ ವರ್ಷವಾಗಿರುವ ಕಾರಣ ಮೈಯೆಲ್ಲ ಕಣ್ಣಾಗಿರಬೇಕು. ಆದ್ದರಿಂದ ಅಲ್ಲಿನ ಪ್ರತಿಯೊಂದು ಬೆಳವಣಿಗೆಯೂ ಕುತೂಹಲಕಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.