ಜಿಎಸ್‌ಟಿ: ಯುದ್ಧೋಪಾದಿಯಲ್ಲಿ ಪೂರ್ವ ಸಿದ್ಧತೆಯ ಅಗತ್ಯ ನಮ್ಮ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿರುವುದು ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಹೊಸ ತೆರಿಗೆ ವ್ಯವಸ್ಥೆಯು ಸದ್ಯದ ತೆರಿಗೆ ಸ್ವರೂಪವನ್ನೇ ಆಮೂಲಾಗ್ರವಾಗಿ ರೂಪಾಂತರಿಸಲಿದೆ. ದೇಶದ ಅರ್ಥ ವ್ಯವಸ್ಥೆಯ ಗತಿಯನ್ನೇ ಬದಲಿಸುವ ಶಕ್ತಿ ಇದಕ್ಕಿದೆ. 1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣಾ ಕ್ರಮಗಳ ಹಾದಿಯಲ್ಲಿನ ಹೊಸ ಮೈಲಿಗಲ್ಲೂ ಇದಾಗಿದೆ. ವ್ಯಾಪಕ ಸ್ವರೂಪದ ಸಂಕೀರ್ಣಮಯ ಒಕ್ಕೂಟ ವ್ಯವಸ್ಥೆಯಲ್ಲಿನ ದೇಶಿ ಉದ್ಯಮ ವಹಿವಾಟು ಇನ್ನು ಮುಂದೆ ಹೆಚ್ಚು ಪಾರದರ್ಶಕವಾದ ರಾಜಮಾರ್ಗದಲ್ಲಿ ನಡೆಯಲಿದೆ. ಅಬಕಾರಿ ಸುಂಕ, ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಸೇರಿದಂತೆ ಡಜನ್‌ಗೂ ಹೆಚ್ಚು ತೆರಿಗೆಗಳ ಬದಲಿಗೆ, ದೇಶದಾದ್ಯಂತ ಒಂದೇ ತೆರಿಗೆ ವ್ಯವಸ್ಥೆ ಜಾರಿಗೆ ಬರುವುದರಿಂದ ತೆರಿಗೆ ಕುರಿತ ಅಸ್ಪಷ್ಟತೆಗಳೆಲ್ಲ ದೂರವಾಗಲಿವೆ. ಜಿಎಸ್‌ಟಿಯು ದೇಶಿ ಅರ್ಥ ವ್ಯವಸ್ಥೆಯನ್ನು ಸಮಗ್ರವಾಗಿ ಬಲಪಡಿಸಲಿದೆ. ತೆರಿಗೆ ಪಾವತಿಯ ದಕ್ಷತೆ ಹೆಚ್ಚಿಸಿ, ವೆಚ್ಚ ಉಳಿಸಿ, ಉಪಭೋಗ ಹೆಚ್ಚಿಸುವುದರಿಂದ ಉತ್ಪನ್ನಗಳೆಲ್ಲ ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ದೊರೆಯಲಿವೆ. ತಯಾರಕರು, ಮಾರಾಟಗಾರರು ಮತ್ತು ಗ್ರಾಹಕರೂ ಇದರ ಪ್ರಯೋಜನ ಪಡೆಯಲಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ವರಮಾನವೂ ಹೆಚ್ಚಲಿದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಣ ಹಗ್ಗಜಗ್ಗಾಟ ಕೊನೆಗೂ ದೂರವಾಗಿರುವುದು ಸಕಾರಾತ್ಮಕ ಬೆಳವಣಿಗೆ. ಹೊಸ ತೆರಿಗೆ ದರಕ್ಕೆ ನಿರ್ದಿಷ್ಟ ಮಿತಿ ವಿಧಿಸಿ ಅದನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್‌ ಕೈಬಿಟ್ಟಿದ್ದರಿಂದ ಪ್ರಮುಖ ಕಂಟಕ ದೂರವಾಗಿತ್ತು. ರಾಜ್ಯ ಸರ್ಕಾರಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ಒದಗುವ ಭೀತಿ ಕೆಲವರಲ್ಲಿ ಇದೆ. ಸರಕು ತಯಾರಿಸುವ ಪ್ರಮುಖ ರಾಜ್ಯ ತಮಿಳುನಾಡು ಮಾತ್ರ ಈ ನಿಟ್ಟಿನಲ್ಲಿ ತನ್ನ ಆಕ್ಷೇಪ ದಾಖಲಿಸಿದೆ. ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ಒದಗದಂತೆ ದರ ನಿಗದಿಯಲ್ಲಿ ಎಚ್ಚರ ವಹಿಸಬೇಕಾಗಿದೆ. ಇದೇ ಉದ್ದೇಶಕ್ಕೆ ಎಲ್ಲ ರಾಜ್ಯಗಳಿಗೆ ಪ್ರಾತಿನಿಧ್ಯ ಇರುವ ‘ಜಿಎಸ್‌ಟಿ ಮಂಡಳಿ’ ರಚನೆ ಪ್ರಮುಖ ಹೆಜ್ಜೆಯಾಗಿದೆ. ಈ ಮಂಡಳಿಯೇ ತೆರಿಗೆ ದರಗಳನ್ನು ನಿಗದಿ ಮಾಡಲಿರುವುದರಿಂದ ರಾಜ್ಯಗಳ ಹಿತರಕ್ಷಣೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಸದ್ಯದ ತೆರಿಗೆ ವ್ಯವಸ್ಥೆಯು ಜಿಎಸ್‌ಟಿಗೆ ಬದಲಾಗುವುದಕ್ಕೆ ಸಂಸತ್ತು ಇನ್ನೂ ಎರಡು ಮಸೂದೆಗಳನ್ನು ಅಂಗೀಕರಿಸಬೇಕಾಗಿದೆ. ರಾಜ್ಯ ಸರ್ಕಾರಗಳೂ ‘ರಾಜ್ಯ ಜಿಎಸ್‌ಟಿ’ ಕಾಯ್ದೆ ಅಂಗೀಕರಿಸಬೇಕಾಗಿದೆ. ಜಿಎಸ್‌ಟಿ ದರ ನಿಗದಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕರಿಸದೆ, ಈ ಮಸೂದೆಗಳನ್ನು ಕಾಯ್ದೆಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗಲಾರದು. ಹೀಗಾಗಿ ಕೇಂದ್ರ– ರಾಜ್ಯಗಳು ಹೆಚ್ಚು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿ ಹೊಣೆಯೆಲ್ಲ ಈಗ ಕೇಂದ್ರ ಸರ್ಕಾರದ ಮೇಲೆ ಬಿದ್ದಿದೆ. 2017–18ನೇ ಹಣಕಾಸು ವರ್ಷದ ಆರಂಭದಿಂದಲೇ (ಏಪ್ರಿಲ್‌ನಿಂದ) ಜಾರಿಗೆ ತರುವುದು ಕೇಂದ್ರದ ಆಶಯವಾಗಿದೆ. ಕೇಂದ್ರ ಸರ್ಕಾರವು ತನ್ನೆಲ್ಲ ರಾಜಕೀಯ ಇಚ್ಛಾಶಕ್ತಿ ಒಟ್ಟುಗೂಡಿಸಿ ರಚನಾತ್ಮಕವಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ. ಹೊಸ ರಾಷ್ಟ್ರೀಯ ಮಾರಾಟ ತೆರಿಗೆ ಜಾರಿಗೆ ತರುವ ಮುನ್ನ ಸಾಕಷ್ಟು ಪೂರ್ವಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗಿದೆ. ಈ ಉದ್ದೇಶಕ್ಕೆಂದೆ ಸಿದ್ಧಪಡಿಸಿರುವ ಸಾಫ್ಟ್‌ವೇರ್‌ನ ಕಾರ್ಯನಿರ್ವಹಣೆ ಪರೀಕ್ಷಿಸಬೇಕಾಗಿದೆ. ಪೂರ್ವಸಿದ್ಧತೆಗಳಲ್ಲಿ ಗಂಭೀರ ಸ್ವರೂಪದ ಲೋಪಗಳು ಉಂಟಾದರೆ, ಹಾಕಿಕೊಂಡಿರುವ ಗಡುವು ತಲುಪಲು ಸಾಧ್ಯವಾಗಲಾರದು. ಜಿಎಸ್‌ಟಿಯು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿ ದಕ್ಷತೆ ಹೆಚ್ಚಿಸಲಿದ್ದರೂ, ಸೇವಾ ವಲಯದ ಪಾಲಿಗೆ ಕೆಲವು ಸಮಸ್ಯೆಗಳನ್ನು ತಂದೊಡ್ಡಲಿರುವ ಶಂಕೆ ವ್ಯಕ್ತವಾಗಿದೆ. ಹಣದುಬ್ಬರ ಹೆಚ್ಚಳದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇ–ಕಾಮರ್ಸ್‌, ಸಾಫ್ಟ್‌ವೇರ್‌ ಉದ್ಯಮಕ್ಕೆ ಎದುರಾಗಲಿರುವ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ಗಮನ ನೀಡಬೇಕಾಗಿದೆ. ಹೊಸ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡುವ ಅತಿದೊಡ್ಡ ಸವಾಲು ಈಗ ಸರ್ಕಾರದ ಮುಂದಿದೆ. ಮಸೂದೆ ಅಂಗೀಕಾರವು ಹೊಸ ತೆರಿಗೆ ವ್ಯವಸ್ಥೆಯತ್ತ ಮೊದಲ ಹೆಜ್ಜೆ ಮಾತ್ರ. ನಿಜವಾದ ಸವಾಲು ಮುಂದೆ ಇದೆ. ಅದನ್ನೆಲ್ಲ ನಿವಾರಿಸಿಕೊಂಡು ಸರ್ಕಾರ ಈಗ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ, ಜಾಗತಿಕ ಆರ್ಥಿಕತೆಯಲ್ಲಿ ನಾವೂ ಸಮರ್ಥ ಪೈಪೋಟಿ ನೀಡಲು ಸಾಧ್ಯವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.