ಸಾರ್ಕ್ ರಾಷ್ಟ್ರಗಳ ಸಮ್ಮೇಳನ ಸಾಂಕೇತಿಕತೆಗೆ ಸೀಮಿತವಾಗದಿರಲಿ ಈ ವರ್ಷ ನವೆಂಬರ್ ತಿಂಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕೆ ಮುಂಚೆ ಇಸ್ಲಾಮಾಬಾದ್‌ನಲ್ಲಿ ನಡೆದ ಸಚಿವ ಮಟ್ಟದ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ 7ನೇ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದರು. ಈ ಸಮ್ಮೇಳನದ ಸಾರ್ಥಕತೆ ಏನು ಎಂಬುದು ಸ್ಪಷ್ಟವಿಲ್ಲ. ಕಾಶ್ಮೀರದಲ್ಲಿ ಇತ್ತೀಚಿನ ಹಿಂಸಾಚಾರ ಘಟನೆಗಳು ಹಾಗೂ ಬಲೂಚಿಸ್ತಾನದಲ್ಲಿ ಭಾರತೀಯ ಪತ್ತೇದಾರನೆಂದು ಆರೋಪಿಸಲಾದ ವ್ಯಕ್ತಿಯ ಬಂಧನ ಇತ್ಯಾದಿ ಬೆಳವಣಿಗೆಗಳು ಭಾರತ– ಪಾಕಿಸ್ತಾನ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಅಡ್ಡ ಪರಿಣಾಮ ಬೀರಿರುವುದು ಈ ಸಮ್ಮೇಳನದಲ್ಲಿ ಎದ್ದು ಕಾಣಿಸಿತು. ಹೀಗಾಗಿ ಈ ಕಹಿ, ನಡವಳಿಕೆಗಳಲ್ಲೂ ವ್ಯಕ್ತವಾಗಿದೆ. ಎಷ್ಟರಮಟ್ಟಿಗೆ ಎಂದರೆ ಸಮ್ಮೇಳನದಲ್ಲಿ ರಾಜನಾಥ್ ಸಿಂಗ್ ಹಾಗೂ ಪಾಕಿಸ್ತಾನದ ಒಳಾಡಳಿತ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಕೇವಲ ಹಸ್ತಲಾಘವ ಮಾಡಿಕೊಂಡರೇ ಹೊರತು ಯಾವುದೇ ಮಾತು ಆಡಿಲ್ಲ. ಸಾರ್ಕ್ ಸಮ್ಮೇಳನದ ಪ್ರತಿನಿಧಿಗಳು ಹಾಗೂ ಸಚಿವರಿಗಾಗಿ ಖಾನ್ ಅವರು ಮಧ್ಯಾಹ್ನ ಆಯೋಜಿಸಿದ್ದ ಭೋಜನಕೂಟದಲ್ಲೂ ರಾಜನಾಥ್ ಸಿಂಗ್ ಭಾಗವಹಿಸಿಲ್ಲ. ಸಾರ್ಕ್‌ಗೆ 31 ವರ್ಷಗಳ ಇತಿಹಾಸ ಇದೆ. ಆದರೆ ಇದು ಸಮ್ಮೇಳನಗಳು ಹಾಗೂ ಸಾಂಕೇತಿಕತೆಗಷ್ಟೇ ಸೀಮಿತವಾದಂತಿರುವುದು ದುರದೃಷ್ಟಕರ. ವಿಶ್ವದ ಈ ಭಾಗದಲ್ಲಿ ರಾಜಕೀಯ ಹಾಗೂ ಆರ್ಥಿಕ ಸಹಕಾರ ಹೆಚ್ಚಿಸಿಕೊಳ್ಳುವಂತಹ ಸಾಮರ್ಥ್ಯ ಸಾಕಾರಗೊಳಿಸುವ ಮಹದುದ್ದೇಶ ಸಾರ್ಕ್ ಸ್ಥಾಪನೆ ಹಿಂದಿದೆ. ಆದರೆ ಇದಕ್ಕೆ ದಕ್ಷಿಣ ಏಷ್ಯಾದ ಈ ಸದಸ್ಯ ರಾಷ್ಟ್ರಗಳ ನಡುವೆ ಇರುವ ಸಂಬಂಧಗಳ ಬಿಕ್ಕಟ್ಟುಗಳು ತೊಡರುಗಾಲಾಗಿವೆ. ಈ ಬಾರಿ, ಈ ಸಮ್ಮೇಳನಕ್ಕೆ ಬಾಂಗ್ಲಾದೇಶದ ಗೃಹ ಸಚಿವರು ಗೈರುಹಾಜರಾಗಿದ್ದರು. ಜೊತೆಗೆ ಕಾಶ್ಮೀರ ಕುರಿತಾದ ಸಮಸ್ಯೆಯ ಕರಿನೆರಳು ಈ ಸಮ್ಮೇಳನವನ್ನು ಸುತ್ತುವರಿದಿದ್ದು ದುರದೃಷ್ಟಕರ. ಇಂತಹ ಸನ್ನಿವೇಶದಲ್ಲೂ ಈ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದು ಶ್ಲಾಘನೀಯ. ಆದರೆ ಈ ಸಮ್ಮೇಳನದಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಂತಮ್ಮ ನಿಲುವುಗಳನ್ನು ಭಾರತ ಮತ್ತು ಪಾಕಿಸ್ತಾನಗಳ ಸಚಿವರು ಸಮರ್ಥಿಸಿಕೊಂಡ ಪರಿ ವಾಕ್ಸಮರವಾಗಿ ಪರಿವರ್ತಿತವಾಗಿದೆ. ‘ಭಯೋತ್ಪಾದಕರನ್ನು ವೈಭವೀಕರಿಸುವುದು ತಪ್ಪು’ ಎಂದು ರಾಜನಾಥ್‌ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟರೆ, ‘ಕಾಶ್ಮೀರದಲ್ಲಿ ಭಾರತ ನಡೆಸಿದ್ದು ಭಯೋತ್ಪಾದನೆ’ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಆರೋಪಿಸಿದ್ದಾರೆ. ಸಾರ್ಕ್ ಸಮ್ಮೇಳನದಲ್ಲಿ ಪಾಕಿಸ್ತಾನದ ವಿರುದ್ಧ ಇಷ್ಟೊಂದು ನೇರ ಹಾಗೂ ಬಲವಾದ ವಾಗ್ದಾಳಿ ನಡೆದದ್ದು ಇದೇ ಮೊದಲು. ಹಿಂದಿನ ಸಮ್ಮೇಳನಗಳಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಬಗ್ಗೆ ಭಾರತ ಪರೋಕ್ಷವಾಗಿ ಆತಂಕ ವ್ಯಕ್ತಪಡಿಸುತ್ತಿದ್ದದ್ದು ಉಂಟು. ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ನಂತರ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಉಭಯ ದೇಶಗಳ ನಡುವಣ ಸಂಬಂಧದ ಮೇಲೆ ಅಹಿತಕರ ಪರಿಣಾಮ ಬೀರಿದೆ. ‘ಕಾಶ್ಮೀರ, ಭಾರತದ ಆಂತರಿಕ ವಿಚಾರವಲ್ಲ’ ಎಂಬ ಸಂದೇಶವನ್ನು ಪಾಕಿಸ್ತಾನ ನೀಡಿದೆ. ಆದರೆ ‘ಒಂದು ರಾಷ್ಟ್ರದ ಭಯೋತ್ಪಾದಕ ಮತ್ತೊಂದು ರಾಷ್ಟ್ರದ ಹುತಾತ್ಮನಾಗುವುದು ಸಾಧ್ಯವಿಲ್ಲ. ಹೀಗಾಗಿ ಭಯೋತ್ಪಾದನೆಯ ವೈಭವೀಕರಣ ಬೇಡ’ ಎಂದು ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದುದಾಗಿ ಸಂಸತ್‌ನಲ್ಲಿ ತಮ್ಮ ಪಾಕಿಸ್ತಾನ ಭೇಟಿಯ ಬಗ್ಗೆ ಹೇಳಿಕೆ ನೀಡುತ್ತಾ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಯೋತ್ಪಾದನೆ ತಗ್ಗಿಸುವ ನಿರ್ಣಯದ ಬಗ್ಗೆಯೂ ಸಾರ್ಕ್ ಸಮ್ಮೇಳನದಲ್ಲಿ ಚರ್ಚೆ ನಡೆದಿದೆ. ತಾಲಿಬಾನ್ ಕುರಿತಂತೆ ಪಾಕಿಸ್ತಾನದ ದ್ವಂದ್ವ ನಿಲುವನ್ನು ಆಫ್ಘಾನಿಸ್ತಾನ ಅಧ್ಯಕ್ಷರೂ ಟೀಕಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯಾವ ಮಹತ್ವದ ಬೆಳವಣಿಗೆಯೂ ಈ ಸಮ್ಮೇಳನದಲ್ಲಿ ಸಾಧ್ಯವಾಗಿಲ್ಲ. ಆದರೆ, ಈ ವರ್ಷದ ಕೊನೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆ ಫಲಪ್ರದವಾಗಲು ಬಾಂಧವ್ಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸುವುದು ಅವಶ್ಯ. ಇಲ್ಲದಿದ್ದಲ್ಲಿ ಇಂತಹ ಸಮಾವೇಶಗಳು ಬರೀ ಪ್ರಹಸನಗಳಾಗುತ್ತವೆ. ಉಭಯ ರಾಷ್ಟ್ರಗಳೂ ಈ ನಿಟ್ಟಿನಲ್ಲಿ ಗಂಭೀರ ನೆಲೆಗಳಲ್ಲಿ ಕಾರ್ಯಪ್ರವೃತ್ತವಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.