ಸರ್ಕಾರಿ ಆಸ್ಪತ್ರೆ ವೈದ್ಯರ ಕೊರತೆ ಪರಿಹಾರಕ್ಕೆ ಕಾಳಜಿ ಪ್ರದರ್ಶಿಸಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚಿನದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ 2018ರ ‘ರಾಷ್ಟ್ರೀಯ ಆರೋಗ್ಯ ಚಿತ್ರಣ’ (ನ್ಯಾಷನಲ್ ಹೆಲ್ತ್ ಪ್ರೊಫೈಲ್) ವರದಿಯಲ್ಲಿ ಇದು ವ್ಯಕ್ತವಾಗಿದೆ. ಕಾಯಿಲೆ ಪ್ರಮಾಣ, ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹಾಗೂ ಹಣಕಾಸು ಕುರಿತಂತಹ ಅಂಕಿಅಂಶಗಳ ವಾರ್ಷಿಕ ವರದಿ ಇದು. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ನೋಂದಾಯಿತ ವೈದ್ಯರಿದ್ದಾರೆ. ಆದರೆ ಇವರ ಸೇವೆ ಸರ್ಕಾರಿ ಆಸ್ಪತ್ರೆಗಳಿಗೆಲಭ್ಯವಿಲ್ಲ. ಹೆಚ್ಚಿನ ವೈದ್ಯರು ಖಾಸಗಿ ವಲಯ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದೂ ಅಂಕಿಅಂಶಗಳಿಂದ ವ್ಯಕ್ತ. ಕಳೆದ ಒಂದು ವರ್ಷದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು ತೀವ್ರವಾಗಿದೆ. 13,257 ಜನರಿಗೆ ಒಬ್ಬರು ಸರ್ಕಾರಿ ವೈದ್ಯರು ಕಳೆದ ವರ್ಷ ಇದ್ದರು ಎಂಬುದನ್ನು 2017ರ ವರದಿ ಹೇಳಿತ್ತು. ಈ ಬಾರಿಯ ವರದಿಯಲ್ಲಿ ಇದು 13,556ಕ್ಕೆ ಏರಿಕೆಯಾಗಿದೆ ಎಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇನ್ನಷ್ಟು ತೀವ್ರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ನಿರಾಸಕ್ತಿಯಿಂದಾಗಿ ಪರಿಸ್ಥಿತಿ ಕಳವಳಕಾರಿಯಾಗಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ 2136 ವೈದ್ಯರಿದ್ದಾರೆ. ಇನ್ನು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ತಜ್ಞರ ಸಂಖ್ಯೆ 498. ಕಳೆದ ಒಂದು ವರ್ಷದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒಬ್ಬ ತಜ್ಞ ವೈದ್ಯರೂ ನೇಮಕಗೊಂಡಿಲ್ಲ ಎಂಬುದು ನಮ್ಮ ಆರೋಗ್ಯ ವ್ಯವಸ್ಥೆಯ ಶೋಚನೀಯ ಕಥೆಯನ್ನು ಹೇಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾನದಂಡದ ಪ್ರಕಾರ, 1000 ರೋಗಿಗಳಿಗೆ ಒಬ್ಬರು ವೈದ್ಯರಿರಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಬಹುಶಃ ಈ ಆದರ್ಶದ ಗುರಿ ಸಾಧನೆ ಮರೀಚಿಕೆ. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ವಿನಿಯೋಗಿಸುತ್ತಿರುವ ಮೊತ್ತ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 1ರಷ್ಟು ಮಾತ್ರ. ಸಹಜವಾಗಿಯೇ ಇದು ಮೂಲಸೌಕರ್ಯಗಳ ಕೊರತೆಗೆ ಕಾರಣವಾಗುತ್ತದೆ. ಭೂತಾನ್ (ಶೇ 2.5), ಶ್ರೀಲಂಕಾ (ಶೇ 1.6) ಹಾಗೂ ನೇಪಾಳದಂತಹ (ಶೇ 1.1) ನಮ್ಮ ನೆರೆಯ ರಾಷ್ಟ್ರಗಳಿಗಿಂತ ಕಡಿಮೆ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದೇವೆ. ಆದರೆ ಸಾರ್ವಜನಿಕ ಆರೋಗ್ಯ ವೆಚ್ಚವನ್ನು 2025ರೊಳಗೆ ಜಿಡಿಪಿಯ ಶೇ 2.5ಕ್ಕೆ ಏರಿಕೆ ಮಾಡಲಾಗುವುದು ಎಂದು 2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಹೇಳಲಾಗಿದೆ. ಆರೋಗ್ಯಕ್ಕಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚು ಮಾಡದೇ ಇರುವುದರಿಂದ ಆರೋಗ್ಯ ಸೇವೆಗಳಿಗಾಗಿ ಖಾಸಗಿ ಕ್ಷೇತ್ರದ ಅವಲಂಬನೆ ಹೆಚ್ಚಾಗುತ್ತದೆ. ಹೀಗಾಗಿಯೇ ಆರೋಗ್ಯ ಸೇವೆಗಳಿಗಾಗಿ ಭಾರತೀಯರು ವಿನಿಯೋಗಿಸಬೇಕಿರುವ ಮೊತ್ತ ಅತ್ಯಂತ ಹೆಚ್ಚು. ತೀವ್ರತರ ಆರೋಗ್ಯ ವೆಚ್ಚಗಳಿಂದಾಗಿ ಪ್ರತಿವರ್ಷ ಲಕ್ಷಾಂತರ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿಳಿಯುವ ದುಃಸ್ಥಿತಿ ನಿರ್ಮಾಣವಾಗುತ್ತಿರುವುದನ್ನೂ ಸಮೀಕ್ಷೆಗಳು ಹೇಳಿವೆ. ಅಲ್ಲದೆ ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಏರಿಕೆ ಇಲ್ಲದಿದ್ದಲ್ಲಿ ರಾಷ್ಟ್ರೀಯ ಆರೋಗ್ಯ ಗುರಿಗಳ ಸಾಧನೆಯೂ ಕ್ಲಿಷ್ಟಕರ. ಹೆರಿಗೆ ಸಂದರ್ಭದಲ್ಲಿ ತಾಯಂದಿರ ಸಾವು ಹಾಗೂ ನವಜಾತ ಶಿಶುಗಳ ಸಾವುಗಳನ್ನು ತಪ್ಪಿಸುವುದು ಇನ್ನೂ ನಮಗೆ ಸಾಧ್ಯವಾಗಿಲ್ಲ. ನವಜಾತ ಶಿಶುಗಳ ಮರಣ ಪ್ರಮಾಣವಂತೂ ಭಾರತದಲ್ಲಿ ಚೀನಾಕ್ಕಿಂತ ಮೂರು ಪಟ್ಟು ಹೆಚ್ಚಿದೆ ಎಂಬುದು ಆತಂಕಕಾರಿ. ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದಿದ್ದಲ್ಲಿ ನಕಲಿ ವೈದ್ಯರನ್ನು ಮೊರೆ ಹೋಗುವ ಸ್ಥಿತಿಯೂ ಸೃಷ್ಟಿಯಾಗುತ್ತದೆ. ಹೀಗಾಗಿ ಬೇಡಿಕೆಯನ್ನು ಪೂರೈಸುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತೆ ಮಾಡಲು ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರ ಕೊರತೆ ನೀಗಿಸಲು ಆದ್ಯತೆಯ ಮೇಲೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುವುದೂ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.