ಗೋರಕ್ಷಣೆ: ಮೋದಿ ಮಾತು ಪರಿಣಾಮ ಬೀರುವುದೆ? ಗೋರಕ್ಷಣೆ ಹೆಸರಲ್ಲಿ ದುಷ್ಕೃತ್ಯಗಳನ್ನು ನಡೆಸುವುದನ್ನು ಪ್ರಧಾನಿ ಖಂಡಿಸಿರುವುದು ಸ್ವಾಗತಾರ್ಹ. ಆದರೆ ತೀರಾ ತಡವಾಗಿ ಪ್ರಧಾನಿ ಸ್ಪಂದಿಸುತ್ತಿದ್ದಾರೆ ಎನ್ನದೆ ವಿಧಿಯಿಲ್ಲ. ಗೋ ರಕ್ಷಣೆ ಹೆಸರಲ್ಲಿ ಬೆದರಿಕೆ, ಹಲ್ಲೆ ಹಾಗೂ ವ್ಯಕ್ತಿಯೊಬ್ಬರ ಹತ್ಯೆಯಂತಹ ಘಟನೆಗಳು ಅನೇಕ ಕಡೆಗಳಲ್ಲಿ, ಅದೂ ವಿಶೇಷವಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದ್ದರೂ ಪ್ರಧಾನಿ ಮೌನ ಮುರಿದಿರಲಿಲ್ಲ. ಈ ವಿಚಾರದ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ಮಂಡಿಸಲು ಪ್ರಧಾನಿಗೆ ಸಾಕಷ್ಟು ಅವಕಾಶಗಳಿದ್ದವು. ರಾಷ್ಟ್ರವನ್ನುದ್ದೇಶಿಸಿದ ಮಾತು ಹಾಗೂ ಟ್ವೀಟ್‌ಗಳು ನಿಯಮಿತವಾಗಿ ಪ್ರಧಾನಿ ಕಡೆಯಿಂದ ಹರಿದು ಬರುತ್ತಿದ್ದರೂ ಗೋವಿನ ವಿಚಾರ ಮಾತ್ರ ಅದರಲ್ಲಿರುತ್ತಿರಲಿಲ್ಲ. ಆದರೆ ಈಗ ನಿಜವಾದ ಗೋರಕ್ಷಕರು ಮತ್ತು ಗೋರಕ್ಷಣೆ ಹೆಸರಲ್ಲಿ ದುಷ್ಕೃತ್ಯ ಎಸಗುವವರ ಮಧ್ಯೆ ವ್ಯತ್ಯಾಸ ಗುರುತಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಸೂಚನೆ ನೀಡಿದ್ದಾರೆ. ಗುಜರಾತ್‌ನ ಊನಾದಲ್ಲಿ ಕೆಲವರ ಮೇಲೆ ಅಮಾನವೀಯ ಹಲ್ಲೆ ನಡೆದ ನಂತರ ದಲಿತರು ರಾಷ್ಟ್ರದಲ್ಲಿ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹೀಗಾಗಿ, ಮುಂದಿನ ವರ್ಷ ಉತ್ತರ ಪ್ರದೇಶ, ಗುಜರಾತ್ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ದಲಿತರ ಅಸಮಾಧಾನ ಬಿಜೆಪಿ ವಿರುದ್ಧ ಕೆಲಸ ಮಾಡಬಹುದು ಎಂಬ ಆತಂಕ ಪಕ್ಷದ ನಾಯಕತ್ವದಲ್ಲಿದೆ. ಈಗಾಗಲೇ ತನ್ನ ರಾಜಕೀಯ ನೆಲೆ ವಿಸ್ತರಿಸಿಕೊಳ್ಳುವ ಕಾರ್ಯತಂತ್ರದ ಭಾಗವಾಗಿ ರಾಷ್ಟ್ರದ ಎಲ್ಲೆಡೆ ದಲಿತರತ್ತ ಸ್ನೇಹಹಸ್ತ ಚಾಚಲು ಬಿಜೆಪಿ ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ದಲಿತರ ವಿರುದ್ಧದ ಆಕ್ರಮಣಗಳು ಹೀಗೆಯೇ ಮುಂದುವರಿದಲ್ಲಿ ಚುನಾವಣೆ ಹಾಗೂ ರಾಜಕೀಯ ಯೋಜನೆಗಳಿಗೆ ತೊಂದರೆಯಾಗಬಹುದು ಎಂಬ ಕಾಳಜಿಯೇ ಪ್ರಧಾನಿ ಕಟು ಟೀಕೆಗಳಿಗೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ‘ದಲಿತರನ್ನು ಗೌರವಿಸುವುದು ಉಳಿಸುವುದು ನಮ್ಮ ಜವಾಬ್ದಾರಿ’ ಎಂದು ಪ್ರಧಾನಿ ಹೇಳಿದ್ದಾರೆ. ಈ ಅರಿವು ಮೂಡಿಸಿದ ಸ್ಥಳವೂ ಮುಖ್ಯವಾದದ್ದು. ಅದು, ಬಿಜೆಪಿ ವಿರೋಧಿ ದಲಿತ ಆಕ್ರೋಶದ ಕಿಡಿ ಹೊತ್ತಿಸಿದಂತಹ ಸಂಶೋಧನಾ ವಿದ್ಯಾರ್ಥಿ ರೋಹಿತ ವೇಮುಲ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್‌ ಎಂಬುದನ್ನು ಗಮನಿಸಬೇಕು. 2014ರ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಗೋಹತ್ಯೆ ವಿರುದ್ಧ ಸಾರ್ವಜನಿಕ ಆಕ್ರೋಶವನ್ನು ಸ್ವತಃ ನರೇಂದ್ರ ಮೋದಿಯವರು ಬಡಿದೆಬ್ಬಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದನದ ಮಾಂಸ ರಫ್ತಿಗೆ ಉತ್ತೇಜನ ನೀಡುವಂತಹ, ಗೋಸಂತತಿ ನಾಶ ಮಾಡುವ ‘ನಸುಗೆಂಪು ಕ್ರಾಂತಿ’ (ಪಿಂಕ್ ರೆವಲ್ಯೂಷನ್) ಶುರು ಮಾಡಲಾಯಿತು ಎಂದು ಕಾಂಗ್ರೆಸ್ ವಿರುದ್ಧ ಅವರು ಆಗ ಆರೋಪ ಹೊರಿಸಿದ್ದರು. ಈಗ ಈ ಕಥನವನ್ನು ಬದಲಿಸಲಾಗಿದೆ. ಅಸಲಿ ಗೋರಕ್ಷಕ ಹಾಗೂ ನಕಲಿ ಗೋರಕ್ಷಕರ ನಡುವೆ ವ್ಯತ್ಯಾಸ ಇದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಒಳ್ಳೆಯ ಗೋರಕ್ಷಕ ಹಾಗೂ ಕೆಟ್ಟ ಗೋರಕ್ಷಕ ಮಧ್ಯದ ಗೆರೆ ತೆಳುವಾದುದು. ಸಮಾಜ ವಿರೋಧಿ ಗುಂಪುಗಳ ಅತಿರೇಕಗಳನ್ನು ಪ್ರಧಾನಿ ಖಂಡಿಸಿದ್ದಾರೆ ಅಷ್ಟೆ. ಹೀಗಿದ್ದೂ ಗೋರಕ್ಷಣೆ ಸಿದ್ಧಾಂತವನ್ನು ಅವರು ಬೆಂಬಲಿಸುತ್ತಾರೆ. ಈ ಸಿದ್ಧಾಂತ, ರಾಜಕೀಯ ಕಾರ್ಯಸೂಚಿಯ ಭಾಗವಾಗಿರುವವರೆಗೂ ಇದರಿಂದಾಗುವ ಕ್ರಿಯೆಗಳನ್ನು ನಿಯಂತ್ರಿಸುವುದು ಕಷ್ಟ. ಪ್ರಧಾನಿ ಮಾತುಗಳು ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಈಗಲೇ ವಿಶ್ಲೇಷಿಸಲಾಗುವುದಿಲ್ಲ. ‘ಪ್ಲಾಸ್ಟಿಕ್ ತಿಂದು ಬಹುತೇಕ ಹಸುಗಳು ಸಾಯುತ್ತವೆ’ ಎಂಬ ವಾಸ್ತವಿಕ ಮಾತನ್ನೂ ಪ್ರಧಾನಿ ಆಡಿದ್ದಾರೆ. ಆದರೆ ಪ್ಲಾಸ್ಟಿಕ್ ತೆರವು ಮಾಡುವ ಕಾರ್ಯಾಚರಣೆಯನ್ನೇನೂ ಗೋರಕ್ಷಕರು ಕೈಗೊಳ್ಳುವುದಿಲ್ಲ ಎಂಬುದೂ ಗೊತ್ತಿರುವಂತಹದ್ದು. ಗೋ ರಕ್ಷಣೆ ಹೆಸರಿನ ದೌರ್ಜನ್ಯಗಳ ತಡೆಗೆ ಪ್ರಧಾನಿ ಮಾತು ಪರಿಣಾಮ ಬೀರುವುದೇ ಎಂಬುದನ್ನು ಕಾದುನೋಡಬೇಕು. ಆದರೆ ಗುಜರಾತ್‌ನ ಊನಾದಲ್ಲಿ ದಲಿತರ ವಿರುದ್ಧ ದೌರ್ಜನ್ಯ ನಡೆಸಿದವರಿಗೆ ಶೀಘ್ರ ಕಠಿಣ ಶಿಕ್ಷೆಯಾಗಬೇಕು. ಈ ಶಿಕ್ಷೆ ಮುಂದೆ ಇಂತಹ ದೌರ್ಜನ್ಯಗಳನ್ನು ನಡೆಸದಿರಲು ಎಚ್ಚರಿಕೆ ಗಂಟೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.