ಗರಿಗೆದರಿದ ಆಶಾಭಾವನೆ ಜಿಎಸ್‌ಟಿ ಜಾರಿ ತ್ವರಿತಗೊಳಿಸಿ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತರುವ ವಿಚಾರದ ಬಗ್ಗೆ ರಾಜಕೀಯ ಪಕ್ಷಗಳ ಮಧ್ಯೆ ಒಮ್ಮತ ಮೂಡಿಸುವ ಪ್ರಯತ್ನ ವೇಗ ಪಡೆದುಕೊಂಡಿರುವುದು ಆಶಾದಾಯಕ ಬೆಳವಣಿಗೆ. ಜಿಎಸ್‌ಟಿ ಮಸೂದೆಗೆ ಬಹುತೇಕ ರಾಜಕೀಯ ಪಕ್ಷಗಳು ಕಡೆಗೂ ಸಹಮತ ವ್ಯಕ್ತಪಡಿಸಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಹೀಗಾಗಿ ಮುಂದಿನ ವಾರ ರಾಜ್ಯಸಭೆಯಲ್ಲಿ ‘ಸಂವಿಧಾನ (122ನೇ ತಿದ್ದುಪಡಿ) ಮಸೂದೆ–2014’ ಮಂಡನೆಯಾಗುವ ನಿರೀಕ್ಷೆ ಇದೆ. ಈಗಾಗಲೇ 2015ರ ಮೇ ತಿಂಗಳಲ್ಲಿ ಈ ಮಸೂದೆ ಲೋಕಸಭೆಯ ಅನುಮೋದನೆ ಪಡೆದುಕೊಂಡಿದೆ. ಈ ಮಸೂದೆ ವಿಚಾರದಲ್ಲಿ ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಬಿಗಿಪಟ್ಟು ಹಿಡಿದಿದ್ದ ಕಾಂಗ್ರೆಸ್‌ ತನ್ನ ನಿಲುವು ಸಡಿಲಿಸಿದೆ. ಎಐಎಡಿಎಂಕೆ ಹೊರತುಪಡಿಸಿ ಬಹುತೇಕ ಎಲ್ಲ ಪ್ರಾದೇಶಿಕ ಪಕ್ಷಗಳು ಜಿಎಸ್‌ಟಿ ಬೆಂಬಲಿಸಿವೆ. ಏಕೀಕೃತ ತೆರಿಗೆ ವ್ಯವಸ್ಥೆಯ ಪ್ರಯೋಜನಗಳಿಗೆ ಅಡ್ಡಿಯಾಗಲಿದ್ದ ಶೇ 1ರಷ್ಟು ಅಂತರರಾಜ್ಯ ತೆರಿಗೆ ವಿಧಿಸುವ ಪ್ರಸ್ತಾವ ಕೈಬಿಡಲಾಗಿದೆ. ಮೊದಲ ಐದು ವರ್ಷ ರಾಜ್ಯಗಳಿಗೆ ಆಗುವ ನಷ್ಟವನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವುದೂ ರಾಜ್ಯ ಸರ್ಕಾರಗಳ ಆತಂಕ ದೂರ ಮಾಡುವಂತಹದ್ದು. ಜಿಎಸ್‌ಟಿ ಜಾರಿಗೆ ಬರುವುದರಿಂದ ಆರ್ಥಿಕ ಸುಧಾರಣಾ ಕ್ರಮಗಳ ಜಾರಿಯಲ್ಲಿನ ಪ್ರಮುಖ ಅಡಚಣೆ ದೂರವಾಗಲಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಸಾಲಿನಲ್ಲಿ ಭಾರತದ ಸ್ಥಾನಮಾನ ಗಟ್ಟಿಗೊಳ್ಳಲಿದೆ. ವಿದೇಶಿ ಹೂಡಿಕೆದಾರರಿಗೆ ತೆರಿಗೆ ಸ್ವರೂಪದ ಸ್ಪಷ್ಟ ಚಿತ್ರಣವೂ ದೊರೆಯಲಿದೆ. ಜಿಎಸ್‌ಟಿಯಿಂದಾಗಿ ಗ್ರಾಹಕರಿಗೆ ಗುಣಮಟ್ಟದ ಸರಕುಗಳು ಕೈಗೆಟುಕುವ ಬೆಲೆಗಳಿಗೆ ಲಭ್ಯವಾಗಲಿವೆ ಎಂಬುದೂ ಮುಖ್ಯ. ಸರಕು ತಯಾರಕರಿಗೆ ಅತಿದೊಡ್ಡ ಏಕರೂಪದ ಮಾರುಕಟ್ಟೆ ಸೃಷ್ಟಿಯಾಗಲಿದೆ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ನೇತೃತ್ವದ ಸಮಿತಿಯು ಮೂರು ಹಂತದ ತೆರಿಗೆ ವಿಧಿಸುವ ಬಗ್ಗೆ ನೀಡಿರುವ ವರದಿ ಬಗ್ಗೆ ಮಾತ್ರ ಇನ್ನೂ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬೇಕಿವೆ. ಬಹುತೇಕ ಸರಕುಗಳಿಗೆ ಜಿಎಸ್‌ಟಿ ದರ ಅಂತಿಮಗೊಳಿಸುವ ಬಗ್ಗೆ ನಿರ್ಧಾರಕ್ಕೆ ಬರುವ ವಿಚಾರ ಇನ್ನೂ ಬಾಕಿ ಉಳಿದಿದೆ. ಸರಕು ಮತ್ತು ಸೇವೆಗಳಿಗೆ ವಿಧಿಸಬಹುದಾದ ತೆರಿಗೆ ದರವನ್ನು (ಸ್ಟ್ಯಾಂಡರ್ಡ್‌ ದರ) ಈಗ ಅಂತಿಮಗೊಳಿಸಬೇಕಾಗಿದೆ. ಜನಸಾಮಾನ್ಯರ ಮೇಲೆ ವ್ಯಾಪಕ ಪರಿಣಾಮ ಬೀರುವ ಅವಶ್ಯಕ ಸರಕುಗಳಿಗೆ ಶೇ 12, ವಿಲಾಸಿ ಕಾರು, ತಂಪು ಪಾನೀಯ, ಪಾನ್‌ ಮಸಾಲಾ, ತಂಬಾಕು ಉತ್ಪನ್ನಗಳಿಗೆ ಶೇ 40 ಮತ್ತು ಬಹುತೇಕ ಸರಕು ಮತ್ತು ಸೇವೆಗಳಿಗೆ ಶೇ 17ರಿಂದ ಶೇ 18ರಷ್ಟು ತೆರಿಗೆ (ಸ್ಟ್ಯಾಂಡರ್ಡ್‌ ದರ) ವಿಧಿಸುವ ಬಗ್ಗೆ ಸಮಿತಿಯು ಸಲಹೆ ನೀಡಿತ್ತು. ಅತಿ ಕಡಿಮೆ ಪ್ರಮಾಣದ ‘ಸ್ಟ್ಯಾಂಡರ್ಡ್‌ ದರ’ಗಳು ತಮ್ಮ ವರಮಾನ ಖೋತಾ ಮಾಡಲಿವೆ ಎನ್ನುವುದು ರಾಜ್ಯಗಳ ಆತಂಕವಾಗಿದೆ. ಸರಕು ತಯಾರಿಕೆಯ ಪ್ರಮುಖ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್, ಗರಿಷ್ಠ ಮಟ್ಟದ ಸ್ಟ್ಯಾಂಡರ್ಡ್‌ ದರಗಳಿಗೆ ಹಟ ಹಿಡಿದಿವೆ. ಹೀಗಾಗಿ ಈ ದರ ಶೇ 18 ರಿಂದ ಶೇ 20ರ ಮಧ್ಯೆ ನಿಗದಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಒಮ್ಮತಕ್ಕೆ ಬರಬೇಕಾಗಿದೆ. 2017ರ ಮಾರ್ಚ್ ತಿಂಗಳ ಒಳಗೆ ಹೊಸ ವ್ಯವಸ್ಥೆಗೆ ಬೆನ್ನೆಲುಬಾಗಿ ತಂತ್ರಜ್ಞಾನ ಮತ್ತು ಪೂರಕ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ– ರಾಜ್ಯ ಸರ್ಕಾರಗಳು ರಚನಾತ್ಮಕವಾಗಿ ಕಾರ್ಯೋನ್ಮುಖವಾಗಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.