ನಗರ ಯೋಜನೆಯಲ್ಲೇ ಊನ ನೀರಿನ ದಾರಿಗೆ ಅಡ್ಡಿಪಡಿಸಬೇಡಿ ದೇಶದ ಮಹಾನಗರಗಳು ಯೋಜನಾರಹಿತವಾಗಿ ಯದ್ವಾತದ್ವಾ ಬೆಳೆದಿರುವ ಪರಿಣಾಮವಾಗಿ ಸಾಧಾರಣ ಮಳೆಗೂ ಅವುಗಳು ನಲುಗುವಂತಾಗಿದೆ. ದಕ್ಷಿಣದ ಬೆಂಗಳೂರು ಹಾಗೂ ಉತ್ತರದ ಗುರುಗ್ರಾಮ (ಗುಡಗಾಂವ್‌) ಕಳೆದ ಶುಕ್ರವಾರ ಏಕಕಾಲಕ್ಕೆ ಅನುಭವಿಸಿದ ಸನ್ನಿವೇಶಗಳು ನಗರಯೋಜನೆಯಲ್ಲಿ ಆಗಿರುವ ವೈಫಲ್ಯಕ್ಕೆ ಜ್ವಲಂತ ಸಾಕ್ಷಿ. ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಬಳಸುವ ಪ್ರಸಂಗ ಬಂದೊದಗಿದರೆ, ಗುರುಗ್ರಾಮದಲ್ಲಿ 20 ಕಿ.ಮೀ. ದೂರದವರೆಗೆ ಸಂಚಾರದಟ್ಟಣೆ ಉಂಟಾಗಿತ್ತು. ಸಾವಿರಾರು ಜನ ಕಾರುಗಳಲ್ಲೇ ರಾತ್ರಿಯನ್ನು ಕಳೆಯಬೇಕಾಯಿತು. ನಗರಗಳ ಅಭಿವೃದ್ಧಿಯ ಯೋಜನೆಗಳಿಗೆ ಆ ಘಟನೆಗಳು ಗೇಲಿ ಮಾಡುವಂತಿದ್ದವು. ಇದು ಎರಡು ನಗರಗಳ ಸಮಸ್ಯೆ ಮಾತ್ರ ಆಗಿರದೆ ನವದೆಹಲಿ, ಮುಂಬೈ ಹಾಗೂ ಚೆನ್ನೈ ಸೇರಿದಂತೆ ಇತರ ಮಹಾನಗರಗಳು ಸದ್ಯ ಎದುರಿಸುತ್ತಿರುವ ಬಿಕ್ಕಟ್ಟು ಕೂಡ ಆಗಿದೆ. ದೇಶದ ಬಹುತೇಕ ನಗರಗಳು ಲಾಗಾಯ್ತಿನಿಂದ ಮಳೆ ನೀರನ್ನು ನೈಸರ್ಗಿಕವಾಗಿ ನಿರ್ವಹಣೆ ಮಾಡುವಂತಹ ಕಣಿವೆ ಹಾಗೂ ಅಚ್ಚುಕಟ್ಟು ಪ್ರದೇಶಗಳನ್ನು ಹೊಂದಿದ್ದವು. ಇಂಚಿಂಚು ಭೂಮಿಗೂ ಬಂಗಾರದ ಬೆಲೆ ಬಂದಮೇಲೆ ಮಳೆನೀರು ಕಾಲುವೆಗಳೆಲ್ಲ ಒತ್ತುವರಿಯಾಗಿ, ಕೆರೆ ಪಾತ್ರದಲ್ಲೇ ಬಡಾವಣೆಗಳು ಎದ್ದಿವೆ. ಇದರಿಂದ ನೀರಿನ ನೈಸರ್ಗಿಕ ಜಾಡು ಅಳಿಸಿಹೋಗಿದೆ. ಚರಂಡಿಗಳು ಘನತ್ಯಾಜ್ಯದ ಹೂಳಿನಿಂದ ತುಂಬಿಹೋಗಿದ್ದು, ನೀರು ಸಾಗಿಸುವ ಸೂಕ್ತ ವ್ಯವಸ್ಥೆಯೇ ಇಲ್ಲವಾಗಿದೆ. ಹೀಗಾಗಿ ಮಳೆ ಬಂದರೆ ನಗರದ ರಸ್ತೆಗಳೇ ಹೊಳೆಯ ರೂಪ ತಾಳುತ್ತವೆ. ‘ನಗರ ಮಹಾಪೂರ’ ಈಗೀಗ ಪ್ರತಿವರ್ಷದ ಸಮಸ್ಯೆಯಾಗಿ ಪರಿಣಮಿಸಿದ್ದರೂ ಅಂತಹ ಸಮಸ್ಯೆ ಎದುರಿಸಲು ಸರ್ಕಾರಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಇರುವುದು ಎದ್ದು ಕಾಣುತ್ತಿದೆ. ಹಳೆಯ ಘಟನೆಗಳು ನೀತಿ ನಿರೂಪಕರಿಗೆ ಪಾಠ ಕಲಿಸಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಮಳೆಗಾಲಕ್ಕೆ ಸಿದ್ಧತೆ ಆಗಬೇಕಿರುವುದು ಬೇಸಿಗೆಯಲ್ಲಿ. ಗುರುತ್ವಾಕರ್ಷಣೆ ಬಲದಿಂದ ಇಳಿಜಾರಿನಲ್ಲಿ ನೀರು ಹರಿದು ಹೋಗಬೇಕಾದ ಕಾರಣ ಚರಂಡಿ, ರಾಜಕಾಲುವೆ ಹಾಗೂ ಕೆರೆಗಳ ಹೂಳನ್ನು ತೆಗೆದು ಅದರ ಸರಾಗ ಹರಿವಿಗೆ ಅನುವು ಮಾಡಬೇಕು. ಚಿಕ್ಕ ಕಾಲುವೆಗಳು, ದೊಡ್ಡ ಕಾಲುವೆಗೆ ಸಂಪರ್ಕ ಹೊಂದಿ, ಅಲ್ಲಿಂದ ಕೆರೆ–ಕಟ್ಟೆಗಳನ್ನು ಸೇರುವಂತಹ ಜಾಲವನ್ನು ಪುನರುಜ್ಜೀವನಗೊಳಿಸಬೇಕು. ಕೆರೆ ಹಾಗೂ ರಾಜಕಾಲುವೆ ಸುತ್ತ ಸುರಕ್ಷಿತ ವಲಯ ಇರಬೇಕು. ಅಲ್ಲಿ ಯಾವುದೇ ಕಾರಣಕ್ಕೂ ಕಟ್ಟಡಗಳ ನಿರ್ಮಾಣಕ್ಕೆ ಆಸ್ಪದ ಕೊಡಬಾರದು ಎಂಬ ಕಾಯ್ದೆಯೇ ಇದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಲ್ಲಲ್ಲಿ ಇಂಗುಗುಂಡಿಗಳ ನಿರ್ಮಾಣ ಮಾಡಿ, ಪ್ರವಾಹದ ತೀವ್ರತೆ ತಗ್ಗಿಸುವ ಜತೆಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ವಿನ್ಯಾಸ ಮಳೆ ನೀರಿನ ಸಾಗಾಟಕ್ಕೆ ಪೂರಕವಾಗಿರಬೇಕು. ಬಿದ್ದ ನೀರು ರಸ್ತೆಯಂಚಿನ ಚರಂಡಿಗೆ ಯಾವುದೇ ಅಡೆತಡೆಯಿಲ್ಲದೆ ಹರಿದುಹೋಗಬೇಕು. ರಸ್ತೆ ಹಾಗೂ ಪಾದಚಾರಿ ಮಾರ್ಗಗಳು ಗುಣಮಟ್ಟದಿಂದ ಕೂಡಿದ್ದರೆ ನೀರು ನಿಲ್ಲುವ ಪ್ರಮೇಯವೇ ಉದ್ಭವವಾಗದು. ಪ್ರಪಂಚದ ಸುಂದರ ನಗರಗಳು ಈ ಸರಳ ಸೂತ್ರವನ್ನೇ ಅಳವಡಿಸಿಕೊಂಡಿವೆ. ಆದರೆ, ನಮ್ಮ ಆಡಳಿತ ವ್ಯವಸ್ಥೆಗೆ ಅಂತಹ ಸುಸ್ಥಿರ ಸೌಲಭ್ಯ ಬೇಕಿಲ್ಲ. ವ್ಯವಸ್ಥೆ ಹದಗೆಟ್ಟಷ್ಟೂ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ದುಷ್ಟಕೂಟಕ್ಕೆ ಹಬ್ಬ. ರಸ್ತೆ–ಚರಂಡಿ ಜಾಲ ಮೇಲಿಂದ ಮೇಲೆ ದುರಸ್ತಿಗೆ ಬಾರದಿದ್ದರೆ ಕಾಮಗಾರಿಗಳನ್ನು ನಡೆಸುವುದಾದರೂ ಹೇಗೆ? ಖರ್ಚು ಹಾಕುವುದಾದರೂ ಏತಕ್ಕೆ? ಬೆಂಗಳೂರಿನಲ್ಲಿ ಉದ್ಭವಿಸಿದ ಸಮಸ್ಯೆಯ ಪರಿಹಾರಕ್ಕಾಗಿ ನೂರು ಕೋಟಿ ರೂಪಾಯಿ ಬಿಡುಗಡೆಗೆ ನಿರ್ಧರಿಸಲಾಗಿದೆ. ‘ಹಣ ಮಾತ್ರ ಖರ್ಚಾಗುತ್ತದೆ. ವ್ಯವಸ್ಥೆ ಹಾಗೇ ಇರುತ್ತದೆ’ ಎಂಬ ಜನಸಾಮಾನ್ಯರ ಮಾತು ಕೇವಲ ಕುಹಕದ್ದಲ್ಲ. ಈ ಹಿಂದೆ ಸಾವಿರ, ಸಾವಿರ ಕೋಟಿ ರೂಪಾಯಿ ಬೊಕ್ಕಸದಿಂದ ಹರಿದು ಹೋಗಿದ್ದರೂ ಕೊಳಕು ವ್ಯವಸ್ಥೆ ಹಾಗೇ ಉಳಿದಿರುವುದು ಕಣ್ಣಮುಂದೆಯೇ ಇದೆ. ಬಡಾವಣೆಗಳಿಗೆ ನುಗ್ಗಿದ್ದ ಕೆರೆಯ ನೀರು ಜನಸಾಮಾನ್ಯರಿಗೂ ಒಂದು ಪಾಠವನ್ನು ಬಿಟ್ಟುಹೋಗಿದೆ. ಭೂದಾಹ ತಣಿಸುವ ಭರದಲ್ಲಿ ಕೆರೆ ಅಂಗಳದಲ್ಲೇ ಮನೆಕಟ್ಟಿ ಪ್ರವಾಹವನ್ನು ಮೈಮೇಲೆ ಎಳೆದುಕೊಳ್ಳಬಾರದು ಎನ್ನುವುದೇ ಆ ಪಾಠ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.