ಮುಷ್ಕರ: ಪ್ರತಿಷ್ಠೆ ಸಾಕು ಮಾತುಕತೆಗೆ ಮುಂದಾಗಿ ಪ್ರತಿಷ್ಠೆ ಬದಿಗೊತ್ತಿ ಮತ್ತೊಂದು ಸುತ್ತಿನ ಚರ್ಚೆಯನ್ನು ಸರ್ಕಾರ ಆರಂಭಿಸಲಿ. ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ನಾಲ್ಕೂ ನಿಗಮಗಳ 1.25 ಲಕ್ಷ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿರುವುದರಿಂದ 23 ಸಾವಿರ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಹಾಗೂ ದೂರದ ಊರುಗಳಿಗೆ ಹೋಗಬೇಕಾದವರು ವಿಪರೀತ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಕಡೆ ಶಾಲಾ, ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಮುಷ್ಕರನಿರತರು ಹಿಂಸಾಚಾರಕ್ಕೂ ಇಳಿದಿದ್ದಾರೆ. ಸಹೋದ್ಯೋಗಿಗಳ ಮೇಲೆ ಹಲ್ಲೆ ಮಾಡಿರುವ ಘಟನೆಗಳೂ ವರದಿಯಾಗಿವೆ. ಸುಮಾರು 140 ಬಸ್‌ಗಳು ಜಖಂಗೊಂಡಿದ್ದು, ₹ 15 ಲಕ್ಷ ನಷ್ಟವಾಗಿದೆ. ಬಸ್‌ಗಳ ಓಡಾಟ ಸ್ಥಗಿತಗೊಂಡಿರುವುದರಿಂದ ದಿನವೊಂದಕ್ಕೆ ₹ 17 ಕೋಟಿ ನಷ್ಟವಾಗುತ್ತಿದೆ. ನೌಕರರು ವೇತನ ಹೆಚ್ಚಳಕ್ಕೆ ಒತ್ತಾಯಿಸುವುದು ತಪ್ಪಲ್ಲ. ಆದರೆ, ಅದಕ್ಕಾಗಿ ಮುಷ್ಕರದ ಹಾದಿ ಹಿಡಿದಿರುವುದು ಸರಿಯಲ್ಲ. ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ವಿನಾ ಒತ್ತಡ ತಂತ್ರಗಳನ್ನು ಅನುಸರಿಸುವುದು ತರವಲ್ಲ. ಅದರಿಂದ ಉದ್ದೇಶವೂ ಈಡೇರುವುದಿಲ್ಲ. ‘ಮೊದಲು ಮುಷ್ಕರ ನಿಲ್ಲಿಸಿ. ಆಮೇಲೆ ಮಾತುಕತೆಗೆ ಬನ್ನಿ’ ಎಂದು ಮುಖ್ಯಮಂತ್ರಿ ಹೇಳುವ ಮೂಲಕ ಮುಷ್ಕರಕ್ಕೆ ಜಗ್ಗುವುದಿಲ್ಲ ಎಂಬ ಸೂಚನೆ ರವಾನಿಸಿದ್ದಾರೆ. ಸರ್ಕಾರವೂ ವೇತನ ಏರಿಕೆ ಬೇಡಿಕೆಯನ್ನು ಪ್ರತಿಷ್ಠೆ ವಿಷಯವಾಗಿ ಮಾಡಿಕೊಂಡಂತಿದೆ. ಅದರಿಂದಾಗಿಯೇ ಮೂರ್ನಾಲ್ಕು ಸಲ ನೌಕರರ ಒಕ್ಕೂಟದ ಪದಾಧಿಕಾರಿಗಳ ಜತೆ ನಡೆದ ಮಾತುಕತೆ ವಿಫಲವಾಗಿದೆ. ಶೇ 30ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ. ಶೇ 10ರಷ್ಟು ಏರಿಕೆಗೆ ಸಿದ್ಧವಿರುವುದಾಗಿ ಸರ್ಕಾರ ಹೇಳುತ್ತಿದೆ. ಶೇ 10ರಷ್ಟು ಏರಿಕೆಯಾದರೆ ಬೊಕ್ಕಸಕ್ಕೆ ₹ 1550 ಕೋಟಿ ಹೊರೆ ಬೀಳಲಿದೆ. ಸಾರಿಗೆ ನಿಗಮಗಳು ನಷ್ಟದಲ್ಲಿರುವುದರಿಂದ ಹೆಚ್ಚು ಏರಿಕೆ ಸಾಧ್ಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಪ್ರಯಾಣಿಕರಿಗೆ ಸೇವೆ ಒದಗಿಸುವುದರಲ್ಲಿ ನಮ್ಮ ಸಾರಿಗೆ ಸಂಸ್ಥೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ದೆಹಲಿ, ಉತ್ತರ ಪ್ರದೇಶ, ಅಷ್ಟೇ ಏಕೆ ನೆರೆಯ ರಾಜ್ಯಗಳಿಗೆ ಹೋಲಿಸಿದರೂ ಪ್ರಯಾಣ ದರ ನಮ್ಮ ರಾಜ್ಯದಲ್ಲಿ ತುಟ್ಟಿಯಾಗಿದೆ. ಉದಾಹರಣೆಗೆ ಹೇಳುವುದಾದರೆ ದೆಹಲಿಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸಿನ ಗರಿಷ್ಠ ದರ ₹ 50. ಬೆಂಗಳೂರಿನಲ್ಲಿ ₹ 260. ಆದರೂ ಸಂಸ್ಥೆ ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಡೀಸೆಲ್‌ ಬೆಲೆ ಇಳಿದ ಬಳಿಕವಾದರೂ ಸಾರಿಗೆ ನಿಗಮಗಳು ಲಾಭ ಮಾಡಬೇಕಿತ್ತು. ಅದು ಇನ್ನೂ ಸಾಧ್ಯವಾಗಿಲ್ಲ ಎಂದರೆ ಎಲ್ಲೋ ಹಣ ಸೋರಿಕೆ ಆಗುತ್ತಿದೆ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಈ ನಿಟ್ಟಿನಲ್ಲಿ ಹಣಕಾಸು ವ್ಯವಸ್ಥೆಯನ್ನು ಸುಧಾರಿಸುವ ಕಡೆ ನಿಗಮಗಳು ಗಮನಹರಿಸಬೇಕಿದೆ. ಮುಷ್ಕರ ಮುಂದುವರಿಸಿದರೆ ಸಾರಿಗೆ ಸಿಬ್ಬಂದಿ, ಜನರ ಸಹಾನುಭೂತಿಯನ್ನು ಕಳೆದುಕೊಳ್ಳುವ ಅಪಾಯವಿದೆ. ಆದಕಾರಣ ತಕ್ಷಣ ಮುಷ್ಕರ ಕೈಬಿಟ್ಟು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಸರ್ಕಾರವೂ ಪ್ರತಿಷ್ಠೆ ಬದಿಗೊತ್ತಿ ಮತ್ತೊಂದು ಸುತ್ತಿನ ಚರ್ಚೆ ಆರಂಭಿಸಬೇಕು. ಇಲ್ಲದಿದ್ದರೆ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಖಾಸಗಿ ವಾಹನಗಳು ಸಾರ್ವಜನಿಕರಿಂದ ಹೆಚ್ಚು ದರ ವಸೂಲು ಮಾಡುವುದು ಮುಂದುವರಿಯುತ್ತದೆ. ಪ್ರಯಾಣಿಕರು ಸರ್ಕಾರಕ್ಕೂ ಸಿಬ್ಬಂದಿಗೂ ಹಿಡಿಶಾಪ ಹಾಕುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.