ಭೂಗಳ್ಳರ ಪರ ಮಸೂದೆ ಹೋರಾಟವೊಂದೇ ಹಾದಿ ರಾಜ್ಯದ ಹಿತ ಕಾಪಾಡುವಂತಹ ಶಾಸನಗಳನ್ನು ರಚಿಸುವುದು ವಿಧಾನಮಂಡಲದ ಉಭಯ ಸದನಗಳ ಮೂಲ ಕರ್ತವ್ಯ. ಆದರೆ, ಇತ್ತೀಚೆಗೆ ಬರ್ಖಾಸ್ತುಗೊಂಡ ಅಧಿವೇಶನದಲ್ಲಿ ಒಪ್ಪಿಗೆ ನೀಡಲಾದ ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆ–2016’ ಜನ ಹಿತವನ್ನೇ ಬಲಿಕೊಡುವಂತಿದೆ. ಯಾವುದೇ ಚರ್ಚೆಯಿಲ್ಲದೆ ಈ ಮಸೂದೆಗೆ ಒಪ್ಪಿಗೆ ಪಡೆಯುವಷ್ಟು ಜರೂರತ್ತಾದರೂ ಏನಿತ್ತು? ಜನ ಹಿಂದೆಂದಿಗಿಂತಲೂ ಹೆಚ್ಚಿನ ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ಬಯಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಡೆ ಹಲವು ಸಂಶಯಗಳನ್ನು ಹುಟ್ಟುಹಾಕುತ್ತದೆ. ಉದ್ಯಾನಕ್ಕೆ ಮೀಸಲಿಟ್ಟ ಪ್ರದೇಶವನ್ನು ಶೇ 15 ರಿಂದ ಶೇ 10ಕ್ಕೆ ಹಾಗೂ ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗವನ್ನು ಶೇ 10 ರಿಂದ ಶೇ 5ಕ್ಕೆ ಇಳಿಸಲು ಕೈಗೊಂಡಿರುವ ನಿರ್ಧಾರದ ಹಿಂದೆ ಭೂಗಳ್ಳರಿಗೆ ಲಾಭ ಮಾಡಿಕೊಡುವ ಉದ್ದೇಶವಲ್ಲದೆ ಬೇರೇನೂ ಕಾಣುತ್ತಿಲ್ಲ. ಶಾಸನಸಭೆಗೆ ಬಂದು ಕುಳಿತಿರುವ ರಿಯಲ್‌ ಎಸ್ಟೇಟ್‌ ಉದ್ಯಮದ ಮೋಹಿಗಳು ಈ ನಡೆಯ ಹಿಂದಿರುವ ವಾಸನೆ ಬಡಿಯುತ್ತಿದೆ. ಸಂವಿಧಾನದ ಕಲಂ 21ರ ಪ್ರಕಾರ, ಆರೋಗ್ಯಕರ ಪರಿಸರದಲ್ಲಿ ಬದುಕುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆ ಹಕ್ಕನ್ನೇ ಕಿತ್ತುಕೊಳ್ಳುವ ಯತ್ನ ಇದಾಗಿದೆ. ಹೊಸ ಮಸೂದೆಯ ಕರಿನೆರಳು ರಾಜ್ಯದ ಸುಮಾರು 250 ಪಟ್ಟಣ ಹಾಗೂ ನಗರ ಪ್ರದೇಶಗಳ ಮೇಲೆ ಬೀಳಲಿದೆ. ನಗರಗಳ ಪಾಲಿಗೆ ಬಯಲು ಪ್ರದೇಶಗಳೆಂದರೆ ಶ್ವಾಸಕೋಶಗಳಿದ್ದಂತೆ. ಆ ಉಸಿರುದಾಣಗಳ ಕತ್ತನ್ನೇ ಹಿಸುಕಲು ಸರ್ಕಾರ ಹೊರಟಿದೆ. ಈ ನಿರ್ಧಾರದಿಂದ ವಸತಿಪ್ರದೇಶದ ಪ್ರಮಾಣ ಹೆಚ್ಚಾಗಿ, ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ನಿವೇಶನ ದೊರೆಯಲಿದೆ ಎಂಬ ವಾದ ದಿಕ್ಕು ತಪ್ಪಿಸುವಂತಹದ್ದು. ಭೂಮಾಫಿಯಾಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಮಸೂದೆ ತಂದಿರುವುದು ಮೇಲ್ನೋಟಕ್ಕೇ ಕಾಣುವ ಸತ್ಯ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಯ್ದೆಗೂ ಇದೇ ರೀತಿ ತಿದ್ದುಪಡಿ ತರುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಹಾಗೇನಾದರೂ ಮಾಡಿದಲ್ಲಿ ಮೊದಲೇ ಬಯಲು ಪ್ರದೇಶವನ್ನು ಕಳೆದುಕೊಂಡು ನಲುಗಿರುವ ಈ ಮಹಾನಗರದ ಪಾಲಿಗೆ ಅಂತಹ ತಿದ್ದುಪಡಿ ಮರಣಶಾಸನವೇ ಆಗಲಿದೆ. ಹಸಿರು ವಲಯವನ್ನು ಬಹುಮಟ್ಟಿಗೆ ಕಳೆದುಕೊಂಡಿರುವ ಇಲ್ಲಿನ ಜನ ಅದರ ಬಿಸಿಯನ್ನೀಗ ಅನುಭವಿಸುತ್ತಿದ್ದಾರೆ. ಐವತ್ತು ವರ್ಷಗಳಲ್ಲಿ ಆಗಿರುವ ಬೆಂಗಳೂರು ನಗರ ರೂಪಾಂತರದ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಂಶೋಧನಾ ವರದಿ ಸಿದ್ಧಪಡಿಸಿದ್ದಾರೆ. ನಗರದ ಆಗಿನ ನಕ್ಷೆ ಹಸಿರಾಗಿದ್ದರೆ, ಈಗ ಕೆಂಪಾಗಿದೆ. ಅಂದರೆ ಮರ–ಗಿಡಗಳಿದ್ದ ಪ್ರದೇಶವನ್ನೆಲ್ಲ ಕಟ್ಟಡಗಳೇ ಆಕ್ರಮಿಸಿಬಿಟ್ಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರು ವಾಸಯೋಗ್ಯವಾಗಿ ಉಳಿಯಲಿಕ್ಕಿಲ್ಲ ಎನ್ನುವ ಭೀತಿಯೂ ವ್ಯಕ್ತವಾಗಿದೆ. ಕೆರೆ–ಕುಂಟೆಗಳನ್ನು ರಕ್ಷಿಸುವ ಕಠಿಣ ಕಾನೂನುಗಳು ಇದ್ದಾಗಲೂ ಕೆರೆಗಳನ್ನೇ ನುಂಗಿ ಬಡಾವಣೆ ಮಾಡಿದ ಕುಖ್ಯಾತಿ ಬಿಡಿಎಗೆ ಇದೆ. ಅದರ ಭೂದಾಹಕ್ಕೆ ತಕ್ಕಂತೆ ಕಾಯ್ದೆಯನ್ನೇ ಮಾಡಿಕೊಟ್ಟರೆ ಲಗಾಮು ಹಾಕುವವರೇ ಇಲ್ಲವಾಗುತ್ತದೆ. ಕಾಂಗ್ರೆಸ್‌ ಸರ್ಕಾರದ ಈ ಧೋರಣೆಯ ವಿರುದ್ಧ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ದೊಡ್ಡದಾಗಿ ಧ್ವನಿ ಎತ್ತಬೇಕಿತ್ತು. ಆದರೆ, ರಾಜಕೀಯವಾಗಿ ಲಾಭ ತಂದುಕೊಡುವ ಭಾವನಾತ್ಮಕ ವಿಷಯಗಳು ಆ ಪಕ್ಷಗಳಿಗೆ ಬೇಕೇ ಹೊರತು ಸಮಾಜದ ಮೇಲೆ ದೂರಗಾಮಿ ಪರಿಣಾಮ ಬೀರುವಂತಹ ಇಂತಹ ವಿಷಯಗಳನ್ನು ಕಟ್ಟಿಕೊಂಡು ಅವುಗಳಿಗೆ ಏನಾಗಬೇಕಿದೆ? ಆಡಳಿತ ವ್ಯವಸ್ಥೆ ‘ಜನ ವಿರೋಧಿ’ ನಿಲುವು ತಳೆದಾಗ ನಾಗರಿಕ ಸಂಘಟನೆಗಳು ಒಟ್ಟಾಗಿ ಅದರ ವಿರುದ್ಧ ಹೋರಾಡದೆ ಬೇರೆ ವಿಧಿಯಿಲ್ಲ. ಮಸೂದೆಯನ್ನು ಹಿಂದಿರುಗಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸುವುದು ತುರ್ತಾಗಿ ಆಗಬೇಕಿರುವ ಕೆಲಸ. ಸೂಕ್ತ ಸ್ಪಂದನೆ ಸಿಗದಿದ್ದರೆ ಕಾನೂನು ಹೋರಾಟದ ಹಾದಿ ಇದ್ದೇ ಇದೆ. ಆ ನಿಟ್ಟಿನಲ್ಲಿ ಈಗಾಗಲೇ ಕೆಲವು ನಾಗರಿಕ ಸಂಘಟನೆಗಳು ಹೆಜ್ಜೆ ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.