ವೈದ್ಯಕೀಯ ಗರ್ಭಪಾತ ಕಾನೂನು ತಿದ್ದುಪಡಿ ಪ್ರಕ್ರಿಯೆ ತ್ವರಿತಗೊಳಿಸಿ ತಂತ್ರಜ್ಞಾನದ ಬೆಳವಣಿಗೆಯಿಂದ ಸಾಧ್ಯವಾಗಿರುವಂತಹ ಸನ್ನಿವೇಶಗಳನ್ನು ನಿರ್ವಹಿಸಲು ನಮ್ಮ 45 ವರ್ಷ ಹಳೆಯದಾದ ಗರ್ಭಪಾತ ಕಾನೂನಿಗೆ ತಿದ್ದುಪಡಿ ಅವಶ್ಯ . 24 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮೋದನೆ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಅನೇಕ ಮಹಿಳೆಯರಿಗೆ ಹೊಸ ಭರವಸೆ ಮೂಡಿಸುವಂತಹದ್ದು. 1971ರ ವೈದ್ಯಕೀಯ ಗರ್ಭಪಾತ ಕಾಯಿದೆ (ಎಂಟಿಪಿ ಕಾಯಿದೆ) ಪ್ರಕಾರ, ಗರ್ಭ ಧರಿಸಿದ 20 ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸಲಾಗಿದೆ. ಹೀಗಿದ್ದೂ, ತಾಯಿಯ ಆರೋಗ್ಯಕ್ಕೆ ತೀವ್ರ ಅಪಾಯ ಕಂಡುಬಂದಲ್ಲಿ 20ನೇ ವಾರದ ನಂತರವೂ ವೈದ್ಯರ ಶಿಫಾರಸಿನ ಪ್ರಕಾರ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು 2002ರಲ್ಲಿ ತಿದ್ದುಪಡಿಗೊಳಗಾದ ಈ ಕಾಯಿದೆಯ 5ನೇ ವಿಧಿ ಹೇಳುತ್ತದೆ. ಈ ಅವಕಾಶವನ್ನು ಸುಪ್ರೀಂ ಕೋರ್ಟ್‌ ಈಗ ಎತ್ತಿ ಹಿಡಿದಿದೆ. ‘ಮಹಿಳೆಯ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಆಕೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ ಅಪಾಯಕ್ಕೆ ಸಿಲುಕುತ್ತದೆ’ ಎಂಬ ಬಗ್ಗೆ ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯರ ಮಂಡಳಿ ನೀಡಿರುವ ವರದಿ ಆಧರಿಸಿ ಸುಪ್ರೀಂ ಕೋರ್ಟ್ ಪೀಠ ಈ ತೀರ್ಪು ನೀಡಿದೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನಿಂದ ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ ಯುವತಿಯ ನೋವಿಗೆ ಸುಪ್ರೀಂ ಕೋರ್ಟ್ ಸ್ಪಂದಿಸಿರುವುದು ಸ್ವಾಗತಾರ್ಹ. 20ಕ್ಕೂ ಹೆಚ್ಚು ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ನ್ಯಾಯಾಂಗ ಅನುಮೋದನೆ ನೀಡುತ್ತಿರುವುದು ರಾಷ್ಟ್ರದಲ್ಲಿ ಇದೇ ಮೊದಲು. ಮಹಿಳೆಯ ಆಯ್ಕೆಯ ಹಕ್ಕು ಎನ್ನುವುದಕ್ಕಿಂತ ಜನನ ನಿಯಂತ್ರಣವನ್ನೇ ಮುಖ್ಯ ಉದ್ದೇಶವಾಗಿರಿಸಿಕೊಂಡು ಭಾರತದ ಗರ್ಭಪಾತ ಕಾನೂನು 1971ರಲ್ಲಿ ರಚನೆಯಾಗಿದೆ. ಆಗಿನ ಹಾಗೂ ಈಗಿನ ಕಾಲದ ವಾಸ್ತವಗಳು ಬೇರೆಯಾಗಿವೆ. ಜೊತೆಗೆ ವೈದ್ಯಕೀಯ ತಂತ್ರಜ್ಞಾನದಲ್ಲೂ ಬೆಳವಣಿಗೆಯಾಗಿದೆ. 20 ವಾರಗಳ ನಂತರವೂ ಸುರಕ್ಷಿತ ಗರ್ಭಪಾತ ಈಗ ಸಾಧ್ಯ. ಜನ್ಮಜಾತವಾಗಿ ಬರಬಹುದಾದ ಹೃದಯದೋಷಗಳಂತಹ ವೈಕಲ್ಯಗಳು ಪತ್ತೆಯಾಗುವುದೇ ಗರ್ಭ ಧರಿಸಿದ 20 ವಾರಗಳ ನಂತರ. ಇಂತಹ ವೈಕಲ್ಯ ಪತ್ತೆಯಾದರೂ ಇದರಿಂದ ತಾಯಿಯ ಜೀವಕ್ಕೆ ಅಪಾಯ ಇಲ್ಲ ಎಂದಾದಲ್ಲಿ ಗರ್ಭಪಾತಕ್ಕೆ ಈಗಿರುವ ಕಾನೂನಿನ ಪ್ರಕಾರ ಅವಕಾಶ ಇಲ್ಲ. ಈ ವಿಚಾರವನ್ನು ಮುಂಬೈನ ನಿಖಿತಾ ಹಾಗೂ ಹರೇಶ್ ದಂಪತಿ ಬಾಂಬೆ ಹೈಕೋರ್ಟ್‌ನಲ್ಲಿ 2008ರಲ್ಲಿ ಪ್ರಶ್ನಿಸಿದ್ದರು. ಹೃದಯ ತೊಂದರೆಯಿಂದ ಜನಿಸಲಿರುವ ಶಿಶುವನ್ನು ಸಾಕಲು ಸಾಧ್ಯವಿಲ್ಲವೆಂದು 25ನೇ ವಾರದ ಗರ್ಭದ ಗರ್ಭಪಾತಕ್ಕೆ ಈ ದಂಪತಿ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಪುರಸ್ಕರಿಸಿರಲಿಲ್ಲ. ನಂತರ ನಿಖಿತಾಗೆ ಸಹಜ ಗರ್ಭಪಾತವಾಗಿದ್ದು ಬೇರೆ ವಿಚಾರ. ಆದರೆ ಈ ವಿಚಾರದ ಚರ್ಚೆ ತಾರ್ಕಿಕ ಅಂತ್ಯ ಕಂಡಿಲ್ಲ. ತಂತ್ರಜ್ಞಾನದ ಬೆಳವಣಿಗೆಯಿಂದ ಸಾಧ್ಯವಾಗಿರುವ ಇಂತಹ ಸನ್ನಿವೇಶಗಳನ್ನು ನಿರ್ವಹಿಸಲು ನಮ್ಮ 45 ವರ್ಷ ಹಳೆಯದಾದ ಗರ್ಭಪಾತ ಕಾನೂನಿಗೆ ತಿದ್ದುಪಡಿ ಅವಶ್ಯ. ಈ ನಿಟ್ಟಿನಲ್ಲಿ 2014ರ ಅಕ್ಟೋಬರ್‌ನಲ್ಲಿ ವೈದ್ಯಕೀಯ ಗರ್ಭಪಾತ ಕಾನೂನು ತಿದ್ದುಪಡಿ ಕರಡು ಮಸೂದೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಿದ್ಧಪಡಿಸಿದ್ದು ನನೆಗುದಿಗೆ ಸಿಲುಕಿದೆ. 24 ವಾರಗಳವರೆಗೆ ಕೆಲವು ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಈ ಮಸೂದೆ ಪ್ರಕಾರ ಅವಕಾಶವಿದೆ. ಆದರೆ ಇದು ಕಾನೂನು ಆಗಲು ಇರುವ ಅಡೆತಡೆಗಳಾದರೂ ಏನು ಎಂಬುದು ಪ್ರಶ್ನೆ. ಹೆಣ್ಣು ಭ್ರೂಣಗಳ ಹತ್ಯೆಗೆ ಎಂಟಿಪಿ ಕಾಯಿದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿರುವ ವಿಚಾರವನ್ನು ಇಂತಹ ಚರ್ಚೆಯ ಸಂದರ್ಭದಲ್ಲಿ ಮುಂದಿಡಲಾಗುತ್ತದೆ. ಇದು ಕಹಿ ವಾಸ್ತವವೂ ಹೌದು. ಆದರೆ ಹೆಣ್ಣು ಭ್ರೂಣ ಹತ್ಯೆ ಎಂಟಿಪಿ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ. ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಹಾಗೂ ದುರ್ಬಳಕೆ ತಡೆ) ಕಾಯಿದೆ (ಪಿಸಿ ಮತ್ತು ಪಿಎನ್‌ಡಿಟಿ ಕಾಯಿದೆ) 2003ರಿಂದ ರಾಷ್ಟ್ರದಲ್ಲಿ ಜಾರಿಯಲ್ಲಿದೆ. ಈ ಕಾಯಿದೆ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ ಎಂಬುದು ಇಳಿಮುಖವಾಗುತ್ತಿರುವ ಗಂಡು, ಹೆಣ್ಣುಮಕ್ಕಳ ಅನುಪಾತದಿಂದ ವ್ಯಕ್ತ. ಹೀಗಾಗಿ ಪಿಎನ್‌ಡಿಟಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಈ ವಿಚಾರ ಎಂಟಿಪಿ ಕಾಯಿದೆ ತಿದ್ದುಪಡಿಗೆ ಅಡ್ಡಿಯಾಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.