ಕೇಂದ್ರ ಮಧ್ಯಪ್ರವೇಶಿಸಲಿ ಸಂಯಮ ಪಾಲಿಸಿ ನೆಲ,ಜಲ, ಭಾಷೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಗಮನಹರಿಸುವುದನ್ನು ರಾಜ್ಯದ ರಾಜಕೀಯ ಮುಖಂಡರು ರೂಢಿಸಿಕೊಳ್ಳಬೇಕು. ಮಹಾದಾಯಿ ಉಪನದಿಗಳಾದ ಕಳಸಾ–ಬಂಡೂರಿಯಿಂದ 7.56 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅನುಮತಿ ಕೋರಿ ರಾಜ್ಯ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹಾದಾಯಿ ಜಲವಿವಾದ ನ್ಯಾಯಮಂಡಳಿ ತಿರಸ್ಕರಿಸಿದೆ. ಇದರಿಂದ ರಾಜ್ಯದ ನಾಲ್ಕು ಜಿಲ್ಲೆಗಳ ಒಂಬತ್ತು ತಾಲ್ಲೂಕುಗಳ ಜನ–ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಆಶಯಕ್ಕೆ ಹಿನ್ನಡೆಯಾಗಿದೆ. ಕುಡಿಯುವ ನೀರಿನ ವಿಚಾರವಾದ್ದರಿಂದ ಈ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನ್ಯಾಯಮಂಡಳಿ ನೋಡದಿರುವುದು ವಿಷಾದನೀಯ. ಗದಗದಂತಹ ದೊಡ್ಡ ನಗರಕ್ಕೆ 30 ದಿನಗಳಿಗೊಮ್ಮೆ ನೀರು ಕೊಡಲಾಗುತ್ತಿದೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಕುಡಿಯುವ ನೀರಿನ ಉದ್ದೇಶದಿಂದ ಸಲ್ಲಿಸಿರುವ ಈ ಬೇಡಿಕೆ ಪ್ರಾಮಾಣಿಕವಾಗಿರುವುದರಿಂದ ಈಗ ಬಹುತೇಕ ಪೂರ್ಣಗೊಂಡಿರುವ ಕಳಸಾ ನಾಲಾದಿಂದ ತಕ್ಷಣವೇ ನೀರು ಪಡೆದುಕೊಳ್ಳಲು ನ್ಯಾಯಮಂಡಳಿ ಅನುಮತಿ ನೀಡಲಿದೆ ಎಂಬಂತಹ ನಿರೀಕ್ಷೆ ಇತ್ತು. ಕಳೆದ ಒಂದು ವರ್ಷದಿಂದ ನಿರಂತರವಾಗಿ ನರಗುಂದ ಮತ್ತು ನವಲಗುಂದಗಳಲ್ಲಿ ಧರಣಿ, ಪ್ರತಿಭಟನೆ ನಡೆಸುತ್ತಿರುವ ವಿವಿಧ ಸಂಘಟನೆಗಳು, ನ್ಯಾಯಮಂಡಳಿ ನೀಡಬಹುದಾದ ತೀರ್ಪಿನ ಬಗ್ಗೆ ಆಶಾಭಾವನೆ ಹೊಂದಿದ್ದವು. ಆದರೆ ಈಗ ಈ ಮಧ್ಯಂತರ ತೀರ್ಪಿನ ಬಗ್ಗೆ ನದಿ ಪಾತ್ರದ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರು ಹಾಗೂ ಸಾರ್ವಜನಿಕರು ಕುಪಿತರಾಗಿದ್ದಾರೆ. ತಾಳ್ಮೆ ಕಳೆದುಕೊಂಡ ಜನರು ಸರ್ಕಾರಿ ಕಚೇರಿಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ನಾಲ್ಕೂ ಜಿಲ್ಲೆಗಳಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿದೆ. ಆದರೆ ಈ ರೀತಿ ಆಕ್ರೋಶ ವ್ಯಕ್ತಪಡಿಸುವುದು ಬೇಡ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವುಗಳ ರಿಪೇರಿ ಖರ್ಚನ್ನೂ ನಾವೇ ಭರಿಸಬೇಕಾಗುತ್ತದೆ ಎಂಬುದನ್ನು ಪ್ರತಿಭಟನಾಕಾರರು ನೆನಪಿಟ್ಟುಕೊಳ್ಳಬೇಕು. ಜತೆಗೆ ತೀರಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಕೂಡ ಸರಿಯಲ್ಲ. ಈಗ ಬಂದಿರುವುದು ಮಧ್ಯಂತರ ತೀರ್ಪು ಅಷ್ಟೆ. ಇದೇನು ಐತೀರ್ಪು ಅಲ್ಲ. ಹೀಗಾಗಿ ತಾಳ್ಮೆ ಕಳೆದುಕೊಳ್ಳದೆ ಸಂಯಮ ವಹಿಸುವುದು ಅಗತ್ಯ. ಮಧ್ಯಂತರ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಮರ್ಪಕವಾದ ದಾಖಲೆಗಳನ್ನು, ಹೇಳಿಕೆಗಳನ್ನು ಸಲ್ಲಿಸಿಲ್ಲ ಎಂಬುದನ್ನು ನ್ಯಾಯಮಂಡಳಿಯು ಗುರುತಿಸಿದೆ. ಈ ವಿಚಾರದಲ್ಲಿ ತನ್ನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದೆನಿಸುತ್ತದೆ. ಅಗತ್ಯವಾದ ದಾಖಲೆಗಳು, ವಿಸ್ತೃತ ಯೋಜನಾ ವರದಿಗಳನ್ನು ನ್ಯಾಯಮಂಡಳಿಗೆ ಸಲ್ಲಿಸಿ, ತನ್ನ ಬೇಡಿಕೆಯನ್ನು ಸಮರ್ಥವಾಗಿ ಮಂಡಿಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಕಾನೂನಾತ್ಮಕವಾಗಿ ಸಮರ್ಪಕವಾಗಿ ಹೋರಾಟ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಹಾಗೆಯೇ ನೆಲ, ಜಲ, ಭಾಷೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಗಮನಹರಿಸುವುದನ್ನು ರಾಜ್ಯದ ರಾಜಕೀಯ ಮುಖಂಡರು ರೂಢಿಸಿಕೊಳ್ಳಬೇಕು. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಸದರನ್ನು ನೋಡಿಯಾದರೂ ನಮ್ಮ ಸಂಸದರು ಪಾಠ ಕಲಿಯಬೇಕಿತ್ತು. ರಾಜ್ಯದ ಹಿತದ ಪ್ರಶ್ನೆ ಬಂದಾಗ ಒಟ್ಟಾಗಿ ಹೋರಾಟ ಮಾಡುವ ಚಿಂತನೆಯೇ ನಮ್ಮ ಸಂಸದರಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅಲ್ಲದೆ, ದೊರೆಯುವ ಎಲ್ಲಾ ಅವಕಾಶಗಳನ್ನು ತಮ್ಮ ರಾಜಕೀಯ ಏಳಿಗೆಗೆ ಏಣಿ ಮಾಡಿಕೊಳ್ಳುವ ಆಲೋಚನೆಯನ್ನು ಮೊದಲು ತೊರೆಯಬೇಕು. ಮಹಾದಾಯಿ ವಿಚಾರದಲ್ಲಿ ರಾಜ್ಯದ ಸಂಸದರು ಅದರಲ್ಲೂ ಬಿಜೆಪಿ ಸಂಸದರು ಹೆಚ್ಚು ಗಂಭೀರವಾಗಿ ನಡೆದುಕೊಳ್ಳಬೇಕಿತ್ತು. ರಾಜ್ಯದ ಹಿತ ಕಾಯಲು ಬಿಜೆಪಿ ಸಂಸದರು ಈಗಲಾದರೂ ಮುಂದಾಗಬೇಕು. ಅಲ್ಲದೆ, ಕೇಂದ್ರ ಸರ್ಕಾರ ಕೂಡ ವಿವಾದವನ್ನು ಬಗೆಹರಿಸಲು ಆಸಕ್ತಿ ತೋರಿಸಬೇಕಿತ್ತು. ಆದರೆ ಇಲ್ಲಿಯವರೆಗಿನ ಬೆಳವಣಿಗೆಯನ್ನು ನೋಡಿದರೆ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಹೆಚ್ಚು ಗಮನ ಕೊಟ್ಟಂತಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಬಹಳ ಹಿಂದೆಯೇ ಹೇಳಿದೆ. ಈ ಅಂಶವನ್ನು ತಮ್ಮ ಪಕ್ಷದ ಸರ್ಕಾರವೇ ಇರುವ ಗೋವಾ ಹಾಗೂ ಮಹಾದಾಯಿ ನದಿ ವ್ಯಾಪ್ತಿಯ ಮಹಾರಾಷ್ಟ್ರಕ್ಕೂ ತಿಳಿ ಹೇಳುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಬೇಕು. ಆ ಮೂಲಕ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ವಿವಾದವನ್ನು ಬಗೆಹರಿಸಲು ಮನಸ್ಸು ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.