ಟರ್ಕಿ ಸೇನಾ ದಂಗೆ ವಿಫಲ ಪ್ರಜಾತಂತ್ರ ಮೌಲ್ಯ ಕುಂದದಿರಲಿ ಟರ್ಕಿಯಲ್ಲಿ ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದ ಸೈನಿಕರ ಸಣ್ಣ ಗುಂಪನ್ನು ಪ್ರಜೆಗಳೇ ಸದೆಬಡಿದಿದ್ದಾರೆ. ಚುನಾಯಿತ ಅಧ್ಯಕ್ಷ ರಿಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರ ಬೆನ್ನಿಗೆ ನಿಂತ ಆಡಳಿತಾರೂಢ ಪಕ್ಷ ಮತ್ತು ಮೂರು ಪ್ರಮುಖ ಪ್ರತಿಪಕ್ಷಗಳೂ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿ ಸೇನಾ ಕ್ರಾಂತಿಯನ್ನು ಕೆಲವೇ ಗಂಟೆಗಳಲ್ಲಿಯೇ ವಿಫಲಗೊಳಿಸಿದ್ದು ಅಪರೂಪದ ವಿದ್ಯಮಾನ. ಸರ್ಕಾರಕ್ಕೆ ನಿಷ್ಠವಾದ ಸೇನೆ ಸಹ ಈ ವಿಷಯದಲ್ಲಿ ಪ್ರಬುದ್ಧತೆ ಪ್ರದರ್ಶಿಸಿತು. ಕ್ಷಿಪ್ರ ಕ್ರಾಂತಿಯನ್ನು ವಿಫಲಗೊಳಿಸಲು ಬೀದಿಗಿಳಿದ ಜನರಿಗೆ ಒತ್ತಾಸೆಯಾಗಿ ನಿಂತು ವೃತ್ತಿಪರತೆ ಮೆರೆಯಿತು. ವಾರಾಂತ್ಯದ ವಿಶ್ರಾಂತಿಗಾಗಿ ರಾಜಧಾನಿಯಿಂದ ಹೊರ ಹೋಗಿದ್ದ ಎರ್ಡೊಗನ್‌ ಕೂಡ ವಿಷಯ ತಿಳಿದ ತಕ್ಷಣ ಸುಮ್ಮನಿರಲಿಲ್ಲ. ಸಾಮಾಜಿಕ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡರು. ಖಾಸಗಿ ಟಿವಿ ಕೇಂದ್ರಗಳನ್ನು ವಶಪಡಿಸಿಕೊಳ್ಳಲು, ಮೊಬೈಲ್‌ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಸ್ಥಗಿತಗೊಳಿಸಲು ಬಂಡುಕೋರರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸೇನಾ ಬಂಡಾಯ ಕೆಲವೇ ಗಂಟೆಗಳಲ್ಲಿ ಠುಸ್‌ ಆಯಿತು. ಆದರೆ ಬಂಡಾಯ ಯತ್ನ ಮತ್ತು ನಂತರ ನಡೆದ ಕಾಳಗದಲ್ಲಿ ಸಾಕಷ್ಟು ರಕ್ತಪಾತವೂ ಆಗಿದೆ. 250ಕ್ಕೂ ಹೆಚ್ಚು ಸೈನಿಕರು ಮತ್ತು ನಾಗರಿಕರು ಸಾವಿಗೀಡಾಗಿದ್ದಾರೆ. ಯುರೋಪ್‌ ಮತ್ತು ಏಷ್ಯಾ ಖಂಡಗಳೆರಡರಲ್ಲೂ ಹರಡಿಕೊಂಡಿರುವ ಟರ್ಕಿ ದೇಶಕ್ಕೆ ಸೇನಾ ದಂಗೆ ಹೊಸದೇನಲ್ಲ. ಆದರೆ ನಮ್ಮ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್‌ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಅಧಿಕಾರದ ರುಚಿ ಅನುಭವಿಸಿದ ಸೇನೆಗೂ ಟರ್ಕಿ ಸೇನೆಗೂ ಮೂಲಭೂತವಾಗಿ ಒಂದು ವ್ಯತ್ಯಾಸವಿದೆ. ಉಳಿದ ಕಡೆ ಚುನಾಯಿತ ಸರ್ಕಾರವನ್ನು ಅಥವಾ ಸರ್ವಾಧಿಕಾರಿಗಳನ್ನು ಪದಚ್ಯತಗೊಳಿಸುವುದರ ಹಿಂದೆ ಸೇನೆಗೆ ಇರುವುದು ಮುಖ್ಯವಾಗಿ ಅಧಿಕಾರದ ದಾಹ. ಅಲ್ಲಿ ಯಾವ ಸಿದ್ಧಾಂತವೂ ಇಲ್ಲ. ಆದರೆ ಟರ್ಕಿ ಸೇನೆ ಸ್ವಲ್ಪ ಭಿನ್ನ. ಅದು ದೇಶದ ಜಾತ್ಯತೀತ ಸ್ವರೂಪವನ್ನು ಗೌರವಿಸಿ, ಕಾಪಾಡಿಕೊಂಡೇ ಬಂದಿದೆ. 1960ರ ನಂತರ ನಾಲ್ಕು ಸಲ ಅದು ಅಧಿಕಾರವನ್ನು ಕೈವಶ ಮಾಡಿಕೊಂಡಿತ್ತು. 1997 ರಲ್ಲಂತೂ ಇಸ್ಲಾಮಿಕ್‌ ಆಡಳಿತ ಪದ್ಧತಿ ತರಲು ಯತ್ನಿಸುತ್ತಿದ್ದ ಸರ್ಕಾರವನ್ನೇ ಕಿತ್ತೊಗೆದಿತ್ತು. 13 ವರ್ಷಗಳ ಹಿಂದೆ ಚುನಾವಣೆಯಲ್ಲಿ ಗೆದ್ದು ಎರ್ಡೊಗನ್‌ ಅಧಿಕಾರ ವಹಿಸಿಕೊಂಡಾಗಲೂ, ‘ದೇಶದ ಜಾತ್ಯತೀತ ಸ್ವರೂಪಕ್ಕೆ ಯಾವುದೇ ಧಕ್ಕೆ ತರಬಾರದು’ ಎಂದು ಅವರಿಗೆ ಎಚ್ಚರಿಕೆ ನೀಡಿತ್ತು. ನ್ಯಾಟೊ (ಉತ್ತರ ಅಟ್ಲಾಂಟಿಕ್‌ ಸುರಕ್ಷತೆಗೆ ಒಪ್ಪಂದ ಮಾಡಿಕೊಂಡ ದೇಶಗಳ ಕೂಟ) ಸದಸ್ಯ ರಾಷ್ಟ್ರವಾಗಿರುವ ಟರ್ಕಿ, ಭೌಗೋಳಿಕವಾಗಿಯೂ ಆಯಕಟ್ಟಿನ ಸ್ಥಳದಲ್ಲಿ ಇರುವುದರಿಂದ ಅಲ್ಲಿನ ಯಾವುದೇ ಅಭದ್ರತೆ, ರಾಜಕೀಯ ಅಸ್ಥಿರತೆ ಅಲ್ಲಿನ ಇಡೀ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆ ದೃಷ್ಟಿಯಿಂದ ಚುನಾಯಿತ ಸರ್ಕಾರದ ಮೇಲುಗೈ, ವಿಶ್ವಶಾಂತಿಯ ಅದರಲ್ಲೂ ವಿಶೇಷವಾಗಿ ಆ ವಲಯದ ಹಿತಾಸಕ್ತಿಯ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ವ್ಯಕ್ತಿಯಾಗಿ ಅಧ್ಯಕ್ಷ ಎರ್ಡೊಗನ್‌ ಬಗ್ಗೆ ಇದೇ ಮಾತನ್ನು ಹೇಳುವುದು ಕಷ್ಟ. ಅವರು ಮೂಲತಃ ಇಸ್ಲಾಮಿಕ್‌ ಮೂಲಭೂತವಾದಿ. ಧಾರ್ಮಿಕ ಅಸಹಿಷ್ಣುತೆಗಾಗಿ ಅವರನ್ನು 1994ರಲ್ಲಿ ಇಸ್ತಾಂಬುಲ್‌ ಮೇಯರ್‌ ಸ್ಥಾನದಿಂದ ಪದಚ್ಯುತಗೊಳಿಸಿ 10 ತಿಂಗಳು ಜೈಲಿಗೆ ಕಳಿಸಲಾಗಿತ್ತು. ನಂತರದ ಬೆಳವಣಿಗೆಗಳಲ್ಲಿ 2003ರಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದು 2014ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದರು. ಅಧ್ಯಕ್ಷೀಯ ಮಾದರಿ ಸರ್ಕಾರ ತರುವ ಅವರ ಹುನ್ನಾರಕ್ಕೆ ಸಾಕಷ್ಟು ವಿರೋಧಗಳೂ ಇವೆ. ಈಗ ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹೊಸಕಿ ಹಾಕಲು ಅವರು ಈ ಬಂಡಾಯವನ್ನು ನೆಪವಾಗಿ ಬಳಸಿಕೊಳ್ಳುವ ಅಪಾಯಗಳೂ ಇವೆ. ಈಗಾಗಲೆ ಅಂಥ ಲಕ್ಷಣಗಳನ್ನು ಅವರು ತೋರಿಸಿದ್ದಾರೆ. ಸುಮಾರು 3 ಸಾವಿರ ಸೈನಿಕರು ಮತ್ತು ಸೇನಾಧಿಕಾರಿಗಳು ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 3 ಸಾವಿರ ನ್ಯಾಯಾಧೀಶರು ಮತ್ತು ವಕೀಲರನ್ನು ವಜಾ ಮಾಡಿ ಬಂಧನದ ವಾರಂಟ್‌ ಹೊರಡಿಸಲಾಗಿದೆ. ಎರ್ಡೊಗನ್‌ ಅವರು ಸ್ವಭಾವತಃ ನಿರಂಕುಶವಾದಿ. ಈ ಹಿಂದೆಯೂ ಮಾಧ್ಯಮಗಳ ಮೇಲೆ ನಾನಾ ನಿಯಂತ್ರಣಗಳನ್ನು ಹೇರಲಾಗಿದೆ. ಈ ಸಲದ ದಂಗೆಗೆ ಅಮೆರಿಕದಲ್ಲಿ ಆಶ್ರಯ ಪಡೆದಿರುವ ಧರ್ಮಗುರು ಫೆತುಲ್ಲಾ ಗುಲೆನ್‌ ಪ್ರಚೋದನೆ ಕಾರಣ ಎಂದು ಎರ್ಡೊಗನ್‌ ಆರೋಪ ಮಾಡಿದ್ದಾರೆ. ಗುಲೆನ್‌ ಬೆಂಬಲಿಗರನ್ನು ಬಲಿಪಶು ಮಾಡುತ್ತಿದ್ದಾರೆ. ಇದನ್ನೆಲ್ಲ ಬಿಟ್ಟು ತಮ್ಮ ಕಾರ್ಯಶೈಲಿ ಬಗ್ಗೆ ಅಸಮಾಧಾನ ಇದೆ ಎಂಬುದನ್ನು ಎರ್ಡೊಗನ್‌ ಅರ್ಥ ಮಾಡಿಕೊಳ್ಳಬೇಕು. ಟರ್ಕಿಯ ಜಾತ್ಯತೀತ, ಜನತಂತ್ರ ಸ್ವರೂಪ ಬಲಪಡಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.