ನಿಷ್ಪಕ್ಷಪಾತ ತನಿಖೆ ನಡೆಯಲಿ ಸತ್ಯ ಹೊರಬರಲಿ ಸಚಿವ ಸ್ಥಾನಕ್ಕೆ ಕೆ.ಜೆ. ಜಾರ್ಜ್‌ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆಯ ಪ್ರಕರಣದಲ್ಲಿ ಅವರ ಕುಟುಂಬದವರು ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಈ ಮೂಲಕ ಮೊದಲ ಜಯ ಸಿಕ್ಕಿದಂತಾಗಿದೆ. ರಾಜೀನಾಮೆಗೆ ಒತ್ತಾಯಿಸಿ ವಿಧಾನ ಮಂಡಲದಲ್ಲಿ ಧರಣಿ, ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಹೋರಾಟಕ್ಕೂ ಇದರಿಂದ ಬಲ ಬಂದಿದೆ. ಗಣಪತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸಚಿವ ಜಾರ್ಜ್‌, ಹಿರಿಯ ಐಪಿಎಸ್‌ ಅಧಿಕಾರಿಗಳಾದ ಎ.ಎಂ.ಪ್ರಸಾದ್‌ ಮತ್ತು ಪ್ರಣಬ್‌ ಮೊಹಂತಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಮಡಿಕೇರಿಯ ಜೆಎಂಎಫ್‌ ನ್ಯಾಯಾಲಯವು ಆದೇಶಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಚಿವ ಸಹೋದ್ಯೋಗಿಯ ರಾಜೀನಾಮೆ ಪಡೆಯದೆ ಬೇರೆ ದಾರಿ ಉಳಿದಿರಲಿಲ್ಲ. ತನ್ಮೂಲಕ ಗಣಪತಿ ಆತ್ಮಹತ್ಯೆಯ ಪ್ರಕರಣದಲ್ಲಿ ಸತ್ಯವನ್ನು ಅರಿಯುವ ಕಾನೂನು ಪ್ರಕ್ರಿಯೆ ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ಸಚಿವ ಜಾರ್ಜ್‌ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರ್ಟ್‌ನ ಈ ಸೂಚನೆ ಮುಖಭಂಗವೇ ಸರಿ. ಗಣಪತಿ ಪ್ರಕರಣವನ್ನು ನಿರ್ವಹಿಸುವಲ್ಲಿ ಆರಂಭದಲ್ಲೇ ಸರ್ಕಾರ ಎಡವಿತು. ಎಂ.ಕೆ.ಗಣಪತಿ ಆತ್ಮಹತ್ಯೆಗೆ ಕಾರಣ ವೈಯಕ್ತಿಕವೋ ವೃತ್ತಿಗೆ ಸಂಬಂಧಿಸಿದ್ದೋ ಎಂಬುದು ತನಿಖೆಯಿಂದ ಹೊರಬರಬೇಕು. ಈ ವಿಚಾರದಲ್ಲಿ ಸರಿಯಾದ ಸಾಕ್ಷ್ಯ ಇಲ್ಲದೆ ಯಾರೊಬ್ಬರನ್ನು ದೂಷಿಸುವುದೂ ಸಲ್ಲದು. ಆದರೆ ಸಂಸಾರದಲ್ಲಿ ನೆಮ್ಮದಿಯಿಲ್ಲದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಹೊರಟ ಸರ್ಕಾರ ಆರಂಭದಲ್ಲೇ ತಪ್ಪು ಹೆಜ್ಜೆ ಇಟ್ಟಿತು. ‘ಕಾನೂನು ಪ್ರಕ್ರಿಯೆಯ ಮುಂದೆ ಎಲ್ಲರೂ ಸಮಾನರು’ ಎನ್ನುವ ಸಂದೇಶವನ್ನು ಸಾರಬೇಕಿದ್ದ ಚುನಾಯಿತ ಸರ್ಕಾರ, ಸಚಿವರೊಬ್ಬರ ಕುರ್ಚಿ ಉಳಿಸಲು ಶತಾಯಗತಾಯ ಯತ್ನಿಸಿ, ಸಾರ್ವಜನಿಕ ಸಭ್ಯತೆಯ ಎಲ್ಲೆಗಳನ್ನೇ ಮೀರಿದ್ದು ವಿಷಾದನೀಯ. ಈ ಎಲ್ಲಾ ರಾಜಕೀಯ ವಿದ್ಯಮಾನಗಳಲ್ಲಿ ಒಂದು ವಾರ ಕಾಲ ವಿಧಾನಸಭೆಯ ಕಲಾಪ ನಡೆಯಲಿಲ್ಲ ಎಂಬುದನ್ನು ಮರೆಯಲಾಗದು. ಸಚಿವರ ವಿರುದ್ಧ ಆರೋಪಗಳು ಕೇಳಿಬರುವುದು ರಾಜ್ಯದ ರಾಜಕೀಯದಲ್ಲಿ ಹೊಸತೇನೂ ಅಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಇದಕ್ಕಿಂತಲೂ ಗಂಭೀರ ಹಾಗೂ ಅಶ್ಲೀಲ ಆರೋಪಗಳನ್ನು ಎದುರಿಸಿ ಹಲವು ಸಚಿವರು ರಾಜೀನಾಮೆ ಕೊಟ್ಟದ್ದಿದೆ. ಕೆಂಗಲ್‌ ಹನುಮಂತಯ್ಯ ಮತ್ತು ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲೂ ಇಬ್ಬರು ಸಚಿವರ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಆದರೆ ಆಗ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಆ ಸಜ್ಜನ ಸಚಿವರು ಸ್ವಯಂಪ್ರೇರಿತರಾಗಿ ತಕ್ಷಣವೇ ರಾಜೀನಾಮೆ ನೀಡಿದ್ದರು. ಹಳಬರ ಈ ಸಜ್ಜನಿಕೆಯನ್ನಾಗಲೀ, ಸಚಿವ ಸ್ಥಾನದ ಕುರಿತ ನಿರ್ಮೋಹವನ್ನಾಗಲೀ ಈಗಿನವರಿಂದ ನಿರೀಕ್ಷಿಸುವುದು ಕಷ್ಟ. ಆಡಳಿತ ಪಕ್ಷಕ್ಕೆ ಸಾಂವಿಧಾನಿಕ ಪಾವಿತ್ರ್ಯ ಅಥವಾ ನೈತಿಕ ಮೌಲ್ಯಗಳಿಗಿಂತ ಅಧಿಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ವಿರೋಧ ಪಕ್ಷದವರ ಹೋರಾಟವೂ ಇಲ್ಲಿ ರಾಜಕೀಯಪ್ರೇರಿತ. ಗಣಪತಿ ಆತ್ಮಹತ್ಯೆಯ ಬಗ್ಗೆ ಕೆಂಡಾಮಂಡಲವಾಗಿರುವ ಬಿಜೆಪಿ ನಾಯಕರು, ಅದಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿರುವ ಇನ್ನೊಬ್ಬ ಡಿವೈಎಸ್‌ಪಿ ಕಲ್ಲಪ್ಪ ಪ್ರಕರಣದ ತನಿಖೆಯ ಕುರಿತು ತುಟಿಪಿಟಕ್‌ ಎಂದಿಲ್ಲ. ಆ ಪ್ರಕರಣದಲ್ಲಿ ಅವರದ್ದೇ ಪಕ್ಷದ ನಾಯಕರೊಬ್ಬರ ಕುರಿತು ಆರೋಪಗಳಿರುವುದು ಇದಕ್ಕೆ ಕಾರಣ ಎಂಬುದು ಜನಮಾನಸದಲ್ಲಿದೆ. ಜತೆಗೆ ಮುಖ್ಯ ಆರೋಪಿಯಾದ ಸಂಘಪರಿವಾರದ ಪ್ರಭಾವಿ ಮುಖಂಡರೊಬ್ಬರು ತಲೆತಪ್ಪಿಸಿಕೊಂಡಿರುವುದೂ ಬಿಜೆಪಿ ನಾಯಕರ ಬಾಯಿ ಕಟ್ಟಿಹಾಕಿದಂತಿದೆ. ಪೊಲೀಸ್‌ ಅಧಿಕಾರಿಗಳ ಈ ಎರಡೂ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಲಿ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮಕ್ಕೆ ಆತೀತರಲ್ಲ ಎನ್ನುವುದು ಜನರಿಗೆ ಗೊತ್ತಾಗಬೇಕು. ಎರಡೂ ಪ್ರಕರಣಗಳ ಕಾನೂನು ಪ್ರಕ್ರಿಯೆ ಆದಷ್ಟು ಶೀಘ್ರ ಮುಗಿಯಲು ಸರ್ಕಾರ ಮುಂದೆ ನಿಂತು ಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.