ಉತ್ತರದಾಯಿತ್ವ, ವೃತ್ತಿಪರತೆಯತ್ತ ಕ್ರಿಕೆಟ್‌ ಆಡಳಿತದ ದಾಪುಗಾಲು ಭಾರತದಲ್ಲಿ ಕ್ರಿಕೆಟ್‌ ಆಡಳಿತಕ್ಕೆ ವೃತ್ತಿಪರತೆಯ ಅಂತಃಸತ್ವ ತುಂಬುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಬಲು ದೊಡ್ಡ ಕೊಡುಗೆ ನೀಡಿದೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಸಮಿತಿಯ ಶಿಫಾರಸುಗಳನ್ನು ಅದು ಒಪ್ಪಿಕೊಂಡಿರುವುದರಿಂದ ಈ ದೇಶದ ಕ್ರಿಕೆಟ್‌ ರಂಗದಲ್ಲಿ ಸಂಚಲನ ಉಂಟಾಗಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದು. ಇದರ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಸಹಜ. ಅಧಿಕಾರಕ್ಕೆ ಏರಿದವರು ಆ ಪಟ್ಟವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ತಂತ್ರಗಾರಿಕೆಗಳನ್ನು ನಡೆಸುವುದು ಸಾಮಾನ್ಯ. ಹೀಗಾಗಿ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿದ ಬಿಸಿಸಿಐ ಆಡಳಿತದಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿತ್ತು. ಜತೆಗೆ ಮ್ಯಾಚ್‌ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌ನಂತಹ ಪೆಡಂಭೂತ ಈ ದೇಶದಲ್ಲಿ ಕ್ರಿಕೆಟನ್ನು ಇನ್ನಿಲ್ಲದಂತೆ ಕಾಡಿತು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿತು. ಲೋಧಾ ಸಮಿತಿಯನ್ನು ನೇಮಿಸಿತು. ಲೋಧಾ ಅವರು ಬಿಸಿಸಿಐ ಆಡಳಿತದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನೂರಾರು ಮಂದಿ ಹಿರಿಯ ಕ್ರಿಕೆಟಿಗರಿಂದ ಅಭಿಪ್ರಾಯ ಸಂಗ್ರಹಿಸಿದರು. ಕ್ರಿಕೆಟ್‌ನ ಹಿತಾಸಕ್ತಿಗೆ ಧಕ್ಕೆಯಾಗುತ್ತಿರುವುದೆಲ್ಲಿ ಎಂಬುದರ ಹುಡುಕಾಟ ನಡೆಸಿದರು. ಹೀಗೆ ಆಮೂಲಾಗ್ರ ಅಧ್ಯಯನ ಮತ್ತು ಸಮೀಕ್ಷೆಯ ನಂತರ ಪರಿಪೂರ್ಣ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದರು. ಇದೀಗ ಸುಪ್ರೀಂ ಕೋರ್ಟ್‌ ಆ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಇದು ಈ ದೇಶದ ಕ್ರೀಡಾ ಇತಿಹಾಸದಲ್ಲೊಂದು ಕ್ರಾಂತಿಕಾರಿ ಬೆಳವಣಿಗೆ. 70 ವರ್ಷಕ್ಕೂ ಹೆಚ್ಚು ವಯಸ್ಸಾದವರು ಅಧಿಕಾರ ಸ್ಥಾನದಲ್ಲಿರುವಂತಿಲ್ಲ, ಬಿಸಿಸಿಐ ಚುನಾವಣೆಯಲ್ಲಿ ಒಂದು ರಾಜ್ಯ ಕ್ರಿಕೆಟ್‌್ ಸಂಸ್ಥೆಯಿಂದ ಒಬ್ಬರೇ ಮತ ಚಲಾಯಿಸಬೇಕೆಂಬ ನಿಯಮ, ಒಬ್ಬರಿಗೆ ಒಂದೇ ಅಧಿಕಾರ ಸ್ಥಾನ ಇತ್ಯಾದಿ ನಿಯಮಗಳು ಈ ದೇಶದಲ್ಲಿ ಕ್ರಿಕೆಟ್‌ ಆಡಳಿತದ ಶುದ್ಧೀಕರಣಕ್ಕೆ ಮಹತ್ವದ ದಾಪುಗಾಲಾಗಿದೆ. ಸಚಿವ ಸ್ಥಾನದಲ್ಲಿರುವವರು ಮತ್ತು ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ಇನ್ನು ಮುಂದೆ ಕ್ರಿಕೆಟ್‌ ಆಡಳಿತದಲ್ಲಿ ಯಾವುದೇ ಅಧಿಕಾರ ಸ್ಥಾನಗಳನ್ನು ಪಡೆಯುವಂತಿಲ್ಲ. ಇದು ಈ ನೆಲದಲ್ಲಿ ಕ್ರಿಕೆಟ್‌ನ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಸಂತಸ ಉಂಟು ಮಾಡಿದೆ. ಈ ಕ್ರೀಡೆ ನಮ್ಮ ನಾಡಿನಲ್ಲಿ ಸಜ್ಜನರ ಕ್ರೀಡೆಯಾಗಿಯೇ ಉಳಿಯುವಲ್ಲಿ ಲೋಧಾ ಶಿಫಾರಸುಗಳು ಮಹತ್ವದ ಪಾತ್ರ ವಹಿಸಲಿವೆ. ಮುಂಬೈ , ತಮಿಳುನಾಡು, ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಗಳ ಮುಖ್ಯಸ್ಥರಾಗಿರುವ ಕ್ರಮವಾಗಿ ಶರದ್‌ ಪವಾರ್‌, ಎನ್‌.ಶ್ರೀನಿವಾಸನ್‌, ನಿರಂಜನ್‌ ಷಾ ಅವರೆಲ್ಲಾ ಎಪ್ಪತ್ತರ ಗಡಿ ದಾಟಿರುವುದರಿಂದ ಕ್ರಿಕೆಟ್‌ ಆಡಳಿತದಿಂದ ದೂರವಾಗಲಿದ್ದಾರೆ. ದಶಕಗಳಿಂದ ಕ್ರಿಕೆಟ್‌ ಆಡಳಿತದೊಳಗೆ ಬೇರು ಬಿಟ್ಟುಕೊಂಡಿದ್ದ ಇಂತಹ ‘ಪಟ್ಟಭದ್ರ’ರಿಂದ ಮುಕ್ತವಾಗುವ ಬಿಸಿಸಿಐನೊಳಗೆ ಹೊಸಗಾಳಿ ಬೀಸಲಿದೆ. ಇನ್ನು ಮುಂದೆ ಬಿಸಿಸಿಐ ಕೇಂದ್ರ ಸಮಿತಿಯಲ್ಲಿ ಮಹಾಲೇಖಪಾಲರ ಪ್ರತಿನಿಧಿಯೊಬ್ಬರು ಇರುತ್ತಾರೆ. ಇವರು ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಹಿಂದೆಲ್ಲಾ ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿದ್ದವರು ಆ ಅಧಿಕಾರದ ಬಲದಿಂದ ಪ್ರಭಾವ ಬೀರಿ ಕ್ರಿಕೆಟ್‌ ಆಡಳಿತದಲ್ಲಿ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಿತ್ತು. ಹಿಂದೆ ಕೇಂದ್ರ ಸಚಿವರಾಗಿದ್ದ ಶರದ್‌ ಪವಾರ್‌ ಐಸಿಸಿಯ ಅಧ್ಯಕ್ಷ ಪಟ್ಟಕ್ಕೂ ಏರಿದ್ದರು. ಆದರೆ ಪ್ರಸಕ್ತ ಬಿಸಿಸಿಐ ಅಧ್ಯಕ್ಷರಾಗಿರುವ ಅನುರಾಗ್‌ ಠಾಕೂರ್‌ ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಸಚಿವರಾದರೆ ಅಥವಾ ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಯಾವುದೇ ಅಧಿಕಾರ ಸ್ಥಾನ ಪಡೆದರೂ ಬಿಸಿಸಿಐನ ಮುಖ್ಯಸ್ಥ ಪಟ್ಟವನ್ನು ಕಳೆದುಕೊಳ್ಳುತ್ತಾರೆ. ಈ ನಿಯಮ ಬಿಸಿಸಿಐ ಮತ್ತು ಎಲ್ಲಾ ರಾಜ್ಯ ಸಂಸ್ಥೆಗಳ ಪ್ರತಿಯೊಬ್ಬ ಪದಾಧಿಕಾರಿಗೂ ಅನ್ವಯಿಸುತ್ತದೆ. ಇದಲ್ಲದೆ ಒಬ್ಬರು ಏಕಕಾಲದಲ್ಲಿ ಬಿಸಿಸಿಐ ಮತ್ತು ಸಂಬಂಧಪಟ್ಟ ರಾಜ್ಯ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿರುವಂತಿಲ್ಲ. ಬಿಸಿಸಿಐ ವ್ಯಾಪ್ತಿಯಲ್ಲಿಯೇ ಆಟಗಾರರ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬರಲಿದ್ದು, ಅದು ಆಟಗಾರರ ಹಿತಾಸಕ್ತಿಗೆ ಪರಿಣಾಮಕಾರಿ ಧ್ವನಿಯಾಗಲಿದೆ. ಇದು ಮಹತ್ವದ ಸಕಾರಾತ್ಮಕ ಬೆಳವಣಿಗೆಯಾಗಿದೆ. ಕ್ರಿಕೆಟ್‌ ಮಂಡಳಿಯು ರಾಜ್ಯ ಸಂಸ್ಥೆಗಳಿಗೆ ನೀಡುವ ಹಣಕ್ಕೆ ಸಂಬಂಧಿಸಿದಂತೆ ಏಕ ಸ್ವರೂಪದ ನಿಯಮವನ್ನೇ ಅನುಸರಿಸಬೇಕು. ಹಿಂದೆಲ್ಲಾ ಬಿಸಿಸಿಐ ಅಧಿಕಾರದ ಚುಕ್ಕಾಣಿ ಹಿಡಿದವರು ತಮಗೆ ಬೆಂಬಲ ನೀಡಿದ ‘ಮತದಾರ’ ರಾಜ್ಯ ಸಂಸ್ಥೆಗಳಿಗೆ ಹೆಚ್ಚು ಅನುದಾನ, ವಿರೋಧಿ ಬಣಕ್ಕೆ ಕಡಿಮೆ ಅನುದಾನ ನೀಡುವಂತಹದ್ದೂ ನಡೆಯುತ್ತಿತ್ತು. ಇನ್ನು ಮುಂದೆ ಇಂಥದ್ದಕ್ಕೆಲ್ಲಾ ಅವಕಾಶ ಇರುವುದಿಲ್ಲ. ಈ ಎಲ್ಲಾ ನಿಯಮಗಳು ಕಾರ್ಯರೂಪಕ್ಕೆ ಬರಲು ನ್ಯಾಯಾಲಯ ಆರು ತಿಂಗಳ ಗಡುವು ನೀಡಿದೆ. ಬಿಸಿಸಿಐ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಸಿಸಿಐನ ‘ಪಾಳೆಯಗಾರಿ’ ಆಡಳಿತ ಕೊನೆಗೊಳ್ಳಲಿದ್ದು, ಆಟಗಾರ ಸ್ನೇಹಿ ವ್ಯವಸ್ಥೆ ರೂಪುಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹಿತಾಸಕ್ತಿ ಸಂಘರ್ಷದಂತಹ ವಿವಾದಗಳು ಭಾರತ ಕ್ರಿಕೆಟ್‌ ರಂಗದಲ್ಲಿ ಕಡಿಮೆಯಾಗಲಿವೆ. ಪಕ್ಕಾ ವೃತ್ತಿಪರ ಆಡಳಿತದಿಂದಾಗಿ ಈ ದೇಶದಲ್ಲಿ ಕ್ರಿಕೆಟ್‌ ಹೊಸ ಆಯಾಮ ಕಂಡುಕೊಳ್ಳಲಿದೆ. ಇಂತಹ ಒಳ್ಳೆಯ ಕ್ರೀಡಾ ಆಡಳಿತ ಬೇರೆ ಕ್ರೀಡೆಗಳಿಗೂ ವಿಸ್ತರಣೆಯಾಗುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.