ಇಬ್ಬಂದಿ ಧೋರಣೆ ಬೇಡ ಅತಿರೇಕದ ವರ್ತನೆ ನಿಗ್ರಹಿಸಿ ಬಿಜೆಪಿ ಸರ್ಕಾರ ಇರುವ ಗುಜರಾತ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ವಿರುದ್ಧ ಉತ್ತರಪ್ರದೇಶ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದ ದಯಾಶಂಕರ್‌ ಸಿಂಗ್‌ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಬಿಜೆಪಿ ಪಕ್ಷದೊಳಗಿನ ಸೈದ್ಧಾಂತಿಕ ಕಂದರಗಳನ್ನು ಬಿಂಬಿಸುತ್ತದೆ. ಹಿಂದೂಗಳನ್ನು ಒಗ್ಗೂಡಿಸುವುದಕ್ಕಾಗಿ ದಲಿತರನ್ನು ಬಿಜೆಪಿ ತೆಕ್ಕೆಯೊಳಗೆ ತರಲು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಗೋರಕ್ಷಣೆಯಂತಹ ವಿಚಾರಗಳಿಂದ ಹಿಂದುತ್ವವಾದ ಎತ್ತಿಹಿಡಿಯಬೇಕೆಂಬುದು ಬಿಜೆಪಿಯೊಳಗೆ ಮೊದಲಿನಿಂದಲೂ ಇರುವ ಸಿದ್ಧಾಂತ. ಹಾಗೆಯೇ, ದಲಿತರ ಆರಾಧ್ಯದೈವ ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನೂ ತನ್ನದಾಗಿಸಿಕೊಂಡು ದಲಿತರ ಜೊತೆಗೆ ಗುರುತಿಸಿಕೊಳ್ಳಲು ಬಿಜೆಪಿ ಈಗ ಯತ್ನಿಸುತ್ತಿದೆ. ಆದರೆ ಆಹಾರ ಹಾಗೂ ಜೀವನೋಪಾಯಕ್ಕಾಗಿ ದನದ ಮಾಂಸ ಹಾಗೂ ತೊಗಲನ್ನು ದಲಿತರು ಆಶ್ರಯಿಸಿರುವುದು ವಾಸ್ತವ ಸಂಗತಿ. ಇದು ಹಿಂದುತ್ವದ ತತ್ವಗಳಿಗೆ ವಿರುದ್ಧವಾದುದು. ಅನೇಕ ವರ್ಷಗಳಿಂದ ಗೋಹತ್ಯೆ ವಿರೋಧಿ ಆಂದೋಲನದ ಮುಂಚೂಣಿಯಲ್ಲಿವೆ ಸಂಘ ಪರಿವಾರದ ಅನೇಕ ಸಂಘಟನೆಗಳು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಗೋರಕ್ಷಣೆ ಕುರಿತಂತೆ ಅತಿರೇಕದ ನಿಲುವುಗಳನ್ನು ಪ್ರದರ್ಶಿಸುವ ಶಕ್ತಿಗಳು ಹೆಚ್ಚು ದಿಟ್ಟವಾಗಿವೆ. ಕಾನೂನನ್ನೇ ಕೈಗೆತ್ತಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ವಾತಾವರಣ ವಿಷಮಯವಾಗುತ್ತಿದೆ. ಇದರ ಮುಂದುವರಿದ ಭಾಗವೇ ಗುಜರಾತ್‌ನ ಸಣ್ಣ ಪಟ್ಟಣ ಊನಾದಲ್ಲಿ ನಡೆದಿರುವ ಘಟನೆ. ಸಂವಿಧಾನದ ಅಡಿ ಅಧಿಕಾರ ವಹಿಸಿಕೊಂಡ ಬಿಜೆಪಿ ಈ ವಿಚಾರದ ಬಗ್ಗೆ ಸ್ಪಷ್ಟತೆ ಹೊಂದಿಲ್ಲ. ಪಕ್ಷ ಮಂಡಿಸುವ ದ್ವಂದ್ವ ವಾದಗಳು ಹಾಗೂ ಕಾನೂನು ಅನ್ವಯ ದೃಢ ಕ್ರಮ ಜರುಗಿಸುವಲ್ಲಿನ ಅನಿಶ್ಚಯಗಳಿಂದಾಗಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಊನಾದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಸಂಸತ್‌ನಲ್ಲಿ ಪ್ರತಿಧ್ವನಿಸಿ ಬಿರುಸಿನ ವಾಗ್ವಾದಗಳು ನಡೆದಿವೆ. ಮಾಯಾವತಿ ಕುರಿತಾದ ದಯಾಶಂಕರ್ ಮಾತನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಖಂಡಿಸಿ, ವಿಷಾದಿಸಿದ್ದಾರೆ. ಪಕ್ಷದ ಎಲ್ಲ ಹುದ್ದೆಗಳಿಂದಲೂ ದಯಾಶಂಕರ್ ಅವರನ್ನು ವಜಾ ಮಾಡಲಾಗಿದೆ. ದಲಿತರ ವಿರುದ್ಧದ ಇಂತಹ ದೈಹಿಕ ಹಾಗೂ ಮೌಖಿಕ ದೌರ್ಜನ್ಯ ಸಾಮಾಜಿಕ ಹಾಗೂ ಶಾಸನಾತ್ಮಕ ತತ್ವಗಳನ್ನು ಉಲ್ಲಂಘಿಸುತ್ತದೆ. ಇದು ಖಂಡನೀಯ. ಇದಕ್ಕೆ ಸೂಕ್ತ ಶಿಕ್ಷೆ ಆಗುವುದು ಮುಖ್ಯ. ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ಈ ವರ್ಷ ಬಿಜೆಪಿ ದೊಡ್ಡ ಮಟ್ಟದಲ್ಲಿ ಆಚರಿಸಿತ್ತು. ಬಿಜೆಪಿಯಿಂದ ಅಂಬೇಡ್ಕರ್ ಅವರ ಶ್ಲಾಘನೆ, ದಲಿತರ ವಾಸ್ತವ ಸ್ಥಿತಿಗತಿಗಳ ಬದಲಾವಣೆಗೆ ಪರ್ಯಾಯವಾಗದು ಎಂಬುದನ್ನು ಪಕ್ಷ ನೆನಪಿಡಬೇಕು. ಈಗಿನ ವಿದ್ಯಮಾನಗಳಿಂದ ವ್ಯಕ್ತವಾಗುತ್ತಿರುವ ದಲಿತ ಆಕ್ರೋಶ ರಾಜಕೀಯವಾಗಿಯೂ ಪರಿಣಾಮ ಬೀರುವಂತಹದ್ದು. ಹೈದರಾಬಾದ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ ವೇಮುಲ ಆತ್ಮಹತ್ಯೆಯ ವಿವಾದದ ಕುದಿತ ಇನ್ನೂ ಆರಿಲ್ಲ. ಈಗ ಗುಜರಾತ್‌ನಲ್ಲಿ ಪ್ರತಿಭಟನೆಯ ಕಾವು ತೀವ್ರವಾಗಿದೆ. ಪ್ರತಿಭಟನೆ ಮಾರ್ಗವಾಗಿ ಅಲ್ಲಿ ಆತ್ಮಹತ್ಯೆ ಪ್ರಯತ್ನಗಳೂ ನಡೆದಿವೆ. ಮಾಯಾವತಿ ವಿರುದ್ಧದ ಆಕ್ಷೇಪಾರ್ಹ ಮಾತು ಖಂಡಿಸಿ ಉತ್ತರಪ್ರದೇಶ ದಲ್ಲೂ ಪ್ರತಿಭಟನೆ ವ್ಯಾಪಕವಾಗಿದೆ. ಸಂಸತ್‌ನಲ್ಲಿ ಪ್ರತಿಭಟಿಸಿದ ಮಾಯಾವತಿಯವರಿಗೆ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಬೆಂಬಲ ನೀಡಿದ್ದಾರೆ. ಜೊತೆಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಮಾಯಾವತಿಯವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಸೇರ್ಪಡೆಯಾದ 19 ಸಚಿವರಲ್ಲಿ ಐವರು ದಲಿತರಾಗಿದ್ದಾರೆ. ಬಿಜೆಪಿ ಎಂದರೆ ಬ್ರಾಹ್ಮಣ– ಬನಿಯಾ (ವ್ಯಾಪಾರಿ) ಪಕ್ಷ ಎಂದು ಚಾಲ್ತಿಯಲ್ಲಿರುವ ಭಾವನೆಯನ್ನು ಬದಲಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೆ ಸಮಾಜವನ್ನು ವಿಭಜಿಸುವ ಸಿದ್ಧಾಂತವನ್ನು ರಾಜಕೀಯ ದಾಳವಾಗಿ ಪ್ರಯೋಗಿಸುವುದೂ ಬಿಜೆಪಿ ಸಿದ್ಧಾಂತ ಎಂಬುದೂ ಜನಮಾನಸದಲ್ಲಿ ಅಚ್ಚೊತ್ತಿದೆ. ಈಗ ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸದ್ಯದಲ್ಲೇ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ತೆರೆದುಕೊಳ್ಳಬಹುದಾದ ಆಯಾಮಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಬೇರೆಯದಾಗಿಯೇ ಮರು ಆಲೋಚಿಸಬೇಕು. ಏಕೆಂದರೆ ಬಿಜೆಪಿಗೆ ಎರಡೂ ಪ್ರತಿಷ್ಠಿತ ರಾಜ್ಯಗಳು. ಹಾಗೆಯೇ ಶೀಘ್ರದಲ್ಲೇ ಚುನಾವಣೆಗಳು ನಡೆಯಲಿರುವ ಮತ್ತೊಂದು ರಾಜ್ಯ ಪಂಜಾಬ್‌ನಲ್ಲಿ ರಾಷ್ಟ್ರದಲ್ಲೇ ಅತ್ಯಂತ ಹೆಚ್ಚುಶೇ 31ರಷ್ಟು ಪರಿಶಿಷ್ಟ ಜಾತಿಯ ಜನರಿದ್ದಾರೆ ಎಂಬುದನ್ನು ಬಿಜೆಪಿ ಮರೆಯಲಾಗದು. ದಲಿತರ ಆಕ್ರೋಶ ತಣ್ಣಗಾಗಿಸಲು ಸಮಗ್ರ ದೃಷ್ಟಿಕೋನದ ಪರಿಹಾರ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.