ಮಾಧ್ಯಮ ಸ್ವಾತಂತ್ರ್ಯ ನಿರ್ಬಂಧ ಅನಪೇಕ್ಷಣೀಯ ಬೆಳವಣಿಗೆ ಐದು ದಿನಗಳ ಮಾಧ್ಯಮ ನಿರ್ಬಂಧದ ನಂತರ ಕಾಶ್ಮೀರದಲ್ಲಿ ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆಗಳ ಪತ್ರಿಕೆಗಳು ಗುರುವಾರ ಪ್ರಕಟಣೆ ಪುನರಾರಂಭಿಸಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಿದ ಸರ್ಕಾರದ ವಿರುದ್ಧ ತೀವ್ರ ಟೀಕೆಗಳಿರುವ ಸಂಪಾದಕೀಯ ಬರಹಗಳೊಂದಿಗೆ ಪತ್ರಿಕೆಗಳ ಪ್ರಕಟಣೆ ಪುನರಾರಂಭವಾಗಿದೆ. ಇದಕ್ಕೂ ಮುಂಚೆ, ಕಾಶ್ಮೀರದ ಪತ್ರಿಕೆಗಳ ಮಾಲೀಕರು ಹಾಗೂ ಸಂಪಾದಕರ ಸಭೆ ಕರೆದು ಮಾಧ್ಯಮಗಳ ಮೇಲೆ ಹೇರಿದ ನಿರ್ಬಂಧಗಳಿಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಷಾದ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ನಿರ್ಬಂಧಕ್ಕೆ ‘ಸಂವಹನ ಕೊರತೆ’ಯೇ ಕಾರಣವಾಯಿತು ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ. ಎಂದರೆ, ಮಾಧ್ಯಮ ನಿರ್ಬಂಧದ ಬಗ್ಗೆ ರಾಜ್ಯ ಸರ್ಕಾರದಲ್ಲೇ ಇದ್ದಂತಹ ಭಿನ್ನಾಭಿಪ್ರಾಯಗಳಿಗೆ ಇದು ದ್ಯೋತಕ. ಎನ್‌ಕೌಂಟರ್‌ನಲ್ಲಿ ಹಿಜ್‌ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನಾಕಾರರು ಹಾಗೂ ಭದ್ರತಾಪಡೆಗಳ ಮಧ್ಯದ ಇತ್ತೀಚಿನ ಸಂಘರ್ಷದಲ್ಲಿ ಈವರೆಗೆ 45ಕ್ಕೂ ಹೆಚ್ಚು ಮಂದಿ ಸತ್ತು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಪೆಲೆಟ್ ಬಂದೂಕಿನ ಬಳಕೆಯಿಂದಾಗಿ ಚಿಕ್ಕಮಕ್ಕಳೂ ಗಾಯಗೊಂಡಿರುವುದು ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ. ಕಾಶ್ಮೀರದಲ್ಲಿ ಈಗಲೂ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ಇಂತಹ ಸಂಘರ್ಷದ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ರಾಜ್ಯದ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಹಾಗೂ ಬಿಜೆಪಿ ಮೈತ್ರಿ ಸರ್ಕಾರ ನಿರ್ಬಂಧ ವಿಧಿಸಿದ್ದು ಅನಪೇಕ್ಷಣೀಯ ಬೆಳವಣಿಗೆ. ಇದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆಗಳಿಗೂ ಗುರಿಯಾಯಿತು. ಮಾಧ್ಯಮ ನಿರ್ಬಂಧ ಜಾರಿಗೆ ಅನುಸರಿಸಿದ ವಿಧಾನವಂತೂ ಸರ್ವಾಧಿಕಾರಿ ಆಡಳಿತ ನೆನಪಿಸುವಂತೆ ಇದ್ದದ್ದು ಆತಂಕಕಾರಿ. ಪತ್ರಿಕಾ ಕಚೇರಿಗಳು ಹಾಗೂ ಮುದ್ರಣಾಲಯಗಳ ಮೇಲೆ ದಾಳಿ ನಡೆಸಿ ಸಿಬ್ಬಂದಿಯನ್ನು ಬಂಧಿಸಿದ ರೀತಿ ತುರ್ತುಸ್ಥಿತಿಯ ದಿನಗಳನ್ನು ನೆನಪಿಸುವಂತೆ ಇದ್ದವು. ಹೀಗಾಗಿಯೇ ‘ಯಾವುದೇ ನಿರ್ಬಂಧ ನಾಗರಿಕತೆಗೆ ಶೋಭೆಯಲ್ಲ’ ಎಂದು ಕಾಶ್ಮೀರದಲ್ಲಿ ಹೆಚ್ಚಿನ ಪ್ರಸಾರವಿರುವ ಇಂಗ್ಲಿಷ್ ದಿನಪತ್ರಿಕೆ ‘ಗ್ರೇಟರ್ ಕಾಶ್ಮೀರ್’ ಮೊದಲ ಪುಟದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಟೀಕಿಸಿದೆ. ಡಿಜಿಟಲ್ ಪ್ರಜಾಪ್ರಭುತ್ವದ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುತ್ತಿರುವಾಗ ಇಂತಹ ನಿರ್ಬಂಧ ಅಸಹನೀಯವಾದುದು. ಪತ್ರಿಕಾ ಸಂಸ್ಥೆಗಳ ಮೇಲೆ ಇಂತಹ ದಾಳಿ ಹಾಗೂ ಪತ್ರಕರ್ತರ ಬಂಧನ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಲ್ಲದು. ಅಂತರ್ಜಾಲ ನಿರ್ಬಂಧ ರಾಜ್ಯದಲ್ಲಿ ಇನ್ನೂ ಜಾರಿಯಲ್ಲಿದೆ ಎಂಬುದು ಅಹಿತಕರ ವಿಚಾರ. ಎಲ್ಲಾ ಬಗೆಯ ಸುದ್ದಿ ವಾಹಕಗಳ ಮೇಲಿನ ನಿರ್ಬಂಧ, ಮಾಹಿತಿ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಹಲ್ಲೆಯಾಗುತ್ತದೆ ಎಂಬುದನ್ನು ಮನಗಾಣುವುದು ಅಗತ್ಯ. ಈ ಹಕ್ಕುಗಳು ಭಾರತದ ಉಳಿದೆಡೆ ಇರುವಂತೆಯೇ ಕಾಶ್ಮೀರಕ್ಕೂ ಅನ್ವಯವಾಗುತ್ತವೆ. ನ್ಯಾಯಬದ್ಧ ಸುದ್ದಿ ವಾಹಕಗಳಿಗೆ ನಿಷೇಧ ಹೇರಿದಲ್ಲಿ ತಪ್ಪು ಸುದ್ದಿಗಳು ಹಾಗೂ ವದಂತಿಗಳು ಪಸರಿಸುತ್ತವೆ. ಇಂತಹವು ಮಾಡುವ ಹಾನಿ ಇನ್ನೂ ಹೆಚ್ಚಿನದು. ಪರಿಸ್ಥಿತಿಯನ್ನು ಇವು ಇನ್ನಷ್ಟು ಹದಗೆಡಿಸುತ್ತವೆ. ಆದರೆ, ಸರ್ವಾಧಿಕಾರಿ ಸರ್ಕಾರಗಳು ಈ ಸರಳ ಸತ್ಯ ಅರಿತುಕೊಳ್ಳುವುದಿಲ್ಲ ಎಂಬುದು ವಿಷಾದನೀಯ. ಅಸತ್ಯ ಹಾಗೂ ಸುಳ್ಳು ಪ್ರಚಾರಗಳಿಗೆ ಸ್ವತಂತ್ರ ಮಾಧ್ಯಮವೇ ಸಮರ್ಪಕ ಉತ್ತರ ಎಂಬುದನ್ನು ಅರಿಯಬೇಕು. ಸುಳ್ಳು ವದಂತಿಗಳನ್ನು ನಿಯಂತ್ರಿಸುವುದು ಕಷ್ಟ. ಆಗ ಸರ್ಕಾರ ತನ್ನ ವಿಶ್ವಾಸಾರ್ಹತೆಯನ್ನೂ ಕಳೆದುಕೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಿಸಿದಾಗ ಜನರತ್ತ ಇರಬೇಕಾದ ಹೊಣೆಗಾರಿಕೆ, ಸಂವಿಧಾನ ಎತ್ತಿಹಿಡಿಯಬೇಕಾದ ಬದ್ಧತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂಬುದನ್ನು ಸರ್ಕಾರಗಳು ಮನಗಾಣಲಿ. ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಮುಂದೆ ಇಂತಹ ಅನಪೇಕ್ಷಿತ ವಿದ್ಯಮಾನಗಳು ಪುನರಾವರ್ತನೆ ಆಗುವುದು ಬೇಡ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.