ಭಯೋತ್ಪಾದನಾ ದಾಳಿ ಪ್ರಕರಣಗಳ ಹೆಚ್ಚಳ ಆತಂಕಕಾರಿ ವಿಶ್ವದ ವಿವಿಧೆಡೆ ಆತ್ಮಹತ್ಯಾ ದಾಳಿಗಳು, ಭಯೋತ್ಪಾದಕರ ದುಷ್ಕೃತ್ಯಗಳು ದಿನದಿಂದ ದಿನಕ್ಕೆ ಆತಂಕಕಾರಿ ಎನ್ನುವಷ್ಟರ ಮಟ್ಟಿಗೆ ಹೆಚ್ಚುತ್ತಿವೆ. ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮೊನ್ನೆ ಧರಣಿ ಕುಳಿತಿದ್ದ ಶಿಯಾ ಮುಸ್ಲಿಂ ಪಂಗಡದ ಹಜಾರಾ ಸಮುದಾಯದವರ ಮೇಲೆ ನಡೆದ ಭೀಕರ ಆತ್ಮಹತ್ಯಾ ದಾಳಿಗೆ 80 ಮಂದಿ ಬಲಿಯಾಗಿದ್ದಾರೆ. ಇದು ಧರ್ಮಾಂಧರ ಮತಿಹೀನ ಕೃತ್ಯಕ್ಕೆ ಮತ್ತೊಂದು ಉದಾಹರಣೆ. ಮಾನವತೆಗೆ ಕಳಂಕ. ಯುದ್ಧಾಪರಾಧಕ್ಕೆ ಸಮ. ಅದಕ್ಕಿಂತಲೂ ಹೆಚ್ಚಾಗಿ, ಇದು ಈಗಾಗಲೆ ಆಂತರ್ಯುದ್ಧದಿಂದ ತತ್ತರಿಸಿರುವ ಆ ದೇಶದಲ್ಲಿ ಅಲ್ಪಸಂಖ್ಯಾತ ಶಿಯಾ ಮತ್ತು ಬಹುಸಂಖ್ಯಾತ ಸುನ್ನಿ ಸಮುದಾಯಗಳ ಮಧ್ಯೆ ಹಿಂಸಾತ್ಮಕ ಸಂಘರ್ಷವನ್ನು ಹೆಚ್ಚಿಸುವ ಎಲ್ಲ ಅಪಾಯಗಳೂ ಇವೆ. ದುಷ್ಕೃತ್ಯದಲ್ಲಿ ತನ್ನ ಕೈವಾಡ ಇದೆ ಎಂದು ಸ್ವತಃ ಐಎಸ್‌ ಹೇಳಿಕೊಂಡಿದೆ. ಈ ಎರಡೂ ಸಮುದಾಯಗಳ ಮಧ್ಯೆ ವಿವೇಕರಹಿತ ಹೋರಾಟ ಇಷ್ಟು ದಿನ ಪ್ರಮುಖವಾಗಿ ಇರಾಕ್‌, ಸಿರಿಯಾಗಳಿಗೆ ಸೀಮಿತವಾಗಿತ್ತು. ಆದರೆ ಆಫ್ಘಾನಿಸ್ತಾನದಲ್ಲಿ ಶಿಯಾಗಳನ್ನೇ ಗುರಿ ಮಾಡಿಕೊಂಡು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನು ಕೊಂದು ಹಾಕಿದ್ದು ಇದೇ ಮೊದಲು. ಅಸಹಾಯಕರನ್ನು ಈ ರೀತಿ ಬಲಿ ತೆಗೆದುಕೊಳ್ಳುವುದರಿಂದ ಏನು ಲಾಭ? ‘ಅಮಾಯಕರನ್ನು ಕೊಲ್ಲುವುದರಿಂದ ನೀವು ಪ್ರತಿಪಾದಿಸುವ ಧರ್ಮಕ್ಕೆ, ಆ ಧರ್ಮದ ಉದಾತ್ತ ಬೋಧನೆಗಳಿಗೆ ಅಪಚಾರವಾಗುತ್ತದೆ’ ಎಂದು ಭಯೋತ್ಪಾದಕರಿಗೆ ತಿಳಿಸಿ ಹೇಳುವವರು ಯಾರು? ಇಂಥ ಹೇಯ ಕೃತ್ಯಗಳನ್ನು ಇನ್ನೂ ಎಷ್ಟು ಕಾಲ ಸಹಿಸಿಕೊಂಡಿರಬೇಕು? ಫ್ರಾನ್‌್ಸನ ನೀಸ್‌ನಲ್ಲಿ ಐಎಸ್‌ ವಿಚಾರಧಾರೆಗಳಿಂದ ಪ್ರೇರಿತನಾದ ವ್ಯಕ್ತಿಯೊಬ್ಬ ಜನಜಂಗುಳಿಯ ಮೇಲೆ ಲಾರಿ ಓಡಿಸಿ 84 ಜನರನ್ನು ಬಲಿ ತೆಗೆದುಕೊಂಡಿದ್ದು, ಬಾಗ್ದಾದ್‌ನಲ್ಲಿ ದಾಳಿಕೋರರು ಸರಣಿ ಬಾಂಬ್‌ಗಳನ್ನು ಸ್ಫೋಟಿಸಿ 325ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದದ್ದು, ನಮ್ಮ ನೆರೆಯ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 20ರ ಆಸುಪಾಸಿನ ಯುವಕರ ಗುಂಪು ರೆಸ್ಟೊರೆಂಟ್‌ನೊಳಗೆ ಗುಂಡು ಹಾರಿಸಿ 20 ಜನರನ್ನು ಕೊಂದದ್ದು, ಮದೀನಾದಲ್ಲಿ ಪವಿತ್ರ ಗೋರಿಯ ಸನಿಹದಲ್ಲಿಯೇ ಅಮಾಯಕರ ಹತ್ಯೆಯಂಥ ಫಟನೆಗಳು ಹಂತಕರ ಮನಸ್ಥಿತಿಯನ್ನು ಬಿಂಬಿಸುತ್ತವೆ. ಯೆಮನ್‌, ಸೌದಿ ಅರೇಬಿಯದಂತಹ ದೇಶಗಳೂ ಐಎಸ್‌ ಮತ್ತು ಇತರ ಉಗ್ರಗಾಮಿ ಸಂಘಟನೆ ಹಾವಳಿಯಿಂದ ತತ್ತರಿಸುತ್ತಿವೆ. ಇದನ್ನೆಲ್ಲ ನೋಡಿದರೆ ಉಗ್ರರಿಗೆ ಧರ್ಮದ ಭಯವೂ ಇಲ್ಲ, ಆತ್ಮಸಾಕ್ಷಿಯೂ ಇಲ್ಲ. ತಮಗೆ ಕೊಟ್ಟ ಸೂಚನೆಗಳನ್ನು ಪಾಲಿಸುವುದು, ಸಾಧ್ಯವಾದಷ್ಟು ಹೆಚ್ಚು ಜನರನ್ನು ಕೊಲ್ಲುವುದು ಅವರ ಏಕೈಕ ಕಾಯಕವಾಗಿದೆ. ಹೀಗಿರುವಾಗ ಉಗ್ರರನ್ನು ಸದೆ ಬಡಿಯುವುದು ಒಂದು ದೇಶ, ಒಂದು ಸಮುದಾಯಕ್ಕೆ ಸೀಮಿತವಾದ ವಿಚಾರ ಅಲ್ಲ. ಅದಕ್ಕೆ ಸಾಮೂಹಿಕ ಪ್ರಯತ್ನಗಳು ನಡೆಯಬೇಕು. ಮಧ್ಯಪ್ರಾಚ್ಯದ ದೇಶಗಳಲ್ಲಿ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ತಮ್ಮ ದಾಳಿಗಳನ್ನು ಹೆಚ್ಚಿಸುತ್ತಲೇ ಬರುತ್ತಿರುವ ಐಎಸ್‌ ಉಗ್ರರು ವಿಶ್ವದ ಎಲ್ಲೆಡೆ ಬೇರು ಬಿಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂಡೊನೇಷ್ಯಾ, ಮಲೇಷ್ಯಾಗಳಲ್ಲೂ ಐಎಸ್‌ ಪ್ರಭಾವ ವಿಸ್ತಾರಗೊಳ್ಳುತ್ತಿದೆ. ಸುಶಿಕ್ಷಿತರನ್ನೇ ವಿಶೇಷವಾಗಿ ಆಕರ್ಷಿಸುವಲ್ಲಿ ಉಗ್ರರ ಸಂಘಟನೆಗಳು ಯಶಸ್ವಿಯಾಗುತ್ತಿವೆ. ಅದಕ್ಕೆ ನಮ್ಮ ಕಣ್ಣೆದುರೇ ಬೇಕಾದಷ್ಟು ಉದಾಹರಣೆಗಳಿವೆ. ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರದ ಅನೇಕ ಯುವಕ– ಯುವತಿಯರು ಐಎಸ್‌ಗೆ ಮಾರುಹೋಗಿದ್ದಾರೆ. ಇವರ ಹೊರತಾಗಿ ಆಫ್ರಿಕದ ದೇಶಗಳಲ್ಲಿನ ಬೋಕೊ ಹರಾಂ, ನಮ್ಮದೇ ಭಾರತೀಯ ಉಪಖಂಡದಲ್ಲಿನ ಲಷ್ಕರ್‌ ಎ ತಯ್ಯಬ, ಹಿಜ್ಬುಲ್‌ ಮುಜಾಹಿದೀನ್‌, ತಾಲಿಬಾನ್‌, ಅಲ್‌ ಕೈದಾ ಸಂಘಟನೆಗಳು ಸಹ ಭಯೋತ್ಪಾದನೆಯಲ್ಲಿ ತೊಡಗಿವೆ. ಅನೇಕ ಸರ್ಕಾರಗಳು ಕೂಡ ತಮತಮಗೆ ಅನುಕೂಲ ಎನಿಸಿದಾಗ ಉಗ್ರರನ್ನು, ಭಯೋತ್ಪಾದನಾ ಸಂಘಟನೆಗಳನ್ನು ಪೋಷಿಸಿಕೊಂಡು ಬಂದಿರುವುದು ವಾಸ್ತವ. ಅದರ ಕಹಿಫಲವನ್ನು ಈಗ ಇಡೀ ವಿಶ್ವ ಉಣ್ಣುತ್ತಿದೆ. ಉಗ್ರರು ಅನುಸರಿಸುತ್ತಿರುವ ತಂತ್ರಗಳನ್ನು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ. ಯುವ ಮನಸ್ಸುಗಳನ್ನು ಮರುಳು ಮಾಡಿ ಸೆಳೆದು ವಿಧ್ವಂಸಕ ಕೃತ್ಯಕ್ಕೆ ತಯಾರು ಮಾಡುವ, ತಮ್ಮನ್ನೇ ತಾವು ಸ್ಫೋಟಿಸಿಕೊಂಡು ಸುತ್ತಲಿನ ಜನರನ್ನೂ ಕೊಲ್ಲುವಷ್ಟು ಕ್ರೌರ್ಯವನ್ನು ಎಳೆಯರು ಮತ್ತು ಯುವಜನರ ತಲೆಯಲ್ಲಿ ತುಂಬುವ ಕೆಲಸವನ್ನು ಅವರು ವ್ಯವಸ್ಥಿತವಾಗಿಯೇ ಮಾಡುತ್ತಿದ್ದಾರೆ. ಜರ್ಮನಿಯ ಮ್ಯೂನಿಕ್‌ನಲ್ಲಿ ಮಾಲ್‌ಗೆ ನುಗ್ಗಿ 9 ಜನರನ್ನು ಕೊಂದ, ಚಲಿಸುವ ರೈಲಿನಲ್ಲಿ ಸಹ ಪ್ರಯಾಣಿಕರನ್ನು ಇರಿದ ದುಷ್ಕರ್ಮಿಗಳಿಬ್ಬರೂ 17, 18 ವರ್ಷ ಎಳೆಯರು. ಇದು ಆತಂಕದ ಸಂಗತಿ. ಉಗ್ರರಿಗೆ ಹಣಬಲ, ಜನಬಲ, ಸೈದ್ಧಾಂತಿಕ ಬಲಗಳು ಸಿಗದಂತೆ ನೋಡಿಕೊಳ್ಳಬೇಕು. ನಿರಂತರ ಜಾಗೃತಿ, ಮನವೊಲಿಕೆಗಳೇ ಉಗ್ರರನ್ನು ನಿಷ್ಕ್ರಿಯಗೊಳಿಸಲು ಇರುವ ಪರಿಣಾಮಕಾರಿ ಅಸ್ತ್ರಗಳು. ಆದರೆ ಹೃದಯಹೀನರ ಎದುರು ಇವು ಕೆಲಸ ಮಾಡುತ್ತವೆಯೇ ಎಂಬುದೇ ಅನುಮಾನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.