ಸಂಸತ್ತಿನ ಮುಂಗಾರು ಅಧಿವೇಶನ ಸ್ವಾಗತಾರ್ಹ ಪರಿವರ್ತನೆ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಎರಡೂ ಮನೆಗಳಲ್ಲಿ ವಾತಾವರಣವೇ ಬದಲಾಗಿತ್ತು. ಅದರ ಫಲವಂತೂ ಅದ್ಭುತ. ಲೋಕಸಭೆ 15 ಮಸೂದೆಗಳ ಮೇಲೆ ಚರ್ಚೆ ನಡೆಸಿ ಅಂಗೀಕಾರ ನೀಡಿದ್ದು ಸಣ್ಣ ವಿಷಯವಲ್ಲ. ನಮ್ಮ ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಳಗಳ ಕಲಾಪ ನೋಡಿದವರಿಗೆ ಇವು ‘ಜಗಳದ ಮನೆಗಳು’ ಎಂಬ ಭಾವನೆ ಬಂದಿರುವುದು ಸಹಜ. ಒಂದೊಂದು ನಿಮಿಷದ ಕಲಾಪಕ್ಕೂ ಸಾರ್ವಜನಿಕರ ತೆರಿಗೆ ಹಣ ಲಕ್ಷಗಟ್ಟಲೆ ಖರ್ಚಾಗುತ್ತದೆ. ‘ಅದನ್ನೆಲ್ಲ ಮರೆತು ನಮ್ಮ ಜನಪ್ರತಿನಿಧಿಗಳು ಸಕಾರಣವಿಲ್ಲದೆ ಸದನದ ಒಳಗೆ ಗದ್ದಲ ಮಾಡುತ್ತಾರೆ; ಕಲಾಪಕ್ಕೆ ತಡೆಯೊಡ್ಡುತ್ತಾರೆ’ ಎಂದು ಎಲ್ಲರಿಗೂ ಅನಿಸಿದೆ. ಅದು ನಮ್ಮ ಮಕ್ಕಳ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಿದೆ ಎಂಬುದಕ್ಕೆ ಶಾಲೆಗಳಲ್ಲಿ ನಡೆಯುವ ಅಣಕು ಸಂಸತ್‌ಗಳೇ ಸಾಕ್ಷಿ. ಕೂಗಾಟ, ಕಿರುಚಾಟವೇ ಸಂಸತ್‌ ಕಲಾಪ ಎಂದು ತಿಳಿದುಕೊಂಡು ಅಲ್ಲಿ ಮಕ್ಕಳು ತಾವೂ ಹಾಗೇ ವರ್ತಿಸಿದ ನಿದರ್ಶನಗಳು ನಮ್ಮ ಮುಂದಿವೆ. ಇದಕ್ಕೆ ಹೊಣೆ, ಮತ ಚಲಾಯಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಮತದಾರರಲ್ಲ; ನಮ್ಮಿಂದ ಆರಿಸಿಹೋದ ಜನಪ್ರತಿನಿಧಿಗಳು ಮತ್ತು ಸದನದ ಒಳಗೆ ಅವರ ನಡವಳಿಕೆ. ಆದರೆ ಕಳೆದ ವಾರ ಮುಕ್ತಾಯವಾದ ಸಂಸತ್ತಿನ ಮುಂಗಾರು ಅಧಿವೇಶನ ಮಾತ್ರ ಇವೆಲ್ಲಕ್ಕಿಂತ ಭಿನ್ನವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು, ಭಿನ್ನಮತ ದಾಖಲಿಸಲು ಸದಸ್ಯರು ಎಂದಿನಂತೆ ಗಲಾಟೆಯ ಮೊರೆ ಹೋಗಲಿಲ್ಲ. ಮಾತು, ಚರ್ಚೆಗಳ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ತುಂಬ ಹೊಣೆಗಾರಿಕೆಯಿಂದ ನಡೆದುಕೊಂಡರು. ಇಡೀ ಕಲಾಪಕ್ಕೆ ಮೆರುಗು ತಂದರು. 20 ದಿನಗಳ ಕಲಾಪದ ಅವಧಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಪ್ರಮುಖ ಮಸೂದೆಗಳ ಮೇಲೆ ಚರ್ಚೆ ನಡೆಸಿದವು. ಶಾಸಕಾಂಗದ ಕರ್ತವ್ಯ ನಿರ್ವಹಿಸಿದವು. ವಿವಿಧ ವಿಷಯಗಳ ಮೇಲೆ ಸದಸ್ಯರು ಬೆಳಕು ಚೆಲ್ಲಿದರು. ಸದನದ ಕಲಾಪವನ್ನು ರಾಜಕೀಯ ಪಕ್ಷಗಳು ಮತ್ತು ಸದಸ್ಯರು ಇಷ್ಟೊಂದು ಗಂಭೀರವಾಗಿ ತೆಗೆದುಕೊಂಡದ್ದು ಅನೇಕ ವರ್ಷಗಳ ನಂತರ ಇದೇ ಮೊದಲು. ಏಕೆಂದರೆ ಹಾಲಿ ಲೋಕಸಭೆಯ ಎರಡು ವರ್ಷದ ಅವಧಿ ಮತ್ತು ಅದಕ್ಕೂ ಹಿಂದಿನ ಲೋಕಸಭೆಗಳ ಬಹುತೇಕ ಸಮಯ ಬರೀ ಗದ್ದಲ, ಗಲಾಟೆಯಲ್ಲಿಯೇ ವ್ಯರ್ಥವಾಗಿತ್ತು. ಆದರೆ ಒಂದೇ ಬದಲಾವಣೆ ಎಂದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸ್ಥಾನದ ಅದಲುಬದಲು. ಈಗ ಆಡಳಿತ ಪಕ್ಷದ ಸಾಲಿನಲ್ಲಿ ಇರುವವರು ಆಗ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತಿದ್ದರು; ಆಗ ಆಡಳಿತ ನಡೆಸುತ್ತಿದ್ದವರು ಈಗ ಪ್ರತಿಪಕ್ಷದಲ್ಲಿದ್ದಾರೆ. ಹಿರಿಯರ ಮನೆ, ಬುದ್ಧಿವಂತರ ಸದನ ಎಂದು ಕರೆಯುವ ರಾಜ್ಯಸಭೆ ಕೂಡ ಆಗ ಲೋಕಸಭೆಗಿಂತ ಯಾವುದರಲ್ಲೂ ಕಡಿಮೆ ಇರಲಿಲ್ಲ. ಅಲ್ಲೂ ಅದೇ ಗದ್ದಲ, ಕೋಲಾಹಲ, ಕಲಾಪಕ್ಕೆ ಅಡ್ಡಿ, ಪದೇ ಪದೇ ಸದನ ಮುಂದೂಡಿಕೆ ನಡೆದಿತ್ತು. ಸಂಸತ್ತು ಕೆಲಸ ಮಾಡುತ್ತಿಲ್ಲ ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಿತ್ತು. ಆದರೆ ಮುಂಗಾರು ಅಧಿವೇಶನದಲ್ಲಿ ಎರಡೂ ಮನೆಗಳಲ್ಲಿ ವಾತಾವರಣವೇ ಬದಲಾಗಿತ್ತು. ಅದರ ಫಲವಂತೂ ಅತ್ಯದ್ಭುತ. ಲೋಕಸಭೆ 15 ಮಸೂದೆಗಳ ಮೇಲೆ ಚರ್ಚೆ ನಡೆಸಿ ಅಂಗೀಕಾರ ನೀಡಿದ್ದು ಸಣ್ಣ ವಿಷಯವಲ್ಲ. ಇನ್ನೂ ಅಚ್ಚರಿಯ ಬೆಳವಣಿಗೆ ಎಂದರೆ ಅದು ನಿಗದಿತ ಸಮಯವನ್ನೂ ಮೀರಿ ಶೇ 111ರಷ್ಟು ಸಮಯ ಕಲಾಪ ನಡೆಸಿದೆ. ರಾಜ್ಯಸಭೆ ಕೂಡ ನಿಗದಿತ ಸಮಯವನ್ನು ನೂರಕ್ಕೆ ನೂರು ಬಳಸಿಕೊಂಡು 14 ಮಸೂದೆಗಳಿಗೆ ಅನುಮೋದನೆ ಕೊಟ್ಟಿದೆ. ಈ ಅಧಿವೇಶನದ ಅತ್ಯಂತ ಪ್ರಮುಖ ಸಾಧನೆ ಎಂದರೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಎರಡೂ ಸದನಗಳು ಅವಿರೋಧವಾಗಿ ಅಂಗೀಕರಿಸಿದ್ದು. ಅದೇ ರೀತಿ ಮಾನಸಿಕ ಆರೋಗ್ಯ ಆರೈಕೆ ಮಸೂದೆಗೂ ರಾಜ್ಯಸಭೆ ಒಪ್ಪಿಗೆ ಕೊಟ್ಟಿದೆ. ಮಸೂದೆಗಳ ಮೇಲಿನ ಚರ್ಚೆಯಲ್ಲಿ ಅನೇಕ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ದೇಶದ ವಿವಿಧೆಡೆ ದಲಿತರ ಮೇಲೆ ದೌರ್ಜನ್ಯ, ಕಾಶ್ಮೀರ ವಿಷಯಗಳ ಚರ್ಚೆಯಲ್ಲೂ ಸದಸ್ಯರು ವಿನಾಕಾರಣ ಭಾವೋದ್ವೇಗದಿಂದ ವರ್ತಿಸದೆ ಗಂಭೀರವಾಗಿ ನಡೆದುಕೊಂಡದ್ದು ಶ್ಲಾಘನೀಯ. ಗಲಾಟೆಯಿಂದಾಗಿ ತುರ್ತು ಮತ್ತು ಪ್ರಮುಖ ಮಸೂದೆಗಳು ಚರ್ಚೆಯೇ ಇಲ್ಲದೆ ಅಂಗೀಕಾರವಾಗುತ್ತವೆ ಇಲ್ಲವೇ ಸುಖಾಸುಮ್ಮನೆ ವಿಳಂಬಗೊಳ್ಳುತ್ತವೆ ಎಂಬ ಕಳಂಕವನ್ನು ಈ ಸಲದ ಮುಂಗಾರು ಅಧಿವೇಶನ ತೊಡೆದುಹಾಕಿದೆ. ಇದರ ಕೀರ್ತಿ ಎರಡೂ ಕಡೆಯವರಿಗೆ, ಅಂದರೆ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಸಲ್ಲಬೇಕು. ಸದನದ ಕಲಾಪ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಆಡಳಿತ ಪಕ್ಷದ ಹೊಣೆಯಾದರೂ ವಿರೋಧ ಪಕ್ಷಗಳ ಸಹಕಾರವೂ ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಅಧಿಕಾರದಲ್ಲಿವೆ. ಒಂದು ಕಡೆ ವಿರೋಧಿ ಪಾಳೆಯದಲ್ಲಿ ಇರುವ ಪಕ್ಷ ಇನ್ನೊಂದು ಕಡೆ ಆಡಳಿತ ನಡೆಸುತ್ತಿರುವ ಅನೇಕ ಉದಾಹರಣೆಗಳು ನಮ್ಮೆದುರೇ ಇವೆ. ಆದ್ದರಿಂದ ಪ್ರತಿಪಕ್ಷವಾಗಿ ಗಲಾಟೆ ಮಾಡುವುದು, ಆಡಳಿತ ಪಕ್ಷವಾಗಿ ಅಂತಹ ನಡೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಆಷಾಢಭೂತಿತನವನ್ನು ಜನ ಹೆಚ್ಚು ಕಾಲ ಸಹಿಸಿಕೊಳ್ಳುವುದಿಲ್ಲ. ಆ ಎಚ್ಚರ ನಮ್ಮ ಜನಪ್ರತಿನಿಧಿಗಳಿಗೆ ಇರಬೇಕು. ವೈಯಕ್ತಿಕ ಹಿತಾಸಕ್ತಿ, ಸಣ್ಣತನವನ್ನು ಬಿಟ್ಟು ದೇಶ ಮುಖ್ಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಂಸತ್‌ ಮತ್ತು ಶಾಸಕಾಂಗಗಳ ಕಲಾಪಗಳು ಸುಗಮವಾಗಿ ನಡೆಯಲು ಸಾಧ್ಯ. ಈ ವಿಷಯದಲ್ಲಿ ಪ್ರಜೆಗಳ ನಿರೀಕ್ಷೆಯನ್ನು ಪಕ್ಷಗಳು ಹುಸಿ ಮಾಡದಿದ್ದರೆ ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.