ಮಾನವತೆಯ ಜಾಡಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆ ಕ್ರೀಡಾ ಚಟುವಟಿಕೆಯೊಂದು ಮನುಕುಲವನ್ನು ಒಂದು ಚಾವಣಿಯ ಅಡಿ ತರಲು ಸಾಧ್ಯ ಎಂಬುದು ಇದೀಗ ರಿಯೊ ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಸಾಬೀತಾಯಿತು. 17 ದಿನಗಳ ಈ ಮಹಾ ಕೂಟದಲ್ಲಿ 206 ದೇಶಗಳ ಹತ್ತು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಷ್ಟೂ ದೇಶಗಳಲ್ಲಿ ಜನ ಟೆಲಿವಿಷನ್‌ ಎದುರು ಕುಳಿತು ರಿಯೊ ಆಗುಹೋಗುಗಳನ್ನು ವೀಕ್ಷಿಸಿದರು. ಮತಾಂಧರ ಅಬ್ಬರ, ಉಗ್ರರ ಅಟ್ಟಹಾಸ, ಹತ್ತು ಹಲವು ದೇಶಗಳನ್ನು ಕಾಡುತ್ತಿರುವ ಆರ್ಥಿಕ ಸಮಸ್ಯೆಗಳ ನಡುವೆಯೂ ಜನ ಎಲ್ಲವನ್ನೂ ಮರೆತು ಕ್ರೀಡೆಯನ್ನೇ ಧ್ಯಾನಿಸಿದ್ದೊಂದು ಸಕಾರಾತ್ಮಕ ವಿದ್ಯಮಾನ. ಎಂಬತ್ತು ವರ್ಷಗಳ ಹಿಂದೆ ಹಿಟ್ಲರ್‌ ತನ್ನ ನಾಜಿ ಸಿದ್ಧಾಂತದ ಸಮರ್ಥನೆಗೆ ಒಲಿಂಪಿಕ್ಸ್‌ ಕೂಟವನ್ನು ಬಳಸಿಕೊಂಡಿದ್ದರೆ, ಎಂಟು ವರ್ಷಗಳ ಹಿಂದೆ ಚೀನಾ ಸರ್ಕಾರ ತಾನೆಷ್ಟು ಪ್ರಬಲ ಎಂಬುದನ್ನು ಜಗತ್ತಿಗೆ ತೋರಿಸಲು ಈ ಕೂಟವನ್ನೇ ವೇದಿಕೆ ಮಾಡಿಕೊಂಡಿತ್ತು. ಆದರೆ ರಿಯೊ ಡಿ ಜನೈರೊದಲ್ಲಿ ಮಾನವತೆಯ ಮೌಲ್ಯಗಳ ಆಶಯಕ್ಕೇ ಒತ್ತು ಕೊಡಲಾಗಿತ್ತು. ಉದ್ಘಾಟನಾ ಸಮಾರಂಭವು ಪರಿಸರ ಸಂರಕ್ಷಣೆಯ ಕಳಕಳಿಯ ದ್ಯೋತಕವಾಗಿತ್ತು. ಸಿರಿಯಾ ಸೇರಿದಂತೆ ಕೆಲವು ದೇಶಗಳ ಮಂದಿ ವಿಭಿನ್ನ ಕಾರಣಗಳಿಂದಾಗಿ ದೇಶ ತೊರೆದು ಅತಂತ್ರರಾದರು. ಇಂತಹ ನಿರಾಶ್ರಿತರ ಮನಕಲಕುವ ಪಡಿಪಾಟಲು ಈಚೆಗೆ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ನಿರಾಶ್ರಿತರ ಆಯ್ದ ಪ್ರತಿಭಾವಂತ ಕ್ರೀಡಾಪಟುಗಳ ತಂಡವೊಂದನ್ನು ಆಯ್ಕೆ ಮಾಡಿ ಅವರೆಲ್ಲರೂ ಒಲಿಂಪಿಕ್‌ ಧ್ವಜದ ಅಡಿಯಲ್ಲಿ ಸ್ವರ್ಧಿಸುವಂತೆ ಮಾಡಿತು. ಈ ಮಾನವೀಯ ನೆಲೆಯ ನಿಲುವು ಶ್ಲಾಘನಾರ್ಹ. ಗೊಂದಲಮಯ ರಾಜಕೀಯ ವ್ಯವಸ್ಥೆ, ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಗಳ ನಡುವೆಯೂ ಬ್ರೆಜಿಲ್‌ ಈ ಕೂಟವನ್ನು ಉತ್ತಮವಾಗಿ ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ.ವಿಭಿನ್ನ ಕ್ರೀಡೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ದೊಡ್ಡ ಮಟ್ಟದಲ್ಲಿಯೇ ರೂಪುಗೊಂಡಿವೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡರೆ ಆ ದೇಶ ಪ್ರಬಲ ಕ್ರೀಡಾಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ. ಈ ಕೂಟಕ್ಕೆ ಮೊದಲು ಜೈಕಾ ವೈರಾಣುವಿನ ಭಯ ವ್ಯಾಪಕವಾಗಿತ್ತು. ಹಾಗಾಗಿ ಕೆಲವು ಘಟಾನುಘಟಿ ಕ್ರೀಡಾಪಟುಗಳು ರಿಯೊ ಕೂಟಕ್ಕೆ ಹೋಗಲಿಲ್ಲ. ಈಗ ಕೂಟ ಮುಗಿದಿದೆ. ಅಂತಹದ್ದೇನೂ ಆಗಿಲ್ಲ ಎನ್ನುವುದೊಂದು ಖುಷಿಯ ಸಂಗತಿ.ಭಾರತದ ಭೂಪ್ರದೇಶ ಮತ್ತು ಜನಸಂಖ್ಯೆಯ ಜತೆಗೆ ನಾವು ಗೆದ್ದ ಪದಕಗಳನ್ನು ಸಮೀಕರಿಸಿ ನೋಡಿದರೆ ಎಂದಿನಂತೆ ನಿರಾಸೆಯೆ. ಬೀಜಿಂಗ್‌ ಮತ್ತು ಲಂಡನ್‌ಗಳಲ್ಲಿ ನಡೆದ ಕಳೆದ ಎರಡು ಒಲಿಂಪಿಕ್ಸ್‌ ಕೂಟಗಳಲ್ಲಿ ಮಾಡಿದಂತಹ ಸಾಧನೆಯೂ ಇಲ್ಲಿ ಕಂಡುಬರಲಿಲ್ಲ. ಆದರೆ ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌, ದೀಪಾ ಕರ್ಮಾಕರ್‌, ಅಭಿನವ್‌ ಬಿಂದ್ರಾ ಸಾಮರ್ಥ್ಯ ಹೆಮ್ಮೆ ತರುವಂತಹದ್ದು. ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಸಿಂಧು ಆಡಿದ ಪರಿ ಅನನ್ಯ. ಕುಸ್ತಿಯಲ್ಲಿ ಸಾಕ್ಷಿ ತೋರಿದ ಛಲ ಗಮನಾರ್ಹ. ಭಾರತೀಯರ ಮಟ್ಟಿಗೆ ಚಿರಪರಿಚಿತವೇನಲ್ಲದ ಜಿಮ್ನಾಸ್ಟಿಕ್‌ನಲ್ಲಿ ಅಗರ್ತಲಾದ ದೀಪಾ ಉತ್ಕೃಷ್ಟ ಕಸರತ್ತುಗಳನ್ನು ಪ್ರದರ್ಶಿಸಿದರು. ಸ್ವಲ್ಪದರಲ್ಲಿ ಪದಕ ಕಳೆದುಕೊಂಡರಾದರೂ, ಅಪಾರ ಜನಪ್ರೀತಿ ಗಳಿಸಿದರು. ಬಿಂದ್ರಾ ಸ್ವಲ್ಪದರಲ್ಲಿ ಗುರಿ ತಪ್ಪಿದ್ದರಿಂದ ನಾಲ್ಕನೇ ಸ್ಥಾನಕ್ಕಿಳಿದರು. ಹಾಕಿಯಲ್ಲಿ ಭಾರತದ ಆಟಗಾರರು ಎಲ್ಲಾ ಪಂದ್ಯಗಳಲ್ಲಿಯೂ ಅತ್ಯುತ್ತಮವಾಗಿಯೇ ಆಡಿದರಾದರೂ, ಸೆಮಿಫೈನಲ್‌ ತಲುಪಲಾಗಲಿಲ್ಲ. ಆದರೆ ಹಾಕಿ ಜಗತ್ತಿನಲ್ಲಿ ತಾನೊಂದು ಪ್ರಬಲ ಶಕ್ತಿ ಎಂಬ ಸಂದೇಶ ನೀಡುವುದರಲ್ಲಿ ಭಾರತ ಯಶಸ್ಸು ಪಡೆಯಿತು. ಆದರೆ ಶೂಟಿಂಗ್‌, ಆರ್ಚರಿಗಳಿಂದ ನಿರೀಕ್ಷಿತ ಸಾಮರ್ಥ್ಯ ಕಂಡು ಬರಲಿಲ್ಲ. ಅಥ್ಲೆಟಿಕ್ಸ್‌ನಲ್ಲಿಯೂ ನಮ್ಮವರು ಗಮನ ಸೆಳೆಯಲಿಲ್ಲ. ಟೆನಿಸ್‌ನಲ್ಲಿ ಪದಕದ ಬಾಗಿಲ ಬಳಿ ಭಾರತ ಎಡವಿತು. ಉದ್ದೀಪನಾ ಮದ್ದು ಸೇವನೆಯ ಪೆಡಂಭೂತವೂ ಕಾಡಿತು. ಭಾರತದ ಈ ನಿರಾಶಾದಾಯಕ ಸ್ಥಿತಿ ಕುರಿತು ಈಗಾಗಲೇ ಚರ್ಚೆಗಳ ಚರ್ವಿತ ಚರ್ವಣ ಶುರುವಾಗಿದೆ. ಆರೋಪ ಪ್ರತ್ಯಾರೋಪಗಳೂ ನಡೆಯುತ್ತಿವೆ. ಪ್ರತಿ ಒಲಿಂಪಿಕ್ಸ್‌ ನಂತರವೂ ಭಾರತದಲ್ಲಿ ಇದು ಸಾಮಾನ್ಯ. ಇಂತಹದ್ದೊಂದು ಸ್ಥಿತಿಯಿಂದ ಹೊರ ಬರುವ ಬಗ್ಗೆ ಕಾರ್ಯೋನ್ಮುಖವಾಗಬೇಕಿದೆ. ನಾವು ಎಡವಿದ್ದೆಲ್ಲಿ ಎಂಬ ಬಗ್ಗೆ ಆತ್ಮವಿಮರ್ಶೆಯ ಅಗತ್ಯವಿದೆ. ವೇಗದ ಓಟಗಾರ ಉಸೇನ್‌ ಬೋಲ್ಟ್‌, ಈಜುಗಾರ ಮೈಕೆಲ್‌ ಫೆಲ್ಪ್ಸ್‌ ತಮ್ಮ ಚಿನ್ನದ ಪದಕಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ಅಸಾಮಾನ್ಯ ಸಾಧಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೂರ ಅಂತರದ ಓಟದಲ್ಲಿ ಕೆನ್ಯಾ, ಇಥಿಯೋಪಿಯಾ ಆಟಗಾರರ ಮೇಲುಗೈ ರಿಯೊದಲ್ಲಿಯೂ ಮುಂದುವರಿಯಿತು. ಅಮೆರಿಕ, ಬ್ರಿಟನ್‌, ಚೀನಾ, ಜರ್ಮನಿ, ಜಪಾನ್‌ಗಳ ಪ್ರಾಬಲ್ಯ ಇಲ್ಲಿಯೂ ಎದ್ದುಕಂಡಿತು. ಭಾರತ ಇಂತಹ ಪ್ರಬಲರ ಯಶಸ್ಸಿನ ಗುಟ್ಟನ್ನು ಮನನ ಮಾಡಿಕೊಂಡು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎತ್ತರದ ಸಾಧನೆ ಮಾಡುವತ್ತ ಈಗಿನಿಂದಲೇ ಹೊಸ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ. ಅಂತಹ ದಾಪುಗಾಲೇ ನಮ್ಮ ಎಳೆಯರಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸದ ಸಿಂಚನವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.