ತೇಜಸ್‌ ಸೇರ್ಪಡೆಯಿಂದ ಬಲ: ಸವಾಲುಗಳೂ ಇವೆ ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‌ನ ಸೇರ್ಪಡೆಯೊಂದಿಗೆ ಇನ್ನೊಂದು ಶಕೆ ಆರಂಭವಾಗಿದೆ. ಕಳೆದ ವಾರ ಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ ಎರಡು ಸೂಪರ್‌ ಸಾನಿಕ್‌ ಜೆಟ್‌ ‘ತೇಜಸ್‌’ ಹಗುರ ಯುದ್ಧ ವಿಮಾನಗಳ ಸೇರ್ಪಡೆಯಾಗಿದೆ. ಇದು ನಮ್ಮ ರಕ್ಷಣಾ ಸ್ವಾವಲಂಬನೆ ವಿಷಯದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಮುಂಬರುವ ವರ್ಷಗಳಲ್ಲಿ ತಲಾ 20 ತೇಜಸ್‌ ವಿಮಾನಗಳುಳ್ಳ ಒಟ್ಟು 6 ಸ್ಕ್ವಾಡ್ರನ್‌ಗಳನ್ನು ಹೊಂದುವುದು ವಾಯುಪಡೆಯ ಆಲೋಚನೆ. ಕಾಲಾಂತರದಲ್ಲಿ ಮಿಗ್‌ 21 ಎಸ್‌ ಶ್ರೇಣಿಯ ಯುದ್ಧ ವಿಮಾನಗಳ ಸ್ಥಾನವನ್ನು ತೇಜಸ್‌ ತುಂಬಬೇಕಾಗಿದೆ. ಅದಕ್ಕೆ ಪೂರಕವಾಗಿ ಈ ವರ್ಷದ ಅಂತ್ಯದೊಳಗೆ ಇನ್ನೂ ಆರು ‘ತೇಜಸ್‌’ಗಳನ್ನು ವಾಯುಪಡೆಗೆ ಎಚ್‌ಎಎಲ್‌ ಹಸ್ತಾಂತರಿಸಬೇಕು. ಅಲ್ಲದೆ ವರ್ಷಕ್ಕೆ ಕನಿಷ್ಠ 16 ವಿಮಾನಗಳನ್ನು ನಿರ್ಮಿಸಿ ಪೂರೈಸುವ ಸಾಮರ್ಥ್ಯ ಗಳಿಸಿಕೊಳ್ಳಬೇಕು. ಆಗ ಮಾತ್ರ ವಾಯುಪಡೆಯ ಬೇಡಿಕೆ ಈಡೇರಿಸಲು ಅದಕ್ಕೆ ಸಾಧ್ಯ. ದೇಶದ ವೈಮಾನಿಕ ಕ್ಷೇತ್ರದ ಬೆಳವಣಿಗೆಯ ಜತೆ ಜತೆಗೇ ಹಾಸುಹೊಕ್ಕಾಗಿರುವ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮತ್ತು ವೈಮಾಂತರಿಕ್ಷ ಅಭಿವೃದ್ಧಿ ಸಂಸ್ಥೆಯ (ಎಡಿಎ) ಮೂರು ದಶಕಗಳಿಗೂ ಹೆಚ್ಚಿನ ಶ್ರಮ ‘ತೇಜಸ್‌’ನ ಹಿಂದೆ ಇದೆ. ಇವು ತೇಜಸ್‌ನ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣದ ಸವಾಲನ್ನು ಕೈಗೆತ್ತಿಕೊಂಡದ್ದು 1983ರಲ್ಲಿ. ಆದರೆ ಆರಂಭಿಕ ಅಡಚಣೆಗಳು, ಹಣಕಾಸು, ಸರ್ಕಾರದ ಹಂತದಲ್ಲಿ ಸಾಮಾನ್ಯವಾಗಿರುವ ವಿಳಂಬ ವ್ಯಾಧಿ ಮುಂತಾದ ಸಮಸ್ಯೆಗಳನ್ನು ದಾಟಿ ತೇಜಸ್‌ಗೆ ಒಂದು ರೂಪು ಕೊಡಲು ಇಷ್ಟು ವರ್ಷಗಳು ಬೇಕಾದವು. ಈ ವಿಮಾನದ ಮೊದಲ ಪ್ರಾಯೋಗಿಕ ಹಾರಾಟ ನಡೆದದ್ದು 2001ರಲ್ಲಿ. ನಂತರ ಇದರ ಸಾಮರ್ಥ್ಯ, ಸೇರ್ಪಡೆ ಬಗ್ಗೆ ವಾಯುಪಡೆ ಮತ್ತು ಎಚ್‌ಎಎಲ್‌ ಮಧ್ಯೆ ಭಿನ್ನಾಭಿಪ್ರಾಯ ಮೂಡಿತು. ನಮ್ಮ ರಕ್ಷಣಾ ಅಗತ್ಯಕ್ಕೆ ತಕ್ಕ ವಿಮಾನಗಳು ನಮಗೆ ಬೇಕು; ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿದೇಶಿ ಅತ್ಯಾಧುನಿಕ ಯುದ್ಧ ವಿಮಾನಗಳ ಸಾಮರ್ಥ್ಯಕ್ಕೆ ತೇಜಸ್‌ ಸರಿಸಮನಾಗಿ ನಿಲ್ಲಬಲ್ಲದೇ ಎಂದು ವಾಯುಪಡೆ ಅನುಮಾನ ಹೊಂದಿತ್ತು. ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರ ಆಸಕ್ತಿ, ಒತ್ತಡದ ಫಲವಾಗಿ ಈಗ ಎರಡು ವಿಮಾನಗಳು ವಾಯುಪಡೆಗೆ ಸೇರಿ ಶುಭಾರಂಭ ಮಾಡಿವೆ. ವಾಯುಪಡೆಗೆ ಇರುವ ಅನುಮಾನಗಳನ್ನು ಹೋಗಲಾಡಿಸುವ ದೊಡ್ಡ ಹೊಣೆ ಎಚ್‌ಎಎಲ್ ಮೇಲಿದೆ. ತೇಜಸ್‌ಗೆ ಇನ್ನೂ ‘ಕಾರ್ಯಾಚರಣೆ ಅಂತಿಮ ಪರವಾನಗಿ’ (ಎಫ್‌ಒಸಿ) ಸಿಕ್ಕಿಲ್ಲ. ಅದನ್ನು ತ್ವರಿತವಾಗಿ ಪಡೆದುಕೊಳ್ಳಬೇಕು. ಏಕೆಂದರೆ ಆ ನಂತರವೇ ಪೂರ್ಣ ಪ್ರಮಾಣದಲ್ಲಿ ತಯಾರಿಕೆ, ಬಳಕೆ ಸಾಧ್ಯ. ಇದೇ ಶ್ರೇಣಿಯ ವಿದೇಶಿ ಯುದ್ಧ ವಿಮಾನಗಳಿಗೆ ಯಾವುದರಲ್ಲೂ ಕಡಿಮೆಯಿಲ್ಲದಂತಹ ಮಾದರಿಯ ಯುದ್ಧ ವಿಮಾನಗಳನ್ನು ಅದು ಪೂರೈಸಲು ಶಕ್ತವಾಗಬೇಕು. ತೇಜಸ್‌ಗಿಂತ ಇನ್ನಷ್ಟು ಶಕ್ತಿಶಾಲಿಯಾದ ‘ತೇಜಸ್‌ ಮಾರ್ಕ್‌ 1 ಎ’ ಸರಣಿಯ ಬಗ್ಗೆ ವಾಯುಪಡೆ ಆಸಕ್ತವಾಗಿದೆ. ಆ ದಿಸೆಯಲ್ಲಿ ಎಚ್‌ಎಎಲ್‌ ಮುನ್ನಡೆಯಬೇಕು. ವಾಯುಪಡೆಯಲ್ಲಿ ಸದ್ಯ ಬಳಕೆಯಲ್ಲಿ ಇರುವ ಫ್ರಾನ್ಸ್‌ನ ಮಿರಾಜ್‌ 2000 ಮತ್ತು ರಷ್ಯದ ಮಿಗ್‌ 21 ಯುದ್ಧ ವಿಮಾನಗಳನ್ನೂ ಹಾರಿಸಿದ ಅನುಭವಿ ಪೈಲಟ್ ಒಬ್ಬರ ಪ್ರಕಾರ, ತೇಜಸ್‌ ಯಾವುದರಲ್ಲೂ ಕಡಿಮೆಯಿಲ್ಲ. ಆದರೆ ಇವಿಷ್ಟೇ ಸಾಲದು. ಏಕೆಂದರೆ ತೇಜಸ್‌ ಸಂಪೂರ್ಣ ಸ್ವದೇಶಿ ಹಗುರ ಯುದ್ಧ ವಿಮಾನ ಎಂದು ಹೇಳುವುದು ಕಷ್ಟ. ಸಿಎಜಿ ವರದಿಯ ಪ್ರಕಾರ ಇದರಲ್ಲಿ ಇರುವ ದೇಶಿ ಭಾಗ ಶೇ 35 ಮಾತ್ರ. ಎಂಜಿನ್‌ ಅಮೆರಿಕದ್ದು; ರಡಾರ್‌ ಮತ್ತಿತರ ಉಪಕರಣಗಳು ವಿದೇಶದಿಂದ ಆಮದು ಮಾಡಿಕೊಂಡದ್ದು. ಇವನ್ನೆಲ್ಲ ದೇಶೀಯವಾಗಿಯೇ ಅಭಿವೃದ್ಧಿಪಡಿಸಲು ನಮಗೆ ಇನ್ನಷ್ಟು ಸೂಕ್ಷ್ಮ, ನಿಖರ, ಸುಧಾರಿತ ತಂತ್ರಜ್ಞಾನದ ಅಗತ್ಯವಿದೆ. ನಮ್ಮಲ್ಲಿ ಉತ್ಸಾಹಿ ಪ್ರತಿಭಾವಂತ ವಿಜ್ಞಾನಿಗಳು, ತಂತ್ರಜ್ಞರಿಗೇನೂ ಕೊರತೆಯಿಲ್ಲ. ಅವರಿಗೆ ಪ್ರೋತ್ಸಾಹ ನೀಡಬೇಕು. ಏಕೆಂದರೆ ತೇಜಸ್‌ಗಿಂತ ಮುಂಚೆಯೇ ಅಂದರೆ 1967 ಏಪ್ರಿಲ್‌ ನಷ್ಟು ಹಿಂದೆಯೇ ಜರ್ಮನ್‌ ತಂತ್ರಜ್ಞಾನದೊಂದಿಗೆ ಎಚ್‌ಎಎಲ್‌ ದೇಶೀಯವಾಗಿ ಮಾರುತ್‌ ಎಚ್‌ಎಫ್‌ 24 ವಿಮಾನಗಳನ್ನು ನಿರ್ಮಿಸಿತ್ತು. ಇವು ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಬಳಕೆಯಾಗಿದ್ದವು. ಮುಂದೆ 1983ರಲ್ಲಿ ಇವುಗಳ ಸೇವೆಯನ್ನು ನಿಲ್ಲಿಸಲಾಯಿತು. ಆಗ ಮೊಳಕೆಯೊಡೆದದ್ದೇ ತೇಜಸ್‌ನ ಪರಿಕಲ್ಪನೆ. ಸರ್ಕಾರದ ಎಲ್ಲ ಹಂತಗಳಲ್ಲೂ ವಿಳಂಬ ಎನ್ನುವುದು ಸರ್ವವ್ಯಾಪಿ. ಆ ವ್ಯಾಧಿಯಿಂದಲೇ ತೇಜಸ್‌ ಅಭಿವೃದ್ಧಿಗೆ 3 ದಶಕಗಳಿಗೂ ಹೆಚ್ಚು ಕಾಲ ಹಿಡಿಯಿತು. ಅಲ್ಲದೆ 1988ರಲ್ಲಿ ಕೆಲ ಪ್ರಮುಖ ದೇಶಗಳು ಕ್ಷಿಪಣಿ ನಿಯಂತ್ರಣ ತಂತ್ರಜ್ಞಾನ ವ್ಯವಸ್ಥೆ (ಎಂಸಿಟಿಆರ್‌) ಅಸ್ತಿತ್ವಕ್ಕೆ ತಂದವು. ಹೀಗಾಗಿ ರಕ್ಷಣಾ ಉದ್ದೇಶದ ತಂತ್ರಜ್ಞಾನ ಪಡೆಯಲು ನಮಗೆ ತೊಂದರೆಯಾಯಿತು. ಆ ಎಲ್ಲ ಅಡೆತಡೆಗಳು ಈಗ ಬಹುತೇಕ ನಿವಾರಣೆಯಾಗಿವೆ. ಎಂಸಿಟಿಆರ್‌ ಸದಸ್ಯತ್ವವೂ ನಮಗೆ ದೊರೆತಿದೆ. ಆದ್ದ ರಿಂದ ಇನ್ನು ಮುಂದೆ ವಿಳಂಬಕ್ಕೆ ಅವಕಾಶ ಕೊಡಬಾರದು. ರಕ್ಷಣಾ ಸಾಮಗ್ರಿಗಳ ವಿಷಯದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಇನ್ನಷ್ಟು ಚುರುಕಾಗಿ ಪ್ರಯತ್ನಗಳು ನಡೆಯಬೇಕು. ತೇಜಸ್‌ ಬಂದಿದೆ ಎಂದು ಬೀಗುತ್ತ ಮೈಮರೆಯುವುದು ಸಾಕು. ಎಲ್ಲ ಹಿನ್ನಡೆಗಳನ್ನು ಮೆಟ್ಟಿ ನಿಂತು ಹೆಸರಿಗೆ ತಕ್ಕಂತೆ ‘ಸಂಪೂರ್ಣ ಸ್ವದೇಶಿ’ ನಮ್ಮ ಗುರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.