ಅಭಿವ್ಯಕ್ತಿ ಸ್ವಾತಂತ್ರ್ಯ: ಮೇಲ್ಪಂಕ್ತಿ ಹಾಕಿಕೊಟ್ಟ ಹೈಕೋರ್ಟ್ ತೀರ್ಪು ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ವಿರುದ್ಧದ ಪ್ರಕರಣಗಳನ್ನು ವಜಾ ಮಾಡಿರುವ ಮದ್ರಾಸ್ ಹೈಕೋರ್ಟ್ ತೀರ್ಪು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಂಬಿಕೆಯುಳ್ಳ ಎಲ್ಲರಿಗೂ ಸಮಾಧಾನ ಉಂಟುಮಾಡುವಂತಿದೆ ಹಾಗೂ ಇಂಥ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಗಳಿಗೆ ಮಾರ್ಗಸೂಚಿಯಂತಿದೆ. ಕಲಾಪ್ರಕಾರವೊಂದನ್ನು ಜಾತಿ - ಧರ್ಮ - ಸಂಸ್ಕೃತಿಯ ಚೌಕಟ್ಟಿನಲ್ಲಿ ನೋಡಿದಾಗ ಉಂಟಾಗುವ ಬಿಕ್ಕಟ್ಟುಗಳಿಗೆ ಉದಾಹರಣೆ ರೂಪದಲ್ಲೂ ಪೆರುಮಾಳ್ ಪ್ರಕರಣವನ್ನು ನೋಡಬಹುದಾಗಿದೆ. ಪುಸ್ತಕಗಳು, ಸಿನಿಮಾ, ಕಲಾಕೃತಿಗಳ ಕುರಿತ ವಿವಾದಗಳು ಭಾರತದಲ್ಲಿ ಹೊಸತೇನಲ್ಲ. ಪಿ.ವಿ. ನಾರಾಯಣ ಅವರ ‘ಧರ್ಮಕಾರಣ’, ಕೆ.ಎಸ್. ನಾರಾಯಣಾಚಾರ್ಯರ ‘ವಾಲ್ಮೀಕಿ ಯಾರು?’ ಪುಸ್ತಕದಿಂದ ಹಿಡಿದು ಎಂ.ಎಫ್. ಹುಸೇನರ ಸರಸ್ವತಿ ಕಲಾಕೃತಿಗಳವರೆಗೆ ಅನೇಕ ಚರ್ಚೆಗಳು ನಡೆದಿವೆ, ವಿವಾದಗಳು ಉಂಟಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಘಟನೆಗಳು ನಿಯಮಿತವಾಗಿ ನಡೆಯುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಗೌರವ ಹೊಂದಿದವರನ್ನು ಆತಂಕಕ್ಕೀಡು ಮಾಡಿತ್ತು. ಕಲಾಕೃತಿಗಳನ್ನು ಧರ್ಮದ ಹಿನ್ನೆಲೆಯಲ್ಲಿ ನೋಡಿದ್ದರಿಂದ ಉಂಟಾದ ವಿವಾದದಿಂದ ನೊಂದ ಹುಸೇನ್ ಅವರು ದೇಶವನ್ನೇ ತ್ಯಜಿಸಿದ್ದರು. ವಿಚಾರಭೇದದ ಕಾರಣದಿಂದಾಗಿಯೇ ಯು.ಆರ್. ಅನಂತಮೂರ್ತಿ ಅವರ ತೇಜೋವಧೆಯ ಪ್ರಯತ್ನಗಳು ನಡೆದಿದ್ದವು. ಎರಡು ವರ್ಷಗಳ ಹಿಂದೆ ‘ಮಾಧೋರುಬಾಗನ್’ ಕಾದಂಬರಿಗೆ ಎದುರಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕಂಗೆಟ್ಟಿದ್ದ ಆ ಕೃತಿಯ ಲೇಖಕ ಪೆರುಮಾಳ್ ಮುರುಗನ್ ಅವರಂತೂ ಸಾಹಿತ್ಯಕ ಚಟುವಟಿಕೆಗಳಿಂದ ದೂರವಾಗುವುದಾಗಿ ಪ್ರಕಟಿಸಿದ್ದರು. ‘ಪೆರುಮಾಳ್ ಮುರುಗನ್ ಎನ್ನುವ ಲೇಖಕ ಸತ್ತ’ ಎಂದು ‘ಫೇಸ್ ಬುಕ್’ನಲ್ಲಿ ದಾಖಲಿಸಿದ್ದ ಅವರು, ತಮ್ಮ ಎಲ್ಲ ಬರವಣಿಗೆಯನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿದ್ದರು. ಸಂಸ್ಕೃತಿ-ಧರ್ಮದ ರಕ್ಷಣೆಯ ಹೆಸರಿನಲ್ಲಿ ತಮಿಳುನಾಡಿನಲ್ಲಿ ನಡೆದ ದಾಳಿಕೋರ ವರ್ತನೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒದಗಿರುವ ಗಂಡಾಂತರದ ಉದಾಹರಣೆಯಂತಿತ್ತು. ಶಾರುಖ್ ಖಾನ್ ಅವರ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಕ್ಕೆ ಸಂಬಂಧಿಸಿದಂತೆ ಉಂಟಾದ ವಿರೋಧದ ಹಿನ್ನೆಲೆಯಲ್ಲೂ ಧರ್ಮ ತಳಕು ಹಾಕಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಸಹಿಷ್ಣುತೆ ಕುರಿತ ಚರ್ಚೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದಾಗಿ ಅಮೀರ್ ಖಾನ್, ಶಾರುಖ್ ಖಾನ್ ಅವರಂಥ ನಟರು ಪದೇ ಪದೇ ತಮ್ಮ ‘ದೇಶಭಕ್ತಿ’ಯನ್ನು ರುಜುವಾತುಪಡಿಸಬೇಕಾದ ಸಂದರ್ಭ ಎದುರಾಗಿರುವುದು ಸಂಸ್ಕೃತಿ-ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ದುಂಡಾವರ್ತಿಯ ಫಲಿತಾಂಶವೇ ಆಗಿದೆ. ಪುಸ್ತಕ- ಕಲಾಕೃತಿ ಇಷ್ಟವಾಗಲಿಲ್ಲ ಎನ್ನುವ ಕಾರಣಕ್ಕಾಗಿ ವ್ಯಕ್ತಿಯನ್ನೇ ನಿರಾಕರಿಸುವುದಕ್ಕೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಇದನ್ನು ಮದ್ರಾಸ್ ಹೈಕೋರ್ಟ್ ತುಂಬಾ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ‘ಸಮಾಜದ ಒಂದು ವರ್ಗಕ್ಕೆ ರುಚಿಸದೆ ಹೋದರೆ ಆ ಬರವಣಿಗೆಯನ್ನು ಅನೈತಿಕ, ಅಶ್ಲೀಲ ಎಂದು ಹಣೆಪಟ್ಟಿ ಹಚ್ಚುವಂತಿಲ್ಲ’ ಎಂದು ಹೇಳಿರುವ ಕೋರ್ಟ್, ಇಂಥ ಸಂದರ್ಭಗಳಲ್ಲಿ ವಿರೋಧ ಸೂಚಿಸುವ ಗುಂಪು ದ್ವೇಷ ಸಾಧಿಸುವ ರೀತಿ ವರ್ತಿಸಬಾರದು ಎಂದು ಕಿವಿಮಾತು ಹೇಳಿದೆ. ಇಷ್ಟವಾಗದೆ ಹೋದುದನ್ನು ನಿರಾಕರಿಸುವ ಹಕ್ಕು ಜನರಿಗಿದೆ ಎನ್ನುವುದನ್ನೂ ಕೋರ್ಟ್ ನೆನಪಿಸಿದೆ. ಈ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರೇ ಎಂಟು ವರ್ಷಗಳ ಹಿಂದೆ ದೆಹಲಿ ಹೈಕೋರ್ಟ್ ಮೂಲಕ ಎಂ.ಎಫ್. ಹುಸೇನ್ ಪರ ತೀರ್ಪು ನೀಡಿದ್ದರು ಎಂಬುದನ್ನು ಸ್ಮರಿಸಬಹುದು. ‘ಕಲೆ ಎನ್ನುವುದು ಎಂದೂ ಪವಿತ್ರವಾಗಿರುವುದಿಲ್ಲ... ಪವಿತ್ರವಾಗಿದ್ದಲ್ಲಿ ಅದು ಕಲೆಯಾಗಿರುವುದಿಲ್ಲ’ ಎಂಬಂಥ ಚಿತ್ರಕಲಾವಿದ ಪಾಬ್ಲೊ ಪಿಕಾಸೊನ ಮಾತುಗಳನ್ನು ಆಗ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದರು. ಪೆರುಮಾಳ್ ರೀತಿಯ ಪ್ರಕರಣಗಳು ಉಂಟಾದಾಗ ರಾಜ್ಯ ಸರ್ಕಾರಗಳು ಮೂಕಪ್ರೇಕ್ಷಕರಂತೆ ಇರುವುದನ್ನೂ ಹಾಗೂ ವಿರೋಧಕ್ಕೆ ಮಣಿದು ಸೃಜನಶೀಲ ಕೃತಿಗಳನ್ನು ನಿಷೇಧಿಸುವ ತೀರ್ಮಾನ ಕೈಗೊಳ್ಳುವುದನ್ನು ನ್ಯಾಯಾಲಯ ಟೀಕಿಸಿದೆ. ಇಂಥ ವಿವಾದಗಳು ತಲೆದೋರಿದಾಗ ಅವುಗಳನ್ನು ನಿಭಾಯಿಸಲು ಅಗತ್ಯವಾದ ಮಾರ್ಗದರ್ಶಿ ಸೂಚನೆಗಳನ್ನು ಪೊಲೀಸರಿಗೆ ಒದಗಿಸುವಂತೆ ಹಾಗೂ ತಜ್ಞರ ಸಮಿತಿಯನ್ನು ನೇಮಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಇದು ಉಳಿದ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಬೇಕಾಗಿದೆ. ತಮ್ಮ ವಿರುದ್ಧದ ಪ್ರಕರಣಗಳನ್ನು ವಜಾ ಮಾಡಿರುವ ಹಾಗೂ ಬರವಣಿಗೆಯನ್ನು ಮತ್ತೆ ಮುಂದುವರಿಸುವಂತೆ ಹೇಳಿರುವ ಮದ್ರಾಸ್ ಹೈಕೋರ್ಟ್ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪೆರುಮಾಳ್ ಮುರುಗನ್ ಅವರು ಬರವಣಿಗೆಯನ್ನು ಮತ್ತೆ ಮುಂದುವರಿಸುವುದಾಗಿ ಹೇಳಿದ್ದಾರೆ. ಇದು ಲೇಖಕನೊಬ್ಬನ ವೈಯಕ್ತಿಕ ಸಂತೋಷ ಅಥವಾ ಗೆಲುವು ಮಾತ್ರವಾಗಿರದೆ, ದೇಶದಲ್ಲಿ ಸೃಜನಶೀಲ ಸ್ವಾತಂತ್ರ್ಯದ ಕುರಿತ ಧ್ವನಿಗಳಿಗೆ ನೈತಿಕ ಶಕ್ತಿಯನ್ನು ಹೆಚ್ಚಿಸುವ ಮಹತ್ತರ ನಡೆಯೂ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.