ಆಯ್ಕೆಗಳಿಲ್ಲದ ಪರಿಸ್ಥಿತಿ ಮುತ್ಸದ್ದಿತನ ಪ್ರದರ್ಶನ ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಿಂದ ನದಿಗೆ ಹಾಗೂ ನೀರಾವರಿ ಕಾಲುವೆಗಳಿಗೆ ಮತ್ತೆ ನೀರಿನ ಹರಿವು ಆರಂಭವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಇದೇನೂ ದೊಡ್ಡ ಸಂಗತಿಯಾಗಬೇಕಿರಲಿಲ್ಲ. ಆದರೆ ಈಗಿನದು ಅಸಾಧಾರಣ ಸನ್ನಿವೇಶ. ನಮ್ಮ ರೈತರ ಬೆಳೆಗಳಿಗೆ ನೀರು ಬಿಡಲು ಒಪ್ಪಿಗೆ ಪಡೆಯುವುದಕ್ಕಾಗಿಯೇ ಸೋಮವಾರ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಸಿ ನಿರ್ಣಯ ಅಂಗೀಕರಿಸಿದ್ದು ಅಪರೂಪದಲ್ಲಿ ಅಪರೂಪ. ಚೆನ್ನಾಗಿ ಮಳೆ ಸುರಿದು ಜಲಾಶಯಗಳು ಭರ್ತಿಯಾದರೆ ಹೆಚ್ಚಿನ ನೀರನ್ನು ನದಿಗೆ ಬಿಡುವುದಕ್ಕಾಗಲಿ, ನೀರಾವರಿ ಕಾಲುವೆಗಳಿಗೆ ಹರಿಸುವುದಕ್ಕಾಗಲಿ ಶಾಸನಸಭೆಯ ಪರವಾನಗಿ ಪಡೆಯುವ ಪದ್ಧತಿ ಇಲ್ಲ. ವ್ಯಾವಹಾರಿಕವಾಗಿ ಅದು ಸಾಧ್ಯವೂ ಇಲ್ಲ; ಸಾಧುವೂ ಅಲ್ಲ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಸಲ ಮುಂಗಾರು ಕೈಕೊಟ್ಟಿದ್ದರಿಂದ ಭಾರಿ ಸಂಕಷ್ಟ ತಲೆದೋರಿ ನಾನಾ ಸಮಸ್ಯೆಗಳನ್ನು ರಾಜ್ಯ ಎದುರಿಸಬೇಕಾಯಿತು. ಅದನ್ನು ಅರ್ಥ ಮಾಡಿಕೊಂಡು ಸಹಕರಿಸುವ ಮನಸ್ಥಿತಿಯಲ್ಲಿ ತಮಿಳುನಾಡು ಇರಲಿಲ್ಲ. ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರೂ ಅಲ್ಲಿಯೂ ಕರ್ನಾಟಕ ಹಿನ್ನಡೆ ಅನುಭವಿಸಬೇಕಾಗಿ ಬಂತು. ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆ ಇದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಪದೇಪದೇ ರಾಜ್ಯಕ್ಕೆ ನಿರ್ದೇಶನ ನೀಡುತ್ತ ಬಂದ ನಂತರ ಪರಿಸ್ಥಿತಿಯೇ ಬದಲಾಯಿತು. ಹೀಗಾಗಿ ಆರಂಭದಲ್ಲಿ ಕೋರ್ಟ್‌ ಆದೇಶದ ಪ್ರಕಾರ ನೀರು ಬಿಟ್ಟರೂ, ನಂತರ ‘ನೀರು ಬಿಡುವುದು ಸಾಧ್ಯವೇ ಇಲ್ಲ’ ಎಂದು ಅನಿವಾರ್ಯವಾಗಿ ಹೇಳುವ ಸ್ಥಿತಿ ಬಂತು. ಸೆ. 23ರಂದು ವಿಶೇಷ ಅಧಿವೇಶನ ಕರೆದು ‘ಕುಡಿಯುವ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ನೀರು ಬಿಡಬಾರದು’ ಎಂಬ ನಿರ್ಣಯವನ್ನು ಅಂಗೀಕರಿಸಿದ್ದರ ಹಿಂದೆ ಇದ್ದದ್ದು ‘ಮಳೆಗಾಲ ಬರುವವರೆಗೂ ಕುಡಿಯಲು ನೀರು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ’ಯೇ ಹೊರತು ‘ತಮಿಳುನಾಡಿಗೆ ನೀರು ಬಿಡಬಾರದು’ ಎಂಬ ದುರುದ್ದೇಶ ಅಲ್ಲ. ಇದನ್ನು ಒಪ್ಪದೆ, ಮತ್ತೆ ನೀರು ಬಿಡಲು ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶ ಮತ್ತು ಅ. 4ರ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆಯ ನಂತರ ಕರ್ನಾಟಕದ ಎದುರು ಹೆಚ್ಚಿನ ಆಯ್ಕೆಗಳು ಇರಲಿಲ್ಲ ಎನ್ನುವುದು ಸುಳ್ಳಲ್ಲ. ಹಗ್ಗವನ್ನು ಹೆಚ್ಚು ಎಳೆಯಬಾರದು; ಮಿತಿ ದಾಟಿದರೆ ಅದು ಹರಿದೇ ಹೋಗುತ್ತದೆ ಎಂಬುದು ವಿವೇಕಿಗಳು ಹೇಳುವ ಹಿತವಚನ. ವಿಧಾನ ಮಂಡಲದ ವಿಶೇಷ ಅಧಿವೇಶನ ಸೋಮವಾರ ತೆಗೆದುಕೊಂಡ ನಿರ್ಣಯ ಮತ್ತು ಅದಕ್ಕೆ ಅನುಗುಣವಾಗಿ ಅಂದು ರಾತ್ರಿಯಿಂದಲೇ ನೀರು ಹರಿಸುತ್ತಿರುವುದು ಈ ಹಿತವಚನವನ್ನು ನೆನಪಿಸುವಂತಿದೆ. ಇದು ವಿವೇಚನೆಯಿಂದ ತೆಗೆದುಕೊಂಡ ಸ್ವಾಗತಾರ್ಹ ನಿರ್ಣಯ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಹೀಗಾಗಿ ಮಂಗಳವಾರದ ವಿಚಾರಣೆ ವೇಳೆಗೆ ಸುಪ್ರೀಂ ಕೋರ್ಟ್ ಕೂಡ ಕರ್ನಾಟಕದ ನಡೆಯನ್ನು ಗಣನೆಗೆ ತೆಗೆದುಕೊಂಡಿದೆ. ಅ. 7ರಿಂದ 18ರವರೆಗೆ ನಿತ್ಯ 2 ಸಾವಿರ ಕ್ಯುಸೆಕ್‌ ಅಂದರೆ ಒಟ್ಟು 2.07 ಟಿಎಂಸಿ ಅಡಿ ನೀರು ಹರಿಸಲು ಸೂಚಿಸಿದೆ. ಎರಡೂ ರಾಜ್ಯಗಳಿಗೆ ಭೇಟಿ ಕೊಟ್ಟು ವಾಸ್ತವಿಕ ಸ್ಥಿತಿಯ ಅಧ್ಯಯನ ಮಾಡುವುದಕ್ಕಾಗಿ ತಜ್ಞ ಎಂಜಿನಿಯರ್‌ಗಳನ್ನು ಮೇಲುಸ್ತುವಾರಿ ಸಮಿತಿಗೆ ನೇಮಕ ಮಾಡಿದೆ. ನದಿಯ ಸ್ವಾಭಾವಿಕ ಹರಿವು ಮತ್ತು ರೈತರ ಜಮೀನುಗಳಿಂದ ಬಸಿಯುವ ನೀರೂ ಲೆಕ್ಕಕ್ಕೆ ಸೇರುವುದರಿಂದ ಈ ಸೂಚನೆ ಪಾಲಿಸಲು ರಾಜ್ಯಕ್ಕೆ ಕಷ್ಟವೇನೂ ಆಗುವುದಿಲ್ಲ.ಅಲ್ಲದೆ, ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವೇ ಇಲ್ಲ ಎಂದು ಕೇಂದ್ರ ಸರ್ಕಾರ ತಳೆದ ನಿಲುವು ನಮ್ಮ ರಾಜ್ಯದ ಮಟ್ಟಿಗಂತೂ ಸಮಾಧಾನದ ಸಂಗತಿ. ಸಂಸತ್ತಿನ ವ್ಯಾಪ್ತಿಗೆ ಸೇರಿದ ವಿಷಯದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಕೂಡದು ಎಂಬ ಅದರ ವಾದ ಮುತ್ಸದ್ದಿತನದಿಂದ ಕೂಡಿದೆ. ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಎಲ್ಲ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಸರ್ಕಾರದ ಬೆನ್ನಿಗೆ ನಿಂತದ್ದು, ಒಮ್ಮತ ಪ್ರದರ್ಶಿಸಿದ್ದು ಒಳ್ಳೆಯ ಬೆಳವಣಿಗೆ. ರಾಜ್ಯದ ಹಿತದ ಪ್ರಶ್ನೆ ಬಂದಾಗ ಇದೇ ರೀತಿಯ ನಿಲುವು ಮುಂದುವರಿಯಬೇಕು. ಆದರೆ ಸೋಮವಾರ ಸದನದಲ್ಲಿ ಕೆಲವು ಸದಸ್ಯರು ಆಡಿದ ಮಾತುಗಳು ಘನತೆಯಿಂದ ಕೂಡಿದ್ದು ಎಂದು ಹೇಳಲು ಕಷ್ಟವಾಗುತ್ತದೆ. ನೀರಿನ ವಿವಾದ ಕೋರ್ಟ್ ಮುಂದೆ ಇರುವಾಗ ಸೂಕ್ಷ್ಮವಾಗಿ ನಿಭಾಯಿಸಬೇಕು, ಮಾತಿನ ಮೇಲೆ ನಿಯಂತ್ರಣ ಇರಬೇಕು. ರಾಜಕೀಯ ಮಾಡಲು ಬೇರೆ ವೇದಿಕೆ, ಅವಕಾಶ, ಸಂದರ್ಭಗಳಿವೆ ಎಂಬುದನ್ನು ರಾಜಕಾರಣಿಗಳು ಅರಿತು ನಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.