ಆರ್‌ಬಿಐನ ಹಬ್ಬದ ಉಡುಗೊರೆ ಆರ್ಥಿಕತೆ ಚೇತರಿಕೆಗೆ ನಾಂದಿ ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ನೀತಿ ನಿರೂಪಣೆಯ ಅಲ್ಪಾವಧಿ ಬಡ್ಡಿ ದರ (ರೆಪೊ) ಶೇ 0.25ರಷ್ಟು ಕಡಿತಗೊಳಿಸಿ ಅಚ್ಚರಿ ಮೂಡಿಸಿರುವುದರ ಜತೆಗೆ ಅನಿಶ್ಚಿತತೆಯನ್ನೂ ದೂರ ಮಾಡಿದೆ. ಗೃಹ, ವಾಹನ ಖರೀದಿ ಮತ್ತು ಕಾರ್ಪೊರೇಟ್‌ ಸಾಲಗಾರರಿಗೆ ದೀಪಾವಳಿ ಮುನ್ನವೇ ಉಡುಗೊರೆ ನೀಡಿ ಹಬ್ಬದ ದಿನಗಳ ಸಂಭ್ರಮ ಹೆಚ್ಚಿಸಿದೆ. ಇದುವರೆಗೆ ಗವರ್ನರ್‌ಗೆ ಮಾತ್ರ ಸೀಮಿತವಾಗಿದ್ದ ಬಡ್ಡಿ ದರ ನಿಗದಿ ಅಧಿಕಾರ ಈಗ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಹೆಗಲಿಗೆ ವರ್ಗಾವಣೆಗೊಂಡಿರುವುದು ದೊಡ್ಡ ಪರಿವರ್ತನೆ. ಸಮಿತಿಯ ಆರು ಮಂದಿ ಸದಸ್ಯರು ಒಮ್ಮತದಿಂದ ತೆಗೆದುಕೊಂಡ ನಿರ್ಧಾರ ಸಮರ್ಥಿಸಲು ಸಾಕಷ್ಟು ಕಾರಣಗಳಿವೆ. ಹಿಂದಿನ ಗವರ್ನರ್‌ ರಘುರಾಂ ರಾಜನ್‌ ಅವರ ಹಣದುಬ್ಬರ ನಿಯಂತ್ರಣ ಕೇಂದ್ರಿತ ಆಕ್ರಮಣಕಾರಿ ಧೋರಣೆಗಿಂತ ಹೊಸ ಗವರ್ನರ್‌ ಉರ್ಜಿತ್‌ ಪಟೇಲ್‌ ಭಿನ್ನ ಹಾದಿ ತುಳಿದಿದ್ದಾರೆ. ಹೀಗಾಗಿ ಬಡ್ಡಿ ದರ ಕಡಿತದ ಬೇಡಿಕೆಗೆ ಅಸ್ತು ಎಂದಿದ್ದಾರೆ. ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಶೇ 5ರ ಆಸುಪಾಸಿನಲ್ಲಿಯೇ ಇರುವುದು ಕೂಡ ಬಡ್ಡಿ ದರ ಕಡಿತಕ್ಕೆ ಪೂರಕವಾಗಿತ್ತು. ಜಾಗತಿಕ ಆರ್ಥಿಕತೆಯ ಮಂದಗತಿಯ ಪ್ರಗತಿ, ದೇಶಿ ಕೈಗಾರಿಕಾ ಪ್ರಗತಿ ಕುಂಠಿತಗೊಂಡಿರುವುದು, ಖಾಸಗಿ ವಲಯದ ಬಂಡವಾಳ ಹೂಡಿಕೆ ಪುನಶ್ಚೇತನಗೊಳ್ಳದಿರುವುದೂ ಬಡ್ಡಿ ದರ ಕಡಿತವನ್ನು ಅನಿವಾರ್ಯಗೊಳಿಸಿದ್ದವು ಎಂಬುದನ್ನು ನಾವು ಮರೆಯಲಾಗದು. 7ನೇ ವೇತನ ಆಯೋಗದ ಶಿಫಾರಸು ಜಾರಿಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಲಿದೆ ಎನ್ನುವ ಕಳವಳಕ್ಕೆ ಹೊರತಾಗಿಯೂ ಬಡ್ಡಿ ದರ ಕಡಿತಕ್ಕೆ ಮುಂದಾಗಿರುವುದು, ಕೇಂದ್ರೀಯ ಬ್ಯಾಂಕ್‌ಗೆ ಹಣದುಬ್ಬರ ನಿಯಂತ್ರಣಕ್ಕಿಂತ ಆರ್ಥಿಕ ಪ್ರಗತಿ ಮುಖ್ಯವಾಗಿದೆ ಎನ್ನುವುದು ದೃಢಪಡುತ್ತದೆ. ಹಣದುಬ್ಬರಕ್ಕೆ ಮೂಗುದಾರ ಹಾಕುವ ಉದ್ದೇಶದಿಂದ ಗರಿಷ್ಠ ಮಟ್ಟದಲ್ಲಿಯೇ ಬಡ್ಡಿ ದರ ಉಳಿಸಿಕೊಳ್ಳುವ ಆಕ್ರಮಣಕಾರಿ ಧೋರಣೆಯನ್ನು ಪಟೇಲ್‌ ಕೈಬಿಟ್ಟಿರುವುದು ಕೇಂದ್ರೀಯ ಬ್ಯಾಂಕ್‌ನಲ್ಲಿ ಹೊಸ ಶಕೆಯ ಆರಂಭಕ್ಕೆ ಸಂಕೇತವಾಗಿದೆ. ಆರ್‌ಬಿಐ, ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಅಲ್ಪಾವಧಿ ಸಾಲದ ಬಡ್ಡಿ ದರವು (ರೆಪೊ ದರ) ಈಗ ಆರು ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿದೆ.ಸೈದ್ಧಾಂತಿಕವಾಗಿ, ಆರ್‌ಬಿಐನ ಅಗ್ಗದ ಬಡ್ಡಿ ದರಗಳು ಬ್ಯಾಂಕ್‌ಗಳಿಂದ ವಿವಿಧ ಬಗೆಯ ಸಾಲ ಪಡೆಯುವುದನ್ನು ಉತ್ತೇಜಿಸಲಿವೆ. ಇದರಿಂದ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಳಗೊಂಡು, ಆರ್ಥಿಕ ಪ್ರಗತಿಯ ಚಕ್ರಕ್ಕೆ ಹೆಚ್ಚು ಚಾಲನೆ ಸಿಗಲಿದೆ. ಬಡ್ಡಿ ದರ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಪೂರ್ಣ ಪ್ರಮಾಣದಲ್ಲಿ ಸಾಲಗಾರರಿಗೆ ವರ್ಗಾಯಿಸಲು ಹಿಂದೇಟು ಹಾಕುತ್ತ ಬಂದಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತಿಲ್ಲ. 2015ರ ಜನವರಿಯಿಂದೀಚೆಗೆ ರೆಪೊ ದರ ಶೇ 1.50ಗಳಷ್ಟು ಕಡಿತವಾಗಿದ್ದರೂ, ವಿವಿಧ ಬಗೆಯ ಸಾಲಗಳ ಬಡ್ಡಿ ದರವು ನಿರೀಕ್ಷಿಸಿದ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಬ್ಯಾಂಕ್‌ಗಳು ಇದೇ ಬಗೆಯ ಅಸಹಕಾರ ಧೋರಣೆ ಮುಂದುವರೆಸಿದರೆ ಬಡ್ಡಿ ದರ ಕಡಿತದಿಂದ ಯಾವುದೇ ಪ್ರಯೋಜನವಾಗದು. ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಬಡ್ಡಿ ದರ ಕಡಿತ ಮಾಡುವ ಮೂಲಕ ತಕ್ಷಣಕ್ಕೆ ಸ್ಪಂದಿಸಿದೆ. ಇದನ್ನು ಇತರ ಬ್ಯಾಂಕ್‌ಗಳೂ ಅನುಸರಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯ ಪ್ರಗತಿಯು ಇನ್ನಷ್ಟು ಕಳೆಗುಂದಲಿದೆ ಎಂದು ನಿರೀಕ್ಷಿಸಲಾಗಿದೆ. ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ದೇಶಿ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಲು ಬಡ್ಡಿ ದರ ಕಡಿತ ಮಾಡಿ, ಮಾರುಕಟ್ಟೆಯಲ್ಲಿ ಹಣದ ಪೂರೈಕೆ ಹೆಚ್ಚಿಸಲು ಆರ್‌ಬಿಐ ಮುಂದಾಗಿರುವುದು ಸಮರ್ಥನೀಯವಾಗಿದೆ. ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವು ಈ ಹಿಂದಿನ ಆರು ತ್ರೈಮಾಸಿಕಗಳಲ್ಲಿ ಒಂದು ಬಾರಿ ಮಾತ್ರ ಹೊರತುಪಡಿಸಿ ಎರಡಂಕಿ ದಾಟದಿರುವುದಕ್ಕೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಪರಿಹಾರ ಕಂಡುಕೊಳ್ಳಬೇಕಾಗಿದೆ. ಮೂಲ ಸೌಕರ್ಯ ರಂಗದ ಹೂಡಿಕೆ ಉತ್ತೇಜಿಸಲು, ಬಾಂಡ್‌ ಮಾರುಕಟ್ಟೆಯ ಚೇತರಿಕೆಗೆ ಸರ್ಕಾರ ಕಾರ್ಯೋನ್ಮುಖವಾಗಬೇಕಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆಯಿಂದ ಹೊರ ಬರಲು ಮುಕ್ತ ಸ್ವಾತಂತ್ರ್ಯ ನೀಡಬೇಕಾಗಿದೆ. ಈ ವಿಷಯದಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಹೆಚ್ಚು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಇನ್ನಷ್ಟು ಹಣಕಾಸು ಮತ್ತು ವಿತ್ತೀಯ ಸುಧಾರಣಾ ಕ್ರಮಗಳನ್ನು ಕೈಗೊಂಡಲ್ಲಿ ಅರ್ಥ ವ್ಯವಸ್ಥೆಯ ಚಿತ್ರ ಬದಲಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.