ಅಧಿಕಾರಿಗಳ ಹೇಳಿಕೆ ಹಾಸ್ಯಾಸ್ಪದ ಕಟ್ಟಡಗಳ ಕುಸಿತ ಕಲಿಸದ ಪಾಠ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲೇ ಮತ್ತೊಂದು ಕಟ್ಟಡ ಕುಸಿದುಬಿದ್ದಿದೆ. ಅದರ ಭಗ್ನಾವಶೇಷಗಳಲ್ಲಿ ಅಮಾಯಕ ಜೀವಗಳು ಸಮಾಧಿಯಾಗಿವೆ. ಕಟ್ಟಡ ಕುಸಿತದ ಪ್ರಕರಣಗಳು ನಾಲ್ಕು ವರ್ಷಗಳಲ್ಲಿ ಸುಮಾರು 200 ಬಲಿಗಳನ್ನು ಪಡೆದರೂ ಬಿಬಿಎಂಪಿ ಮಾತ್ರ ಇಲ್ಲಿಯತನಕ ಕುಂಭಕರ್ಣ ನಿದ್ರೆಯಿಂದ ಎಚ್ಚರಗೊಂಡಿಲ್ಲ. ದುರ್ಘಟನೆ ಸಂಭವಿಸಿದಾಗ ಒಂದಿಬ್ಬರು ಎಂಜಿನಿಯರ್‌ಗಳನ್ನು ಅಮಾನತು ಮಾಡುವುದು, ಕಟ್ಟಡದ ಮಾಲೀಕರ ವಿರುದ್ಧ ಒಂದು ದೂರು ದಾಖಲಿಸುವುದು– ಇಷ್ಟಕ್ಕೇ ಅದರ ಕೆಲಸ ಸೀಮಿತವಾಗಿದೆ. ತಿಥಿಯಂತೆ ಇಷ್ಟು ಕೆಲಸ ಮಾಡಿ ಕೈತೊಳೆದುಕೊಂಡು ಮತ್ತೆ ಗಾಢನಿದ್ರೆಗೆ ಜಾರುತ್ತದೆ. ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಕಾಮಗಾರಿ ಕಣ್ಣಮುಂದೆಯೇ ನಡೆಯುತ್ತಿದ್ದರೂ ಅದನ್ನು ತಡೆಯುವ ಗೋಜಿಗೆ ಹೋಗದ ಅಧಿಕಾರಿಗಳು, ‘ನೋಟಿಸ್‌ ನೀಡಲಾಗಿತ್ತು’ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಅಕ್ರಮಗಳ ವಿರುದ್ಧ ಇಡೀ ಆಡಳಿತ ವ್ಯವಸ್ಥೆ ತಳೆದಿರುವ ಧೋರಣೆಗೂ ಇದು ದ್ಯೋತಕ. ರಿಯಲ್‌ ಎಸ್ಟೇಟ್‌ ಕುಳಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ದುಷ್ಟಕೂಟದ ಹಣದ ದಾಹವೇ ಎಲ್ಲ ಅನಾಹುತಗಳಿಗೆ ನೇರ ಕಾರಣ. ಕೆರೆ–ಕಾಲುವೆ ಒತ್ತುವರಿ, ನಕ್ಷೆ ಉಲ್ಲಂಘನೆ, ಸೆಟ್‌ಬ್ಯಾಕ್‌ ಕಡೆಗಣನೆ, ರಸ್ತೆ ಅಗಲ ಅನುಮತಿಸುವ ಪ್ರಮಾಣಕ್ಕಿಂತ ಅಧಿಕ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣದಂತಹ ಅಕ್ರಮಗಳು ನಗರದ ತುಂಬಾ ನಡೆದಿದ್ದರೂ ಆಡಳಿತ ವ್ಯವಸ್ಥೆ ಕಣ್ಣು–ಕಿವಿ ಮುಚ್ಚಿಕೊಂಡು ಕುಳಿತಿದೆ. ರಾಜಧಾನಿಯಲ್ಲಿ ಲಕ್ಷಾಂತರ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಆದರೆ, ನಕ್ಷೆ ಮಂಜೂರಿಯಾಗಿದ್ದು ಸಾವಿರಕ್ಕಿಂತ ಕಡಿಮೆ ಕಟ್ಟಡಗಳಿಗಷ್ಟೆ. ಅಕ್ರಮಗಳ ವಿರಾಟ್‌ರೂಪಕ್ಕೆ ಇದೊಂದು ಪುಟ್ಟ ಉದಾಹರಣೆ. ‘ಬಿಬಿಎಂಪಿಗೆ ಎರವಲು ಸೇವೆ ಮೇಲೆ ಬಂದವರು ನಗರಯೋಜನೆ ವಿಭಾಗವೇ ಬೇಕೆಂದು ಹಾತೊರೆದು ರಾಜಕೀಯ ಒತ್ತಡ ತರುತ್ತಾರೆ. ಹುಲ್ಲುಗಾವಲಿನಲ್ಲಿ ಹೊಟ್ಟೆತುಂಬ ಮೇಯ್ದು ವಾಪಸ್‌ ಹೋಗುತ್ತಾರೆ’ ಎಂಬ ಆರೋಪ ಬಹುಕಾಲದಿಂದಲೂ ಕೇಳಿ ಬರುತ್ತಿದೆ. ನಗರಯೋಜನೆಗೆ ನಿಯೋಜನೆ ಮಾಡಬೇಕೆಂದು ಪ್ರಭಾವಿಗಳು ಕೊಟ್ಟ ಶಿಫಾರಸು ಪತ್ರಗಳು ಪಾಲಿಕೆಯ ಕಪಾಟುಗಳಲ್ಲಿ ತುಂಬಿ ತುಳುಕುತ್ತಿವೆ. ಶಿಫಾರಸಿನ ಮೇಲೆ ಬಂದವರಿಗೆ ಕಡಿಮೆ ಅವಧಿಯಲ್ಲಿಯೇ ‘ಗುರಿ’ ತಲುಪುವ ಧಾವಂತ. ಹತ್ತಾರು ವರ್ಷಗಳಿಂದ ಕಟ್ಟಡ ಕುಸಿತದ ದುರಂತ ಘಟನೆಗಳು ನಡೆಯುತ್ತಿದ್ದರೂ ಅದನ್ನು ತಡೆಯದೆ ಭ್ರಷ್ಟ ವ್ಯವಸ್ಥೆಯನ್ನೇ ಪೋಷಿಸಿಕೊಂಡು ಬಂದ ಆಡಳಿತಗಾರರಿಗೆ ನಾಚಿಕೆಯಾಗಬೇಕು. ಕಟ್ಟಡಗಳ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ದೂರುಗಳು ದಾಖಲಾದರೂ ಈವರೆಗೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ತೊಡಗಿದ ಹಲವರು ಶಾಸನಸಭೆಗಳ ಸದಸ್ಯರಾಗಿ ಬಂದು ಕುಳಿತಿದ್ದಾರೆ. ಅವರಿಗೆ ಜನರ ಹಿತಕ್ಕಿಂತ ದಂಧೆಯಿಂದ ಸಿಗುವ ಲಾಭವೇ ಮುಖ್ಯ. ಸಿಕ್ಕ ಶಾಸನಬದ್ಧ ಅಧಿಕಾರವನ್ನು ಅವರು ಲಾಭ ತರುವಂತಹ ಅಕ್ರಮಗಳ ಪೋಷಣೆಗೆ ಬಳಕೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕುಚೋದ್ಯ. ಸೆಟ್‌ಬ್ಯಾಕ್‌ ಬಿಡದಂತೆ ನಿರ್ಮಿಸಿದ ಕಟ್ಟಡಗಳನ್ನು ಸಕ್ರಮಗೊಳಿಸುವ ಸಲುವಾಗಿ ಕಾಯ್ದೆ ರೂಪಿಸಲು ಮುಂದಾದವರೂ ಇದೇ ಜನಪ್ರತಿನಿಧಿಗಳು. ಇಂಥವರಿಗೆ ಜನರೇ ಬುದ್ಧಿ ಕಲಿಸಬೇಕು. ಮನೆ ಕಟ್ಟಬೇಕೆನ್ನುವುದು ಪ್ರತಿಯೊಬ್ಬರ ಕನಸು. ಆದರೆ, ಮಹಡಿ ಮೇಲೆ ಮಹಡಿ ಕಟ್ಟಿ ಹಣ ಬಾಚಬೇಕೆನ್ನುವುದು ದುರಾಸೆ. ಅಂತಹ ದುರಾಸೆ ತೋರಿದವರು ತಕ್ಕಶಾಸ್ತಿ ಅನುಭವಿಸಿದ ಉದಾಹರಣೆಗಳು ಕಣ್ಣಮುಂದಿದ್ದರೂ ಉಳಿದವರಿಗೆ ಪಾಠವಾಗಿಲ್ಲ. ಕಟ್ಟಡದ ನಿರ್ಮಾಣ ಹೇಗಿರಬೇಕು ಎನ್ನುವುದಕ್ಕೆ ರಾಷ್ಟ್ರೀಯ ಸಂಹಿತೆ ಇದೆ. ಕಟ್ಟಡದ ಉದ್ದೇಶಿತ ಎತ್ತರಕ್ಕೆ ಅನುಗುಣವಾಗಿ ಪಾಯ ತೋಡಬೇಕು, ಅದಕ್ಕಿಂತ ಮುನ್ನ ಮಣ್ಣಿನ ಸುರಕ್ಷಿತ ಧಾರಣಾ ಸಾಮರ್ಥ್ಯ ಪರೀಕ್ಷಿಸಬೇಕು, ನಿರ್ಮಾಣ ಸಾಮಗ್ರಿಗಳ ಗುಣಮಟ್ಟ ತಪಾಸಣೆ ಆಗಬೇಕು, ಬಹುಮಹಡಿ ಕಟ್ಟಡವಾದರೆ ವಿವಿಧ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು, ಕಾರ್ಮಿಕರ ಭದ್ರತೆಗೂ ನಿಯಮದ ಅನುಸಾರ ಕ್ರಮ ಕೈಗೊಳ್ಳಬೇಕು. ಕಟ್ಟಡ ನಿರ್ಮಾಣಕ್ಕೆ ಮುಂದಾದವರಿಗೆ ಈ ನಿಯಮಾವಳಿ ಪಾಠ ಹೇಳಿದರೆ ಅವರು ನಕ್ಕು ಬಿಡುತ್ತಾರೆ. ಅಡ್ಡದಾರಿಯಲ್ಲಿ ಸಾಗುವುದೇ ನಿಯಮಬದ್ಧ ಎಂಬುವಷ್ಟು ವ್ಯವಸ್ಥೆ ಹದಗೆಟ್ಟುಹೋಗಿದೆ. ಕಟ್ಟಡದ ಅಕ್ರಮಗಳಿಗೆ ಕಡಿವಾಣ ಹಾಕಲು ಜನ ಮತ್ತು ಜನಪ್ರತಿನಿಧಿ ಇಬ್ಬರಿಂದಲೂ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.