ಅವಧಿ ಮೀರಿದ ಔಷಧ ನಾಶ ನಿಯಮಿತವಾಗಿರಲಿ ಅಗತ್ಯ ಆರೋಗ್ಯ ಸೇವೆ ಪಡೆದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸುತ್ತದೆ ಎಂಬಂತಹ ದೂರುಗಳನ್ನು ಕೇಳುತ್ತಲೇ ಇರುತ್ತೇವೆ. ಇಂತಹ ಸಂದರ್ಭದಲ್ಲಿ, ರಾಜ್ಯದ ಸರ್ಕಾರಿ ಔಷಧಾಲಯಗಳ ಉಗ್ರಾಣಗಳಲ್ಲಿ ₹ 23 ಕೋಟಿ ಮೌಲ್ಯದ 500 ಟನ್ ಅವಧಿ ಮೀರಿದ ಔಷಧ ಹಾಗೂ ಮಾತ್ರೆಗಳು ವ್ಯರ್ಥವಾಗಿರುವುದು ಆಘಾತಕಾರಿ ಸಂಗತಿ. 12 ವರ್ಷಗಳಷ್ಟು ಸುದೀರ್ಘ ಕಾಲದಿಂದ ಈ ಅವಧಿ ಮೀರಿದ ಔಷಧಗಳು ಉಗ್ರಾಣಗಳಲ್ಲಿ ಕೊಳೆಯುತ್ತಾ ಬಿದ್ದಿವೆ. ಇಷ್ಟೊಂದು ದೊಡ್ಡ ಪ್ರಮಾಣದ ವ್ಯರ್ಥ ಔಷಧಗಳ ವಿಲೇವಾರಿಯಾದರೂ ಹೇಗೆ ಎಂಬಂತಹ ಪ್ರಶ್ನೆಗೆ ಕಡೆಗೂ ಈಗ ಉತ್ತರ ಸಿಕ್ಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅವಧಿ ಮೀರಿದ ಔಷಧ ನಾಶಕ್ಕೆ ಅಂತೂ ಪ್ರತ್ಯೇಕ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ನೀತಿಯ ಅನ್ವಯವೇ, ಇನ್ನು ಮುಂದೆ ಔಷಧ ಖರೀದಿ ಹಾಗೂ ಅವಧಿ ಮೀರಿದ ಔಷಧಗಳ ವಿಲೇವಾರಿ ಆಗಲಿದೆ. ಈಗ ರಾಜ್ಯದ 25 ಜಿಲ್ಲೆಗಳಲ್ಲಿ ಔಷಧ ದಾಸ್ತಾನು ಮಳಿಗೆಗಳಲ್ಲಿರುವ ಅವಧಿ ಮೀರಿದ ಔಷಧಗಳನ್ನು ನಾಶಪಡಿಸಲು ಆರೋಗ್ಯ ಇಲಾಖೆ ಕಡೆಗೂ ಮುಂದಾಗಿರುವುದು ಸ್ವಾಗತಾರ್ಹ. ಅವಧಿ ಮೀರಿದ ಔಷಧಗಳನ್ನು ಇಷ್ಟು ವರ್ಷ ಉಗ್ರಾಣಗಳಲ್ಲಿ ವ್ಯರ್ಥವಾಗಿ ಇಟ್ಟುಕೊಂಡಿದ್ದು ಏಕೆ ಎಂಬುದು ಪ್ರಶ್ನೆ. ಇವುಗಳ ವಿಲೇವಾರಿಗೆ ಯಾವುದೇ ನೀತಿ ಈವರೆಗೆ ಇಲ್ಲದಿದ್ದದ್ದು, ಸ್ಪಷ್ಟತೆ ಇಲ್ಲದಿದ್ದದ್ದು ಇಷ್ಟು ವಿಳಂಬಕ್ಕೆ ಕಾರಣ ಎಂದುಕೊಳ್ಳಬಹುದು. 2000ದ ಇಸವಿವರೆಗೆ ಅವಧಿ ಮೀರಿದ ಔಷಧಗಳನ್ನು ಜಿಲ್ಲಾ ಡ್ರಗ್ ಮತ್ತು ಲಾಜಿಸ್ಟಿಕ್ಸ್ ಸೊಸೈಟಿಯವರು ಮಣ್ಣಿನಲ್ಲಿ ಹೂತು ಹಾಕುತ್ತಿದ್ದರು. ಆದರೆ ಇದು ಸೃಷ್ಟಿಸಬಹುದಾದ ಮಾಲಿನ್ಯಕ್ಕೆ ತಡೆ ಒಡ್ಡುವುದಕ್ಕಾಗಿ ಈ ಕ್ರಮಕ್ಕೆ ನಿರ್ಬಂಧ ಹೇರಲಾಯಿತು. ನಂತರ ಇವನ್ನು ವಿಲೇವಾರಿ ಮಾಡಲು ಯಾವುದೇ ನೀತಿ ಇಲ್ಲದಿದ್ದರಿಂದ ಈ ಪ್ರಕ್ರಿಯೆ ನನೆಗುದಿಗೆ ಸಿಲುಕಿತ್ತು ಎಂಬುದನ್ನು ಸ್ಮರಿಸಬಹುದು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಬೆಂಗಳೂರು ನಗರವೊಂದರಲ್ಲೇ ಸರ್ಕಾರಿ ಹಾಗೂ ಖಾಸಗಿ ಔಷಧ ಘಟಕಗಳಿಂದ ಪ್ರತಿದಿನ 750 ಕೆ.ಜಿ. ಔಷಧಗಳು ಅವಧಿ ಮೀರಿದವಾಗುತ್ತವೆ. ಈ ಪ್ರಮಾಣದಲ್ಲಿ ಅವಧಿ ಮೀರಿದ ಔಷಧಗಳು ಶೇಖರಣೆಯಾಗಲು ಕಾರಣ ಏನು ಎಂಬುದೂ ಪ್ರಶ್ನೆ. ಹೀಗೆ ಸಂಗ್ರಹವಾದ ಔಷಧಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲಕ ರೋಗಿಗಳಿಗೆ ಸಕಾಲದಲ್ಲಿ ವಿತರಣೆ ಆಗಬೇಕಿದ್ದ ವಿವಿಧ ಕಂಪೆನಿಗಳ ಕೋಟ್ಯಂತರ ರೂಪಾಯಿ ಮೊತ್ತದ ಔಷಧಗಳೂ ಸೇರಿವೆ ಎಂಬುದನ್ನು ಗಮನಿಸಬೇಕು. ಅಗತ್ಯ ಇರುವ ಕಡೆಗಳಿಗೆ ಮರುವಿತರಣೆ ಆಗದಿರುವುದು ಅವಧಿ ಮೀರಿದ ಔಷಧ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ದುರದೃಷ್ಟಕರ. ಹೀಗಾಗಿ, ಸಕಾಲದಲ್ಲಿ ಔಷಧಗಳ ವಿತರಣೆಯತ್ತಲೂ ಗಮನ ಹರಿಸಬೇಕಾದುದು ಅಗತ್ಯ. ಇದಕ್ಕಾಗಿ ಔಷಧಗಳ ಖರೀದಿ ಹಾಗೂ ವಿಲೇವಾರಿ ಗಣಕೀಕರಣಗೊಳ್ಳಲಿ. ಜನಸಾಮಾನ್ಯರಿಗೆ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಾದುದು ಅವಶ್ಯ. ಅವಧಿ ಮೀರಿದ ಔಷಧ ವಿಲೇವಾರಿ ನೀತಿಯ ಬಗ್ಗೆ 2015ರಿಂದಲೇ ರಾಜ್ಯದಲ್ಲಿ ಚರ್ಚೆ ನಡೆದಿದೆ. ಆಗಿನಿಂದಲೂ ಈ ಕುರಿತು ನೀತಿ ರೂಪಿಸುವ ಪ್ರಯತ್ನಗಳು ನಡೆದಿದ್ದವು. ಅವಧಿ ಮೀರಿದ ಔಷಧ ಜನರನ್ನು ತಲುಪಬಾರದು ಎಂಬ ಬಗ್ಗೆ ರಾಜ್ಯ ವಿಧಾನಮಂಡಲದಲ್ಲೂ ಚರ್ಚೆ ನಡೆದಿತ್ತು. ವೈದ್ಯಕೀಯ ತ್ಯಾಜ್ಯಗಳನ್ನು ನಾಶಪಡಿಸುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು, 2016ನ್ನು ಕೇಂದ್ರ ಸರ್ಕಾರ ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದೆ. ಈ ಮಾರ್ಗಸೂಚಿಗಳ ಪ್ರಕಟಣೆ ನಂತರ, ಅವಧಿ ಮೀರಿದ ಔಷಧಗಳ ವಿಲೇವಾರಿ ಪ್ರಕ್ರಿಯೆಗೂ ವೇಗ ಸಿಕ್ಕಿದೆ ಎಂಬುದು ಗಮನಾರ್ಹ. ಅವಧಿ ಮೀರಿದ ಔಷಧಗಳೂ ಸೇರಿದಂತೆ ಆಸ್ಪತ್ರೆ ತ್ಯಾಜ್ಯಗಳನ್ನು ನಾಶಪಡಿಸುವ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಗಳು 27 ಜಿಲ್ಲೆಗಳಲ್ಲಿ ಆರಂಭವಾಗಿರುವುದು ಆಶಾದಾಯಕ. ಅವಧಿ ಮೀರಿದ ಔಷಧಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಿ 1300 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇವನ್ನು ಸುಡಲಾಗುತ್ತದೆ. ಇನ್ನುಮುಂದೆ ನಿಯಮಿತವಾಗಿ ಕಾಲಕಾಲಕ್ಕೆ ಈ ಪ್ರಕ್ರಿಯೆ ಜರುಗುವಂತೆ ನೋಡಿಕೊಳ್ಳಬೇಕಾದುದು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಬೇಕು. ಹಾಗೆ ನೋಡಿದರೆ, ಮನೆಮನೆಗಳಲ್ಲೂ ಅವಧಿ ಮೀರಿದ ಔಷಧಗಳಿರುತ್ತವೆ. ಇವನ್ನು ನೇರವಾಗಿ ಮನೆ ಕಸದ ಜೊತೆ ಎಸೆಯುವುದು ಅಪಾಯಕರ. ಇವುಗಳನ್ನು ವಿಲೇವಾರಿ ಮಾಡುವ ಕುರಿತೂ ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಯತ್ನಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.