ಪ್ಯಾರಿಸ್ ಹವಾಮಾನ ಒಪ್ಪಂದ ಸಕಾರಾತ್ಮಕವಾದ ದಿಟ್ಟ ಹೆಜ್ಜೆ ಪ್ಯಾರಿಸ್ ಹವಾಮಾನ ಒಪ್ಪಂದ ಅಕ್ಟೋಬರ್ 2ರಿಂದ ರಾಷ್ಟ್ರದಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ. ಬಡತನ, ಹೆಚ್ಚುತ್ತಿರುವ ಜನಸಂಖ್ಯೆ ಒತ್ತಡಗಳ ನಡುವೆಯೂ ಈ ಒಪ್ಪಂದಕ್ಕೆ ಭಾರತ ಅನುಮೋದನೆ ನೀಡುತ್ತಿರುವುದು ದಿಟ್ಟ ಕ್ರಮ. ಹಸಿರುಮನೆ ಅನಿಲ (ಜಿಎಚ್‌ಜಿ) ಹೊರಸೂಸುವಿಕೆ ಕಡಿಮೆ ಮಾಡಲು ಜಾಗತಿಕ ಸಮುದಾಯದೊಂದಿಗೆ ಹೆಜ್ಜೆ ಹಾಕಲು ಭಾರತದ ಬದ್ಧತೆಯನ್ನು ಇದು ಧ್ವನಿಸುತ್ತದೆ. ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರ ಭಾರತ. ಬಡತನ ನಿವಾರಣೆಗೆ ಇಂಧನ ಅತ್ಯಗತ್ಯ ಎಂಬುದು ಸರ್ವವಿದಿತ. ಜೊತೆಗೆ ಕೈಗಾರಿಕಾ ಹಾಗೂ ಆರ್ಥಿಕ ಬೆಳವಣಿಗೆ ಯೋಜನೆಗಳಿಗೂ ಇಂಧನ ಬೇಕು. ಆದರೆ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯೂ ತಗ್ಗಬೇಕು ಎಂಬಂಥ ದ್ವಂದ್ವಗಳ ನಡುವೆ ಹವಾಮಾನ ಒಪ್ಪಂದ ಅನುಷ್ಠಾನಕ್ಕೆ ಭಾರತ ಹೆಜ್ಜೆ ಇರಿಸಿರುವುದು ಸ್ವಾಗತಾರ್ಹ. ಹೊಣೆಗಾರಿಕೆಯುಳ್ಳ ಜಾಗತಿಕ ಶಕ್ತಿಯಾಗಿ ತನ್ನನ್ನು ತಾನು ಭಾರತ ಬಿಂಬಿಸಿಕೊಳ್ಳಲೂ ಈ ನಡೆ ಸಹಕಾರಿ. ಪರಮಾಣು ಪೂರೈಕೆದಾರರ ಗುಂಪಿನ (ಎನ್ಎಸ್‌ಜಿ) ಸದಸ್ಯತ್ವ ಪಡೆಯುವಲ್ಲಿ ವಿಫಲವಾದ ವಿಚಾರಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ತಳಕು ಹಾಕಬಹುದಾದಂತಹ ಸಾಧ್ಯತೆಗಳನ್ನು ಮೀರಿ ಭಾರತ ಈ ನಿರ್ಧಾರ ಕೈಗೊಂಡಿದೆ ಎಂಬುದನ್ನು ಗಮನಿಸಬೇಕು. ರಾಷ್ಟ್ರದಲ್ಲಿ ಶೇ 40ರಷ್ಟು ಪಳೆಯುಳಿಕೆಯೇತರ ಇಂಧನ ಗುರಿ ಸಾಧಿಸುವಂತಹ ಭಾರತದ ಹವಾಮಾನ ಬದಲಾವಣೆ ಕಾರ್ಯಸೂಚಿ ಈಡೇರಿಕೆಗೆ ಎನ್ಎಸ್‌ಜಿ ಸದಸ್ಯತ್ವ ಪಡೆಯುವುದು ಅಗತ್ಯ ಎಂಬಂತಹ ಚರ್ಚೆಗಳು ಈ ಹಿಂದೆ ನಡೆದಿದ್ದವು. ಆದರೆ ಎನ್‌ಎಸ್‌ಜಿಗೆ ಸೇರ್ಪಡೆಯಾಗಲು ವಿಫಲವಾದರೂ ಪ್ಯಾರಿಸ್ ಒಪ್ಪಂದ ಅನುಮೋದಿಸಲು ಭಾರತ ಬದ್ಧತೆ ಪ್ರದರ್ಶಿಸಿದ್ದು ಸಕಾರಾತ್ಮಕ ನಡೆ. ಶೇ 47.79ರಷ್ಟು ಜಿಎಚ್‌ಜಿ ಹೊರಸೂಸುವಿಕೆಗೆ ಕಾರಣವಾದ 61 ರಾಷ್ಟ್ರಗಳು ಈ ಒಪ್ಪಂದಕ್ಕೆ ಈಗಾಗಲೇ ಅನುಮೋದನೆ ನೀಡಿವೆ. ವಿಶ್ವದ ಎರಡು ದೊಡ್ಡ ಕೈಗಾರಿಕಾ ರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾ ಕೂಡ ಈಗಾಗಲೇ ಈ ಒಪ್ಪಂದ ಅನುಮೋದಿಸಿವೆ. ಹೀಗಾಗಿ ಈ ಒಪ್ಪಂದವನ್ನು ಅನುಮೋದಿಸುತ್ತಿರುವ 62ನೇ ರಾಷ್ಟ್ರವಾಗಲಿದೆ ಭಾರತ. 2005ರಲ್ಲಿದ್ದ ಜಿಎಚ್‌ಜಿ ಹೊರಸೂಸುವಿಕೆಯ ಪ್ರಮಾಣವನ್ನು ಶೇ 33-35ರಷ್ಟು ಕಡಿಮೆ ಮಾಡಬೇಕಿದೆ ಭಾರತ. ಈ ಗುರಿಯನ್ನು 2030ರೊಳಗೆ ಸಾಧಿಸಬೇಕು. ಇದಕ್ಕಾಗಿ ಪಳೆಯುಳಿಕೆ ಆಧಾರಿತವಲ್ಲದ ಸೌರ, ಗಾಳಿ ಮತ್ತಿತರ ಮೂಲಗಳಿಂದ ಶೇ 40ರಷ್ಟು ವಿದ್ಯುತ್ ಉತ್ಪಾದಿಸುವ ಬದ್ಧತೆಗೆ ಭಾರತ ಒಳಪಡಬೇಕಿದೆ. 2025ರೊಳಗೆ ನವೀಕೃತ ಇಂಧನ ವಲಯದಿಂದ 175 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಭಾರತಕ್ಕೆ ಸಾಧ್ಯವಾಗುವುದು ಅಗತ್ಯ. ಭಾರತದ ಸೌರ ವಿದ್ಯುತ್ ಯೋಜನೆಗಳಿಗೆ ಸರ್ಕಾರ ಈಗಾಗಲೇ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ವಾತಾವರಣದಿಂದ ಸುಮಾರು 2.5ರಿಂದ 3 ಶತಕೋಟಿ ಟನ್‌ಗಳಷ್ಟು ಇಂಗಾಲ ಹೀರಿಕೊಳ್ಳಲು ಅನುವು ಮಾಡಿಕೊಡುವುದಕ್ಕಾಗಿ ಅರಣ್ಯ ಪ್ರದೇಶವನ್ನು ತ್ವರಿತಗತಿಯಲ್ಲಿ ಹೆಚ್ಚು ಮಾಡುವ ಭರವಸೆಯನ್ನೂ ಭಾರತ ಈಡೇರಿಸಬೇಕಾಗಿದೆ. ಇದಕ್ಕಾಗಿ 50 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಭಾರತ ಅಭಿವೃದ್ಧಿಪಡಿಸಬೇಕಿದೆ. 16 ಪುಟಗಳ ಪ್ಯಾರಿಸ್ ಒಪ್ಪಂದದ ಮುಖ್ಯ ಗುರಿ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮಾಡುವುದು. ಇದಕ್ಕಾಗಿ ಅಭಿವೃದ್ಧಿಶೀಲ ದೇಶಗಳಿಗೆ ತಂತ್ರಜ್ಞಾನ ಪೂರೈಕೆ ಹಾಗೂ ಹಣಕಾಸು ಸಹಾಯ ಮಾಡಬೇಕಾದ ಬದ್ಧತೆಗೆ ಅಭಿವೃದ್ಧಿ ಹೊಂದಿದ ದೇಶಗಳು ಒಳಪಟ್ಟಿವೆ. ಹವಾಮಾನ ಒಪ್ಪಂದ ಅನುಷ್ಠಾನಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸಲು ಹಾಗೂ ಕಾನೂನುಗಳನ್ನು ಜಾರಿಗೊಳಿಸಲು ರಾಷ್ಟ್ರೀಯ ಸಮಾಲೋಚನಾ ಪ್ರಕ್ರಿಯೆ ರಾಷ್ಟ್ರದಲ್ಲಿ ತ್ವರಿತಗೊಳ್ಳಬೇಕಾದುದು ಅಗತ್ಯ. ಕಟ್ಟಡಗಳಿಂದ ಹಸಿರುಮನೆ ಅನಿಲ ಹೊರಸೂಸುವಿಕೆ ತಡೆಗೆ ನಗರಗಳ ವಿನ್ಯಾಸ ಬದಲಾಗಬೇಕು. ಹಾಗೆಯೇ ನಗರ ಸಾರಿಗೆ ವ್ಯವಸ್ಥೆಯಲ್ಲೂ ಬದಲಾವಣೆಗಳಾಗಬೇಕು. ನವೀಕೃತ ಇಂಧನ ಬಳಕೆ ಹೆಚ್ಚಬೇಕು. ಇಂತಹ ಕಾರ್ಯಕ್ರಮಗಳನ್ನೊಳಗೊಂಡ ಕ್ರಿಯಾ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ವಿಶ್ವದಲ್ಲಿ ಹವಾಮಾನ ಬದಲಾವಣೆ ಸದ್ಯದ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಭವಿಷ್ಯದ ಹಸಿರೀಕರಣಕ್ಕೆ ಪ್ಯಾರಿಸ್ ಹವಾಮಾನ ಒಪ್ಪಂದದ ಅನುಷ್ಠಾನ ಬಹು ಮುಖ್ಯವಾದದ್ದು. ತಮ್ಮ ಜೀವನವಿಧಾನದಿಂದಾಗಿ ಸುಸ್ಥಿರ ಬದುಕಿಗೆ ರೂಪಕವಾಗಿರುವ ಗಾಂಧೀಜಿ ಜನ್ಮದಿನದಂದು ಪ್ಯಾರಿಸ್ ಒಪ್ಪಂದ ಅಧಿಕೃತವಾಗಿ ರಾಷ್ಟ್ರದಲ್ಲಿ ಜಾರಿಗೆ ಬರುತ್ತಿದೆ ಎಂಬುದು ಅರ್ಥಪೂರ್ಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.