ನಿರ್ದಿಷ್ಟ ದಾಳಿ: ಪಾಕಿಸ್ತಾನಕ್ಕೆ ನೀಡಿದ ಬಲವಾದ ಸಂದೇಶ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಸೇನೆ ಏಕಾಏಕಿ ನಡೆಸಿದ ‘ನಿರ್ದಿಷ್ಟ ದಾಳಿ’, ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡುವಂತಹದ್ದು. 11 ದಿನಗಳ ಹಿಂದೆ ಕಾಶ್ಮೀರದ ಉರಿ ಪಟ್ಟಣದ ಸೇನಾ ನೆಲೆ ಮೇಲೆ ಜೈಷ್‌ ಇ ಮೊಹಮ್ಮದ್‌ ಉಗ್ರರು ದಿಢೀರನೇ ದಾಳಿ ನಡೆಸಿ 18 ಸೈನಿಕರನ್ನು ಕೊಂದಾಗ ಭಾರತ ದಿಗ್ಭ್ರಮೆಗೊಂಡಿತ್ತು. ‘ಈ ದಾಳಿಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅಂದು ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ ಎಂಬುದು ಮುಖ್ಯ. ಹಿಂದೆಯೂ ಪಾಕ್‌ ಬೆಂಬಲಿತ ಉಗ್ರರು ನಮ್ಮ ದೇಶದೊಳಗೆ ಅನಾಹುತ ನಡೆಸಿದಾಗೆಲ್ಲ ರಾಜಕೀಯವಾಗಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಅದನ್ನು ಎದುರಿಸುವ ಪ್ರಯತ್ನಕ್ಕೆ ನಮ್ಮ ಉತ್ತರ ಸೀಮಿತವಾಗಿರುತ್ತಿತ್ತು. ಆ ದೇಶದ ಜತೆಗಿನ ಮಾತುಕತೆ ರದ್ದು ಮಾಡುವುದು, ವಾಣಿಜ್ಯ– ವಹಿವಾಟನ್ನು ನಿಯಂತ್ರಿಸುವುದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪ – ಇತ್ಯಾದಿ ಕ್ರಮಗಳ ಮೂಲಕ ಅದರ ಬಣ್ಣ ಬಯಲು ಮಾಡುವ ಯತ್ನಗಳನ್ನು ಮಾಡುತ್ತಿದ್ದೆವು. ಈ ಬಾರಿಯೂ ಪಾಕಿಸ್ತಾನದ ನೀತಿ ಹಾಗೂ ಕಾರ್ಯಾಚರಣೆಗಳ ವಿರುದ್ಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಧ್ವನಿ ಎತ್ತಿತ್ತು. ರಾಜತಾಂತ್ರಿಕ ಕ್ರಮಗಳನ್ನೂ ಕೈಗೊಂಡಿತ್ತು. ಇಷ್ಟೆಲ್ಲಾ ಸಂಯಮದ ಪ್ರತಿಕ್ರಿಯೆಗಳ ನಂತರ ಭಾರತೀಯ ಸೇನೆ ನಡೆಸಿದ ಈ ‘ನಿರ್ದಿಷ್ಟ ದಾಳಿ’ ನ್ಯಾಯಬದ್ಧವಾದುದು. ರಾಷ್ಟ್ರದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಗಳ ಸರಣಿಗೆ ತಕ್ಕ ಪ್ರತ್ಯುತ್ತರ ಕೊಡುವ ಹಕ್ಕನ್ನು ಪ್ರತಿಪಾದಿಸಿದಂತಾಗಿದೆ. ಸೇನೆಯ ಈ ಸಾಧನೆ ಮತ್ತು ದಾಳಿ ನಡೆಸಲು ಅದಕ್ಕೆ ಅನುಮತಿ ನೀಡಿದ ಮೋದಿ ನೇತೃತ್ವದ ಸರ್ಕಾರದ ಕ್ರಮ ದಿಟ್ಟವಾದದ್ದು. ಭಾರತೀಯ ಸೇನೆ ಬುಧವಾರ ಮಧ್ಯರಾತ್ರಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಪಾಕ್‌ ಆಕ್ರಮಿತ ಪ್ರದೇಶದೊಳಗೆ ಹೋಗಿ ಉಗ್ರರ ತಾಣಗಳ ಮೇಲೆ ದಾಳಿ ಮಾಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದೆ. ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದ ನೆಲದಲ್ಲಿ ತರಬೇತಿ ಪಡೆದು ಶಸ್ತ್ರಸಜ್ಜಿತರಾಗಿ ಭಾರತದ ಒಳಗೆ ನುಸುಳಲು ಹೊಂಚು ಹಾಕಿ ಗಡಿ ಬಳಿಯೇ ಶಿಬಿರ ನಿರ್ಮಿಸಿಕೊಂಡಿದ್ದ ಉಗ್ರರನ್ನು ನಿರ್ನಾಮ ಮಾಡಿ ಸುರಕ್ಷಿತವಾಗಿ ಸೇನೆ ಮರಳಿ ಬಂದಿದೆ. ಭಾರತೀಯ ಸೇನೆ ಈ ರೀತಿ ಪಾಕಿಸ್ತಾನದ ಒಳಗೆ ‘ನಿರ್ದಿಷ್ಟ ದಾಳಿ’ ನಡೆಸಿದ್ದು ಇದೇ ಮೊದಲು. ಉರಿ ಮೇಲೆ ರಹಸ್ಯವಾಗಿ ನಡೆಸಿದ ದಾಳಿಯನ್ನು ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿ ‘ನಿರ್ದಿಷ್ಟ ದಾಳಿ’ ನಡೆಸಿದುದನ್ನು ಭಾರತ ದಿಟ್ಟವಾಗಿ ಹೇಳಿಕೊಂಡಿದೆ ಎಂಬುದೂ ಮುಖ್ಯ, ಅಮೆರಿಕ ಸೇರಿ ವಿಶ್ವದ ವಿವಿಧ ದೇಶಗಳು ಉಗ್ರರ ದಮನಕ್ಕೆ ಇದೇ ಮಾದರಿಯ ಕಾರ್ಯಾಚರಣೆಯನ್ನು ಕೈಗೊಂಡ ಅನೇಕ ಉದಾಹರಣೆಗಳಿವೆ. ಅಲ್ಲದೆ, ಉರಿ ದಾಳಿಯ ನಂತರ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಏಕಾಂಗಿಯಾಗಿಸುವ ಯತ್ನ ಇನ್ನಷ್ಟು ಚುರುಕುಗೊಂಡಿತ್ತು ಎಂಬುದನ್ನೂ ಸ್ಮರಿಸಬಹುದು. ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಾಗಿದ್ದ ಸಾರ್ಕ್‌ ಶೃಂಗಸಭೆಗೆ ಬಹಿಷ್ಕಾರ, ಭಾರತದ ನಿಲುವು ಬೆಂಬಲಿಸಿ ಅನೇಕ ಸದಸ್ಯ ದೇಶಗಳಿಂದಲೂ ಬಹಿಷ್ಕಾರ, ವಿಶ್ವಸಂಸ್ಥೆ ಮಹಾ ಅಧಿವೇಶನವನ್ನು ಪರಿಣಾಮಕಾರಿಯಾಗಿ ಭಾರತ ಬಳಸಿಕೊಂಡ ರೀತಿ –ಇವೆಲ್ಲಾ ಈ ಸಂದರ್ಭದಲ್ಲಿ ನೆರವಿಗೆ ಬಂದಿದೆ. ಭಯೋತ್ಪಾದನೆಯಿಂದ ಭಾರತ ಅನುಭವಿಸುತ್ತಿರುವ ಸಂಕಷ್ಟ ಬೇರೆ ದೇಶಗಳಿಗೂ ಮನವರಿಕೆಯಾಗಿರುವುದು ಮುಖ್ಯ ಬೆಳವಣಿಗೆ. ಭಯೋತ್ಪಾದನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಇತರ ದೇಶಗಳೂ ಪಾಕಿಸ್ತಾನಕ್ಕೆ ಹೇಳುತ್ತಲೇ ಬಂದಿವೆ. ಹೀಗಾಗಿ ಈ ದಾಳಿಯ ನಂತರ ಯಾವುದೇ ದೇಶ ಪಾಕಿಸ್ತಾನದ ಬೆಂಬಲಕ್ಕೆ ಮುಂದಾಗಿಲ್ಲ, ಭಾರತದ ಕ್ರಮವನ್ನು ಆಕ್ಷೇಪಿಸಿಲ್ಲ. ದೇಶದ ಒಳಗೆ ಕೂಡ ಎಲ್ಲ ರಾಜಕೀಯ ಪಕ್ಷಗಳು ಮುಕ್ತ ಕಂಠದಿಂದ ಸೇನಾ ಕಾರ್ಯಾಚರಣೆ ಬೆಂಬಲಿಸಿ, ಸರ್ಕಾರದ ಬೆನ್ನಿಗೆ ನಿಂತು ಪ್ರಬುದ್ಧತೆ ಪ್ರದರ್ಶಿಸಿವೆ. ‘ನಿರ್ದಿಷ್ಟ ದಾಳಿ’ ಪಾಕಿಸ್ತಾನದ ಪಾಲಿಗೆ ಎಚ್ಚರಿಕೆಯ ಗಂಟೆ. ‘ಭಾರತದ ತಾಳ್ಮೆಗೂ ಮಿತಿಯಿದೆ; ಅವುಡುಗಚ್ಚಿ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇಲ್ಲ’ ಎಂಬುದನ್ನು ಅದು ಅರಿತುಕೊಂಡಷ್ಟೂ ಅದಕ್ಕೇ ಕ್ಷೇಮ. ನೆರೆ ರಾಷ್ಟ್ರವಾಗಿ ಪ್ರಬುದ್ಧತೆಯನ್ನು ಪಾಕಿಸ್ತಾನ ಪ್ರದರ್ಶಿಸಬೇಕು. ಶಾಂತಿ ಸ್ಥಾಪನೆಗೆ ಪ್ರಯತ್ನಗಳೂ ನಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.